India@75: ಭೀಮರಾಯನ ಆರ್ಭಟಕ್ಕೆ ಸಾಕ್ಷಿ ಕೊಪ್ಪಳದ ಕೋಟೆ

By Suvarna News  |  First Published Jun 18, 2022, 11:51 AM IST

- ಭೀಮರಾಯನ ಆರ್ಭಟಕ್ಕೆ ಸಾಕ್ಷಿ ಕೊಪ್ಪಳದ ಕೋಟೆ

- 1858ರ ಮೇನಲ್ಲಿ ಕೋಟೆಯಲ್ಲಿ ನಡೆದಿತ್ತು ಬ್ರಿಟಿಷರ ವಿರುದ್ಧ ಯುದ್ಧ

- ಭೀಮರಾಯನ ಪತ್ನಿ, ಮಕ್ಕಳ ಬಂಧನವಾದರೂ ನಿಂತಿರಲಿಲ್ಲ ಹೋರಾಟ


ಬ್ರಿಟಿಷರ ಆಡಳಿತದಲ್ಲಿ ಅಧಿಕಾರಿಯಾಗಿದ್ದುಕೊಂಡೇ ಬ್ರಿಟಿಷರ ವಿರುದ್ಧವೇ ತೊಡೆ ತಟ್ಟಿಸೈನ್ಯ ಕಟ್ಟಿದ ಕೆಚ್ಚೆದೆಯ ವೀರ ಮುಂಡರಗಿ ಭೀಮರಾಯ. ತಹಸೀಲ್ದಾರ ಹುದ್ದೆಯಲ್ಲಿದ್ದರೂ ರಹಸ್ಯವಾಗಿ ಅವರು ಜನರಲ್ಲಿ ಸ್ವಾತಂತ್ರ್ಯದ ಜಾಗೃತಿ ಮೂಡಿಸಿದರು. 1858ರಲ್ಲಿ ಬ್ರಿಟಿಷರ ವಿರುದ್ಧ ಅವರು ನಡೆಸಿದ ಹೋರಾಟಕ್ಕೆ ಸಾಕ್ಷಿಯಾಗಿ ನಿಂತಿದೆ ಕೊಪ್ಪಳದ ಕೋಟೆ.

ಬಳ್ಳಾರಿ ಜಿಲ್ಲೆಯ ಕಲೆಕ್ಟರ್‌ ಆಗಿದ್ದ ಬ್ರಿಟಿಷ್‌ ಅಧಿಕಾರಿಯ ಜೀವ ಉಳಿಸಿದ್ದರು. ಜೊತೆಗೆ ಬಹುಭಾಷಾ ಪಂಡಿತರಾಗಿದ್ದ ಅವರಿಗೆ ಇಂಗ್ಲಿಷ್‌ ಚೆನ್ನಾಗಿ ಬರುತ್ತಿದ್ದುದರಿಂದ ಸಹಜವಾಗಿಯೇ ಬ್ರಿಟಿಷರಿಗೆ ಖಾಸಾ ಆಗಿದ್ದರಿಂದ ಅವರನ್ನು ಕೊಪ್ಪಳ ತಹಸೀಲ್ದಾರ್‌ ಆಗಿ ನೇಮಕ ಮಾಡಲಾಯಿತು. ಆದರೂ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಅಣಿಯಾಗುತ್ತಿದ್ದುದನ್ನು ಗಮನಿಸಿದ ಬ್ರಿಟಿಷ್‌ ಅಧಿಕಾರಿಗಳು ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡು, ಇಲ್ಲಸಲ್ಲದ ಆರೋಪ ಮಾಡಿ, ತಹಸೀಲ್ದಾರ್‌ ಹುದ್ದೆಯಿಂದ ಕಿತ್ತುಹಾಕಿದರು.

Tap to resize

Latest Videos

India@75:ಗದಗದ ಜಕ್ಕಲಿಯಲ್ಲಿ ಮೊಳಗಿತ್ತು ಸ್ವಾತಂತ್ರ್ಯದ ಕಹಳೆ

ಬಳಿಕ ಭೀಮರಾಯರು ಸೊರಟೂರು ದೇಸಾಯಿ, ಹಮ್ಮಿಗಿ ಕೆಂಚನಗೌಡ, ಡಂಬಳದ ದೇಶಮುಖ, ಗೋವಿನಕೊಪ್ಪದ ದೇಸಾಯಿ ಮೊದಲಾದವರ ಒಡಗೂಡಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಲು ಸೈನ್ಯ ಕಟ್ಟಲು ಶುರು ಮಾಡಿದರು. ಇದಕ್ಕಾಗಿ ಹಮ್ಮಿಗಿ ಕೆಂಚನಗೌಡ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಮದ್ದು, ಗುಂಡುಗಳ ಬಗ್ಗೆ ಮಾಹಿತಿ ತಿಳಿದ ಬ್ರಿಟಿಷ್‌ ಅಧಿಕಾರಿಗಳು ಅದನ್ನು ವಶಪಡಿಸಿಕೊಂಡರು. ಹೀಗೆ ವಶಪಡಿಸಿಕೊಂಡಿದ್ದ ಮದ್ದುಗುಂಡುಗಳನ್ನು ಬ್ರಿಟಿಷ್‌ ಅಧಿಕಾರಿಗಳು ಹನ್ನೆರಡು ಕುದುರೆಗಳ ಮೂಲಕ ಬೇರೆಡೆ ಸಾಗಿಸುತ್ತಿದ್ದರು. ಈ ಮಾಹಿತಿಯನ್ನರಿತ ಭೀಮರಾಯ ಅದನ್ನು ಮರುವಶಪಡಿಸಿ ತಮ್ಮ ಸೈನ್ಯದೊಂದಿಗೆ ಕೊಪ್ಪಳ ಕೋಟೆಯನ್ನು ಸೇರಿಕೊಂಡರು.

