ಲಾಕ್‍ಡೌನ್ ಪರಿಣಾಮ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ. ಏನೋ ಒತ್ತಡ, ಬೋರ್. ಪರಿಣಾಮ ಕೈಗೆ ಸಿಕ್ಕಿದ್ದು, ಕಣ್ಣಿಗೆ ಕಂಡಿದ್ದನ್ನೆಲ್ಲ ಬಾಯಿಗೆ ತುಂಬಿಕೊಳ್ಳುವ ಅಭ್ಯಾಸ ನಿಮಗಿದ್ರೆ, ಅದನ್ನು ತಗ್ಗಿಸಿಕೊಳ್ಳೋದು ಹೇಗೆ ಗೊತ್ತಾ?
ಲಾಕ್‍ಡೌನ್ ಪರಿಣಾಮ ಮನೆ ಬಿಟ್ಟು ಹೊರ ಹೋಗುವಂತಿಲ್ಲ. ಆಫೀಸ್ ಕೆಲಸವೂ ಮನೆಯಿಂದಲೇ ನಡೆಯುತ್ತಿದೆ. ಹೊರಗಿನ ವ್ಯಕ್ತಿಗಳು, ಸಮಾಜದೊಂದಿಗೆ ಸಂಪರ್ಕವೂ ಕಡಿತಗೊಂಡಿದೆ. ಆಫೀಸ್ ಕಲಸದೊತ್ತಡ ಬೇರೆ. ಮನೆಯಲ್ಲೇ ಕುಳಿತು ಕುಳಿತು ಒತ್ತಡ ಹೆಚ್ಚುತ್ತಿದೆ. ನಮಗರಿವೇ ಇಲ್ಲದಂತೆ ಕಾಲುಗಳು ಆಗಾಗ ಅಡುಗೆ ಮನೆ ಕಡೆಗೆ ದಾಂಗುಡಿ ಇಡುತ್ತವೆ. ಅಲ್ಲಿರುವ ಡಬ್ಬಾಗಳನ್ನೆಲ್ಲ ತಡಕಾಡಿ ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಂಡು ಬರುತ್ತವೆ. ಸ್ವಲ್ಪ ಹೊತ್ತಿನಲ್ಲೇ ಹಸಿವಿಲ್ಲದಿದ್ದರೂ ಫ್ರಿಜ್ ಬಾಗಿಲು ತೆರೆದು ತಿನ್ನಲು ಏನಿದೆ ಎಂದು ಹುಡುಕುತ್ತೇವೆ. ಅಲ್ಲಿ ಏನೋ ಒಂದು ಸಿಗುತ್ತೆ, ಅದನ್ನು ಬಾಯಿಗೆ ಹಾಕಿಕೊಳ್ಳುತ್ತೇವೆ. ಹೀಗೆ ಆಗಾಗ ಬಾಯಿ ಅಲ್ಲಾಡಿಸುತ್ತಲೇ ಇರಬೇಕು ಅಂದೆನಿಸುತ್ತದೆ. ಒತ್ತಡ ಜಾಸ್ತಿಯಾದಾಗ ಅಥವಾ ಸಂಕಷ್ಟದ ದಿನಗಳಲ್ಲಿ ತಿನ್ನುವ ಅಭ್ಯಾಸ ಕೂಡ ಹೆಚ್ಚಾಗುತ್ತದೆ ಎಂಬುದನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಇನ್ನು ಬೋರ್ ಆದಾಗ ಕೂಡ ಏನಾದ್ರೂ ತಿನ್ನಬೇಕು ಎಂಬ ಬಯಕೆ ಕೆಲವರಿಗಾಗುತ್ತೆ. ಆದ್ರೆ ಈಗಂತೂ ಒಂದೇ ಕಡೇ ಲಾಪ್‍ಟಾಪ್ ಮುಂದೆ ಕೂತು ದಿನವಿಡೀ ಕೆಲಸ ಮಾಡುವ ಕಾರಣ ಈ ರೀತಿ ಅಗತ್ಯಕ್ಕಿಂತ ಹೆಚ್ಚು ತಿನ್ನೋದ್ರಿಂದ ದೇಹದ ತೂಕ ಹೆಚ್ಚುವ ಜೊತೆಗೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳುಂಟಾಗುವ ಸಾಧ್ಯತೆಯಿದೆ. ಹಾಗಾದ್ರೆ ಈ ಓವರ್ ಈಟಿಂಗ್ ಅಭ್ಯಾಸಕ್ಕೆ ಕಡಿವಾಣ ಹಾಕೋದು ಹೇಗೆ?
