ನ್ಯೂ ಇಯರ್ ಪಾರ್ಟಿಗೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಾ? ಡ್ಯಾನ್ಸ್, ಡ್ರಿಂಕ್ಸ್ ಎಂದು ಸ್ನೇಹಿತರೊಂದಿಗೆ ಮೋಜು-ಮಸ್ತಿ ಮಾಡುವ ಆ ದಿನವನ್ನು ತುದಿಗಾಲಲ್ಲಿ ನಿಂತು ನಿರೀಕ್ಷಿಸುತ್ತಿದ್ದೀರಾ? ಆದರೆ, ಡ್ರಿಂಕ್ಸ್ ಮಾಡಿದ ಬಳಿಕ ಮರುದಿನ ಕಾಡುವ ಹ್ಯಾಂಗ್‍ಓವರ್ ಬಗ್ಗೆ ಯೋಚಿಸಿದ್ದೀರಾ? ಅಂದ ಹಾಗೇ ಇಲ್ಲೊಂದು ಅಧ್ಯಯನ ನೀವು ತಿನ್ನುವ ಆಹಾರಕ್ಕೂ ಹ್ಯಾಂಗ್‍ಓವರ್‍ಗೂ ಸಂಬಂಧವಿದೆ ಎಂದಿದೆ.
ಡ್ರಿಂಕ್ಸ್ ಮಾಡಿದ ಬಳಿಕ ಕಾಡುವ ಹ್ಯಾಂಗ್‍ಓವರ್‍ಗೂ ನೀವು ತಿನ್ನುವ ಫುಡ್‍ಗೂ ಸಂಬಂಧವಿದೆ. ಅದು ಹೇಗೆ ಅಂತೀರಾ? ನೀವು ಮಾಂಸಹಾರಿಗಳಾಗಿದ್ದರೆ ಹ್ಯಾಂಗ್‍ಓವರ್ ನಿಮ್ಮನ್ನು ಬಾಧಿಸುವುದಿಲ್ಲ. ಒಂದು ವೇಳೆ ಬಾಧಿಸಿದರೂ ಅದು ಕಡಿಮೆ ತೀವ್ರತೆಯಲ್ಲಿರುತ್ತದೆ. ಆದರೆ, ನೀವು ಶುದ್ಧ ಸಸ್ಯಹಾರಿಗಳಾಗಿದ್ದರೆ ಹ್ಯಾಂಗ್‍ಓವರ್ ನಿಮ್ಮನ್ನು ಕಾಡಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಂತ ನಾವೇನು ಇದನ್ನು ಸುಮ್ಮನೆ ಹೇಳುತ್ತಿಲ್ಲ. ಜರ್ನಲ್ ಆಫ್ ಕ್ಲಿನಿಕಲ್ ಮೆಡಿಸಿನ್‍ನಲ್ಲಿ ಪ್ರಕಟವಾದ ಸಂಶೋಧನಾ ವರದಿಯೊಂದು ಈ ರೀತಿಯಾಗಿ ಹೇಳಿದೆ.
undefined
ಅಧ್ಯಯನ ಹೀಗೆ ಹೇಳುತ್ತೆ: ಯುಟ್ರೆಚ್ಟ್ ವಿಶ್ವವಿದ್ಯಾಲಯದ ಡಚ್ ಸಂಶೋಧಕರು 13 ಕುಡುಕರ ಮೇಲೆ ನಡೆಸಿದ ಅಧ್ಯಯನದಲ್ಲಿ ಸಸ್ಯಹಾರಿಗಳಿಗೆ ಹೋಲಿಸಿದರೆ ಮಾಂಸಹಾರಿಗಳು ಹ್ಯಾಂಗ್‍ಓವರ್‍ಗೆ ಒಳಗಾಗುವ ಸಾಧ್ಯತೆ ಕಡಿಮೆ ಎನ್ನುವುದು ಪತ್ತೆಯಾಗಿದೆ. ಈ ಅಧ್ಯಯನದಲ್ಲಿ ಪಾಲ್ಗೊಂಡವರಲ್ಲಿ 23 ಹ್ಯಾಂಗ್‍ಓವರ್‍ಗೆ ಸಂಬಂಧಿಸಿದ ಲಕ್ಷಣಗಳನ್ನು ಗುರುತಿಸಲಾಯಿತು. ಈ ವ್ಯಕ್ತಿಗಳು ರಾತ್ರಿ ಮದ್ಯ ಸೇವಿಸಿದ ಬಳಿಕ ಅವರಲ್ಲಿ ಕಂಡುಬಂದ ಹ್ಯಾಂಗ್‍ಓವರ್ ಲಕ್ಷಣಗಳನ್ನು ಗಮನಿಸಲಾಯಿತು. ಈ ಸಂದರ್ಭದಲ್ಲಿ ಅವರು ಸೇವಿಸಿದ ಆಹಾರಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಯಿತು.
