Dengue Vaccine: ಡೆಂಗ್ಯೂ ಜ್ವರಕ್ಕೆ ಸದ್ಯದಲ್ಲೇ ಬರಲಿದೆ ಮೊದಲ ಸ್ವದೇಶಿ ಲಸಿಕೆ

Published : May 18, 2023, 07:11 AM ISTUpdated : May 18, 2023, 07:14 AM IST
Dengue Vaccine: ಡೆಂಗ್ಯೂ ಜ್ವರಕ್ಕೆ ಸದ್ಯದಲ್ಲೇ ಬರಲಿದೆ ಮೊದಲ ಸ್ವದೇಶಿ ಲಸಿಕೆ

ಸಾರಾಂಶ

ಡೆಂಗ್ಯೂ ಜಾಗತಿಕವಾಗಿ ಅಪಾಯಕಾರಿ ಎಂದು ಗುರುತಿಸಿಕೊಂಡಿರುವ ಸೋಂಕಾಗಿದೆ. ಹಲವು ವರ್ಷಗಳಿಂದ ಇಡೀ ಜಗತ್ತು ಡೆಂಗ್ಯೂ ಅಪಾಯಕ್ಕೆ ತುತ್ತಾಗಿದ್ದರೂ ನಿರ್ದಿಷ್ಟ ಲಸಿಕೆ ಅಭಿವೃದ್ಧಿಯಾಗಿಲ್ಲ. ಇದೀಗ, ಈ ಕೊರತೆ ನೀಗಿಸುವತ್ತ ಭಾರತದ ಕಂಪೆನಿಗಳು ದಾಪುಗಾಲಿಟ್ಟಿವೆ.  

ಡೆಂಗ್ಯೂದಿಂದ ಬಳಲಿದವರಿಗೆ ಅದರ ಕಾಟ ಗೊತ್ತು. ಡೆಂಗ್ಯೂ ಜ್ವರ ಒಮ್ಮೆ ಬಂದರೆ ಸುಧಾರಿಸಿಕೊಳ್ಳಲು ತಿಂಗಳಾನುಕಾಲ ಬೇಕು. ನಮ್ಮ ದೇಶದಲ್ಲಂತೂ ಡೆಂಗ್ಯೂ ಹಾವಳಿ ವಿಪರೀತ. ಡೆಂಗ್ಯೂದಿಂದ ಸಾವಿಗೀಡಾದವರ ನಿಖರ ಸಂಖ್ಯೆ ಅದೆಷ್ಟೋ ಗೊತ್ತಿಲ್ಲ. ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ದಾಖಲೆ ಪ್ರಕಾರ, 2022ರಲ್ಲಿ ಡೆಂಗ್ಯೂದಿಂದ ಮೃತಪಟ್ಟವರ ಸಂಖ್ಯೆ 303. ಕೊರೋನಾ ಹಾವಳಿ ಹೆಚ್ಚಾಗಿದ್ದ 2021ರಲ್ಲೂ ಡೆಂಗ್ಯೂ ಸಾಕಷ್ಟು ಕಾಟ ಕೊಟ್ಟಿತ್ತು. ಡೆಂಗ್ಯೂದಿಂದ ಸಾವಿಗೀಡಾದವರ ಸಂಖ್ಯೆ 2021ರಲ್ಲೇ ಅತಿ ಹೆಚ್ಚು. ಡೆಂಗ್ಯೂ ನಿಯಂತ್ರಣ ಭಾರೀ ಕಷ್ಟ. ಏಕೆಂದರೆ, ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಸೊಳ್ಳೆಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಡೆಂಗ್ಯೂ ಪ್ರಕರಣಗಳು ಅಲ್ಲಲ್ಲಿ ಕಂಡುಬರುತ್ತಲೇ ಇರುತ್ತವೆ. ಇಷ್ಟೆಲ್ಲ ಆದರೂ ಡೆಂಗ್ಯೂ ಜ್ವರಕ್ಕೆ ನಮ್ಮ ದೇಶೀಯ ಲಸಿಕೆ ಇರಲಿಲ್ಲ ಎಂದರೆ ಅಚ್ಚರಿಯಾಗುತ್ತದೆ.

