ಹೃದಯಾಘಾತ ಸಂಭವಿಸಿದಾಗ ಕೂಡಲೇ ಅವರ ಪ್ರಾಣ ಕಾಪಾಡುವ ಕುರಿತಾದ ಸಿಪಿಆರ್ ಬಗ್ಗೆ ಅರಿತುಕೊಳ್ಳಲು ಕೈಜೋಡಿಸುವಂತೆ ನಟಿ ಮೇಘನಾ ರಾಜ್ ಸಂದೇಶ ನೀಡಿದ್ದಾರೆ.
ನಾಳೆ ಅಂದರೆ ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನ. ಇಂದು ಹೃದಯಾಘಾತ, ಹೃದಯ ಸ್ತಂಭನದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಅದರಲ್ಲಿಯೂ ಯುವಕರು ಇಂದು ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ನಟಿ ಮೇಘನಾ ರಾಜ್ ಪತಿ ನಟ ಚಿರಂಜೀವಿ ಸರ್ಜಾ ಅವರು 2020ರಲ್ಲಿ ಸಾವನ್ನಪ್ಪಿದ್ದು ಹೃದಯಾಘಾತದಿಂದಲೇ. ಚಿಕ್ಕ ವಯಸ್ಸಿನಲ್ಲಿಯೇ ಚಿರಂಜೀವಿ ಸೇರಿ ಹಲವು ನಟರ ಸಾವು ಸಿನಿಮಾ ರಂಗಕ್ಕೆ ಆಘಾತ ತಂದಿದ್ದರೆ, ಇಂದಿನ ಯುವಕರು ಕೂಡ ಇದೇ ಕಾರಣಕ್ಕೆ ಸಾವನ್ನಪ್ಪುತ್ತಿರುವುದು ಎಲ್ಲರಲ್ಲಿಯೂ ಆತಂಕವುಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಹೃದಯದ ಮುನ್ನಾದಿನವಾಗಿರುವ ಇಂದು ನಟಿ ಮೇಘನಾ ರಾಜ್ ಹೃದಯದ ಕುರಿತು ಮಾತನಾಡಿದ್ದಾರೆ. ನಮ್ಮ ಜೀವವನ್ನೂ ಉಳಿಸಿ, ಬೇರೆಯವರ ಜೀವವನ್ನು ಉಳಿಸುವ ಬಗ್ಗೆ ನಟಿ ಇನ್ಸ್ಟಾಗ್ರಾಮ್ ಮೂಲಕ ಮಾಹಿತಿ ನೀಡಿದ್ದಾರೆ. ಮೇಘನಾ ರಾಜ್ ಸಿಪಿಆರ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಷ್ಟಕ್ಕೂ ಸಿಪಿಆರ್ ಎಂದರೆ (CPR) ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ (Cardiopulmonary Resuscitation). ವ್ಯಕ್ತಿಯು ಮೂರ್ಛೆ ಹೋದರೆ, ಹೃದಯ ಬಡಿತವು ನಿಂತುಹೋದರೆ ಅಥವಾ ನಾಡಿ ಮಿಡಿತ ನಿಂತಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಸಿಪಿಆರ್ ನೀಡಲಾಗುತ್ತದೆ. ಇದು ರೋಗಿಗೆ ಉಸಿರಾಡಲು ನೆರವಾಗುತ್ತದೆ. ಸಿಪಿಆರ್ ನೀಡುವಾಗ, ಇದು ಹೃದಯ ಮತ್ತು ಮೆದುಳಿನಲ್ಲಿ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಸಿಪಿಆರ್ ಸಹಾಯದಿಂದ, ಒಬ್ಬ ವ್ಯಕ್ತಿಗೆ ಹೊಸ ಜೀವ ಸಿಗಬಹುದು. ಸಾಮಾನ್ಯವಾಗಿ ಆಸ್ಪತ್ರೆ ಹೊರಗೆ ಕಾರ್ಡಿಯೋ ಅರೆಸ್ಟ್ (Cardiac Arrest) ಆಗಿ 10ರಲ್ಲಿ 9 ಮಂದಿ ಸಾಯುತ್ತಾರೆ. ಆದ್ರೆ ಸಿಪಿಆರ್,ಜೀವ ಉಳಿಸಲು ನೆರವಾಗುತ್ತದೆ. ಕಾರ್ಡಿಯೋ ಅರೆಸ್ಟ್ ಆದ ಮೊದಲು ಐದು ನಿಮಿಷದಲ್ಲಿ ಸಿಪಿಆರ್ ಸಿಕ್ಕಲ್ಲಿ ಬದುಕುವ ಸಾಧ್ಯತೆ ಡಬಲ್,ತ್ರಿಬಲ್ ಪಟ್ಟು ಹೆಚ್ಚಿರುತ್ತದೆ. ಮಹಿಳೆಯರು ಸೇರಿದಂತೆ ಅನೇಕರಿಗೆ ಸಾರ್ವಜನಿಕ ಪ್ರದೇಶದಲ್ಲಿ ಕಾರ್ಡಿಯೋ ಅರೆಸ್ಟ್ ಆದಾಗ ಈ ಚಿಕಿತ್ಸೆ ಸಿಗುವುದಿಲ್ಲ. ಕಾರ್ಡಿಯೋ ಅರೆಸ್ಟ್ ಆದ ವ್ಯಕ್ತಿಯನ್ನು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಿಪಿಆರ್ ಜೀವ ರಕ್ಷಕವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಆಂಬ್ಯುಲೆನ್ಸ್ ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ಸಿಪಿಆರ್ ತರಬೇತಿ ನೀಡಲಾಗುತ್ತದೆ.