ಈ ಆಹಾರಗಳಲ್ಲಿನ ಪೌಷ್ಟಿಕಾಂಶಗಳನ್ನು ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಸತು ಹಾಗೂ ವಿಟಮಿನ್ ಬಿ 3 ಕಡಿಮೆ ಪ್ರಮಾಣದಲ್ಲಿರುವ ಆಹಾರ ಪದಾರ್ಥಗಳನ್ನು ಸೇವಿಸಿದವರಲ್ಲಿ ಹೆಚ್ಚಿನ ಹ್ಯಾಂಗ್‍ಓವರ್ ಪರಿಣಾಮಗಳು ಕಂಡುಬಂದಿವೆ. ಸತುವಿನ ಕೊರತೆ ವಾಂತಿಗೆ ಕಾರಣವಾಗುತ್ತದೆ. ವಿಟಮಿನ್ ಬಿ3 ಅಥವಾ ನಿಕೊಟಿನಿಕ್ ಆಸಿಡ್ ಕೊರತೆ ಹ್ಯಾಂಗ್‍ಓವರ್ ಲಕ್ಷಣಗಳಿಗೆ ಕಾರಣವಾಗುತ್ತವೆ ಎಂದಿದ್ದಾರೆ ಸಂಶೋಧಕರು. ಅಂದ ಹಾಗೇ ಮಾಂಸಹಾರಕ್ಕೆ ಹೋಲಿಸಿದರೆ ಸಸ್ಯಹಾರದಲ್ಲಿ ಸತು ಹಾಗೂ ವಿಟಮಿನ್ ಬಿ3 ಕಡಿಮೆ ಪ್ರಮಾಣದಲ್ಲಿವೆ. ಇದೇ ಕಾರಣಕ್ಕೆ ಮಾಂಸದ ಖಾದ್ಯಗಳನ್ನು ತಿಂದವರ ಮೇಲೆ ಹ್ಯಾಂಗ್‍ಓವರ್ ಎಫೆಕ್ಟ್ ಕಡಿಮೆ.
ಆಲ್ಕೋಹಾಲ್‍ನಲ್ಲಿರುವ ಎಥನಾಲ್ ಅನ್ನು ಎಸೆಟ್ಲ್‍ಡಿಹೈಡ್ ಆಗಿ ವಿಭಜಿಸಲು ನಿಕೋಟಿನ್ ಆಸಿಡ್ ಹಾಗೂ ಸತು ಅತ್ಯಗತ್ಯ. ಈ ಎರಡು ನ್ಯುಟ್ರಿಯಂಟ್ಸ್ ಇದ್ದರೆ ಮಾತ್ರ ಆಲ್ಕೋಹಾಲ್ ಜೀರ್ಣವಾಗುತ್ತದೆ. ಒಂದು ವೇಳೆ ಈ ಸಮಯದಲ್ಲಿ ನೀವು ಸೇವಿಸುವ ಆಹಾರದಲ್ಲಿ ನಿಕೋಟಿನ್ ಆಸಿಡ್ ಹಾಗೂ ಸತು ಅಗತ್ಯ ಪ್ರಮಾಣದಲ್ಲಿರದಿದ್ದರೆ ಹ್ಯಾಂಗ್‍ಓವರ್ ನಿಮ್ಮನ್ನು ಕಾಡಿಸಿ ಕಂಗೆಡಿಸುವುದು ಗ್ಯಾರಂಟಿ.
