
ಆಹಾರ ಸೇವನೆ ಮಾಡುವಾಗ ಒಂದು ಹಂತದಲ್ಲಿ ನಮ್ಮ ಮಿದುಳು ದೇಹಕ್ಕೆ “ಇನ್ನು ಸಾಕು’ ಎನ್ನುವ ಮೆಸೇಜ್ ಕಳಿಸುತ್ತದೆ. ಆಗಲೇ ತಿಂದದ್ದು ತೃಪ್ತಿ ಎನಿಸಲು ಶುರುವಾಗುತ್ತದೆ. ಮನೆಯ ಆಹಾರಗಳನ್ನು ಕಡಿಮೆ ಸೇವಿಸುವ ನಾವು ಹೋಟೆಲ್ ಗೋ, ಸಮಾರಂಭಗಳಿಗೋ ಹೋದಾಗ ಸ್ವಲ್ಪ ಜಾಸ್ತಿಯೇ ತಿನ್ನುತ್ತೇವೆ. ಅದರಲ್ಲೂ ಮಸಾಲೆ, ಕೊಬ್ಬು ಮತ್ತು ಸಕ್ಕರೆಯುಕ್ತ ಆಹಾರಗಳು ಸ್ವಲ್ಪ ತಿಂದರೆ ಸಾಕೆನಿಸುವುದೇ ಇಲ್ಲ. ಹೊಟ್ಟೆ ತುಂಬಿದಂತೆ ಭಾಸವಾದರೂ ಬಾಯಿಗೆ ಮತ್ತಷ್ಟು ಬೇಕು ಎನಿಸುತ್ತಿರುತ್ತದೆ. ಮಿದುಳು ಸಂದೇಶ ನೀಡುವಲ್ಲಿ ತಡ ಮಾಡುತ್ತದೆ. ಹೀಗಾಗಿ, ಹೆಚ್ಚು ಆಹಾರ ದೇಹಕ್ಕೆ ಹೋಗಿ ಕೊಬ್ಬು ಸಂಗ್ರಹಕ್ಕೆ ಕಾರಣವಾಗುತ್ತದೆ. ಆದರೆ, ಸಾಮಾನ್ಯರು ಮಿದುಳಿನಿಂದ ಸಂದೇಶ ಸ್ವೀಕರಿಸಿದಾಗ ಹೊಟ್ಟೆ ತುಂಬಿದ ಭಾವನೆಯಿಂದ ತಿನ್ನುವುದನ್ನು ಬಿಡುತ್ತಾರೆ. ಆದರೆ, ಬೊಜ್ಜು ದೇಹಿಗಳಿಗೆ ಮಿದುಳಿನಿಂದ ಸಂದೇಶ ಬರುವುದೇ ಇಲ್ಲ. ಹೀಗಾಗಿ, ಅವರು ತಿನ್ನುತ್ತಲೇ ಇರುತ್ತಾರೆ. ಕೊಬ್ಬು ಮತ್ತು ಸಕ್ಕರೆಯುಕ್ತ ಆಹಾರಗಳನ್ನು ಸೇವಿಸುವ ಸಮಯದಲ್ಲಿ ಬೊಜ್ಜು ದೇಹಿಗಳಿಗೆ ಮಿದುಳಿನಿಂದ ಸಂದೇಶ ಬರುವುದಿಲ್ಲ ಎನ್ನುವುದನ್ನು ಹೊಸ ಅಧ್ಯಯನವೊಂದರಲ್ಲಿ ಗುರುತಿಸಲಾಗಿದೆ.
