ನೀವೂ ಕೋವಿಡ್ ಲಸಿಕೆ ಮೂರನೇ ಡೋಸ್ ತೆಗೆದುಕೊಳ್ಳಬೇಕೇ?

By Suvarna NewsFirst Published Aug 29, 2021, 4:13 PM IST
Highlights

ಮೊದಲ ಹಾಗೂ ಎರಡನೇ ಡೋಸ್ ಪಡೆದ ಸುಮಾರು ಮೂರು ತಿಂಗಳುಗಳ ಬಳಿಕ, ಲಸಿಕೆಯಿಂದ ಉಂಟಾದ ಆಂಟಿಬಾಡಿಗಳು ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಹೀಗಾಗಿ 90 ದಿನಗಳ ಬಳಿಕ ಮೂರನೇ ಡೋಸ್ ಹಾಕಿಸಿಕೊಳ್ಳಬಹುದು.

ಕೊರೊನಾವೈರಸ್‌ ಲಸಿಕೆಯ ರಕ್ಷಣೆಯ ಮಟ್ಟ ಕಡಿಮೆಯಿದೆ ಎಂಬುದು ಎಲ್ಲ ದೇಶಗಳ ಜನರ ತಕರಾರು. ಯಾಕೆಂದರೆ ಲಸಿಕೆ ತೆಗೆದುಕೊಂಡವರಿಗೂ ಕೋವಿಡ್ ಅಟ್ಯಾಕ್ ಆಗಿದೆ. ಹಲವಾರು ದೇಶಗಳು ಕೋವಿಡ್ ಲಸಿಕೆಯ ಬೂಸ್ಟರ್ ಶಾಟ್, ಅಂದರೆ ಮೂರನೇ ಡೋಸ್ ಕೂಡ ನೀಡುವ ಚಿಂತನೆ ಮುಂದಿಟ್ಟಿವೆ.

ಬೂಸ್ಟರ್‌ ಶಾಟ್‌ಗಳು, ನಿಗದಿತ ಡೋಸ್‌ಗಳಂತೆಯೇ ಇರುತ್ತವೆ. ಸೋಂಕಿನ ಅಪಾಯ ಕಡಿಮೆ ಮಾಡುತ್ತವೆ ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ರೋಗನಿರೋಧಕ ವರ್ಧಕಗಳಾಗಿ ಕೆಲಸ ಮಾಡುತ್ತವೆ ಎಂದು ಹೇಳಲಾಗಿದೆ. ಇನ್ನೂ ಯಾವ ದೇಶದಲ್ಲೂ ಮೂರನೇ ಡೋಸ್ ಕಡ್ಡಾಯಗೊಳಿಸಿಲ್ಲ. 

ಯಾಕೆ ಬೇಕು?

ಮೊದಲ ಹಾಗೂ ಎರಡನೇ ಡೋಸ್ ಪಡೆದ ಸುಮಾರು ಮೂರು ತಿಂಗಳುಗಳ ಬಳಿಕ, ಲಸಿಕೆಯಿಂದ ಉಂಟಾದ ಆಂಟಿಬಾಡಿಗಳು ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಹೀಗಾಗಿ ೯೦ ದಿನಗಳ ಬಳಿಕ ಮೂರನೇ ಡೋಸ್ ಹಾಕಿಸಿಕೊಳ್ಳಬಹುದು. ವೈರಸ್‌ಗೆ ದೇಹದಲ್ಲಿ ನಿರೋಧಕ ಪ್ರತಿಕ್ರಿಯೆಗಳನ್ನು ಪರಿಣಾಮಕಾರಿಯಾಗಿ ಸುಧಾರಿಸಲು ಬೂಸ್ಟರ್‌ ಶಾಟ್‌ಗಳು ಗಮನಾರ್ಹವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಕ್ಲಿನಿಕಲ್‌ ಅಧ್ಯಯನಗಳು ಸಾಬೀತುಪಡಿಸಿವೆ. ರೋಗನಿರೋಧಕ ಶಕ್ತಿ ಸಂಪೂರ್ಣವಾಗಿ ಕ್ಷೀಣಿಸಿದರೆ ಎಲ್ಲರಿಗೂ ಹೆಚ್ಚುವರಿ ಡೋಸ್‌ಗಳು ಬೇಕಾಗಬಹುದು. ಲಸಿಕೆಗಳ ಕಡಿಮೆ ಲಭ್ಯತೆ ಪ್ರಸ್ತುತ ಒಂದು ಸವಾಲು. ಹೀಗಾಗಿ ನಾವು ಬೂಸ್ಟರ್ ಶಾಟ್‌ಗಳನ್ನು ಹಾಕಿಸಿಕೊಳ್ಳಲು ಮುಂದಾಗುವ ಮುನ್ನ ಅದನ್ನೂ ನಿಭಾಯಿಸಬೇಕಾಗಿದೆ.