ಹೀಗೆಲ್ಲ ಆದ್ರೆ ಹ್ಯಾಂಗ್‍ಓವರ್ ಅಂತಲೇ ಅರ್ಥ:
1.ತಲೆನೋವು: ಆಲ್ಕೋಹಾಲ್ ರಕ್ತ ನಾಳಗಳನ್ನು ಉಬ್ಬಿಸುತ್ತದೆ. ಇದರಿಂದ ರಕ್ತದೊತ್ತಡ ಕಡಿಮೆಯಾಗುವ ಕಾರಣ ಆರಂಭದಲ್ಲಿ ನಿಮಗೆ ರಿಲಾಕ್ಸ್ ಆದ ಅನುಭವವಾಗುತ್ತದೆ. ಆದರೆ, ಒಂದೊಂದೇ ಪೆಗ್ ಗಂಟಲಿಗಿಳಿದು ದೇಹವನ್ನು ಸೇರುತ್ತಿದ್ದಂತೆ ಹೃದಯ ವೇಗವಾಗಿ ರಕ್ತವನ್ನು ಪಂಪ್ ಮಾಡಲಾರಂಭಿಸುತ್ತದೆ. ಪರಿಣಾಮ ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸುವ ರಕ್ತವನ್ನು ಕೊಂಡೊಯ್ಯುವಷ್ಟು ವಿಸ್ತಾರಗೊಳ್ಳಲು ರಕ್ತನಾಳಗಳಿಗೆ ಸಾಧ್ಯವಾಗುವುದಿಲ್ಲ. ಪರಿಣಾಮ ರಕ್ತನಾಳಗಳ ಮೇಲೆ ಒತ್ತಡ ಉಂಟಾಗಿ ತಲೆನೋವು ಕಾಣಿಸಿಕೊಳ್ಳುತ್ತದೆ.
2. ವಾಂತಿ: ಆಲ್ಕೋಹಾಲ್ ನಿಮ್ಮ ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಸಿಡ್ ಉತ್ಪತಿಯಾಗಲು ಕಾರಣವಾಗುತ್ತದೆ. ಅಷ್ಟೇ ಅಲ್ಲ, ಹೊಟ್ಟೆ ಖಾಲಿಯಾಗದಂತೆ ಮಾಡುವ ಮೂಲಕ ವಾಂತಿಗೆ ಕಾರಣವಾಗುತ್ತದೆ.
3. ಸುಸ್ತು: ಆಲ್ಕೋಹಾಲ್ ಪಿತ್ತಕೋಶದಲ್ಲಿರುವ ಐಸ್‍ಲೆಟ್ಸ್‍ಗೆ ರಕ್ತದ ಹರಿವು ಹೆಚ್ಚುವಂತೆ ಮಾಡುತ್ತದೆ. ಇದು ನಿಮ್ಮ ಪಿತ್ತಕೋಶ ಹೆಚ್ಚಿನ ಇನ್ಸುಲಿನ್ ಉತ್ಪಾದಿಸುವಂತೆ ಮಾಡುತ್ತದೆ. ಇದು ನಿಮ್ಮ ರಕ್ತದ ಸಕ್ಕರೆ ಪ್ರಮಾಣವನ್ನು ತಗ್ಗಿಸುವ ಮೂಲಕ ಆಯಾಸ, ಸುಸ್ತು ಕಾಡುವಂತೆ ಮಾಡುತ್ತದೆ.
ಸಕ್ಕರೆ ಮೇಲೆ ಅಕ್ಕರೆ ಹೆಚ್ಚಿದ್ರೆ ಖಿನ್ನತೆ ಕಾಡಿತು ಜೋಕೆ!