ಇದನ್ನು ತಿಂದ್ರೆ ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ!
ಫುಡ್ ಲಾಗ್ ನಿರ್ವಹಣೆ ಮಾಡಿ
ಇದೇನಿದು ಫುಡ್ ಲಾಗ್ ಅಂತೀರಾ? ನೀವು ಏನು ತಿಂದಿದ್ದೀರಿ, ಎಷ್ಟೊತ್ತಿಗೆ ತಿಂದ್ರಿ, ಎಷ್ಟು ತಿಂದ್ರಿ ಅನ್ನೋದನ್ನು ಒಂದೆಡೆ ಬರೆದಿಡಿ. ಹಾಗೆಯೇ ಎಷ್ಟು ಲೋಟ ನೀರು ಕುಡಿದ್ರಿ ಅನ್ನೋದನ್ನೂ ಬರೆಯಿರಿ. ಹೀಗೆ ಮಾಡೋದ್ರಿಂದ ದಿನದ ಕೊನೆಯಲ್ಲಿ ನೀವು ಆ ದಿನ ಏನೆಲ್ಲ ತಿಂದಿದ್ದೀರಿ, ಅಷ್ಟು ತಿನ್ನುವ ಅಗತ್ಯವಿತ್ತಾ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗುತ್ತೆ. ಜೊತೆಗೆ ನೀವು ನಿಜವಾಗಿಯೂ ಹಸಿದು ತಿಂದ್ರಾ ಅಥವಾ ಬೋರ್ ಆಗುತ್ತೆ ಎನ್ನುವ ಕಾರಣಕ್ಕೆ ಸುಮ್ಮನೆ ಸಿಕ್ಕಿದ್ದನ್ನು ಹೊಟ್ಟೆಗೆ ಸೇರಿಸಿದ್ರಾ ಅನ್ನೋದು ತಿಳಿಯುತ್ತೆ. ಇದ್ರಿಂದ ನಿಮ್ಮ ಆಹಾರ ಹಾಗೂ ತಿನ್ನುವ ಬಯಕೆ ಮೇಲೆ ಕಂಟ್ರೋಲ್ ಸಾಧಿಸಲು ಸಾಧ್ಯವಾಗುತ್ತೆ.
ಹಣ್ಣುಗಳು ಹಾಗೂ ತರಕಾರಿಗಳೆಡೆಗೆ ಒಲವು ತೋರಿ
ನಾರಿನಂಶ ಹೆಚ್ಚಿರುವ ಆಹಾರಗಳು ಹೊಟ್ಟೆ ತುಂಬಿರುವ ಅನುಭವ ನೀಡುವ ಜೊತೆಗೆ ದೇಹಕ್ಕೆ ಅಗತ್ಯ ಶಕ್ತಿಯನ್ನು ಒದಗಿಸುತ್ತವೆ. ಹೀಗಾಗಿ ನಾರಿನಂಶ ಹೆಚ್ಚಿರುವ ಹಣ್ಣುಗಳು ಹಾಗೂ ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಿ. ತರಕಾರಿ ಹಾಗೂ ಹಣ್ಣುಗಳಲ್ಲಿ ವಿಟಮಿನ್ಸ್ ಹಾಗೂ ಮಿನರಲ್ಸ್ ಕೂಡ ಹೆಚ್ಚಿರುವ ಕಾರಣ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ಪೋಷಕಾಂಶಗಳು ದೊರೆಯುತ್ತವೆ. ಏನಾದ್ರೂ ತಿನ್ನಬೇಕು ಎಂಬ ಬಯಕೆ ಉಂಟಾದಾಗಲೆಲ್ಲ ಹಣ್ಣು ಹಾಗೂ ತರಕಾರಿ ತಿನ್ನಿ.
ನಿಮಗೇ ಶತ್ರುವಾಗೋ ನಿಮ್ಮ ಕೆಟ್ಟ ಅಭ್ಯಾಸಗಳಿವು...!
