Latest Videos

Kids' Health: ಡೈಪರ್ ನಲ್ಲಿ ಪತ್ತೆಯಾಯ್ತು ವಿಷಕಾರಿ ಕೆಮಿಕಲ್

By Suvarna NewsFirst Published Jun 6, 2022, 5:39 PM IST
Highlights

ಮಕ್ಕಳ ಡೈಪರ್ ನಲ್ಲಿ ಫ್ತಲೇಟ್ ಎನ್ನುವ ವಿಷಕಾರಿ ಅಂಶವೊಂದು ಪತ್ತೆಯಾಗಿದೆ. ದೇಶೀಯ ಸಂಸ್ಥೆಯೊಂದು ನಡೆಸಿದ್ದ ಅಧ್ಯಯನದಲ್ಲಿ ಇದು ತಿಳಿದುಬಂದಿದೆ. ಡೈಪರ್ ನಲ್ಲಿರುವ ವಿಷಕಾರಿ ಅಂಶ ಮಕ್ಕಳ ಚರ್ಮದ ಮೂಲಕ ದೇಹ ಸೇರಿ ಅವರ ಆರೋಗ್ಯಕ್ಕೆ ಮಾರಕವಾಗುವ ಸಾಧ್ಯತೆ ಅಧಿಕ.
 

ಪುಟ್ಟ ಮಕ್ಕಳು (Children) ಪುಟ್ಟದಾದ ಹಾಸಿಗೆಯಲ್ಲಿ ಕೈಕಾಲುಗಳನ್ನು ಆಡಿಸುತ್ತ,  ಅಲ್ಲಿಯೇ ಮೂತ್ರ (Urine) ವಿಸರ್ಜಿಸಿಕೊಳ್ಳುವುದು ಹಿಂದೆಲ್ಲ ಸಾಮಾನ್ಯವಾಗಿತ್ತು. ಮಕ್ಕಳ ಮೂತ್ರ ವಿಸರ್ಜನೆ ಆಗ ಸಮಸ್ಯೆಯೇ ಆಗಿರಲಿಲ್ಲ. ಅಮ್ಮ ಅಥವಾ ಅಜ್ಜಿಯ ಕಾಟನ್ ಸೀರೆಯೇ (Saree) ಅದಕ್ಕೆ ಸಾಕಾಗುತ್ತಿತ್ತು. ಆದರೆ, ಆ ಸ್ಥಾನದಲ್ಲೀಗ ಡೈಪರ್ (Diapers) ಬಂದಿದೆ. ಮಗು ಮನೆಯಲ್ಲೇ ಇದ್ದರೂ ದಿನವಿಡೀ ಡೈಪರ್ ಹಾಕಿಡುವವರೂ ಇದ್ದಾರೆ. ಆದರೆ, ಇದೀಗ ಮಕ್ಕಳ ಡೈಪರ್ ಕೂಡ ಸುರಕ್ಷಿತವಲ್ಲ, ಅದರಲ್ಲಿ ವಿಷಕಾರಿ (Toxic) ಅಂಶ ಇರುವ ಬಗ್ಗೆ ಅಧ್ಯಯನವೊಂದು ಹೇಳಿದೆ. ದೆಹಲಿ ಮೂಲದ ಸಂಸ್ಥೆಯೊಂದು ನಡೆಸಿದ್ದ ಸಮೀಕ್ಷೆಯೊಂದರ ಪ್ರಕಾರ, ಸ್ಥಳೀಯ ಮಾರುಕಟ್ಟೆ ಹಾಗೂ ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ದೊರೆಯುವ ಬರೋಬ್ಬರಿ 19 ಬ್ರ್ಯಾಂಡ್ ಗಳ ಡೈಪರ್ ಗಳಲ್ಲಿ ಫ್ತಲೇಟ್ (Phthalate) ಅಂಶ ಕಂಡುಬಂದಿದೆ. ಇದು ಎಂಡೋಕ್ರೈನ್ (Endocrine) ಗ್ರಂಥಿಗಳ ಜಾಲದ ಮೇಲೆ ಹಾಗೂ ಇತರ ಅಂಗಾಂಗಗಳ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲದು. ದೆಹಲಿ ಮೂಲದ ಟಾಕ್ಸಿಕ್ಸ್ ಲಿಂಕ್ (Toxics Link) ಎನ್ನುವ ಸಂಸ್ಥೆಯು 20 ಸ್ಯಾಂಪಲ್ ಗಳನ್ನು ಪರಿಶೀಲನೆಗೆ ಒಳಪಡಿಸಿತ್ತು. ಅವುಗಳಲ್ಲಿ ಸರಿಸುಮಾರು 2.36 ಪಿಪಿಎಂ ನಿಂದ 302.25 ಪಿಪಿಎಂವರೆಗೆ ಫ್ತಲೇಟ್ ಅಂಶ ಕಂಡುಬಂದಿದೆ. ಇದಕ್ಕೆ ಹಿಗ್ಗಬಲ್ಲ ಪ್ಲಾಸ್ಟಿಕ್ ಅಂಶ ಬಳಸಿದಾಗ ಡಿಇಎಚ್ ಪಿ ಎಂದು ಕರೆಯಲಾಗುತ್ತದೆ. ಈ ಅಂಶ ಅತ್ಯಂತ ವಿಷಕಾರಿ ಫ್ತಲೇಟ್ ಆಗಿರುತ್ತದೆ. 