4.ನಿದ್ರಾಹೀನತೆ: ಆಲ್ಕೋಹಾಲ್ ನಿಮ್ಮ ನಿದ್ರೆ ಮೇಲೆ ಕೂಡ ಪರಿಣಾಮ ಬೀರುತ್ತದೆ. ದೇಹದಲ್ಲಿ ಆಲ್ಕೋಹಾಲ್ ಇರುವ ಕಾರಣ ದೇಹ ನಿದ್ರೆಯನ್ನು ಮರೆಯುತ್ತದೆ. ಆದರೆ, 5-6 ಗಂಟೆಗಳಲ್ಲಿ ದೇಹದಲ್ಲಿನ ಎಲ್ಲ ಆಲ್ಕೋಹಾಲ್ ಹೊರಹೋಗುತ್ತದೆ. ಆದರೆ, ದೇಹ ಮಾತ್ರ ಯಥಾಸ್ಥಿತಿಗೆ ಮರಳಲು ಇನ್ನಷ್ಟು ಸಮಯ ತೆಗೆದುಕೊಳ್ಳುವ ಕಾರಣ ನಿದ್ರೆಯಲ್ಲಿ ವ್ಯತ್ಯಾಸವಾಗುತ್ತದೆ.
5.ಬಾಯಾರಿಕೆ: ಆಲ್ಕೋಹಾಲ್ ಡೈಯುರೆಟಿಕ್. ಅಂದರೆ ಇದು ನೀವು ಅಗತ್ಯಕ್ಕಿಂತ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ. ಪರಿಣಾಮ ದೇಹದಲ್ಲಿನ ನೀರಿನಾಂಶದ ಜೊತೆಗೆ ಪ್ರಮುಖ ಮಿನರಲ್ಸ್ ಹಾಗೂ ವಿಟಮಿನ್‍ಗಳು ಹೊರಹೋಗುತ್ತವೆ. ಇದರಿಂದ ಡಿಹೈಡ್ರೇಷನ್ ಉಂಟಾಗಿ ಬಾಯಾರಿಕೆ ಹೆಚ್ಚುತ್ತದೆ.
6.ಹೆಚ್ಚಿದ ಎದೆಬಡಿತ: ಆಲ್ಕೋಹಾಲ್ ಹೃದಯ ಬಡಿತವನ್ನು ಹೆಚ್ಚಿಸುತ್ತದೆ.
7.ತಲೆಸುತ್ತು: ಆಲ್ಕೋಹಾಲ್ ಡಿಹೈಡ್ರೇಷನ್‍ಗೆ ಕಾರಣವಾಗುತ್ತದೆ. ಇದರಿಂದ ತಲೆಸುತ್ತು ಉಂಟಾಗುತ್ತದೆ.
8.ಮೂಡ್ ಚೇಂಜ್: ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ನಿರಂತರವಾಗಿ ವ್ಯತ್ಯಾಸವಾಗುವುದರಿಂದ ನಕಾರಾತ್ಮಕ ಯೋಚನೆಗಳು ಹುಟ್ಟಿಕೊಳ್ಳುತ್ತವೆ. ಉದ್ವೇಗ ಹಾಗೂ ಕೋಪಕ್ಕೆ ಇದು ಕಾರಣವಾಗುತ್ತದೆ.
ಹ್ಯಾಂಗ್‍ಓವರ್ ಆದಾಗ ಹೀಗೆ ಮಾಡಿ:
*ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಿರಿ.
*ವಿಟಮಿನ್ಸ್, ಮಿನರಲ್ಸ್, ಕಾರ್ಬೋಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರವನ್ನು ಯಥೇಚ್ಛವಾಗಿ ಸೇವಿಸಿ. ಯಾವುದೇ ಕಾರಣಕ್ಕೂ ಹೊಟ್ಟೆಯನ್ನು ಖಾಲಿ ಬಿಡಬೇಡಿ. ಆಲ್ಕೋಹಾಲ್ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿರುತ್ತದೆ. ಹೀಗಾಗಿ ಸಕ್ಕರೆ ಪ್ರಮಾಣ ಹೆಚ್ಚಲು ಆಹಾರ ಸೇವಿಸುವುದು ಅತ್ಯಗತ್ಯ.