ಆಮ್ ಸ್ಟರ್ ಡ್ಯಾಂ ವಿಶ್ವವಿದ್ಯಾಲಯದ ಮೆಡಿಕಲ್ ಸೆಂಟರ್ ಮತ್ತು ಯೇಲ್ ವಿಶ್ವವಿದ್ಯಾಲಯದ ತಜ್ಞರು ನಡೆಸಿದ್ದ ಅಧ್ಯಯನವೊಂದರಲ್ಲಿ (Study) ಆಹಾರ ಸೇವನೆಯ (Food Intake) ಅಭ್ಯಾಸಗಳ ಬಗ್ಗೆ, ಆಹಾರ ಸೇವನೆಗೂ ಮಿದುಳಿಗೂ ಇರುವ ಸಂಬಂಧದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಹೊಟ್ಟೆಯಲ್ಲಿರುವ ಯಾವುದಾದರೂ ಪೌಷ್ಟಿಕಾಂಶದ (Nutrients) ಕೊರತೆಯಿಂದಾಗಿ ಮಿದುಳಿನ (Brain) ಕಾರ್ಯಶೈಲಿಯಲ್ಲಿ ಬದಲಾವಣೆ ತರುತ್ತದೆ. ಇದು ತೂಕ ಕಡಿಮೆ ಇರುವ ಜನರಲ್ಲಾಗುವ ಪರಿಣಾಮ. ಆದರೆ, ತೂಕ ಹೆಚ್ಚಿರುವವರಲ್ಲಿ (Obese) ಹೊಟ್ಟೆ (Gut) ಮತ್ತು ಮಿದುಳಿನ ಸಂವಹನದಲ್ಲೇ ಕೊರತೆ ಏರ್ಪಡುತ್ತದೆ, ಹೀಗಾಗಿ, ಅವರು ಹೆಚ್ಚೆಚ್ಚು ತಿನ್ನುತ್ತಾರೆ. ಅತಿಯಾದ ತಿನ್ನುವ ಚಕ್ರದಲ್ಲಿ ಸಿಲುಕುತ್ತಾರೆ. ಪರಿಣಾಮವಾಗಿ, ದೇಹದ ತೂಕ (Weight) ಏರುತ್ತ ಮತ್ತಷ್ಟು ಹೋಗುತ್ತದೆ.
Health Tips: ರಕ್ತನಾಳಗಳಲ್ಲಿ ಕೊಬ್ಬು ಹೆಚ್ತಾ ಇದ್ಯಾ? ಕಾಲುಗಳಲ್ಲಿ ಗೊತ್ತಾಗುತ್ತೆ ಅಲಕ್ಷ್ಯ ಬೇಡ
ಆಹಾರ ಹೆಚ್ಚೇಕೆ ಬೇಕು?
ನೇಚರ್ ಮೆಟಬಾಲಿಸಂ ಎನ್ನುವ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಈ ಅಧ್ಯಯನದ ಪ್ರಕಾರ, ಬೊಜ್ಜು ದೇಹಿಗಳಿಗೆ ಕೊಬ್ಬು (Fat) ಮತ್ತು ಸಕ್ಕರೆಯುಕ್ತ (Sugary) ಪದಾರ್ಥಗಳ ಸೇವನೆ ಮಾಡುವುದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಕರುಳಿನಲ್ಲಿರುವ ಪೌಷ್ಟಿಕಾಂಶಗಳಿಗೆ ಮಿದುಳು ಪ್ರತಿಕ್ರಿಯೆ ನೀಡುವ ವಿಧಾನವನ್ನು ಬೊಜ್ಜು ಬದಲಾವಣೆ ಮಾಡಿಬಿಡುತ್ತದೆ. ಕಟ್ಟುನಿಟ್ಟಾದ ಆಹಾರ ಪಾಲನೆ ಮಾಡಿ ತೂಕ ಕಡಿಮೆ ಮಾಡಿಕೊಂಡರೂ ಇದರಲ್ಲಿ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ. ತೂಕ ಕಡಿಮೆ ಇರುವವರು ಮತ್ತು ಬೊಜ್ಜು ದೇಹಿಗಳ ಕರುಳಿನಲ್ಲಿರುವ ಪೌಷ್ಟಿಕಾಂಶಕ್ಕೆ ಮಿದುಳು ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಬ್ರೇನ್ ಇಮೇಜಿಂಗ್ (Brain Imaging) ತಂತ್ರಜ್ಞಾನದ ಮೂಲಕ ಗುರುತಿಸಲಾಗಿದೆ.
