ಸಮಾಜದೊಂದಿಗಿನ ಸಾಮರಸ್ಯಕ್ಕೆ ಬೇಕಾದ ಸಂಗೀತ-ಯೋಗಕ್ಕೆ ಒಂದೇ ದಿನ!

By Suvarna News  |  First Published Jun 21, 2023, 2:58 PM IST

ಜೂನ್ 21ರಂದು ವಿಶ್ವ ಸಂಗೀತದ ದಿನವೆಂದೂ 1982ರಿಂದ ಅಚರಿಸಲಾಗುತ್ತಿದೆ. ಕಾಕತಾಳೀಯವೆಂಬತೆ ಯೋಗ ಹಾಗೂ ಸಂಗೀತ ಮಾನವ ಜನಾಂಗಕ್ಕೆ ಆರೋಗ್ಯ-ನೆಮ್ಮದಿ  ಕೊಡಬಲ್ಲ ಅಲೌಕಿಕ ಸಂಪತ್ತು. ಯೋಗ ಮತ್ತು ಸಂಗೀತದ ಪರಸ್ಪರ ಪೂರಕ-ಪ್ರೇರಕ ವಿಷಯಗಳ ಕುರಿತು ಒಂದಿಷ್ಟು ಚಿಂತನೆ ಇಲ್ಲಿದೆ.


Yoga is like music: The rhythm of the body, the melody of the mind, and the harmony of the soul create the symphony of life 
– B.K.S. Iyengar


ಪ್ರಸಿದ್ಧ ಯೋಗಾಚಾರ್ಯರಾಗಿದ್ದ ಪದ್ಮವಿಭೂಷಣ ದಿ. ಬಿ.ಕೆ.ಯೆಸ್ ಅಯ್ಯಂಗಾರ್ ಯೋಗವೆಂದರೆ ಅದು ಲಯಬದ್ಧ ದೇಹದಲ್ಲಿ, ಶೃತಿ ಶುದ್ಧ ಮನಸ್ಸಿನೊಂದಿಗೆ ಸಾಮರಸ್ಯವಾಗಿರುವ ಅತ್ಮ ಮೇಳೈಸಿದ ಜೀವಸ್ವರಗಳ ಸಂಗೀತವೆಂದು ಬಣ್ಣಿಸುತ್ತಾರೆ. ಯೋಗವೆಂದರೆ ಬರೀ ಮೈ ಮುರಿದು ಮಾಡುವ ಆಸನ ಮಾತ್ರವಲ್ಲ. ಅದು ವಿಶ್ವ ಚೇತನದೊಂದಿಗೆ ಬೆರೆತು ಒಂದಾಗುವ ಮಾರ್ಗ. ಭಾರತೀಯ ಸನಾತನ ಪರಂಪರೆಯಲ್ಲಿ ಯೋಗ ಕೂಡ ಚತುರ್ವಿದ ಪುರುಷಾರ್ಥಗಳಲ್ಲಿ ಕೊನೆಯದಾದ ಮೋಕ್ಷ ಪ್ರಾಪ್ತಿಯ ಒಂದು ಪಥ,. ಯೋಗಾಭ್ಯಾಸದ ಮೂಲಕ ದೇಹ ಮತ್ತು ಮನಸ್ಸಿನ ಸಮತೋಲನದ ಸಾಧ್ಯ.ಆ ಮೂಲಕ ಮನುಷ್ಯ ಸದಾ ಬಯಸುವ ಆಂತರಿಕ ಅನಂದ ಹೊಂದುವ ಹಾದು ಭಗವದ್ ಸಾಕ್ಷಾತ್ಕರದ  ಒಂದು ಪರಿಪೂರ್ಣ ವಿಧಾನ. 

