Heart Health : ವಯಸ್ಸಾದಂತೆ ಹೃದಯವೂ ಬದಲಾಗುತ್ತೆ, ಹೇಗಿರಬೇಕು ಲೈಫ್‌ಸ್ಟೈಲ್

By Suvarna News  |  First Published Mar 8, 2023, 3:51 PM IST

ವಯಸ್ಸು ಬರೀ ಲೆಕ್ಕಕ್ಕೆ ಮಾತ್ರವಲ್ಲ. ಅದು ನಮ್ಮ ದೇಹದ ಮೇಲೂ ಅನೇಕ ಪರಿಣಾಮ ಬೀರುತ್ತದೆ. ದೇಹ ಶಕ್ತಿ ಕಳೆದುಕೊಳ್ಳುತ್ತದೆ. ಉಸಿರಾಟದಲ್ಲಿ ಏರುಪೇರಾಗುತ್ತದೆ. ಹೃದಯಲ್ಲೂ ನಾವು ಅನೇಕ ಬದಲಾವಣೆಯನ್ನು ನೋಡ್ತೇವೆ. ಕೆಲ ಲಕ್ಷಣಗಳು ನಮ್ಮನ್ನು ಎಚ್ಚರಿಸುತ್ತವೆ.
 


ವಯಸ್ಸಾಗೋದು ಸಹಜ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹೆಚ್ಚೆಚ್ಚು ಹುಟ್ಟುಹಬ್ಬ ಆಚರಿಸಿಕೊಂಡಾಗಿದೆ ಅಂದ್ರೆ ನಮ್ಮ ವಯಸ್ಸು ಹೆಚ್ಚಾಗಿದೆ ಎಂದೇ ಅರ್ಥ. ಒಂದೊಂದು ಹುಟ್ಟು ಹಬ್ಬದ ನಂತ್ರವೂ ನಮ್ಮ ವಯಸ್ಸು ಒಂದು ವರ್ಷ ಹೆಚ್ಚಾಗಿರುತ್ತದೆ. ವಯಸ್ಸು ಏರಿಕೆಯಾಗ್ತಿದೆ ಅಂತಾ ಕೊರಗ್ತಾ ಕೂರುವ ಅವಶ್ಯಕತೆ ಇಲ್ಲ. ಆದ್ರೆ  ನಮಗೆ ವಯಸ್ಸು ಏರಿಕೆಯಾಗ್ತಿದ್ದಂತೆ ದೇಹದ ಹಾರ್ಮೋನ್‌ಗಳಲ್ಲಿ ಮಾತ್ರವಲ್ಲದೆ ಅಂಗಗಳ ಕಾರ್ಯನಿರ್ವಹಣೆಯಲ್ಲೂ ಅನೇಕ ಬದಲಾವಣೆಗಳು ಕಂಡುಬರುತ್ತವೆ ಎಂಬ ಸತ್ಯ ನಮಗೆ ತಿಳಿದಿರಬೇಕು.

ನಮ್ಮ ದೇಹ (Body) ದ ಅಂಗಗಳು ಜೀವಕೋಶವನ್ನು ಅವಲಂಬಿಸಿರುತ್ತವೆ. ಜೀವಕೋಶ (Cell) ಗಳು ವಯಸ್ಸಾದಂತೆ ಶಕ್ತಿ ಕಳೆದುಕೊಳ್ಳುತ್ತವೆ. ಇದ್ರಿಂದ ದೇಹದ ಕೆಲಸ ನಿಧಾನವಾಗುತ್ತದೆ. ಯೌವನದಲ್ಲಿ ನಮ್ಮ ಜೀವಕೋಶಗಳು ಸಾಯ್ತಿದ್ದಂತೆ ಇನ್ನೊಂದು ಮರುಸ್ಥಾಪನೆಗೊಳ್ಳುತ್ತದೆ. ವಯಸ್ಸಾದಂತೆ ಲಿವರ್, ಕಿಡ್ನಿ ಮತ್ತು ಬೇರೆ ಅಂಗಗಳ ಜೀವಕೋಶ ಸಾಯ್ತಿದ್ದಂತೆ ಮತ್ತೆ ಮರುಸ್ಥಾಪನೆಗೊಳ್ಳುವ ಶಕ್ತಿ (Strength) ನಮ್ಮ ದೇಹಕ್ಕಿರೋದಿಲ್ಲ. ಕೆಲ ಅಂಗಗಳ ಜೀವಕೋಶದ ಸಂಖ್ಯೆ ಕಡಿಮೆಯಾಗ್ತಾ ಬರುತ್ತದೆ. ಆಗ ನಮ್ಮ ಅಂಗ ಕೆಲಸ ಮಾಡೋದನ್ನು ನಿಲ್ಲಿಸುತ್ತದೆ.