'ಮಕ್ಕಳ ಉತ್ಪನ್ನಗಳಲ್ಲಿ ಡಿಇಎಚ್ ಪಿ ಅನ್ನು ಬಳಕೆ ಮಾಡುವಂತಿಲ್ಲ. ಆದರೆ, ಡೈಪರ್ ಗಳಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಕಂಡುಬಂದಿದೆ’ ಎಂದು ಟಾಕ್ಸಿಕ್ಸ್ ಲಿಂಕ್ ಸಂಸ್ಥೆಯ ಪ್ರೊಗ್ರಾಮ್ ಕೋಆರ್ಡಿನೇಟರ್ ಅಲ್ಕಾ ದುಬೆ ಹೇಳಿದ್ದಾರೆ. 

ಮಕ್ಕಳ ಡೈಪರ್ ಗುಳ್ಳೆಗೆ ಇಲ್ಲಿವೆ ಮದ್ದು

ಡೈಪರ್ ಗಳಲ್ಲಿ ಬಳಕೆ ಮಾಡಲಾಗುವ ಪಾಲಿಮರ್ ಅಂಶ ಸುಲಭವಾಗಿ ಹೊರಸೂಸುತ್ತದೆ. ಮಕ್ಕಳಿಗೆ ಡೈಪರ್ ಅನ್ನು 3-4 ವರ್ಷಗಳವರೆಗೂ ಬಳಸುವುದು ಕಂಡುಬರುತ್ತದೆ. ಅಲ್ಲದೆ, ಡೈಪರ್ ನೇರವಾಗಿ ಮಕ್ಕಳ ಜನನಾಂಗದ ಸಂಪರ್ಕಕ್ಕೆ ಬರುವಾಗ ಅಲ್ಲಿರುವ ಫ್ತಲೇಟ್ ಅಂಶ ಚರ್ಮದ ಮೂಲಕ ಹೀರಿಕೆಯಾಗುವ ಸಾಧ್ಯತೆ ಅಧಿಕ. ಮಕ್ಕಳಲ್ಲಿ ಇದು ತೀವ್ರತರದ ಸಮಸ್ಯೆ ಸೃಷ್ಟಿಸಬಲ್ಲದು. 
ಈ ಸಂಸ್ಥೆಯ ಸಹ ನಿರ್ದೇಶಕ ಸತೀಶ್ ಸಿನ್ಹಾ ಎಂಬುವವರ ಪ್ರಕಾರ, ಫ್ತಲೇಟ್ ನಮ್ಮ ಎಂಡೋಕ್ರೈನ್ ವ್ಯವಸ್ಥೆಯನ್ನು ಹದಗೆಡಿಸುತ್ತದೆ. ಅಷ್ಟೇ ಅಲ್ಲ, ಹಲವು ಸಮಸ್ಯೆಗಳನ್ನೂ ಹುಟ್ಟುಹಾಕುತ್ತದೆ. ಮಧುಮೇಹ, ಹೈಪರ್ ಟೆನ್ಷನ್, ಬೊಜ್ಜು ಹಾಗೂ ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗಬಲ್ಲದು. 