ಭಾರತದಲ್ಲಿ ಬೂಸ್ಟರ್‌ ಶಾಟ್‌ಗಳು ಸಾರ್ವಜನಿಕವಾಗಿ ಲಭ್ಯವಾಗಲು ಇನ್ನೂ ಸ್ವಲ್ಪ ಸಮಯ ಬಾಕಿಯಿದೆ. ಇಲ್ಲಿ ಕೇವಲ 10%ಕ್ಕಿಂತ ಕಡಿಮೆ ಜನಸಂಖ್ಯೆ ಸಂಪೂರ್ಣವಾಗಿ ಲಸಿಕೆ ಪಡೆದಿದೆ ಹಾಗೂ ಬಹುಪಾಲು ಜನರು ಇನ್ನೂ ಡೋಸೇಜ್‌ಗಾಗಿ ಕಾಯುತ್ತಿದ್ದಾರೆ. ಅಗತ್ಯಕ್ಕೆ ಅನುಗುಣವಾಗಿ ಆದ್ಯತೆ ನೀಡುವುದು, ಹೆಚ್ಚಿನ ಅಪಾಯದಲ್ಲಿರುವವರಿಗೆ ಮೊದಲು ನೀಡುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ. ಕೊರೊನಾ ವಾರಿಯರ್ಸ್, ವೃದ್ಧರು, ರೋಗನಿರೋಧಕ ಶಕ್ತಿ ಇಲ್ಲದವರು ಇತ್ಯಾದಿ.

ಯಾರಿಗೆ ನೀಡಬಹುದು? ವೈದ್ಯರ ಪ್ರಕಾರ, ಗರಿಷ್ಠ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಯಾರೇ ಆದರೂ ಬೂಸ್ಟರ್‌ ಡೋಸ್‌ ಪಡೆಯಬಹುದು. ಅಥವಾ ಎರಡೂ ಡೋಸ್ ಪಡೆದು, ರೋಗನಿರೋಧಕ ಶಕ್ತಿ ಕ್ಷೀಣಿಸುತ್ತಿರುವವರಿಗೂ ನೀಡಬಹುದು. ಅಂದರೆ ಲಸಿಕೆ ಪಡೆದವರಲ್ಲಿ ಲಸಿಕೆ-ಚಾಲಿತ ಪ್ರತಿಕಾಯಗಳು 90 ದಿನಗಳ ಅವಧಿಯ ನಂತರ ಕಡಿಮೆಯಾಗಲು ಪ್ರಾರಂಭಿಸುತ್ತವೆ. ಮೂರನೆಯ ಡೋಸ್‌ ನೀಡುವುದರಿಂದ ಪ್ರತಿಕಾಯಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಇದು ಮೂಗಿನ ಮತ್ತು ಗಂಟಲಿನ ಒಳಪದರದಲ್ಲಿ ಸ್ಥಳೀಯ ಪ್ರತಿರಕ್ಷೆಯ ಮಟ್ಟವನ್ನು ಹೆಚ್ಚಿಸುತ್ತದೆ. ಫಲಾನುಭವಿಗೆ ಇದು ಹೆಚ್ಚುವರಿ ರಕ್ಷ ಣಾ ಮಾರ್ಗ. ಬೂಸ್ಟರ್ ಲಸಿಕೆಗಳು ಎಷ್ಟು ಪರಿಣಾಮಕಾರಿ ಮತ್ತು ಬಲವಾದವು ಎಂದು ಅಧ್ಯಯನ ನಡೆಯಬೇಕಿದೆ. ಆದರೂ ಕೆಲವು ಪ್ರಾಥಮಿಕ ಸಂಶೋಧನೆಗಳು ಈ ರಕ್ಷಣೆ ದೀರ್ಘಾವಧಿಯದ್ದಾಗಿರಬಹುದು ಎಂದು ಸೂಚಿಸಿದೆ.

