ಭಾರತ-ಪಾಕ್ ಪಂದ್ಯ: ಆರದ ದ್ವೇಷ, ಅರಿಯದ ಸ್ನೇಹ!

By nikhil vk  |  First Published Jun 16, 2019, 2:26 PM IST

ಇಂದು ಭಾರತ-ಪಾಕ್ ವಿಶ್ವಕಪ್ ಪಂದ್ಯ| ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ಒಲ್ಡ್ ಟ್ರಾಫೋರ್ಡ್ ಮೈದಾನ| ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ಮೇಲೆ ಸವಾರಿ ಮಾಡಿರುವ ಭಾರತ| ಪಾಖ್ ವಿರುದ್ಧ ಆಡಿದ 6 ಪಂದ್ಯವನ್ನೂ ಗೆದ್ದಿರುವ ಭಾರತ| ಹೈವೊಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ ಭೂಮಂಡಲ| ಭಾರತ್-ಪಾಕ್ ಕದನಕ್ಕೂ, ಕ್ರಿಕೆಟ್ ಗೂ ವ್ಯತ್ಯಾಸವಿಲ್ಲ| ಎರಡೂ ರಾಷ್ಟ್ರೀಯ ತಂಡಗಳ ಆಟಗಾರರ ನಡುವಿನ ಸ್ನೇಹಕ್ಕಿದೆ ಇತಿಹಾಸ| ಮೈದಾನದಲ್ಲಿ ಎದುರಾಳಿಗಳು, ಮೈದಾನದಾಚೆ ಜಿಗರಿ ಗೆಳೆಯರು| ಆಟವನ್ನು ಕೇವಲ ಆಟವನ್ನಾಗಿ ನೋಡುವುದು ನೈಜ ಆಟಗಾರನ ಗುಣ| ಆಭಾರತ-ಪಾಕ್ ಆಟಗಾರರ ಗೆಳೆತನಕ್ಕೂ ಸಾಕ್ಷಿಯಾಗಿರುವ ಕ್ರಿಕೆಟ್ ಮೈದಾನ|


ಬೆಂಗಳೂರು(ಜೂ.16): ಇಂದು ಭೂಮಂಡಲದ ದಕ್ಷಿಣ ಏಷ್ಯಾ ಭಾಗದ ಎರಡು ತದ್ವಿರುದ್ಧ ರಾಷ್ಟ್ರಗಳ ನಡುವೆ ವಿಶ್ವಕಪ್ ಕ್ರಿಕೆಟ್ ಪಂದ್ಯ ನಡೆಯಲಿದೆ. ಹಿಂದೆ ಒಂದಾಗಿದ್ದು, ಇದೀಗ ಬೇರ್ಪಟ್ಟಿರುವ ಈ ರಾಷ್ಟ್ರಗಳು ಯುದ್ಧ ಭೂಮಿಯಲ್ಲಿ, ಕ್ರಿಕೆಟ್ ಮೈದಾನದಲ್ಲಿ ಪರಸ್ಪರ ಎದುರಾಗಿರುವುದಕ್ಕೆ ಇತಿಹಾಸವೇ ಇದೆ.

ಕ್ರಿಕೆಟ್ ಜನಕ ರಾಷ್ಟ್ರ ಇಂಗ್ಲೆಂಡ್ ನಲ್ಲಿ 12ನೇ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದು, ಇಂದು ಕ್ರಿಕೆಟ್ ಇತಿಹಾಸದಲ್ಲಿ ಸಾಂಪ್ರದಾಯಿಕ ಎದುರಾಳಿಗಳೆಂದೇ ಗುರುತಿಸಲ್ಪಟ್ಟಿರುವ ಭಾರತ-ಪಾಕಿಸ್ತಾನ ಪರಸ್ಪರ ಮೈದಾನದಲ್ಲಿ ಎದುರಾಗಲಿವೆ.

Tap to resize

Latest Videos

undefined

ವಿಶ್ವಕಪ್‌ನಲ್ಲಿ ಭಾರತ-ಪಾಕ್ ಇದುವರೆಗೂ ಒಟ್ಟು 6 ಬಾರಿ ಪರಸ್ಪರ ಎದುರಾಗಿದ್ದು 6 ಬಾರಿಯೂ ಭಾರರತವೇ ಗೆಲುವು ಕಂಡಿದೆ. ಇಂದಿನ ಪಂದ್ಯ ವಿಶ್ವಕಪ್‌ನಲ್ಲಿ ಭಾರತ-ಪಾಕ್ ನಡುವಿನ 7ನೇ ಪಂದ್ಯವಾಗಿದ್ದು, ಇಡೀ ಭೂಮಂಡಲದ ದೃಷ್ಟಿ ಮ್ಯಾಂಚೆಸ್ಟರ್‌ನ ಒಲ್ಡ್ ಟ್ರಾಫೋರ್ಡ್ ಮೈದಾನದತ್ತ ನೆಟ್ಟಿದೆ.

