Health Tips: ಈಸ್ಟ್ರೋಜೆನ್ ಏರಿಕೆಯಾದ್ರೆ ಸಮಸ್ಯೆ ಗ್ಯಾರೆಂಟಿ, ಈ 5 ವಸ್ತುಗಳಿಂದ ದೂರವಿರ್ಲೇ ಬೇಕು

By Suvarna NewsFirst Published May 28, 2023, 7:00 AM IST
Highlights

ಮಹಿಳೆಯರಲ್ಲಿ ಸಂತಾನೋತ್ಪತ್ತಿಗೆ ಕಾರಣವಾಗುವ ಈಸ್ಟ್ರೋಜೆನ್ ಹಾರ್ಮೋನ್ ಕೊರತೆಯಾದರೂ ಕಷ್ಟ, ಏರಿಕೆಯಾದರೂ ಹಲವು ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಯಾವುದೇ ಹಾರ್ಮೋನ್ ಸಮಪ್ರಮಾಣದಲ್ಲಿದ್ದಾಗ ಮಾತ್ರ ದೇಹದ ಕಾರ್ಯ ಸುಗಮವಾಗಿ ಸಾಗುತ್ತದೆ. ಈಸ್ಟ್ರೋಜೆನ್ ಮಟ್ಟ ಹೆಚ್ಚಿದ್ದರೆ 5 ಆಹಾರ ಪದಾರ್ಥಗಳಿಂದ ದೂರವಿರಿ.

ದೇಹದ ಎಲ್ಲ ಕೆಲಸಕಾರ್ಯಗಳು ಸುಗಮವಾಗಿ ಸಾಗಲು ಹಾರ್ಮೋನುಗಳ ಪಾತ್ರ ಪ್ರಮುಖ. ಪ್ರತಿಯೊಂದು ಹಾರ್ಮೋನಿಗೂ ಅದರದ್ದೇ ಆದ ನಿರ್ದಿಷ್ಟ ಕಾರ್ಯವಿರುತ್ತದೆ. ಹಾರ್ಮೋನುಗಳ ಪೈಕಿ ಪ್ರಮುಖವಾದದ್ದು ಈಸ್ಟ್ರೋಜೆನ್. ಇದನ್ನು ಫೀಮೇಲ್ ಹಾಗೂ ಮೇಲ್ ಹಾರ್ಮೋನು ಎಂದೂ ಕರೆಯಲಾಗುತ್ತದೆ. ಏಕೆಂದರೆ, ಇದು ಲೈಂಗಿಕ ಪ್ರಕ್ರಿಯೆಗೆ ಅಗತ್ಯವಾದ ಹಾರ್ಮೋನ್ ಆಗಿದೆ. ಇದು ಮಹಿಳೆಯರಲ್ಲಿ ಸಂತಾನೋತ್ಪತ್ತಿಗೆ ಸಂಬಂಧಿಸಿ ಕೆಲಸ ಮಾಡುತ್ತದೆ. ಈಸ್ಟ್ರೋಜೆನ್ ಹಾರ್ಮೋನ್ ಪ್ರಮಾಣ ಕಡಿಮೆ ಇದ್ದಾಗ ಸಂತಾನಹೀನತೆಯ ಸಮಸ್ಯೆ ಕಂಡುಬರುತ್ತದೆ. ಮಹಿಳೆಯರ ಮಾಸಿಕ ಋತುಸ್ರಾವದ ಸಮಯದಲ್ಲಿ ಈ ಹಾರ್ಮೋನ್ ಸ್ರವಿಕೆಯಲ್ಲಿ ಏರಿಳಿತ ಕಂಡುಬರುತ್ತದೆ. ಈ ವ್ಯತ್ಯಾಸದಿಂದಾಗಿ ಮಹಿಳೆಯರ ಮಾನಸಿಕ ಸ್ಥಿತಿಗತಿಯಲ್ಲೂ ಏರಿಳಿತ ಉಂಟಾಗುತ್ತದೆ.  ಮೆನೋಪಾಸ್ ಸಮಯದಲ್ಲಿ ಈಸ್ಟ್ರೋಜೆನ್ ಮಟ್ಟ ಭಾರೀ ಕುಸಿತವಾಗುತ್ತದೆ. ಮಹಿಳೆಯರಲ್ಲಿ ಸ್ತನದ ವಿಕಾಸ ಹಾಗೂ ಇತರ ಅಂಗಾಂಗಳ ಬೆಳವಣಿಗೆಯಲ್ಲೂ ಇದು ಮಹತ್ವದ ಪಾತ್ರ ನಿಭಾಯಿಸುತ್ತದೆ. ಪುರುಷರಲ್ಲೂ ಇದು ಸಕ್ರಿಯವಾಗಿದ್ದು, ಲೈಂಗಿಕ ಕ್ರಿಯೆಗೆ ಅಗತ್ಯವಾಗಿರುತ್ತದೆ. ಈಸ್ಟ್ರೋಜೆನ್ ಮಟ್ಟ ಕಡಿಮೆ ಇದ್ದರೂ ಸಮಸ್ಯೆ, ಹೆಚ್ಚಾದರೂ ಸಮಸ್ಯೆ. ಹೀಗಾಗಿ, ಸಮತೋಲನ ಅಗತ್ಯವಾಗಿರುತ್ತದೆ. ಈಸ್ಟ್ರೋಜೆನ್ ಮಟ್ಟ ಹೆಚ್ಚಾದರೆ ದೇಹದಲ್ಲಿ ಹಲವು ರೀತಿಯ ತೊಂದರೆಗಳು ಕಾಣಿಸುತ್ತವೆ. 

ಈಸ್ಟ್ರೋಜೆನ್ (Estrogen) ಹಾರ್ಮೋನ್ (Hormone) ಮಟ್ಟ ಹೆಚ್ಚಾದರೆ ಕ್ಯಾನ್ಸರ್ (Cancer), ಎಂಡೋಮೆಟ್ರಿಯೋಸಿಸ್ ಮತ್ತು ಪಿಸಿಒಎಸ್ (PCOS) ನಂತಹ ಸಮಸ್ಯೆಗಳು ಉಂಟಾಗುತ್ತವೆ. ಇವುಗಳಲ್ಲದೆ, ಪೀರಿಯೆಡ್ಸ್ ಬಾರದಿರುವುದು, ಲೈಂಗಿಕ (Sex) ಕ್ರಿಯೆಯಲ್ಲಿ ನಿರಾಸಕ್ತಿ, ಕೂದಲು ಉದುರುವುದು ಮತ್ತು ಮೈಗ್ರೇನ್ ನಂತಹ ಸಮಸ್ಯೆಗಳೂ ಕಾಣಿಸುತ್ತವೆ. ಹೀಗಾಗಿ, ಈಸ್ಟ್ರೋಜೆನ್ ಹಾರ್ಮೋನ್ ಮಟ್ಟ ಸಮವಾಗಿರುವುದು ಅಗತ್ಯ. ಇದಕ್ಕಾಗಿ ಕೆಲವು ಆಹಾರಗಳನ್ನು ತ್ಯಜಿಸಬೇಕಾಗುತ್ತದೆ. ಮುಖ್ಯವಾಗಿ 5 ಆಹಾರ ವಸ್ತುಗಳಿಂದ ದೂರವಿರಬೇಕು.

ಸಿದ್ಧ ಮತ್ತು ಸಂಸ್ಕರಿತ ಆಹಾರ (Ready and Processed Food): ಸಂಸ್ಕರಿತ ಆಹಾರ ಸೇವನೆಯಿಂದ ಈಸ್ಟ್ರೋಜೆನ್ ಹಾರ್ಮೋನ್ ಮಟ್ಟ ಅಧಿಕವಾಗುತ್ತದೆ. ಇದರಿಂದ ಕ್ಯಾನ್ಸರ್ ನಂತಹ ಸಮಸ್ಯೆ ಹೆಚ್ಚುತ್ತದೆ. ಹೀಗಾಗಿ, ಸಸ್ಯಾಧಾರಿತ (Plant Based) ಆಹಾರ ವಸ್ತುಗಳ ಬಳಕೆ ಹೆಚ್ಚಬೇಕು. ಸಸ್ಯಾಧಾರಿತ ಆಹಾರದಿಂದ ಹಾರ್ಮೋನ್ ಮಟ್ಟ ಸಮತೋಲನದಲ್ಲಿರುತ್ತದೆ.

Intimate Health: ವಯಾಗ್ರಾ ಮಾತ್ರೆಗಿಂತ ಹೆಚ್ಚು ಎಫೆಕ್ಟಿವ್ ಈ ಆಹಾರ!

ರಿಫೈನ್ಡ್ ಸಕ್ಕರೆ (Refined Sugar) ಮತ್ತು ಕಾರ್ಬೋಹೈಡ್ರೇಟ್: ಇವೆರಡೂ ಆಹಾರ ಪದಾರ್ಥಗಳು ಎಲ್ಲ ರೀತಿಯ ರೋಗಗಳಿಗೆ ಮುಖ್ಯ ಕಾರಣವಾಗಿದೆ ಎಂದರೆ ತಪ್ಪಲ್ಲ. ಸಂಸ್ಕರಿತ ಆಹಾರದಲ್ಲಿ ಇವೆರಡೂ ಅಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳಿಂದ ರಕ್ತದೊತ್ತಡ (Blood Pressure) ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ಏಕದಳ ಧಾನ್ಯಗಳು, ನಾರಿನಂಶಯುಕ್ತ (Fibre) ಆಹಾರಗಳನ್ನು ಸೇವಿಸುವುದು ಅಗತ್ಯ.