ಸೋಂಕಿತರಿಗೆ ಬೇಕೆ?

ಅಮೆರಿಕ ಮತ್ತು ಇಸ್ರೇಲ್‌ನಂತಹ ದೇಶಗಳಲ್ಲಿ ಪ್ರಸ್ತುತ ಇಮ್ಯುನೊಸಪ್ರೆಸೆಂಟ್‌ ಕಾಯಿಲೆಗಳು ಅಥವಾ ಕೀಮೋಥೆರಪಿಯೊಂದಿಗೆ ಹೋರಾಡುತ್ತಿರುವವರು, ಲಸಿಕೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡದಂತಹ ತೀವ್ರ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಪ್ರಸ್ತುತ ಬೂಸ್ಟರ್‌ ಶಾಟ್‌ಗಳನ್ನು ನೀಡಲಾಗುತ್ತಿದೆ. ಇತರ ಕಡೆ ಕೊರೊನಾ ವಾರಿಯರ್‌ಗಳಿಗೆ ಅಥವಾ ಹೆಚ್ಚಿನ ಮಾನ್ಯತೆ ಅಪಾಯವನ್ನು ಎದುರಿಸುತ್ತಿರುವವರಿಗೆ ಡೋಸ್‌ಗೆ ಆದ್ಯತೆ ನೀಡಲಾಗುತ್ತಿದೆ.

ಈಗ, ನೀವು ಸಾಮಾನ್ಯ ಅನಾರೋಗ್ಯಕ್ಕಿಂತ ಹೆಚ್ಚಿನ ಅಪಾಯವನ್ನು ಉಂಟುಮಾಡುವ ತೀವ್ರವಾದ ಅನಾರೋಗ್ಯವನ್ನು ಹೊಂದಿದ್ದರೆ, ಎರಡು ಡೋಸ್‌ಗಳ ಲಸಿಕೆ ಕೂಡ ಹಲವಾರು ವಿಧಗಳಲ್ಲಿ ರಕ್ಷ ಣೆಯನ್ನು ನೀಡುತ್ತದೆ. ಅನುಮೋದನೆಗೆ ಒಳಪಟ್ಟ ನಂತರ ಮಾತ್ರ ಬೂಸ್ಟರ್‌ ಶಾಟ್‌ಗಳನ್ನು ಕೊಡಬಹುದು. ಒಂದು ಸೋಂಕು ಬಂದು ಹೋಗಿದ್ದರೂ ನೀವು ಮೂರನೇ ಡೋಸ್ ಪಡೆಯಲು ಏನೂ ಅಡ್ಡಿಯಿಲ್ಲ. ಆದರೆ ನಿಗದಿತ ಕಾಲಾವಧಿಯ ನಂತರವೇ. 

ಅಡ್ಡಪರಿಣಾಮ ಇದೆಯೇ?