ಅಷ್ಟೇ ಏಕೆ? ಡೆಂಗ್ಯೂವಿಗೆ ನಿರ್ದಿಷ್ಟ ಚಿಕಿತ್ಸೆಯೇ ಇಲ್ಲ. ಜ್ವರ ಕಡಿಮೆ ಮಾಡುವುದು, ರೋಗನಿರೋಧಕತೆ ಹೆಚ್ಚಿಸುವುದಷ್ಟೇ ಸದ್ಯದ ಆದ್ಯತೆಯಾಗಿದೆ. ಆದರೆ, ಈಗ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ. ಇಡೀ ಜಗತ್ತನ್ನೇ ಪೀಡಿಸಿದ ಕೊರೋನಾ ಸಾಂಕ್ರಾಮಿಕಕ್ಕೆ ದೇಶೀಯ ಲಸಿಕೆ ಸಿದ್ಧಪಡಿಸಿ ವಿಶ್ವವಿಖ್ಯಾತಿ ಪಡೆದಿರುವ ಸೀರಮ್‌ ಇನ್ಸ್‌ ಸ್ಟಿಟ್ಯೂಟ್‌ ಡೆಂಗ್ಯೂ ಸೋಂಕಿಗೂ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಸೀರಮ್‌ ಸಂಸ್ಥೆ ಹಾಗೂ ಪೆನೀಷಿಯಾ ಬಯೋಟೆಕ್‌ ಡೆಂಗ್ಯೂ ಲಸಿಕೆಯ ಮೂರನೇ ಹಂತದ ಪರೀಕ್ಷೆಗೆ ಸಿದ್ಧವಾಗಿವೆ. 3ನೇ ಹಂತದ ಪರೀಕ್ಷೆಗೆ ಅನುಮತಿ ಕೋರಿ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌ ಗೆ ಮನವಿ ಸಲ್ಲಿಸಿವೆ. ಎಕ್ಸ್‌ ಪ್ರೆಷನ್‌ ಆಫ್‌ ಇಂಟೆರೆಸ್ಟ್‌ ಗೆ ಕೋರಿಕೆ ಮಾಡಿವೆ.

ನಾನ್‌ವೆಜ್‌ ತಿನ್ನೋದು ಓಕೆ, ಆದ್ರೆ ಡೆಂಗ್ಯೂ ಇದ್ದಾಗ ಅಪ್ಪಿತಪ್ಪಿಯೂ ಮುಟ್ಬೇಡಿ

ಮೂರನೇ ಹಂತದ ಪರೀಕ್ಷೆಯಲ್ಲಿ ಏನಿರುತ್ತೆ?
ಯಾವುದೇ ಲಸಿಕೆಯ (Vaccine) ಮೂರನೇ ಹಂತದ (Phase Third) ಪರೀಕ್ಷೆ ಎಂದರೆ ಲಸಿಕೆಯ ದಕ್ಷತೆಯನ್ನು ಪರೀಕ್ಷಿಸುವುದು. ಇದೊಂದೇ ಅಲ್ಲ, ದಕ್ಷತೆ (Efficiency), ಸುರಕ್ಷತೆ (Safety) ಸೇರಿದಂತೆ ಲಸಿಕೆಯ ರೋಗನಿರೋಧಕತೆಯನ್ನು (Immunity) ಈ ಹಂತದಲ್ಲಿ ಪರೀಕ್ಷೆ (Test) ಮಾಡಲಾಗುತ್ತದೆ. ಹೀಗಾಗಿ, ಇದಕ್ಕೂ ಸಾಕಷ್ಟು ಪ್ರಾಮುಖ್ಯತೆ ಇದೆ. ಐಸಿಎಂಆರ್‌ (ICMR) ಅನುಮತಿ ಪಡೆದ ಬಳಿಕ ಆಗಸ್ಟ್‌ (August) ವೇಳೆಗೆ ಮೂರನೇ ಹಂತದ ಪರೀಕ್ಷೆ ಆರಂಭವಾಗುವ ನಿರೀಕ್ಷೆಯಿದೆ. 

