India@75: ಹುತಾತ್ಮ ರಾಯಣ್ಣನ ಚರಿತ್ರೆ ಹೇಳುವ ಬೆಳಗಾವಿಯ ನಂದಗಡ

By Kannadaprabha News  |  First Published Jul 21, 2022, 10:28 AM IST

‘ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು’ - ಹೀಗೆಂದು ತಾನು ಗಲ್ಲಿಗೇರುವ ಮುನ್ನ ಬ್ರಿಟಿಷರ ವಿರುದ್ಧ ಘರ್ಜಿಸಿ ತಾಯ್ನಾಡಿಗಾಗಿ ಪ್ರಾಣತ್ಯಾಗ ಮಾಡಿದ ಏಕೈಕ ವೀರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.


‘ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ ಬ್ರಿಟಿಷÜರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು’ - ಹೀಗೆಂದು ತಾನು ಗಲ್ಲಿಗೇರುವ ಮುನ್ನ ಬ್ರಿಟಿಷರ ವಿರುದ್ಧ ಘರ್ಜಿಸಿ ತಾಯ್ನಾಡಿಗಾಗಿ ಪ್ರಾಣತ್ಯಾಗ ಮಾಡಿದ ಏಕೈಕ ವೀರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.

ರಾಯಣ್ಣ ಎಂಬ ಹೆಸರು ಕೇಳಿದರೆ ಸಾಕು ಬ್ರಿಟಿಷ್‌ ಸರ್ಕಾರವೇ ನಡುಗುತ್ತಿತ್ತು. ಇಂತಿಪ್ಪ ವೀರ ಪರಾಕ್ರಮಿಯ ಸಮಾಧಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡದಲ್ಲಿದೆ. ಕಿತ್ತೂರು ರಾಣಿ ಚæನ್ನಮ್ಮನ ಬಲಗೈ ಬಂಟನನ್ನು ಬ್ರಿಟಿಷರು ಮೋಸದಿಂದ ಸೆರೆಹಿಡಿದು ಇದೇ ಸ್ಥಳದಲ್ಲಿ ಗಲ್ಲಿಗೇರಿಸಿದ್ದರು.

Tap to resize

Latest Videos

India@75:ನೂರಾರು ಮಂದಿಯ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ಮಂಗಳೂರಿನ ಕೆನರಾ ಶಾಲೆ

ಕಿತ್ತೂರು ಚನ್ನಮ್ಮನಿಗೆ ಗಂಡು ಸಂತಾನ ಇಲ್ಲದ ಕಾರಣ ದತ್ತು ತೆಗೆದುಕೊಂಡಿದ್ದಳು. ಇದನ್ನು ತಿಳಿದು ಬ್ರಿಟಿಷರು ದತ್ತುಪುತ್ರನಿಗೆ ಉತ್ತರಾಧಿಕಾರ ಹಕ್ಕಿಲ್ಲ ಎಂಬ ಕಾಯ್ದೆಯಡಿ ಕಪ್ಪ ಕೊಟ್ಟು ಶರಣಾಗುವಂತೆ ತಿಳಿಸಿದಾಗ ಚೆನ್ನಮ್ಮ ‘ನಾವೇಕೆ ನಿಮಗೆ ಕೊಡಬೇಕು ಕಪ್ಪ?’ ಎಂದು ಘರ್ಜಿಸಿದ್ದಳು. ಕುಪಿತರಾದ ಆಂಗ್ಲರು 1824ರ ಅ.21ರಂದು ಥ್ಯಾಕರೆ ಮುಂದಾಳತ್ವದಲ್ಲಿ ಕಿತ್ತೂರಿನ ಮೇಲೆ ದಂಡೆತ್ತಿ ಬಂದರು. ಕಿತ್ತೂರಿನ ಕಡೆಯಿಂದ ರಾಯಣ್ಣ, ಚೆನ್ನಬಸವಣ್ಣ, ಅಮಟೂರು ಬಾಳಪ್ಪರ ನೇತೃತ್ವದಲ್ಲಿ ಕಿತ್ತೂರಿನ ವೀರ ಸೈನಿಕರು ಮುನ್ನುಗ್ಗಿದ್ದರು.

ಇದೇ ವೇಳೆ ಅಮಟೂರು ಬಾಳಪ್ಪನವರು ತಮ್ಮ ಖಡ್ಗದಿಂದ ಥ್ಯಾಕರೆ ರುಂಡ ಚಂಡಾಡಿದರು. ಒಮ್ಮೆ ಸೋತು ಸುಮ್ಮನಾಗದ ಬ್ರಿಟಿಷರು ಮತ್ತೆ ಕಿತ್ತೂರಿನ ಮೇಲೆ ಯುದ್ಧ ಸಾರಿದರು. ಈ ಬಾರಿ ತಮ್ಮವರ ಮೋಸದಿಂದಲೇ ಕಿತ್ತೂರಿಗೆ ಸೋಲಾಗಿ ರಾಯಣ್ಣ, ಚನ್ನಮ್ಮ ಬ್ರಿಟಿಷರ ವಶವಾದರು. ಕೆಲವು ದಿನಗಳ ನಂತರ ರಾಯಣ್ಣ ಬಿಡುಗಡೆಯಾದ.