ಭಾರತೀಯ ಶಾಸ್ತ್ರೀಯ ಸಂಗೀತದ ಮೂಲವನ್ನೂ ವೇದಗಳಲ್ಲಿ ನೋಡಬಹುದು. ನಾದೋಪಾಸನೆಯ ಮೂಲಕ ವಿಶ್ವಾತ್ಮದ ಅನುಭವದ ಸಾಧ್ಯತೆಯ ಅನೇಕ ಉದಾಹರಣೆಗಳನ್ನು ನೋಡಬಹುದು. ಸಂಗೀತದ ಅಭ್ಯಾಸ ಮನುಷ್ಯನ ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ (Spiritual Growth) ಬಹಳ ಸಹಕಾರಿ. ಭಾರತೀಯ ಶಾಸ್ತ್ರೀಯ ಸಂಗೀತದ ವಿವಿಧ ರಾಗಗಳ ಮೂಲಕ ಮನಸ್ಸಿಗೆ ಸಂಬಂಧಿಸಿದ ಅನೇಕ ಕಾಯಿಲೆಗಳು ಉಪಶಮನಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಂಗೀತ ಚಿಕಿತ್ಸೆ ಇತ್ತೀಚೆಗೆ ಜನಪ್ರಿಯತೆ ಪಡೆಯುತ್ತಿದೆ. ಸಂಗೀತವನ್ನು ಸಾಮವೇದದ ಒಂದು ಭಾಗವೆಂದೇ ಕರೆಯುತ್ತಾರೆ. ತಲ್ಲಣಗೊಂಡ ಮನಸ್ಸನ್ನು ಶಾಂತಗೊಳಿಸಿ  ಆಧ್ಯಾತ್ಮದ ಅಲೌಕಿಕ ಅನುಭವಕ್ಕೆ ಅಣಿಗೊಳಿಸುವುದೇ ಸಂಗೀತದ ಶಕ್ತಿ ಎಂದು ಸಾಮವೇದದಲ್ಲಿ ಬಣ್ಣಿಸಲಾಗಿದೆ.

ಯೋಗ ಹಾಗು ಸಂಗೀತ (Yoga and Music)  ಸಾಮರಸ್ಯ ಭಾವದ (Harmonial Balance) ಎರಡು ಸೆಲೆಗಳು. ವ್ಯಕ್ತಿಯೊಬ್ಬ ತಾನು ತನ್ನೊಳಗೆ ಸಾಮರಸ್ಯದಿಂದ ಇರಲು ಹಾಗೂ ತಾನು ಜೀವನ ಕಟ್ಟಿ ಕೊಳ್ಳುವ ಪ್ರಪಂಚದೊಡನೆ ಸಾಮರಸ್ಯದೊಂದಿಗೆ ಬದುಕಲು ಯೋಗ ಹಾಗು ಸಂಗೀತದ ನಿಯಮಿತ ಅಭ್ಯಾಸ ಬಹಳ ಸಹಕಾರಿ. ಕಂಪನ ಹಾಗೂ ಅನುರಣನದ ಈ ಎರಡೂ ಮಾಧ್ಯಮಗಳು ಮನುಷ್ಯನಿಗೆ ತನ್ನ ಜೀವನದ ಕುರಿತು ಅರಿಯುವ, ಜಾಗೃತಗೊಳಿಸುವ ಸಾಧನಗಳಿವು.