ಎದೆ ನೋವು, ಕಿರಿಕಿರಿ, ಬಿಗಿತ ಇದ್ರೆ ಹೃದಯ ಸಮಸ್ಯೆಯೇ ಆಗಿರ್ಬಹುದು!
ಪ್ರತಿ ವರ್ಷ ಸುಮಾರು 3.50 ಲಕ್ಷ ಕಾರ್ಡಿಯೋ ಅರೆಸ್ಟ್ ಆಸ್ಪತ್ರೆಗಳ ಹೊರಗೆ ಸಂಭವಿಸುತ್ತವೆ. 10 ರಲ್ಲಿ 7 ಪ್ರಕರಣಗಳು ಮನೆಯಲ್ಲಿ ನಡೆಯತ್ತವೆ. ದುರದೃಷ್ಟವಶಾತ್, ಮನೆಯಲ್ಲಿ ಕಾರ್ಡಿಯೋ ಅರೆಸ್ಟ್ ಆದಾಗ ಕುಟುಂಬಸ್ಥರು ಆಂಬ್ಯುಲೆನ್ಸ್ಗೆ ಕಾಯ್ತಾರೆಯೇ ಹೊರತು ಸಿಪಿಆರ್ ಬಗ್ಗೆ ಗಮನ ನೀಡುವುದಿಲ್ಲ. ಕಾರ್ಡಿಯೋ ಅರೆಸ್ಟ್ ಆದಾಗ ನೀಡುವ ಸಿಪಿಆರ್ ಚಿಕಿತ್ಸೆಗೆ ಸರ್ಟಿಫಿಕೆಟ್ ಆಗ್ಲಿ ವಿಶೇಷ ತರಬೇತಿ ಅಗತ್ಯವಿಲ್ಲ. ಆದರೆ ಅದ್ರ ಬಗ್ಗೆ ಶಿಕ್ಷಣ ಅಗತ್ಯವಿದೆ. ಅಕ್ಕಪಕ್ಕದವರಿಗೆ ಕಾರ್ಡಿಯೋ ಅರೆಸ್ಟ್ ಆದಾಗ ಭಯಪಡಬಾರದು. ಧೈರ್ಯ ತೆಗೆದುಕೊಂಡು ಸಿಪಿಆರ್ ಹಂತವನ್ನು ಪಾಲನೆ ಮಾಡಬೇಕಾಗುತ್ತದೆ.
ಇಂಥ ಜೀವ ಉಳಿಸಿರುವ ಸಿಪಿಆರ್ ಬಗ್ಗೆ ತಿಳಿದುಕೊಳ್ಳಲು ಮಣಿಪಾಲ ಆಸ್ಪತ್ರೆ ಮುಂದಾಗಿದೆ. ಇದರ ಬಗ್ಗೆ ನಟಿ ಮೇಘನಾ ರಾಜ್ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಶೇಕಡಾ ಎರಡಕ್ಕಿಂತ ಕಡಿಮೆ ಮಂದಿಗೆ ಇದರ ಅರಿವಿರುವುದಾಗಿ ಹೇಳಿರುವ ನಟಿ, ಇದರ ಬಗ್ಗೆ ಹೆಚ್ಚು ತಿಳಿದು ಜನರ ಜೀವ ಉಳಿಸಲು ಮಣಿಪಾಲ್ ಆಸ್ಪತ್ರೆಯ ಸಿಪಿಆರ್ ಕಾರ್ಯದಲ್ಲಿ ಕೈಜೋಡಿಸಿ ಎಂದು ಕೇಳಿಕೊಂಡಿದ್ದಾರೆ. ತಮಗೂ ಇದರ ಅರಿವು ಆದದ್ದು ಇತ್ತೀಚಿಗೆ ಎಂದಿರುವ ಮೇಘನಾ ರಾಜ್, ಎಲ್ಲರೂ ಇದಕ್ಕೆ ಕೈಜೋಡಿಸಿ ಜೀವ ಉಳಿಸಿ ಎಂದು ಕೇಳಿಕೊಂಡಿದ್ದಾರೆ.
ಕ್ಯಾನ್ಸರ್‌ಗೆ ಸಾವೇ ಪರಿಹಾರವಲ್ಲ.. ಭಾರತೀಯ ಮಹಿಳೆ ಎಚ್ಚೆತ್ತರೆ ಗೆಲುವು ಸಾಧ್ಯ