ಪಾಲಕರೇ ಎಚ್ಚರ..! ಮೊಬೈಲ್‌ನಿಂದ ಮಕ್ಕಳ ಮೆದುಳು ನಿಷ್ಕ್ರಿಯವಾಗುತ್ತಾ..?

By Kannadaprabha News  |  First Published Dec 24, 2020, 9:08 AM IST

ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಸಂದೇಶ ಸುಳ್ಳು: ತಜ್ಞರು| ಬೇರೆ ಬೇರೆ ಸೈಡ್‌ ಎಫೆಕ್ಟ್ ಇರೋದು ನಿಜ| ಮಕ್ಕಳಿಗೆ ಕಣ್ಣು ರಿಲ್ಯಾಕ್ಸ್‌ ಆಗಲು ಸಮಯ ನೀಡಬೇಕು| ಎರಡು ಗಂಟೆಗಿಂತ ಹೆಚ್ಚು ಮೊಬೈಲ್‌ ಬಳಕೆ ಮಾಡಬಾರದು|


ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಡಿ.24): ಮಕ್ಕಳು ಮೊಬೈಲನ್ನು ಅತಿ ಹೆಚ್ಚು ಬಳಸುವುದರಿಂದ ಅವರ ಮೆದುಳು ನಿಷ್ಕ್ರಿಯಗೊಳ್ಳುತ್ತದೆ ಎಂಬ ಆತಂಕ ಹುಟ್ಟಿಸುವ ಮೆಸೇಜ್‌ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈಗ ಆನ್‌ಲೈನ್‌ ಶಿಕ್ಷಣವು ಸರ್ವವ್ಯಾಪಿ ಆಗಿರುವ ಸಂದರ್ಭದಲ್ಲಿ ಈ ಸಂದೇಶ ಅನೇಕ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಆದರೆ ಮೊಬೈಲ್‌ನ ಅತಿ ಬಳಕೆಯಿಂದ ಮಕ್ಕಳ ಮೇಲೆ ಕೆಲ ಅಡ್ಡ ಪರಿಣಾಮ ಉಂಟಾಗಬಹುದಾಗಿದ್ದರೂ ಮೆದುಳು ನಿಷ್ಕ್ರಿಯಗೊಳ್ಳುವಂತಹ ಗಂಭೀರ ಸಮಸ್ಯೆ ತಲೆದೋರುವ ಸಾಧ್ಯತೆಗಳಿಲ್ಲ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

Latest Videos

undefined

ಮೆದುಳಿಗೆ ಆಮ್ಲಜನಕ ಅಥವಾ ರಕ್ತದ ಪೂರೈಕೆ ಸ್ಥಗಿತಗೊಂಡ ಸಂದರ್ಭದಲ್ಲಿ ಮೆದುಳು ನಿಷ್ಕ್ರೀಯಗೊಳ್ಳುತ್ತದೆ. ಆದರೆ ಮೊಬೈಲ್‌ ಬಳಕೆಯಿಂದ ಇಷ್ಟೊಂದು ಗಂಭೀರ ಸಮಸ್ಯೆ ತಲೆದೋರುತ್ತದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ವೈದ್ಯಕೀಯ ವಿಜ್ಞಾನ ಇದನ್ನು ಪುಷ್ಟೀಕರಿಸುವುದಿಲ್ಲ. ಆದರೆ ಯಾವುದನ್ನೇ ಅತಿಯಾಗಿ ಮಾಡಿದರೂ ಅಡ್ಡ ಪರಿಣಾಮಗಳಿರುವುದು ಸಹಜ. ಅದೇ ನಿಯಮ ಮೊಬೈಲ್‌ಗೂ ಅನ್ವಯಿಸುತ್ತದೆ ಎಂದು ಮನೋವೈದ್ಯರು ಮತ್ತು ಮಕ್ಕಳ ತಜ್ಞರು ಹೇಳುತ್ತಾರೆ.

ಕಣ್ಣಿನ ಸಮಸ್ಯೆ, ಮೈಗ್ರೇನ್‌ ಬರಬಹುದು: 

ಮಕ್ಕಳು ಮಿತಿಮೀರಿ ಮೊಬೈಲ್‌ ಬಳಸುವುದರಿಂದ ಕಣ್ಣಿನ ಸಮಸ್ಯೆ, ಮೈಗ್ರೇನ್‌ ಇದ್ದವರಿಗೆ ತಲೆನೋವು ಹೆಚ್ಚಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ಮೆದುಳು ನಿಷ್ಕ್ರೀಯಗೊಳ್ಳುತ್ತದೆ, ಕ್ಯಾನ್ಸರ್‌ ಬರುತ್ತದೆ ಎಂಬ ಹೇಳಿಕೆಗಳಿಗೆ ಯಾವುದೇ ಪುರಾವೆಗಳಿಲ್ಲ. ಇದು ಭಯ ಸೃಷ್ಟಿಸುವ ಪ್ರಯತ್ನ ಎಂದು ಮಕ್ಕಳ ಮನೋವೈದ್ಯೆ ಡಾ.ದಿವ್ಯಾ ಹೇಳುತ್ತಾರೆ.

ತೂಕ ಇಳಿಸಿಕೊಳ್ಳಬೇಕಾ? ಈ ಫುಡ್‌ ಕಾಂಬಿನೇಷನ್‌ ಟ್ರೈ ಮಾಡಿ !

ಆನ್‌ಲೈನ್‌ ಶಿಕ್ಷಣ ಮಕ್ಕಳ ಸಾಮಾಜಿಕ ಜೀವನದ ಮೇಲೆ ಕೆಟ್ಟಪರಿಣಾಮ ಬೀರುವ ಸಾಧ್ಯತೆ ಇದೆ. ಮಕ್ಕಳು ಸಮಾಜದೊಂದಿಗೆ ಬೆರೆಯಲು ಹಿಂದೇಟು ಹಾಕುವ ಸಾಧ್ಯತೆಯಿದೆ. ಆನ್‌ಲೈನ್‌ ಶಿಕ್ಷಣದ ಪರಿಣಾಮ ