Dementia: ಮರೆವಿನ ಸಮಸ್ಯೆಯಿಂದ ದೂರವಿರಲು ಈ ಬದಲಾವಣೆ ಅಗತ್ಯ

By Suvarna News  |  First Published Feb 2, 2022, 4:29 PM IST

ಕಾರ್ಡಿಯೋವಾಸ್ಕ್ಯುಲಾರ್ ಸಮಸ್ಯೆಗಳು ಮಿದುಳಿಗೂ ಹಾನಿ ತರಬಲ್ಲವು. ವಯಸ್ಸಾದಂತೆ ಕಂಡುಬರುವ ಡೆಮೆನ್ಷಿಯಾ ಅಥವಾ ಮಿದುಳಿನ ಕಾರ್ಯಕ್ಷಮತೆ ಕುಗ್ಗುವ, ಮರೆವು ಆವರಿಸುವ ಸಮಸ್ಯೆ ಬಾರದಂತೆ ನೋಡಿಕೊಳ್ಳಲು ಹೃದಯದ ಬಗ್ಗೆ ಎಚ್ಚರಿಕೆ ವಹಿಸಬೇಕು.
 


ಡೆಮೆನ್ಷಿಯಾ (Dementia)...ಹೆಸರು ಕೇಳಿದರೆ ನಾವೆಲ್ಲರೂ ಒಮ್ಮೆ ಆತಂಕಕ್ಕೀಡಾಗುತ್ತೇವೆ. ನಮ್ಮ ಮೇಲಿನ ನಮ್ಮ ನಿಯಂತ್ರಣ (Control) ತಪ್ಪಿ ಹೋಗುತ್ತದೆ ಎನ್ನುವ ಭಯ ಶುರುವಾಗುತ್ತದೆ. ಆದರೆ, ನಮ್ಮ ಜೀವನಶೈಲಿಯಲ್ಲಿ (Life Style) ಬದಲಾವಣೆ ತಂದುಕೊಂಡರೆ ಶೇ.40ರಷ್ಟು ಡೆಮೆನ್ಷಿಯಾ ಅಪಾಯವನ್ನು ದೂರವಿಡಬಹುದು. 
ಡೆಮೆನ್ಷಿಯಾಕ್ಕೆ ಕಾರಣಗಳು ಅನೇಕ. ಕಾರ್ಡಿಯೋವಾಸ್ಕ್ಯುಲಾರ್ ಸಮಸ್ಯೆ ಸೇರಿದಂತೆ ಅಧಿಕ ರಕ್ತದೊತ್ತಡ (High Blood Pressure), ನಿಯಂತ್ರಣಕ್ಕೆ ಬಾರದ ಮಧುಮೇಹ (Diabetes), ಬೊಜ್ಜು (Overweight) ಹಾಗೂ ಧೂಮಪಾನ (Smoking) ಕಾರಣವಾಗಬಲ್ಲವು. ಅಷ್ಟೇ ಅಲ್ಲ, ಆಕ್ಸಿಡೇಟಿವ್ ಸ್ಟ್ರೆಸ್ (Oxidative Stress) ಕೂಡ ಪರಿಣಾಮ ಬೀರಬಲ್ಲದು. ಕೋಶಗಳು ಮತ್ತು ಅಂಗಾಂಶಗಳಲ್ಲಿ ಆಮ್ಲಜನಕಕ್ಕೆ ಸ್ಪಂದಿಸುವ ತಳಿಗಳ ಉತ್ಪಾದನೆ ಮತ್ತು ಸಂಚಯದಲ್ಲಿ ವ್ಯತ್ಯಾಸ ಉಂಟಾಗುವ ಸ್ಥಿತಿಯನ್ನು ಆಕ್ಸಿಡೇಟಿವ್ ಸ್ಟ್ರೆಸ್ ಎನ್ನುತ್ತಾರೆ. ಇದರಿಂದ ರಕ್ತನಾಳ (Blood Vessel)ಗಳಿಗೆ ಹಾನಿಯಾಗುತ್ತದೆ, ಮಿದುಳಿಗೆ ಆಮ್ಲಜನಕ(Oxigen)ದ ಪೂರೈಕೆ ಕುಸಿಯುತ್ತದೆ.

ಸೂಕ್ತ ಆಮ್ಲಜನಕವಿಲ್ಲದಿದ್ದರೆ ಮಿದುಳಿನ ಕೋಶಗಳು ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಪರಿಣಾಮವಾಗಿ ಕೋಶಗಳ ಸಂಖ್ಯೆ ಕುಸಿಯುತ್ತದೆ. ಮಿದುಳಿಗೆ ರಕ್ತಪೂರೈಕೆ ಕಡಿಮೆಯಾದಾಗ ಡೆಮೆನ್ಷಿಯಾ ಅಪಾಯ ಹೆಚ್ಚುತ್ತದೆ. ಆದರೆ, ನಮ್ಮ ಜೀವನಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ ತಂದುಕೊಂಡಾಗ ಹೃದಯದ ಆರೋಗ್ಯಕ್ಕೆ ಪೂರಕವಾಗುತ್ತದೆ. ಅದು ಮಿದುಳಿಗೂ ಹಿತವನ್ನು ನೀಡುತ್ತದೆ. 
ಹಾಗಿದ್ದರೆ ಬದಲಾವಣೆ ಹೇಗಿರಬೇಕು? 

•    ವಾರಕ್ಕೆ 2-3 ಬಾರಿ ತೈಲದಂಶವಿರುವ ಮೀನು (Oily Fish) ಸೇವನೆ
ಸಾಲ್ಮನ್, ಟೂನ ಸೇರಿದಂತೆ ತೈಲದಂಶವಿರುವ ಮೀನುಗಳಲ್ಲಿ ಒಮೇಗಾ-3 ಫ್ಯಾಟಿ ಆಸಿಡ್ (Fatty Acid) ಇರುತ್ತದೆ. ಇದರಲ್ಲಿರುವ ಉರಿಯೂತ ನಿರೋಧಕ ಗುಣದಿಂದಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ. ಅಲ್ಲದೆ, ಒಮೇಗಾ-3 ಮಿದುಳಿನ ಕೋಶಗಳ ಕಾರ್ಯಕ್ಕೂ ಅಗತ್ಯ ಅಂಶವಾಗಿದೆ. ವಯಸ್ಸಾಗುತ್ತಿರುವ ಹಾಗೆ ಒಮೇಗಾ-3 ದೇಹಕ್ಕೆ ಹೆಚ್ಚು ಪ್ರಮಾಣದಲ್ಲಿ ಸಿಗುವ ಹಾಗೆ ನೋಡಿಕೊಳ್ಳಬೇಕು.

Tap to resize

Latest Videos

undefined

•    ಸಸ್ಯ ಮೂಲದ ಆಹಾರ (Plant Food) ಹೆಚ್ಚಿರಲಿ
ಸೊಪ್ಪು, ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಬೀಜಗಳು, ಒಣಹಣ್ಣುಗಳು, ಧಾನ್ಯ, ಆಲಿವ್ ಎಣ್ಣೆ ಸೇರಿದಂತೆ ವಿಟಮಿನ್, ಮಿನರಲ್ ಹಾಗೂ ಪಾಲಿಫೆನಾಲ್ಸ್, ಫ್ಲೆವನಾಯ್ಡ್ಸ್, ಕೆರೊಟಿನಾಯ್ಡ್ಸ್, ವಿಟಮಿನ್ ಸಿ, ವಿಟಮಿನ್ ಇ ಅಂಶಗಳಿಂದ ಕೂಡಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. 

Misunderstanding: ಸಂಬಂಧದಲ್ಲಿ ಅಪಾರ್ಥಗಳನ್ನು ಹೀಗೆ ಬಗೆಹರಿಸಿಕೊಳ್ಳಿ..

•    ಸಂಸ್ಕರಿತ (Processed) ಆಹಾರದಿಂದ ದೂರವಿರಿ
ಸ್ಯಾಚುರೇಟೆಡ್ ಕೊಬ್ಬು, ರಿಫೈನ್ಡ್ ಕಾರ್ಬೋಹೈಡ್ರೇಟ್, ಕೆಂಪು ಮತ್ತು ಸಂಸ್ಕರಿತ ಮಾಂಸವನ್ನು ದೂರವಿಡಬೇಕು. ಸಂಸ್ಕರಿತ ಆಹಾರದಿಂದ ಹೈಪರ್ ಟೆನ್ಷನ್, ಟೈಪ್ 2 ಮಧುಮೇಹ, ಬೊಜ್ಜು ಬರುವುದು ಗ್ಯಾರೆಂಟಿ. ಇತರ ಆರೋಗ್ಯಪೂರ್ಣ ಆಹಾರದೊಂದಿಗೆ ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿಂದರೂ ಹಾನಿ ತಪ್ಪಿದ್ದಲ್ಲ. ಇವುಗಳ ಸೇವನೆಯಿಂದ ಆರೋಗ್ಯಪೂರ್ಣ ಆಹಾರದ ಲಾಭ ದೇಹಕ್ಕೆ ಸಿಗದಂತಾಗುತ್ತದೆ. ಬ್ರೆಡ್, ಬಿಳಿ ಅಕ್ಕಿ, ಪಾಸ್ತಾ, ಮೈದಾದಿಂದ ಮಾಡಿದ ಯಾವುದೇ ಪದಾರ್ಥಗಳನ್ನು ಸೇವಿಸಬಾರದು. 

•    ಸೂಕ್ತ ವ್ಯಾಯಾಮ (Exercise)
ದೈಹಿಕ ವ್ಯಾಯಾಮದಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ರಕ್ತನಾಳಗಳ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಆಗ ದೇಹದ ಉರಿಯೂತ ಕಡಿಮೆಯಾಗಿ, ಮಿದುಳಿಗೆ ಹೆಚ್ಚು ಪ್ರಮಾಣದ ಆಮ್ಲಜನಕ ಪೂರೈಕೆಯಾಗುತ್ತದೆ. ಸ್ಮರಣೆ ಶಕ್ತಿ ಜಾಗೃತವಾಗಿ, ಪ್ರಜ್ಞಾಶಕ್ತಿ ನಷ್ಟವಾಗುವುದಿಲ್ಲ. ದೀರ್ಘಸಮಯ ಟಿವಿ ನೋಡುವುದು  ಉತ್ತಮವಲ್ಲ. ಗಾರ್ಡನಿಂಗ್, ವಾಕಿಂಗ್ ಸೇರಿದಂತೆ ಮನೆಯ ಕೆಲಸಗಳನ್ನು ನೀವೇ ಮಾಡಿಕೊಂಡು ಚಟುವಟಿಕೆಯಿಂದ ಇರಬೇಕು.

Manage Anxiety: ಮೂರು ನಿಯಮ ಪಾಲನೆ ಮಾಡಿ ಆತಂಕ ಓಡಿಸಿ

•    ಧೂಮಪಾನಕ್ಕೆ ಬೈ ಹೇಳಿ
ಧೂಮಪಾನಿಗಳು ಶೇ.60ರಷ್ಟು ಹೆಚ್ಚು ಪ್ರಮಾಣದಲ್ಲಿ ಡೆಮೆನ್ಷಿಯಾಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಧೂಮಪಾನದಿಂದ ಉರಿಯೂತ ಹಾಗೂ ಆಕ್ಸಿಡೇಟಿವ್ ಸ್ಟ್ರೆಸ್ ಹೆಚ್ಚಾಗುತ್ತದೆ. ರಕ್ತನಾಳಗಳ ಕಾರ್ಯಕ್ಕೆ ಅಡ್ಡಿಯುಂಟು ಮಾಡುವ ಜತೆಗೆ, ಮಿದುಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ಪೂರೈಕೆಯಾಗದಂತೆ ತಡೆಯುತ್ತದೆ. 

ನಿಮಗೆ ತಿಳಿದಿರಲಿ, ಆರೋಗ್ಯಕರ ಬದಲಾವಣೆಗಳನ್ನು ತಂದುಕೊಳ್ಳುವುದು ನಮ್ಮ ನಮ್ಮ ಮನಸ್ಥಿತಿಯನ್ನು ಅವಲಂಬಿಸಿದೆ. ಏಕಾಏಕಿ ಜೀವನಶೈಲಿಯಲ್ಲಿ ಬದಲಾವಣೆ (Change) ತಂದುಕೊಳ್ಳುವುದು ಕಷ್ಟವೆನಿಸಿದರೂ ನಮ್ಮದೇ ಆರೋಗ್ಯಕ್ಕಾಗಿ ಇದು ಅನಿವಾರ್ಯ ಎನ್ನುವುದೂ ಗಮನದಲ್ಲಿರಲಿ. 
 
 

click me!