ಸ್ವಾತಂತ್ರ್ಯದ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು ಮೂರು ಬಾರಿ ಭೇಟಿ ನೀಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎರಡು ಬಾರಿ ಮಂಗಳೂರಿನ ಕೆನರಾ ಹೈಸ್ಕೂಲ್‌ಗೆ ಭೇಟಿ ನೀಡಿದ್ದರು ಎನ್ನುವುದು ವಿಶೇಷ.
ಶಿಕ್ಷಣ ಸಂಸ್ಥೆಯೊಂದು ಸ್ವಾತಂತ್ರ್ಯ ಹೋರಾಟದ ಮೇಲೆ ಹೇಗೆ ಪರಿಣಾಮ ಬೀರಬಲ್ಲುದು ಎಂಬುದಕ್ಕೆ ಸಾಕ್ಷಿಯಾಗಿ ನಿಂತಿರುವುದು ಮಂಗಳೂರಿನ ಕೆನರಾ ಪ್ರೌಢಶಾಲೆ. ವಿಠ್ಠಲದಾಸ ನಾಯಕ್, ವಿನುತ ರಾವ್, ಎ.ಬಿ.ಶೆಟ್ಟಿ, ಹುಂಡಿ ವಿಷ್ಣು ಕಾಮತ್ ಸೇರಿದಂತೆ ನೂರಾರು ಮಂದಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಲ್ಲಿ ಈ ಶಾಲೆ ನೀಡಿದ ಸ್ಫೂರ್ತಿ ಮಹತ್ವದ್ದಾಗಿದೆ.
ಕ್ವಿಟ್ ಇಂಡಿಯಾ ಚಳವಳಿಯ ದಿನಗಳಲ್ಲಿ ಈ ಶಾಲೆಯ ಮಕ್ಕಳು ಗಾಂಧಿ ಟೋಪಿ ಧರಿಸಿಯೇ ತರಗತಿಗಳಿಗೆ ಹಾಜರಾಗುತ್ತಿದ್ದರು. ಅದೆಷ್ಟೋ ವಿದ್ಯಾರ್ಥಿಗಳು ತರಗತಿಗಳಿಗೆ ಗೈರು ಹಾಜರಾಗಿ ಸ್ವಾತಂತ್ರ್ಯ ಚಳವಳಿಯಲ್ಲೂ ಕಾಣಿಸಿಕೊಂಡರು.
ಸ್ವಾತಂತ್ರ್ಯದ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು ಮೂರು ಬಾರಿ ಭೇಟಿ ನೀಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎರಡು ಬಾರಿ ಮಂಗಳೂರಿನ ಕೆನರಾ ಹೈಸ್ಕೂಲ್‌ಗೆ ಭೇಟಿ ನೀಡಿದ್ದರು ಎನ್ನುವುದು ವಿಶೇಷ. ಅಲ್ಲಿ ನಡೆದ ಘಟನೆಗಳೂ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಗಮನಾರ್ಹ ಮಾತ್ರವಲ್ಲದೆ ಅವಿಸ್ಮರಣೀಯವೆನಿಸಿವೆ.
ಬ್ರಿಟಿಷ್ ಆಡಳಿತಾವಧಿಯ ದಾಸ್ಯ, ದೌರ್ಜನ್ಯದಿಂದ ರೋಸಿ ಹೋಗಿದ್ದ ನ್ಯಾಯವಾದಿ ಅಮ್ಮೆಂಬಳ ಸುಬ್ಬರಾವ್ ಪೈ ಜಿಲ್ಲೆಯ ಜನತೆಗೆ ಶೈಕ್ಷಣಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ನೀಡುವ ಕನಸು ಕಂಡವರು. ಬ್ರಿಟಿಷ್ ಅಧಿಕಾರಿಗಳು ರಸ್ತೆಯಲ್ಲಿ ಠೀವಿಯಲ್ಲಿ ಸಾಗಿ ಬರುತ್ತಿದ್ದರೆ ರಸ್ತೆಗೋಡಿ ಬಂದು ಕುತೂಹಲದಿಂದ ಕಣ್ತುಂಬಿಕೊಳ್ಳುವರಿದ್ದರು. ಆದರೆ ಸುಬ್ಬಾರಾವ್ ಮಾತ್ರ ತಾನು ಕೆಲಸ ಮಾಡುವಲ್ಲಿಂದ ಕಣ್ಣೆತ್ತಿ ನೋಡಿದರೂ ಕಾಣಬಹುದಾಗಿದ್ದರೂ ತಿರುಗಿ ಕುಳಿತು ತನ್ನ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಅವರು ಬ್ರಿಟಿಷರ ವಿರುದ್ಧ ಅಸಹನೆ ಹೊಂದಿದ್ದರು.
ಅವರ ಕನಸಿನ ಕೂಸೇ ಕೆನರಾ ಹೈಸ್ಕೂಲ್. ಮುಂದೆ ಅವರು ಮಹಿಳಾ ಶಿಕ್ಷಣಕ್ಕಾಗಿ ಮುಷ್ಟಿಅಕ್ಕಿ ಸಂಗ್ರಹಿಸಿ ಕೆನರಾ ಹೆಣ್ಮಕ್ಕಳ ಶಾಲೆಯನ್ನೂ ಆರಂಭಿಸಿದರು. ದೇಶದ ಸಂವಿಧಾನ ಕರಡು ರಚನಾ ಸಮಿತಿಯಲ್ಲಿದ್ದ ಬೆನಗಲ್ ನರಸಿಂಗ ರಾವ್, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಮೊದಲಾದವರೆಲ್ಲಾ ಕೆನರಾ ಶಿಕ್ಷಣ ಸಂಸ್ಥೆಯ ಕೊಡುಗೆಗಳೇ. ಸುಬ್ಬಾರಾವ್ ಪೈಗಳು 1906ರಲ್ಲಿ ಆರಂಭಿಸಿದ ಕೆನರಾ ಬ್ಯಾಂಕ್ ಇಂದು ಜಾಗತಿಕ ಮನ್ನಣೆ ಪಡೆದಿರುವುದು ಸಹ ಗಮನಾರ್ಹ.
1927ರ ಅ.26ರಂದು ಗಾಂಧೀಜಿ ಕೆನರಾ ಹೈಸ್ಕೂಲ್‌ನಲ್ಲಿ ದೀನಬಂಧು ಚಿತ್ತರಂಜನ ದಾಸ, ಬಾಲಗಂಗಾಧರ ತಿಲಕರ ಭಾವಚಿತ್ರ ಅನಾವರಣಗೊಳಿಸಿದ್ದರು. 1934ರ ಫೆ.24ರಂದು ಗಾಂಧೀಜಿ ಇಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದರು.
ಗಾಂಧೀ ಮ್ಯೂಸಿಯಂ:
ಅತ್ಯಮೂಲ್ಯ ಸಂಗ್ರಹದ ಮೂಲಕ ಅಂದಿನ ಕಾಲದಲ್ಲಿ ದೇಶಕ್ಕೇ ಮಾದರಿಯೆನಿಸಿದ್ದ ಆ ಮ್ಯೂಸಿಯಂಗೆ ಗಾಂಧೀಜಿಯವರ ಹೆಸರನ್ನಿಡಲು ಅವರ ಅನುಮತಿ ಕೇಳಿದಾಗ ಅದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದರು. ಹೀಗಾಗಿ 1939ರಲ್ಲಿ ಅದಕ್ಕೆ ಗಾಂಧೀ ಮ್ಯೂಸಿಯಂ ಎಂದು ನಾಮಕರಣ ಮಾಡಲಾಯಿತು. ಇದೀಗ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ಮ್ಯೂಸಿಯಂ ಅನ್ನು ನವೀಕರಣಗೊಳಿಸಲಾಗುತ್ತಿದೆ.
ತಲುಪುವುದು ಹೇಗೆ?
ಮಂಗಳೂರು ಡೊಂಗರಕೇರಿಯಲ್ಲಿರುವ ಕೆನರಾ ಪ್ರೌಢಶಾಲೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕೇವಲ 1.5 ಕಿ.ಮೀ. ದೂರದಲ್ಲಿದೆ. ಸಿಟಿ ಬಸ್ ಇಲ್ಲವೇ ಆಟೋದಲ್ಲಿ ಸಾಗಬಹುದು.