ರಣರಂಗದಲ್ಲಿ ಭಾರತ-ಪಾಕ್ ಇದುವರೆಗೂ 4 ಬಾರಿ ಎದುರಾಗಿದ್ದು, ಪಾಕಿಸ್ತಾನಕ್ಕೆ ತಾನು ಏನು ಎಂಬುದನ್ನು ಈ ನಾಲ್ಕು ಯುದ್ಧಗಳು ತೋರಿಸಿಕೊಟ್ಟಿವೆ. ಆದರೆ ಕದನ ಭೂಮಿ ಹಾಗೂ ಆಟದ ಮೈದಾನ ಎರಡೂ ಬೇರೆ ಬೇರೆಯಲ್ಲವೇ? ಯುದ್ಧ ಸರ್ವನಾಶದ ಸಂದೇಶ ಸಾರಿದರೆ ಆಟ ಪರಸ್ಪರ ಶಾಂತಿಯ, ಸಹಬಾಳ್ವೆಯ ಸಂದೇಶ ಸಾರುತ್ತದೆ.

ಹಾಗೆಯೇ ಭಾರತ-ಪಾಕ್ ವಿಶ್ವಕಪ್ ಪಂದ್ಯಾವಳಿಯನ್ನೂ ಹೆಚ್ಚು ಕಡಿಮೆ ಕದನಕ್ಕೆ ಸಮಾನವಾಗಿಯೇ ಹೋಲಿಸಲಾಗುತ್ತದೆ. ಗೆಲುವಿನ ಪ್ರತಿಷ್ಠೆಯ ಅಮಲು ಆಟವೊಂದನ್ನು ಕದನವನ್ನಾಗಿ ಮಾರ್ಪಡಿಸಬಲ್ಲದು ಎಂಬುದಕ್ಕೆ ಭಾರತ-ಪಾಕ್ ಕ್ರಿಕೆಟ್ ಪಂದ್ಯಾವಳಿಗಳು ಉತ್ತಮ ಉದಾಹರಣೆ.

ಭಾರತ-ಪಾಕ್ ನಡುವಿನ ಪಂದ್ಯವೊಂದನ್ನು ಕದನದ ಸರಿ ಸಮಾನವಾಗಿ ಕಾಣುವ ದೃಷ್ಟಿಕೋನ ಬೆಳೆದು ದಶಕಗಳೇ ಉರುಳಿವೆ. ಇದರಲ್ಲಿ ಮಾಧ್ಯಮಗಳ ಪಾತ್ರವೂ ಸೇರಿದಂತೆ ಎರಡೂ ದೇಶಗಳ ಕ್ರಿಕೆಟ್ ಅಭಿಮಾನಿಗಳ ಅತಿರೇಕದ ಹುಮ್ಮಸ್ಸೂ ಬಹುತೇಕ ಕಾರಣ ಎಂದರೆ ತಪ್ಪಾಗಲಾರದು.

ಆದರೆ ಆಟವನ್ನು ಕೇವಲ ಆಟವನ್ನಾಗಿ ನೋಡುವುದು ನೈಜ ಆಟಗಾರನ ಗುಣ. ಯುದ್ಧದ ಭೀಕರತೆ ಕೇವಲ ಸೈನಿಕನಿಗೆ ಮಾತ್ರ ಗೊತ್ತು ಎಂಬಂತೆ ಆಟದ ಸ್ಪರ್ಧಾತ್ಮಕತೆ ಆಟಗಾರನಿಗೆ ಮಾತ್ರ ಗೊತ್ತಿರುತ್ತದೆ. ಇದೇ ಕಾರಣಕ್ಕೆ ಭಾರತ-ಪಾಕ್ ಆಟಗಾರರ ನಡುವಿನ ಗಾಢವಾದ ಸ್ನೇಹಕ್ಕೆ ಇತಿಹಾಸವೇ ಇದೆ.