ಹಾಲಿನ ಉತ್ಪನ್ನಗಳು (Dairy Products): ಹಾಲು ಮತ್ತು ಹಾಲಿನ ಉತ್ಪನ್ನಗಳಿಂದಲೂ ಈಸ್ಟ್ರೋಜೆನ್ ಲಭ್ಯವಾಗುತ್ತದೆ. ದೇಹದಲ್ಲಿ ಈಗಾಗಲೇ ಈಸ್ಟ್ರೋಜೆನ್ ಮಟ್ಟ ಹೆಚ್ಚಾಗಿದ್ದರೆ ಅತಿ ಸೀಮಿತ ಪ್ರಮಾಣದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವನೆ ಮಾಡಿ. ಸಾಕಷ್ಟು ಜನರಿಗೆ ಹಾಲಿನ ಉತ್ಪನ್ನ ಮತ್ತು ರೆಡ್ ಮೀಟ್ (Red Meat) ಸೇವನೆ ಮಾಡುವಾಗ ತೂಕ ಹೆಚ್ಚುವುದು ಕಂಡುಬರುತ್ತದೆ. ಪರಿಹಾರವೆಂದರೆ, ಸಾಕಷ್ಟು ವ್ಯಾಯಾಮ ಮಾಡಬೇಕು. ತೂಕ ಕಡಿಮೆ ಮಾಡಿಕೊಳ್ಳಲು ಯತ್ನಿಸಬೇಕು.

ಸಿಹಿ ತಿನಿಸು (Sweet), ಕೊಬ್ಬು (Fat): ಸಿಹಿ ತಿನಿಸುಗಳ ಸೇವನೆಯಿಂದ ದೇಹದ ಹಾರ್ಮೋನ್ಸ್ ಮಟ್ಟದಲ್ಲಿ ಹಲವು ರೀತಿಯ ಬದಲಾವಣೆಗಳು ಉಂಟಾಗುತ್ತವೆ. ಸಕ್ಕರೆಯ ಅಧಿಕ ಸೇವನೆಯಿಂದ ಫ್ಯಾಟ್ ಸೆಲ್ಸ್ (Fat Cells) ವಿಸ್ತಾರವಾಗಲು ಶುರುವಾಗುತ್ತದೆ. ಪರಿಣಾಮವಾಗಿ, ಈಸ್ಟ್ರೋಜೆನ್ ಮಟ್ಟವೂ ಏರಿಕೆಯಾಗುತ್ತದೆ. ಹೀಗಾಗಿ, ಕೊಬ್ಬುಯುಕ್ತ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

Health Tips: ಏಳೇ ದಿನದಲ್ಲಿ ತೂಕ ಇಳಿಸೋದು ಹೇಗೆ ಗೊತ್ತಾ?

ಮದ್ಯಪಾನ (Alcohol) ಮತ್ತು ಕಾಫಿ (Coffee):  ಲಿವರ್ ಸಹಾಯದಿಂದಲೇ ಈಸ್ಟ್ರೋಜೆನ್ ಹಾರ್ಮೋನಿನ ಫಿಲ್ಟರ್ ಕ್ರಿಯೆ ನಡೆಯುತ್ತದೆ. ಆದರೆ, ಮದ್ಯಪಾನದಿಂದ ಲಿವರ್ (Liver) ಕಾರ್ಯಕ್ಷಮತೆ ಕುಸಿದರೆ ಅದು ಈಸ್ಟ್ರೋಜೆನ್ ಮಟ್ಟ ಹೆಚ್ಚಲೂ ಕಾರಣವಾಗುತ್ತದೆ. ಆಗ ಸಂತಾನೋತ್ಪತ್ತಿಗೆ ಕಾರಣವಾಗುವ ಟೆಸ್ಟಾಸ್ಟಿರಾನ್ ಹಾರ್ಮೋನ್ ಪ್ರಮಾಣ ಕುಸಿಯಲು ಆರಂಭವಾಗುತ್ತದೆ. ಪುರುಷರಲ್ಲಿ ಈಸ್ಟ್ರೋಜೆನ್ ಮಟ್ಟ ಹೆಚ್ಚಲು ಮದ್ಯಪಾನ ಪ್ರಮುಖ ಕಾರಣವಾಗಿದೆ. ಹಾಗೆಯೇ, ಅಧಿಕ ಪ್ರಮಾಣದ ಕಾಫಿ ಸೇವನೆಯಿಂದಲೂ ಈಸ್ಟ್ರೋಜೆನ್ ಏರಿಕೆಯಾಗುತ್ತದೆ. 

click me!