World Music Day : ಮೊದಲ ಬಾರಿ ಇದನ್ನ ಎಲ್ಲಿ ಮತ್ತು ಯಾಕೆ ಆಚರಿಸಲಾಯಿತು ತಿಳಿಯಿರಿ

ಯೋಗ ಹಾಗೂ ಸಂಗೀತ ಜೊತೆ ಜೊತೆಗೆ ಇರಲು ಸಾಧ್ಯವೇ? ಹೌದು. ಈಗಾಗಲೇ ಅನೇಕ ಯೋಗಿಗಳು ತಮ್ಮ ಯೋಗಾಭ್ಯಾಸದ ಜೊತೆ ಪೂರಕ ಸಂಗೀತವನ್ನು ಬಳಸಿ ಯಶಸ್ಸು ಕಂಡಿದ್ದಾರೆ. ಜಗತ್ತಿನ ಮೂಲ ನಾದವೆಂದೇ ಕರೆಯಲ್ಪಡುವ 'ಓಂಕಾರ'ದ ಉಚ್ಛಾರಣೆಯನ್ನು ಯೋಗಭ್ಯಾಸದಲ್ಲಿ ನಿಯಮಿತವಾಗಿ ಬಳಸಲಾಗುತ್ತದೆ. ಅದೇ ಪ್ರಣವ ನಾದ ಸಂಗೀತದ ಮೂಲವೂ ಹೌದು. ಕ್ಲಿಷ್ಟವಾದ ಆಸನಗಳಿರಬಹುದು, ಆಳ ಧ್ಯಾನದ ಪ್ರಕ್ರಿಯೆಗೆ ಹದವಾದ ಸಂಗೀತದ ಹಿನ್ನೆಲೆ ಬಹಳ ಪರಿಣಾಮಕಾರಿಯಾಗಿರುವುದು ಅನುಭವಕ್ಕೆ ಬಂದ ಸತ್ಯ. ಯೋಗದಲ್ಲಿ ಬಳಸುವ ಸಂಗೀತ ಬರೀ ಶ್ರವಣ ಸಾಧನವಾಗದೇ ಅನುಭವಕ್ಕೆ ಸಿಲುಕುವಷ್ಟು ಪೂರಕವಾಗಿರಬೇಕು. ಸಂಗೀತದ ಆಯ್ಕೆಯಲ್ಲಿ ಎಚ್ಚರ ವಹಿಸಬೇಕು.

Tap to resize

Latest Videos

ಅನೇಕ ದೈಹಿಕ ಸ್ಥರದ ಸಮಸ್ಯೆಗಳಿಗೆ ಯೋಗಾಸನದ ಅಭ್ಯಾಸದಲ್ಲಿ ಪರಿಹಾರವಿದೆ. ಆಂತೆಯೇ ಮಾನಸಿಕ ಸಮಸ್ಯೆಗಳಿಂದಾಗುವ ಉದ್ವೇಗಗಳಿಗೆ (Anxiety) ಸಂಗೀತ (Music) ಸಿದ್ಧೌಷಧಿಯಾಗಿ ಕೆಲಸ ಮಾಡುತ್ತದೆ. ಈ ಎರಡು ಆಯಾಮಗಳನ್ನು ಒಟ್ಟಾಗಿ ಉಪಯೋಗಿಸಿದಾಗ ಸಕಾರಾತ್ಮಕ ಶಕ್ತಿಯ (Positive Vibes) ಸಂಚಲನದ ಸಾಧ್ಯತೆಗಳನ್ನು ಹೆಚ್ಚಿಸಬಹುದು. ಹಿತವಾದ ಕೊಳಲು ನಾದದ ಹಿನ್ನೆಲೆಯಲ್ಲಿ ಧ್ಯಾನಕ್ಕೆ ಕುಳಿತಾಗ ಸಿಗುವ ಪ್ರಫುಲ್ಲತೆ ಹೆಚ್ಚಿನಮಟ್ಟದ್ದು. ಸಂಗೀತ ಕೇಳುಗನಿಗೆ ಏಕಾಗ್ರತೆ, ಶಾಂತತೆ ಹಾಗೂ ನಿರಾಳತೆಯ ಭಾವ ಕೊಡುತ್ತದೆ. ಇದೇ ಗುಣಗಳನ್ನು ಯೋಗ ಮತ್ತು ಧ್ಯಾನದಿಂದಲೂ ಪಡೆಯಬಹುದು. ಅನೇಕ ಪ್ರಸಿದ್ಧ ಹಾಡುಗಾರರು ತಮ್ಮ ಶಾರೀರವನ್ನು ಸುಸ್ಥಿತಿಯಲ್ಲಿಡಲು ನಿಯಮಿತವಾಗಿ ಯೋಗ ಹಾಗೂ ಪ್ರಣಾಯಾಮದ ಅಭ್ಯಾಸಕ್ಕೆ ಮೊರೆ ಹೋಗುತ್ತಾರೆ. ಯೋಗ ಹಾಗೂ ಸಂಗೀತ ಮೇಲ್ನೋಟಕ್ಕೆ ಬೇರೆ ಬೇರೆಯಾಗಿ ಕಂಡರೂ ತತ್ವದ ಆಧಾರದ ಮೇಲೆ ಒಂದಕ್ಕೊಂದು ಪೂರಕ ಹಾಗು ಪ್ರೇರಕವಾಗಿ ಬೆಳೆದಿವೆ.
 

International Yoga Day : ಈ ಬಾರಿಯ ಯೋಗ ದಿನದ ಥೀಮ್ ಏನು ಗೊತ್ತಾ?

ಲಯಬದ್ಧ ಉಸಿರಾಟಕ್ಕೆ ಸಂಗೀತ:
ಸಂಗೀತದ ಹಿನ್ನೆಲೆಯಲ್ಲಿ ಯೋಗಾಭ್ಯಾಸ ಮಾಡಿದಾಗ ಲಯಬದ್ಧ ಉಸಿರಾಟದ ಪರಿಣಾಮವಾಗಿ ಹೆಚ್ಚು ಆಮ್ಲಜನಕವನ್ನು (Oxygen) ನಾವು ಸೇವಿಸಿದಾಗ ನಮ್ಮ ದೇಹದಲ್ಲಿ ಡೊಪಮಿನ್ (Dopamin) ಹಾಗೂ ಸೆರೊಟಿನಿನ್ ಎಂಬ ಸಂತೋಷ  (Happiness) ಹಾಗೂ ನಿರಾಳತೆಯನ್ನು ಉಂಟುಮಾಡುವ  ಹಾರ್ಮೋನುಗಳ  ಉತ್ಪಾದನೆಯಾಗುವ ಕಾರಣ ಮನಸ್ಸು ಹಾಗು ದೇಹದಲ್ಲಿ ಹಗುರತೆ ಹಾದು ನೆಮ್ಮದಿ (Peace of Mind) ಅನುಭವಕ್ಕೆ ಬರುತ್ತದೆ. 

ಇವತ್ತಿನ ಆಧುನಿಕ ಜಗತ್ತಿನಲ್ಲಿ ಹೊಸ ಹೊಸ  ಅವಿಷ್ಕಾರಗಳು (Inventions) ಮಾನವ ಜನಾಂಗಕ್ಕೆ ಹೊಸ ಸುಖ, ಸೌಲಭ್ಯಗಳನ್ನು ಒದಗಿಸಿವೆ. ಆದರೆ ಇಷ್ಟೆಲ್ಲಾ ಸವಲತ್ತುಗಳ ನಡುವೆಯೂ ಮನುಷ್ಯ ಆಂತರಿಕವಾಗಿ ಒಂಟಿತನದ ಒತ್ತಡ, ಸಂಬಂಧಗಳ ಸಂಕೀರ್ಣತೆಯ ಉದ್ವೇಗಕ್ಕೆ ಬಲಿಯಾಗಿದ್ದಾನೆ,  ಭಾರತೀಯ ಸಂಸ್ಕೃತಿಯಲ್ಲಿ ಪರಂಪರಾಗತವಾಗಿ ಬಂದ ಯೋಗ ಮತ್ತು ಸಂಗೀತದ ಸೀಮಾತೀತವಾದ  ಉಪಯೋಗಗಳು ಮನುಕುಲದ ಒಳಿತಿಗೆ ಸಿಗುವಂತಾಬೇಕು. ಈ ನಿಟ್ಟಿನಲ್ಲಿ ವಿಶ್ವ ಯೋಗ ದಿನ ಹಾಗು ವಿಶ್ವ ಸಂಗೀತ ದಿನಾಚರಣೆಯು ಸಾರ್ಥಕತೆ ಪಡೆಯಲಿ ಎಂಬುದೇ ಈ ಹೊತ್ತಿನ ಆಶಯ. 

_ ವಿನಯ್ ಶಿವಮೊಗ್ಗ 

click me!