ನೀರು ಕುಡಿಯಲು ಮರೆಯಬೇಡಿ
ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಿರಿ. ಈಗಂತೂ ಬೇಸಿಗೆ ಬೇರೆ, ನಿರ್ಜಲೀಕರಣದಿಂದ ದೇಹಕ್ಕೆ ಸುಸ್ತು ಆವರಿಸುವ ಜೊತೆಗೆ ಅನಾರೋಗ್ಯ ಕಾಡುವ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ನೀರು, ಜ್ಯೂಸ್ ಸೇರಿದಂತೆ ಲಿಕ್ವಿಡ್‍ಗಳನ್ನು ಹೆಚ್ಚು ಸೇವಿಸಿ. ನಮ್ಮ ದೇಹಕ್ಕೆ ನೀರಿನ ಅಗತ್ಯವಿರುವಾಗ ಹಾರ್ಮೋನ್‍ಗಳು ಹಸಿವಾಗುತ್ತಿರುವ ಭಾವನೆಯನ್ನುಂಟು ಮಾಡುತ್ತವೆ. ಇದು ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚು ತಿನ್ನುವ ಅಭ್ಯಾಸಕ್ಕೆ ನಾಂದಿ ಹಾಡುತ್ತೆ. ಹೀಗಾಗಿ ತಿನ್ನಬೇಕು ಎಂಬ ಬಯಕೆ ಮೂಡಿದ ತಕ್ಷಣ ಒಂದು ಲೋಟ ನೀರು ಕುಡಿದು ಎರಡು ನಿಮಿಷ ಸುಮ್ಮನಿರಿ. ಆಗಲೂ ಹಸಿವು ಇದ್ರೆ ಏನಾದ್ರೂ ಆರೋಗ್ಯಕರವಾದ ತಿನಿಸು ತಿನ್ನಿ.
ದೇಹ ದಂಡಿಸಿ
ಪ್ರತಿದಿನ ದೈಹಿಕ ಚಟುವಟಿಕೆಗಳನ್ನು ಕೈಗೊಳ್ಳಿ. ಮನೆಯಲ್ಲೇ ಮಾಡಬಹುದಾದ ಸರಳ ವ್ಯಾಯಾಮಗಳನ್ನು ಕೈಗೊಳ್ಳಿ. ದೇಹಕ್ಕೆ ಯಾವುದೇ ವ್ಯಾಯಾಮ ಸಿಗದಿದ್ದರೆ ತೂಕ ಹೆಚ್ಚಳವಾಗೋದು ಮಾತ್ರವಲ್ಲ, ಹೃದಯ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ, ವ್ಯಾಯಾಮ ಮಾಡೋದ್ರಿಂದ ನಿರ್ದಿಷ್ಟ ಹಾರ್ಮೋನ್‍ಗಳು ಹಾಗೂ ಮೆದುಳಿನಲ್ಲಿ ಕಿಣ್ವಗಳು ಬಿಡುಗಡೆಯಾಗುವ ಮೂಲಕ ಸಂತಸವನ್ನು ಹೆಚ್ಚಿಸುತ್ತವೆ. ಹೀಗಾಗಿ ವ್ಯಾಯಾಮ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡಲು ನೆರವು ನೀಡುತ್ತೆ.
ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಹೀಗೆ ಕಾಪಾಡಿ..!
ಹೆಲ್ತಿ ಸ್ನ್ಯಾಕ್ಸ್ ತಿನ್ನಿ
ಬೆಳಗ್ಗೆ ತಿಂಡಿ ಅಥವಾ ಮಧ್ಯಾಹ್ನ ಊಟವಾದ ಬಳಿಕ ನಡುವಿನ ಅವಧಿಯಲ್ಲಿ ಏನಾದ್ರೂ ತಿನ್ನಬೇಕು ಎಂಬ ಬಯಕೆಯಾದ್ರೆ ಪೋಷಕಾಂಶಯುಕ್ತ ತಿನಿಸುಗಳನ್ನೇ ತಿನ್ನಿ. ಬಾದಾಮಿ, ವಾಲ್‍ನಟ್ಸ್, ಕುಂಬಳಕಾಯಿ ಬೀಜಗಳು, ಫ್ಲ್ಯಾಕ್ಸ್ ಸೀಡ್ಸ್, ತೆಂಗಿನ ಕಾಯಿ ಚೂರು ಮುಂತಾದ ಆರೋಗ್ಯಕಾರಿ ಫ್ಯಾಟ್‍ಗಳನ್ನು ಹೊಂದಿರುವ ಆಹಾರಗಳನ್ನೇ ಸೇವಿಸಿ. ಇವು ನಿಮ್ಮ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ಶಕ್ತಿ ಪೂರೈಸುವ ಜೊತೆಗೆ ಹೊಟ್ಟೆ ತುಂಬಿರುವ ಅನುಭವ ನೀಡುತ್ತೆ.