ಸಕ್ಕರೆ ಮೇಲೆ ಅಕ್ಕರೆ ಹೆಚ್ಚಿದ್ರೆ ಖಿನ್ನತೆ ಕಾಡಿತು ಜೋಕೆ!

By Suvarna NewsFirst Published Dec 16, 2019, 1:36 PM IST
Highlights

ಸಿಹಿ ತಿನಿಸು ತಿಂದಷ್ಟೂ ಮತ್ತೆ ಮತ್ತೆ ತಿನ್ನಬೇಕು ಎಂಬ ಬಯಕೆ ಉಂಟಾಗುತ್ತಿದ್ದರೆ ಅದು ಸಕ್ಕರೆ ಕಾಯಿಲೆಯ ಲಕ್ಷಣ ಎಂದು ನೀವು ಹೇಳಬಹುದು. ಆದರೆ, ಚಳಿಗಾಲದಲ್ಲಿ ಅತಿಯಾದ ಸಕ್ಕರೆ ಸೇವನೆ ನಿಮ್ಮನ್ನು ಖಿನ್ನತೆಗೂ ದೂಡಬಹುದು ಎಂಬುದು ತಿಳಿದಿದೆಯೇ? ಅಮೆರಿಕದ ವಿಶ್ವವಿದ್ಯಾಲಯವೊಂದು ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ. 

ಸಿಹಿ ತಿನಿಸುಗಳನ್ನು ಕಂಡ ತಕ್ಷಣ ತಿನ್ನಬೇಕು ಎಂಬ ಬಾಯಿ ಚಪಲವಾಗುವುದು ಸಹಜ. ಆದರೆ, ನಾಲಿಗೆಗೆ ರುಚಿಸಿತೆಂದು ಚಳಿಗಾಲದಲ್ಲಿ ಲೆಕ್ಕಕ್ಕಿಂತ ಹೆಚ್ಚು ಸಿಹಿ ಸೇವಿಸಿದರೆ ಖಿನ್ನತೆಗೊಳಗಾಗುವ ಸಾಧ್ಯತೆಯಿದೆ ಎಂದಿದೆ ಅಮೆರಿಕಾದ ಕನ್ಸಸ್ ವಿಶ್ವವಿದ್ಯಾಲಯ (ಕೆಯು)ದ ಸಂಶೋಧಕರ ಅಧ್ಯಯನ. 

ಚಳಿಗಾಲದಲ್ಲಿ ಬೆಳಕು ಮಂದವಾಗಿರುತ್ತದೆ. ಸೂರ್ಯ ರಶ್ಮಿ ಪ್ರಖರವಾಗಿರದ ಕಾರಣ ಮೈ ಮನಸ್ಸೆಲ್ಲ ಭಾರವಾಗಿರುತ್ತದೆ. ನಿದ್ರೆಯಲ್ಲಿ ಕೂಡ ವ್ಯತ್ಯಯ ಕಂಡುಬರುತ್ತದೆ. ಇಂಥ ಸಮಯದಲ್ಲಿ ಸಿಹಿ ಪದಾರ್ಥಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವುದು ಅಮೆರಿಕದ ಕನ್ಸಸ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ದೃಢಪಟ್ಟಿದೆ. 

ಸೆಲೆಬ್ರಿಟಿಗಳನ್ನೂ ಬಿಡಲಿಲ್ಲ ಖಿನ್ನತೆ, ಆತಂಕಗಳ ಭೂತ!

‘ಚಳಿಗಾಲದಲ್ಲಿ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ಸೂರ್ಯನ ಕಿರಣಗಳು ಸೋಕದ ಹಿನ್ನೆಲೆಯಲ್ಲಿ ದೇಹದ ಜೈವಿಕ ಗಡಿಯಾರದಲ್ಲಿ ವ್ಯತ್ಯಯ ಕಂಡುಬರುತ್ತದೆ. ಇದು ಆರೋಗ್ಯಪೂರ್ಣ ನಿದ್ರೆಗೂ ಭಂಗವುಂಟು ಮಾಡುವ ಮೂಲಕ ಶೇ.5-10 ಜನರಲ್ಲಿ ಖಿನ್ನತೆಗೆ ಕಾರಣವಾಗುತ್ತದೆ ಶೇ.30ರಷ್ಟು ಜನರು ಯಾವುದಾದರೊಂದು ಚಳಿಗಾಲದ ಪರಿಣಾಮದ ಖಿನ್ನತೆಯ ಲಕ್ಷಣಗಳಿಂದ ಬಳಲುತ್ತಿರುವುದು ಕಂಡುಬಂದಿದೆ. ಇಂಥವರು ಕಾರ್ಬೋಹೈಡ್ರೆಟ್ ಅಧಿಕವಿರುವ ಸಿಹಿ ತಿಂಡಿಗಳೆಡೆಗೆ ಹೆಚ್ಚಿನ ಬಯಕೆ ಹೊಂದಿದ್ದಾರೆ’ ಎನ್ನುತ್ತಾರೆ ಅಧ್ಯಯನ ತಂಡದಲ್ಲಿದ್ದ ಕ್ಲಿನಿಕಲ್ ಸೈಕಾಲಜಿ ಪ್ರಾಧ್ಯಾಪಕ ಸ್ಟೀಫನ್ ಇಲರ್ಡಿ.