Tap to resize

Latest Videos

ಕೋವಿಡ್‌ ನಂತರ ಹೃದಯಸ್ತಂಭನದಿಂದ ದೇಶದಲ್ಲಿ ಸಾವು 15% ಹೆಚ್ಚಳ: ವೈದ್ಯರು

ನಮ್ಮ ವಯಸ್ಸು 30, 40, 50ರ ಗಡಿ ದಾಟುತ್ತಿದ್ದಂತೆ ಹಂತ ಹಂತವಾಗಿ ಬದಲಾವಣೆಯಾಗುತ್ತದೆ. ನಮ್ಮ ದೇಹದ ಅತಿ ಮುಖ್ಯ ಅಂಗಗಳಲ್ಲಿ ಒಂದಾದ ಹೃದಯಕ್ಕೂ ವಯಸ್ಸಿನ ಪ್ರಭಾವ ಬೀರುತ್ತದೆ. ರಕ್ತವನ್ನು ಪಂಪ್ ಮಾಡಲು ಕೆಲಸವನ್ನು ವಿಶ್ರಾಂತಿಯಿಲ್ಲದೆ ಮಾಡುವ ಹೃದಯವನ್ನು ಫ್ಯುಲ್ ಪಂಪ್ ಎಂದು ಕರೆಯಲಾಗುತ್ತದೆ.  ನಮಗೆ ವಯಸ್ಸಾಗ್ತಿದ್ದಂತೆ ನಮ್ಮ ಹೃದಯ ಅನೇಕ ಕಾಯಿಲೆಗಳಿಗೆ ಗುರಿಯಾಗುತ್ತದೆ. ವಯಸ್ಸಾಗ್ತಿದ್ದಂತೆ ನಮ್ಮ ಹೃದಯದ ಮೇಲೆ ಯಾವೆಲ್ಲ ಪರಿಣಾಮವಾಗುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ. 

ಅಧಿಕ ರಕ್ತದೊತ್ತಡ (High Blood Pressure) : ನಮಗೆ ವಯಸ್ಸಾದಂತೆ ಅಧಿಕ ರಕ್ತದೊತ್ತಡದ ಅಪಾಯವು ಹೆಚ್ಚಾಗುತ್ತದೆ. ರಕ್ತನಾಳಗಳ ಮೂಲಕ ಹರಿಯುವ ರಕ್ತದ ಒತ್ತಡ ಅಧಿಕವಾಗಿದ್ದಾಗ ಅಧಿಕ ರಕ್ತದೊತ್ತಡ ಸಂಭವಿಸುತ್ತದೆ. ಅಧಿಕ ರಕ್ತದೊತ್ತಡವು ಕಾಲಾನಂತರದಲ್ಲಿ ಹೆಚ್ಚಾಗುತ್ತದೆ. ಅಪಧಮನಿಯ ಗೋಡೆಗಳ ನಯವಾದ ಒಳಪದರವನ್ನು ಹಾನಿಗೊಳಿಸುತ್ತದೆ. ಇದು ರಕ್ತದ ಹರಿವಿನ ಅಡಚಣೆಗಳಿಗೆ ಕಾರಣವಾಗುತ್ತದೆ. ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಇದ್ರಿಂದ ಹೆಚ್ಚಾಗುತ್ತದೆ.