ಬಂಡಾಯವೆದ್ದ ರಾಯಣ್ಣ:

ಬಳಿಕ ರಾಯಣ್ಣ ತನ್ನದೊಂದು ಸೈನ್ಯ ಕಟ್ಟಿಕೊಂಡು ಬ್ರಿಟಿಷರ ಮತ್ತು ಬ್ರಿಟಿಷರ ಜೊತೆ ಕೈಜೋಡಿಸಿದ್ದ ಭೂಮಾಲೀಕರ ವಿರುದ್ಧ ಬಂಡಾಯವೆದ್ದ. ಗೆರಿಲ್ಲಾ ಯುದ್ಧತಂತ್ರ ಅನುಸರಿಸಿ ಭೂಮಾಲೀಕರ ಜಮೀನುಗಳ ಕಾಗದಪತ್ರಗಳನ್ನು ವಶಪಡಿಸಿ ಸುಟ್ಟುಹಾಕಿದ. ಅವರಿಂದ ಕಿತ್ತುಕೊಂಡ ಹಣವನ್ನು ನಿರ್ಗತಿಕರಿಗೆ ಹಂಚತೊಡಗಿದ.

ಮೋಸದಿಂದ ರಾಯಣ್ಣ ಸೆರೆ:

ಯುದ್ಧ ಮಾಡಿ ರಾಯಣ್ಣನ್ನು ಗೆಲ್ಲಲು ಅಸಾಧ್ಯವೆಂದು ತಿಳಿದ ಬ್ರಿಟಿಷರು ರಾಯಣ್ಣನ ಸ್ವಂತ ಮಾವನಾಗಿದ್ದ ಲಕ್ಷ್ಮಣನನ್ನು ದಾಳವಾಗಿ ಬಳಸಿಕೊಂಡರು. ರಾಯಣ್ಣ ಬೆಣಚಿ ಹಳ್ಳದಲ್ಲಿ ಸ್ನಾನ ಮಾಡುತ್ತಿದ್ದಾಗ ಮೋಸದಿಂದ ಸೆರೆ ಹಿಡಿದರು. ಆಗ ರಾಯಣ್ಣನ ಖಡ್ಗ ಮಾವ ಲಕ್ಷ್ಮಣನ ಬಳಿಯಿತ್ತು. ರಾಯಣ್ಣ ಖಡ್ಗ ಕೊಡು ಎಂದು ಕೇಳಿದರೂ ಲಕ್ಷ್ಮಣ ಕೊಡದೆ ಮೋಸ ಮಾಡಿದ್ದ. ಹೀಗಾಗಿ ರಾಯಣ್ಣ ಮೋಸದಿಂದ ಬ್ರಿಟಿಷರ ವಶವಾದನು.

India@75:ಸ್ವಾತಂತ್ರ್ಯವೇ ಧರ್ಮ ಎಂದು ಹೋರಾಡಿದ ಹಿಂದೂ ಸ್ವಾಮೀಜಿಗಳು- ಮುಸ್ಲಿಂ ಫಕೀರರು

ನಂದಗಡದಲ್ಲಿ ನೇಣಿಗೇರಿದ ರಾಯಣ್ಣ:

ಸೆರೆಯಾಗಿದ್ದ ರಾಯಣ್ಣ ಆಶಯದಂತೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ 1831ರ ಜನವರಿ 26ರಂದು ರಾಯಣ್ಣನನ್ನು ಗಲ್ಲಿಗೇರಿಸಲಾಯಿತು. ರಾಯಣ್ಣನನ್ನು ಗಲ್ಲಿಗೇರಿಸಿದ ನಂತರ ನೆಟ್ಟಆಲದ ಮರ ಇನ್ನೂ ಇದ್ದು, ಇಲ್ಲಿಗೆ ನಿತ್ಯ ನೂರಾರು ಜನರು ಬಂದು ರಾಯಣ್ಣನ ಸಮಾಧಿ ದರ್ಶನ ಪಡೆಯುತ್ತಾರೆ.

ತಲುಪುವುದು ಹೇಗೆ?

ಬೆಳಗಾವಿಯಿಂದ ಖಾನಾಪುರಕ್ಕೆ ಹೋಗುವ ಮಾರ್ಗದಲ್ಲಿ ನಂದಗಡವು 38 ಕಿ.ಮೀ. ದೂರವಿದೆ. ಬೆಳಗಾವಿ ಬಸ್‌ ನಿಲ್ದಾಣದಿಂದ ಇಲ್ಲಿಗೆ ಬಸ್‌ ವ್ಯವಸ್ಥೆ ಇದೆ. ಬೆಂಗಳೂರಿನಿಂದ 890 ಕಿ.ಮೀ. ಇದೆ.

- ಮಂಜುನಾಥ ಗದಗಿನ

click me!