ತೂಕ ಕಡಿಮೆ ಇರುವ ಮಂದಿ ಆಹಾರ ಸೇವನೆ ಮಾಡುವಾಗ ಮಿದುಳಿನ ನಿರ್ದಿಷ್ಟ ಭಾಗ ಕುಗ್ಗುತ್ತದೆ. ಮಿದುಳಿನಲ್ಲಿ ಆಹಾರಕ್ಕೆ ಸಂಬಂಧಿಸಿದ ಪ್ರದೇಶದಲ್ಲಿ ಸ್ಪಂದನೆಯುಂಟಾಗಿ ತೃಪ್ತಿಯ (Satiety) ಭಾವನೆ ರವಾನೆಯಾಗುತ್ತದೆ, ಮತ್ತಷ್ಟು ಆಹಾರ ಬೇಕೆಂಬ ಬಯಕೆ ತಕ್ಷಣವೇ ಕಡಿಮೆಯಾಗುತ್ತದೆ. ಆದರೆ, ಬೊಜ್ಜು ದೇಹಿಗಳಲ್ಲಿ ಈ ಪ್ರಕ್ರಿಯೆ ಕಂಡುಬರುವುದೇ ಇಲ್ಲ.
Intimate Health: ವಯಾಗ್ರಾ ಮಾತ್ರೆಗಿಂತ ಹೆಚ್ಚು ಎಫೆಕ್ಟಿವ್ ಈ ಆಹಾರ!
ವಿಲ್ ಪವರ್ ಗಿಂತ ಹೆಚ್ಚು
ಕೆಲವೊಬ್ಬರು ಆಹಾರ ನಿಯಂತ್ರಣದ ಮೂಲಕ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗದಿರುವುದು ಏತಕ್ಕೆ ಎನ್ನುವ ಪ್ರಶ್ನೆಗೆ ಇದರಿಂದ ಉತ್ತರ ದೊರೆತಂತಾಗಿದೆ. ಆಹಾರ ನಿಯಂತ್ರಣ ವಿಲ್ ಪವರ್ (Will Power) ಗೆ ಸಂಬಂಧಿಸಿದ್ದು, ಕಡಿಮೆ ಆಹಾರ ಸೇವನೆ ರೂಢಿಸಿಕೊಂಡು ಕ್ರಮೇಣ ಅದಕ್ಕೇ ಅಂಟಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬಹುದು ಎನ್ನುವುದು ನಮ್ಮ ಸಾಮಾನ್ಯ ನಂಬಿಕೆ. ಆದರೆ, ಈ ಅಧ್ಯಯನದ ಲೇಖಕರಾದ ಮಿರೆಲ್ ಸೆರ್ಲಿ ಪ್ರಕಾರ, ಬೊಜ್ಜು ಎನ್ನುವುದು ವಿಲ್ ಪವರ್ ಗಿಂತ ಮಿಗಿಲಾದ ಅಂಶ. ಇದು ಜೈವಿಕ ಪ್ರಕ್ರಿಯೆಯಲ್ಲಿ ಆಗುವ ವ್ಯತ್ಯಾಸ. ಇಲ್ಲಿ ಮಿದುಳಿನಲ್ಲಿರುವ ಹಾರ್ಮೋನ್ ಹೊಟ್ಟೆಯ ಪೌಷ್ಟಿಕಾಂಶವನ್ನು ಗುರುತಿಸಲು ವಿಫಲವಾಗುತ್ತದೆ. ಹೀಗಾಗಿ, ವಿಲ್ ಪವರ್ ಕೂಡ ಇಲ್ಲಿ ಕೆಲಸ ಮಾಡುವುದು ಕಷ್ಟಸಾಧ್ಯ. ಒಂದೊಮ್ಮೆ ಸ್ವಲ್ಪ ದಿನಗಳ ಕಾಲ ಹೇಗಾದರೂ ತೂಕ ಇಳಿಸಿಕೊಂಡರೂ ಮತ್ತೆ ಕ್ರಮೇಣ ತೂಕ ಹೆಚ್ಚುವುದು ಕಂಡುಬರುತ್ತದೆ. ಏಕೆಂದರೆ, ಮಿದುಳಿನ ಕಾರ್ಯಶೈಲಿ ಹಿಂದಿನಂತೆಯೇ ಇರುತ್ತದೆ.
ಪರಿಹಾರವೇನು?
ನಿಧಾನಕ್ಕೆ ತಿನ್ನುವುದು (Slow Eating) ಆಹಾರ ತೃಪ್ತಿಯಲ್ಲಿ ಭಾರೀ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಮಿದುಳಿನಲ್ಲಿ ತೃಪ್ತಿಯ ಹಾರ್ಮೋನ್ ಬಿಡುಗಡೆಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.