ಕಿಡ್ನಿಗೆ ಸಂಬಂಧಿಸಿದ ಈ ರೋಗ ಆರಂಭದಲ್ಲೇ ಗುರುತಿಸಿಲ್ಲಾಂದ್ರೆ ಅಪಾಯ ಹೆಚ್ಚು

ಸ್ಟ್ರೋಕ್ (Stroke) : ವಯಸ್ಸಾದವರಲ್ಲಿ ಅನಿಯಮಿತ ಹೃದಯ ಬಡಿತದ ಸಾಧ್ಯತೆ ಹೆಚ್ಚುತ್ತದೆ. ಒಂದು ನಿಮಿಷದಲ್ಲಿ ಎಷ್ಟು ಬಾರಿ ಹೃದಯ ಹೊಡೆದುಕೊಳ್ಳುತ್ತದೆ ಎಂಬುದನ್ನು ಇದನ್ನು ಹೃದಯದ ವೇಗ ಎನ್ನುತ್ತಾರೆ. ಇದು ಅನಿಯಮಿತವಾಗುತ್ತದೆ. ಬೇರೆ ಅಂಗದಂತೆ ಇದ್ರ ಕೆಲ ಜೀವಕೋಶ ಕೂಡ ಸಾಯುತ್ತದೆ. ಯುವಕರಿದ್ದಾಗ ಮಾಡ್ತಿದ್ದಷ್ಟು ವೇಗವಾಗಿ ವಯಸ್ಸಾದ ವ್ಯಕ್ತಿಗಳಲ್ಲಿ ರಕ್ತ ಪಂಪ್ ಆಗುವುದಿಲ್ಲ. ಆಗ ನಾವು ಆಮ್ಲಜನಕಕ್ಕಾಗಿ ಉಸಿರನ್ನು ಎಳೆದುಕೊಳ್ತೇವೆ. ಹೃದಯದ ಅನಿಯಮಿತ ಬಡಿತವನ್ನು ಹೃತ್ಕರ್ಣದ ಕಂಪನ ಎಂದೂ ಕರೆಯುತ್ತಾರೆ. ವಯಸ್ಸಾದವರಲ್ಲಿ ಸ್ಟ್ರೋಕ್‌ಗೆ ಇದು ಪ್ರಮುಖ ಕಾರಣವಾಗಿರುತ್ತದೆ. ಹೃತ್ಕರ್ಣದ ಕಂಪನದೊಂದಿಗೆ ಯಾವಾಗಲೂ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವಿರುತ್ತದೆ. ಇದು ಮೆದುಳಿಗೆ ಹೋಗಿ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. 

ವಯಸ್ಸಾದಂತೆ ಕಾಡುವ ಇನ್ನೊಂದು ಸಮಸ್ಯೆಯೆಂದ್ರೆ ನಮ್ಮ ಹೃದಯದ ಗಾತ್ರ ಬದಲಾಗುವುದು. ಇದು ದೊಡ್ಡದಾಗುತ್ತದೆ. ವಿಶೇಷವಾಗಿ ಎಡ ಕುಹರ ದೊಡ್ಡದಾಗುತ್ತದೆ. ಹೃದಯದ ಗೋಡೆಗಳು ದಪ್ಪವಾಗಲು ಶುರುವಾಗುತ್ತವೆ. ಇದೇ ಕಾರಣಕ್ಕೆ ಹೃದಯದ ಗಾತ್ರ ದೊಡ್ಡದಾದ್ರೂ ಶಕ್ತಿ ಹೆಚ್ಚಾಗುವುದಿಲ್ಲ. ವಯಸ್ಸಾದಂತೆ ನಮ್ಮ ಶಕ್ತಿ ಕಡಿಮೆಯಾಗ್ತಾ ಹೋಗುತ್ತದೆ. 

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಜರ್ನಲ್ ಪ್ರಕಾರ, ಎಂಜೈನಾ ಪೆಕ್ಟೋರಿಸ್ ಅಥವಾ ಎಡ ಎದೆಯ ನೋವು, ಸಾಮಾನ್ಯವಾಗಿ  ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ. ವಯಸ್ಸು ಹೆಚ್ಚಾದಂತೆ ಇದು ಹೆಚ್ಚಾಗುತ್ತದೆ. ಹೃದಯದ ಆರೋಗ್ಯ ವಯಸ್ಸಾದ್ಮೇಲೂ ಚೆನ್ನಾಗಿರಬೇಕೆಂದ್ರೆ ಯೌವನದಲ್ಲಿಯೇ ಅದ್ರ ಆರೈಕೆ ಶುರುಮಾಡ್ಬೇಕು. ಆರೋಗ್ಯಕರ ಜೀವನಶೈಲಿ ಹಾಗೂ ನಿಯಮಿತ ವ್ಯಾಯಾಮದ ಮೂಲಕ ನೀವು ನಿಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು. 
 

click me!