ಚರ್ಮದ (Dermal) ಮೂಲಕ ದೇಹ ಸೇರುವ ಫ್ತಲೇಟ್
ಇದುವರೆಗಿನ ವೈಜ್ಞಾನಿಕ ಅಧ್ಯಯನಗಳು ಹೇಳುವಂತೆ ಫ್ತಲೇಟ್ ಅಂಶ ಚರ್ಮದ ಮೂಲಕ ದೇಹದೊಳಗೆ ಸೇರುತ್ತದೆ. ಹಾಗೆಯೇ, ತ್ಯಾಜ್ಯವಾಗಿ ಪರಿಸರಕ್ಕೂ ಹಾನಿಕರವಾಗುತ್ತದೆ. ಮಕ್ಕಳ ಹಲವು ಉತ್ಪನ್ನಗಳಲ್ಲಿ ಡಿಇಎಚ್ ಪಿ ಸೇರಿದಂತೆ ಒಟ್ಟಾರೆ 6 ರೀತಿಯ ಫ್ತಲೇಟ್ ಅಂಶಗಳು ಕಂಡುಬಂದಿವೆ. ದುರಂತವೆಂದರೆ, ನಮ್ಮ ದೇಶದಲ್ಲಿ ಇವುಗಳ ಬಳಕೆ ಕುರಿತು ಯಾವುದೇ ನಿಯಮವೂ ಇಲ್ಲದಿರುವುದು ಡೈಪರ್ ಉತ್ಪಾದನಾ ಕಂಪನಿಗಳಿಗೆ ವರದಾನವಾಗಿ ಪರಿಣಮಿಸಿದೆ. 

ಡೈಪರ್ ಮಾತ್ರವಲ್ಲ, ಮಹಿಳೆಯರು ಮಾಸಿಕ ಋತುಸ್ರಾವದ ಸಮಯದಲ್ಲಿ ಬಳಕೆ ಮಾಡುವ ಸ್ಯಾನಿಟರಿ ಪ್ಯಾಡ್ (Sanitary Pad) ಗಳಲ್ಲೂ ಫ್ತಲೇಟ್ ಅಂಶವಿರುವುದು ಕೆಲವು ವರ್ಷಗಳ ಹಿಂದೆ ಪತ್ತೆಯಾಗಿತ್ತು. ಇತ್ತೀಚೆಗೆ ಪರಿಸರಸ್ನೇಹಿ ಸ್ಯಾನಿಟರಿ ಪ್ಯಾಡ್ ಗಳು ಹೆಚ್ಚುತ್ತಿವೆಯಾದರೂ ಸಾಮಾನ್ಯ ಜನರ ಕೈಗೆ ಅವು ಲಭ್ಯವಾಗುತ್ತಿಲ್ಲ. ಬಹುತೇಕ ಮಹಿಳೆಯರು ಮಾರುಕಟ್ಟೆಯಲ್ಲಿ ದೊರೆಯುವ ಸಾಮಾನ್ಯ ಸ್ಯಾನಿಟರಿ ಪ್ಯಾಡ್ ಗಳನ್ನೇ ಬಳಕೆ ಮಾಡುತ್ತಿದ್ದಾರೆ. 

ಡೆಲಿವರಿ ಆಗೋ ಮುನ್ನು ಈ ವಸ್ತುಗಳು ಮನೆಯಲ್ಲಿ ಇರಲಿ
ಮಕ್ಕಳ ಡೈಪರ್ ನಲ್ಲಿ ಫ್ತಲೇಟ್ ಬಳಕೆ ಮಾಡುವುದರ ಬಗ್ಗೆ ನಿಷೇಧ ಹೇರುವ ಅಗತ್ಯವಿದೆ, ಈ ಸಂಬಂಧ ಸರ್ಕಾರ ಮಧ್ಯೆ ಪ್ರವೇಶಿಸಬೇಕು ಎಂದು ಟಾಕ್ಸಿಕ್ಸ್ ಲಿಂಕ್ ಸಂಸ್ಥೆ ಒತ್ತಾಯಿಸಿದೆ. ಹಾಗೆಯೇ, ಡೈಪರ್ ನಲ್ಲಿ ಏನಿದೆ, ಯಾವ ವಿಷಕಾರಿ ಅಂಶವಿದೆ ಎನ್ನುವುದನ್ನು ಪ್ಯಾಕೆಟ್ ಮೇಲೆ ಮುದ್ರಿಸುವಂತೆ ಆಗ್ರಹ ಮಾಡಿದೆ. ಆದರೆ, ಇದರಿಂದೇನೂ ಪ್ರಯೋಜನವಿಲ್ಲ. ಏಕೆಂದರೆ, ಇಂತಹ ಬಹಳಷ್ಟು ಎಚ್ಚರಿಕೆಗಳು ಜನರನ್ನು ತಲುಪಲಾರವು. 

click me!