ಮೊದಲ ಹಾಗೂ ಎರಡನೇ ಡೋಸ್‌ನ ವಿಭಿನ್ನ ಅಡ್ಡಪರಿಣಾಮಗಳ ಬಗ್ಗೆ ಈಗಾಗಲೇ ಸಾಕಷ್ಟು ತಿಳಿಯಲಾಗಿದೆ. ಮೂರನೇ ಡೋಸ್‌ನ ಅಡ್ಡಪರಿಣಾಮಗಳು ಇನ್ನೂ ವ್ಯಾಪಕವಾಗಿ ಚರ್ಚೆಯಾಗಿಲ್ಲ. ಏಕೆಂದರೆ ಯಾವುದೇ ಚರ್ಚೆ ನಡೆಸಲು ಅಗತ್ಯವಾದ ಡೇಟಾ ಇನ್ನೂ ಹೊಂದಿಲ್ಲ. ಆದ್ದರಿಂದ, ಹೆಚ್ಚುವರಿ ಡೋಸ್  ಅಡ್ಡಪರಿಣಾಮಗಳ ಬಗ್ಗೆ ಊಹಿಸಲು ಅಥವಾ ಚರ್ಚಿಸಲು ಇದು ಸಮಯವಲ್ಲ. 

ಅಕ್ಕಿ ಸೇವಿಸಿಯೂ ಕ್ಯಾಲೊರಿ ಕಂಟ್ರೋಲ್ ಮಾಡುವುದು ಹೇಗೆ?

ಮೂರನೇ ಡೋಸ್‌ ಬೇರೆ ಲಸಿಕೆ ಪಡೆಯಬಹುದೇ?

ಬೂಸ್ಟರ್‌ ಶಾಟ್‌ಗಳ ಬಳಕೆ ಮತ್ತು ಅನ್ವಯಿಸುವಿಕೆಯ ಅಧ್ಯಯನದ ಜೊತೆಗೆ, ವಿಜ್ಞಾನಿಗಳು ಎಂಆರ್‌ಎನ್‌ಎ ಲಸಿಕೆಗಳೊಂದಿಗೆ ವೈರಲ್- ವೆಕ್ಟರ್‌ ಲಸಿಕೆಗಳು, ಅಡೆನೊವೈರಸ್‌ ಲಸಿಕೆಗಳಂತಹ ಲಸಿಕೆ ಮಾದರಿಗಳ ಮಿಶ್ರಣ ಮತ್ತು ಹೊಂದಾಣಿಕೆ ಮಾಡಬಹುದೇ ಎಂಬುದನ್ನೂ ಸಂಶೋಧಿಸುತ್ತಿದ್ದಾರೆ.

ಮೈ ಬಿಸಿಯಾಗುತ್ತಿದ್ಯಾ? ಸುಳ್ಳು ಹೇಳಿದರೂ ಹೆಚ್ಚುತ್ತೆ ದೇಹದ ತಾಪಮಾನ!

ಕೆಲವರಿಗೆ ಬೇರೆ ಬೇರೆ ವರ್ಗದ ಲಸಿಕೆಗಳಿಂದ ಮೂರನೇ ಡೋಸ್‌ ನೀಡಬಹುದು ಎಂದು ಸೂಚಿಸುವ ಕೆಲವು ವರದಿಗಳೂ ಇವೆ. ಇದು ಒಂದು ಸಾಧ್ಯತೆಯಾಗಿದ್ದರೂ, ಇದನ್ನು ಶಿಫಾರಸು ಮಾಡಿಲ್ಲ. ಯಾಕೆಂದರೆ ಪ್ರಾಥಮಿಕ ಹಂತದ ಲಸಿಕೆ ನೀಡಿಕೆಯೇ ಇನ್ನೂ ನಡೆಯುತ್ತಿರುವಾಗ, ಮೂರನೇ ಡೋಸ್ ನೀಡಲು ಮುಂದಾದರೆ ಸಂಪನ್ಮೂಲಗಳೇ ಒಣಗಬಹುದು ಎಂಬುದು ಸರಕಾರದ ಮುಂದಿರುವ ಆತಂಕ. 

click me!