ಐಸಿಎಂಆರ್‌ ಪ್ರಕಾರ, ಡೆಂಗ್ಯೂ (Dengue) ಜಾಗತಿಕವಾಗಿ ಕಂಡುಬರುತ್ತಿರುವ ಸಮಸ್ಯೆ. ಭಾರತದಲ್ಲಿ ಪ್ರತಿವರ್ಷ2 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಜಾಗತಿಕವಾಗಿ ಸರಿಸುಮಾರು 400 ಮಿಲಿಯನ್‌ ಪ್ರಕರಣಗಳು ದಾಖಲಾಗುತ್ತಿವೆ ಎಂದರೆ ಇದರ ವ್ಯಾಪಕತೆಯನ್ನು ಊಹಿಸಬಹುದು. ವಿಶ್ವ ಆರೋಗ್ಯ ಸಂಸ್ಥೆ 2019ರಲ್ಲಿ ಡೆಂಗ್ಯೂವನ್ನು ಜಾಗತಿಕ (Global) ಟಾಪ್‌ ಟೆನ್‌ ಅಪಾಯಗಳಲ್ಲಿ (Dangerous) ಒಂದು ಎಂದು ಪರಿಗಣಿಸಿತ್ತು. ಇಷ್ಟಾದರೂ ಡೆಂಗ್ಯೂ ಸೋಂಕಿಗೆ ನಿಖರವಾದ ಚಿಕಿತ್ಸೆ (Treatment) ಎನ್ನುವುದು ಇಲ್ಲ. ಹೀಗಾಗಿ, ಇದು ತುರ್ತು ಅಗತ್ಯವಾಗಿ ಬೇಕಾಗಿರುವ ಲಸಿಕೆಯಾಗಿದೆ ಎನ್ನುತ್ತಾರೆ ಹಿರಿಯ ತಜ್ಞರುಗಳು.

Health Tips: ಡೆಂಗ್ಯೂದಿಂದ ಬೇಗ ಚೇತರಿಸಿಕೊಳ್ಬೇಕೆಂದ್ರೆ ಈ ಡಯೆಟ್ ಫಾಲೋ ಮಾಡಿ

ಲಸಿಕೆ ವಿಶೇಷತೆಯೇನು?
ಐಸಿಎಂಆರ್‌ ಗುರುತಿಸಿರುವ ಪ್ರಕಾರ, ಸೀರಮ್‌ ಸಂಸ್ಥೆ (Seerum) ಹಾಗೂ ಪೆನೀಷಿಯಾ (Panecia) ಸಂಸ್ಥೆಗಳು ಸಿದ್ಧಪಡಿಸಿರುವ ಲಸಿಕೆಗಳು ಆಂಟಿಬಾಡಿ (Antibody) ಅಂಶದ ಆಧಾರದ ಮೇಲೆ ರೂಪುಗೊಂಡಿಲ್ಲ. ಕಿರು ಅವಧಿ ಹಾಗೂ ದೀರ್ಘಾವಧಿಗೆ ಡೆಂಗ್ಯೂ ವಿರುದ್ಧ ರಕ್ಷಣೆ ನೀಡಬಲ್ಲವು. ಪ್ರಸ್ತುತ, ಡೆಂಗ್ಯೂ ಸೋಂಕಿನಲ್ಲಿ ನಾಲ್ಕು ಮಾದರಿ (Types) ಗುರುತಿಸಲಾಗಿದೆ. ಈ ಎಲ್ಲ ಮಾದರಿಗಳಿಗೂ ಲಸಿಕೆ ಪರಿಣಾಮಕಾರಿಯಾಗಲಿದೆ. ಹೀಗಾಗಿ, ಇನ್ನು ಮುಂದೆ ಡೆಂಗ್ಯೂ ಜ್ವರದಿಂದ ತೀವ್ರವಾಗಿ ಬಳಲುವ (Suffer) ಸಂಭವ ಕಡಿಮೆಯಾಗಲಿದೆ. ಜತೆಗೆ, ಸಾವಿನ ಸಂಖ್ಯೆಯೂ ಇಳಿಕೆಯಾಗಲಿದೆ. ಎಲ್ಲ ವಯೋಮಾನದ (All Ages) ಜನರಿಗೂ ಅನ್ವಯವಾಗುವಂತೆ ಈ ಲಸಿಕೆಯನ್ನು ತಯಾರಿಸಲಾಗಿರುವುದು ವಿಶೇಷ. 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೊಟ್ಟೆ ಸೇವಿಸುವ ಮುನ್ನ ಎಚ್ಚರ.. ಜನಪ್ರಿಯ ಬ್ರಾಂಡ್‌ನಲ್ಲೇ ಕ್ಯಾನ್ಸರ್ ಕಾರಕ ಅಂಶ ಪತ್ತೆ!
ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?