ಭಾರತ-ಪಾಕ್ ನಡುವಿನ ಪಂದ್ಯ ಎಂದಾಕ್ಷಣ ಅಲ್ಲೊಂದು ಕಾವು ಮನೆ ಮಾಡಿರುತ್ತದೆ. ಅದು ಆಟದ ಸ್ಪರ್ಧಾತ್ಮಕ ಗುಣಕ್ಕೆ ಅವಶ್ಯವೂ ಹೌದು. ಆದರೆ ಅದು ಆಟಗಾರರ ನಡುವಿನ ಸ್ನೇಹಕ್ಕೆ ಕುತ್ತು ತರುವಷ್ಟು ಎಂದೂ ಗಾಢವಾಗಿಲ್ಲ.

ವಿಭಜನೆಗೊಂಡ ದಿನದಂದೇ ಭಾರತ-ಪಾಕ್ ರಾಷ್ಟ್ರೀಯ ಕ್ರಿಕೆಟ್ ತಂಡಗಳು ಉದಯಿಸಿವೆ. ಅಂದಿನಿಂದ ಇಂದಿನವರೆಗೆ ಕೆಲವು ಕಹಿ ಘಟನೆಗಳನ್ನು ಹೊರತುಪಡಿಸಿದರೆ, ಎರಡೂ ರಾಷ್ಟ್ರೀಯ ತಂಡಗಳ ಆಟಗಾರರ ನಡುವೆ ಸ್ನೇಹದ ಕೊಂಡಿ ಭದ್ರವಾಗಿದೆ.

ತೀರ ಹಿಂದಿನ ಇತಿಹಾಸ ಕೆದಕುವುದು ಬೇಡವಾದರೂ, ಪರಸ್ಪರ ತಂಡಗಳ ಆಟಗಾರರ ನಡುವಿನ ಗೆಳೆತನ ಮೈದಾನದಲ್ಲಿ ಕಂಡಿರುವ ಅನೇಕ ಉದಾಹರಣೆಗಳಿವೆ. ಗೆಳೆತನವಿರದಿದ್ದರೂ ತಮ್ಮ ತಮ್ಮ ದೇಶಗಳನ್ನು ಪ್ರತಿನಿಧಿಸುವ ಆಟಗಾರನಿಗೆ ಕೊಡಬೇಕಾದ ಗೌರವದ ಅರಿವು ಎರಡೂ ತಂಡಗಳ ಆಟಗಾರ ಮನದಲ್ಲಿದೆ ಎಂಬುದು ಸ್ಫಟಿಕದಷ್ಟೇ ಸತ್ಯ.

ಇಂಜಮಾಮ್-ಉಲ್-ಹಕ್ ಮತ್ತು ನಯಮ್ ಮೋಂಗ್ಯಾ, ಸಚಿನ್ ತಂಡೂಲ್ಕರ್-ವಾಸೀಮ್ ಅಕ್ರಂ, ವಿರೇಂದ್ರ ಸೆಹ್ವಾಗ್-ಶೋಯೆಬ್ ಅಖ್ತರ್ ಹಾಗೂ ಭಾರತದ ಅಜಯ್ ಜಡೇಜಾ ಹಾಗೂ ಪಾಕಿಸ್ತಾನದ ಶಾಹೀದ್ ಅಫ್ರೀದಿಯಂತಹ ಎಲ್ಲರೊಂದಿಗೆ ಬೆರೆಯುವ ಆಟಗಾರರು ಎರಡೂ ದೇಶಗಳ ನಡುವೆ ಸ್ನೇಹದ ಕೊಂಡಿಯಾಗಿ ಕಾಣ ಸಿಗುತ್ತಾರೆ. 

ಪ್ರತೀ ಪಂದ್ಯವನ್ನೂ ಗೆಲ್ಲುವ ತವಕ ಪ್ರೇಕ್ಷಕನಿಗಿಂತ ಹೆಚ್ಚು ಆಟಗಾರನಲ್ಲಿರುತ್ತದೆ. ಇದೇ ಕಾರಣಕ್ಕೆ ಪಂದ್ಯವೊಂದನ್ನು ನಿರ್ದಿಷ್ಟ ತಂಡವಲ್ಲ ಬದಲಿಗೆ ಕ್ರೀಡಾಸ್ಫೂರ್ತಿ ಗೆಲ್ಲುತ್ತದೆ. ಅದರಂತೆ ಇಂದಿನ ಪಂದ್ಯದಲ್ಲಿ ಕ್ರಿಕೆಟ್ ಗೆಲ್ಲಲಿ ಎಂಬ ಆಶಯದೊಂದಿಗೆ ....

click me!