ಚಳಿಗಾಲದಲ್ಲಿ ಖಿನ್ನತೆಯಿಂದ ಬಳಲುತ್ತಿರುವವರಿಗೆ ಸಕ್ಕರೆ ಅಥವಾ ಸಿಹಿ ತಿನಿಸು ಕಂಡ ತಕ್ಷಣ ತಿನ್ನಬೇಕು ಎಂಬ ಬಯಕೆಯಾಗುತ್ತದೆ. ಇದಕ್ಕೆ ಕಾರಣ ಸಕ್ಕರೆಯಲ್ಲಿರುವ ಮೂಡ್ ಬೂಸ್ಟಿಂಗ್ ಗುಣ. ಇದು ಮನಸ್ಸಿನ ತುಮುಲಗಳನ್ನು ತಾತ್ಕಾಲಿಕವಾಗಿ ತಗ್ಗಿಸುವ ಮೂಲಕ ನೆಮ್ಮದಿ ಒದಗಿಸುತ್ತದೆ. ಆದಕಾರಣ ಖಿನ್ನತೆ ಹೊಂದಿರುವವರು ಚಳಿಗಾಲದಲ್ಲಿ ಮಿದುಳಿಗೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನೊದಗಿಸುವ ಆಹಾರ ಪದಾರ್ಥಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರ ಜೊತೆಗೆ ಸಕ್ಕರೆ ಅಂಶವುಳ್ಳ ಆಹಾರಗಳಿಂದ ದೂರವಿರುವುದು ಒಳ್ಳೆಯದು ಎಂದಿದೆ ಈ ಅಧ್ಯಯನ. 

ದಿನನಿತ್ಯದ ಆಹಾರದಲ್ಲಿ ಅತಿಯಾದ ಸಕ್ಕರೆ ಸೇರ್ಪಡೆ ಉದ್ರೇಕಕ್ಕೂ ಕಾರಣವಾಗುತ್ತದೆ. ನಮ್ಮ ದೇಹದಲ್ಲಿ ಉದ್ರೇಕಕ್ಕೆ ಕಾರಣವಾಗುವ ಹಾರ್ಮೋನ್ಗಳು ಮಿದುಳನ್ನು ನೇರವಾಗಿ ಖಿನ್ನತೆಗೆ ದೂಡಬಲ್ಲವು. ಹೀಗಾಗಿ ನಮ್ಮನ್ನು ಉದ್ರೇಕಿಸುವ ಹಾರ್ಮೋನ್ಗಳು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾದರೆ ಖಿನ್ನತೆ ಕಾಡುವುದು ಖಚಿತ. ಸಕ್ಕರೆ ಈ ಹಾರ್ಮೋನ್ಗಳನ್ನು ಪ್ರಚೋದಿಸುವ ಗುಣ ಹೊಂದಿದೆ ಖಿನ್ನತೆಗೆ ಕಾರಣವಾಗುವ ಬ್ಯಾಕ್ಟೀರಿಯಗಳು ಮಾನವನ ಕರುಳಿನಲ್ಲಿದ್ದು, ಸಿಹಿ ಪದಾರ್ಥಗಳಲ್ಲಿರುವ ಸಕ್ಕರೆ ಅಂಶಕ್ಕೆ ಮುಗಿಬಿದ್ದು ರಾಸಾಯನಿಕವೊಂದನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸುತ್ತವೆ. ಈ ರಾಸಾಯನಿಕ ಮಿದುಳನ್ನು ಉದ್ವೇಗ, ಒತ್ತಡ ಹಾಗೂ ಖಿನ್ನತೆಗೆ ದೂಡುತ್ತದೆ ಎಂದಿರುವ ಸಂಶೋಧಕರು, ಸದೃಢ ಮಾನಸಿಕ ಆರೋಗ್ಯಕ್ಕೆ ಸಸ್ಯಜನ್ಯ ಹಾಗೂ ಒಮೆಗಾ-3 ಫ್ಯಾಟಿ ಆಸಿಡ್ ಹೆಚ್ಚಿರುವ ಆಹಾರದ ಮೊರೆ ಹೋಗುವಂತೆ ಸಲಹೆ ನೀಡಿದ್ದಾರೆ. 

ಒತ್ತಡ, ಖಿನ್ನತೆ ಹಾಗೂ ಆತಂಕದ ವಿರುದ್ಧ ಹೋರಾಡೋ ಆಹಾರಗಳಿವು

click me!