ಅಲ್ಲಿ ತಮ್ಮ ಬೆಂಬಲಿತ ಸೈನ್ಯದೊಂದಿಗೆ ಮದ್ದುಗುಂಡು ಸಂಗ್ರಹಿಸಿಟ್ಟುಕೊಂಡು ಬ್ರಿಟಿಷರ ವಿರುದ್ಧ ಹೋರಾಟವನ್ನು ಶುರು ಮಾಡಿದರು. ಇದನ್ನು ಹತ್ತಿಕ್ಕಲು ಮುಂಡರಗಿ ಭೀಮರಾಯನ ಇಬ್ಬರು ಪತ್ನಿಯರು ಮತ್ತು ಮಕ್ಕಳನ್ನು ಒತ್ತೆಯಾಳಾಗಿಟ್ಟುಕೊಂಡು ಬ್ರಿಟಿಷರು ಹೋರಾಟವನ್ನು ಹತ್ತಿಕ್ಕುವ ಕಾರ್ಯಕ್ಕೆ ಮುಂದಾದರು. ಯಾವುದಕ್ಕೂ ಜಗ್ಗದ ಭೀಮರಾಯರು ಬ್ರಿಟಿಷರ ಸೈನ್ಯಕ್ಕೆ ಸೋಲಿನ ರುಚಿ ತೋರಿಸಿದರು. ಹೀಗಾಗಿ ಧಾರವಾಡದಿಂದ ಮೇಜರ್‌ ಹೋಗನ್‌ ನೇತೃತ್ವದಲ್ಲಿ ಒಂದು ಸೈನ್ಯ ಹಾಗೂ ಹೈದ್ರಾಬಾದ್‌ನಿಂದ ಟೇಲರ್‌ ಸಾಹೇಬನ ನೇತೃತ್ವದಲ್ಲಿ ಮತ್ತೊಂದು ಸೈನ್ಯ 1858ರ ಮೇ 31ರಂದು ಕೊಪ್ಪಳ ಕೋಟೆಯನ್ನು ಆಕ್ರಮಿಸಿತು. ಈ ಹೋರಾಟದಲ್ಲಿ ಮುಂಡರಗಿ ಭೀಮರಾಯ ಅಸುನೀಗಿದರು ಎಂದು ಹೇಳಲಾಗುತ್ತದೆ.

India@75:ರಾಣಿ ಚೆನ್ನಮ್ಮನಿಗೆ ಗುರಿಯಿಟ್ಟಿದ್ದ ಗುಂಡಿಗೆ ಎದೆಕೊಟ್ಟ ವೀರ ಅಮಟೂರು ಬಾಳಪ್ಪ

27 ಜನರಿಗೆ ಮರಣದಂಡನೆ: ಈ ಯುದ್ಧದಲ್ಲಿ ಕೈದಿಗಳಾದ 27 ಸೈನಿಕರಿಗೆ ಬ್ರಿಟಿಷರು ಮರಣದಂಡನೆ ವಿಧಿಸಿದರು. ಕೆಲವರನ್ನು ಕೊಪ್ಪಳ ಗವಿಮಠ ಆವರಣದಲ್ಲಿ ಹಾಗೂ ಇನ್ನು ಕೆಲವರನ್ನು ರಾಯಚೂರಿನಲ್ಲಿ ಬಹಿರಂಗವಾಗಿಯೇ ಗಲ್ಲಿಗೆ ಏರಿಸಲಾಯಿತು. ಈ ಯುದ್ಧಕ್ಕೆ ನೂರು ವರ್ಷವಾದ ನೆನಪಿಗೆ 1958ರಲ್ಲಿ ಕೊಪ್ಪಳ ನಗರದಲ್ಲಿ ಅಶೋಕ ಸ್ತಂಭ ಸ್ಥಾಪಿಸಲಾಗಿದೆ.

ತಲುಪುವುದು ಹೇಗೆ?

ಜಿಲ್ಲಾಕೇಂದ್ರವಾಗಿರುವ ಕೊಪ್ಪಳ ನಗರಕ್ಕೆ ಎಲ್ಲ ಕಡೆಗಳಿಂದಲೂ ಬಸ್‌, ರೈಲು ವ್ಯವಸ್ಥೆಯಿದೆ. ಕೊಪ್ಪಳ ನಗರ ಬಸ್‌ ನಿಲ್ದಾಣದಿಂದ 2.5 ಕಿಮೀ ಸಂಚರಿಸಿದರೆ ಗಡಿಯಾರ ಕಂಬ ಸಿಗುತ್ತದೆ. ಅಲ್ಲಿಂದ ಕೋಟೆ ರಸ್ತೆಯಲ್ಲಿ ಕೇವಲ ಅರ್ಧ ಕಿಮೀ ಚಲಿಸಿದರೆ ಕೊಪ್ಪಳ ಕೋಟೆ ಸಿಗುತ್ತದೆ.

- ಸೋಮರಡ್ಡಿ ಅಳವಂಡಿ

click me!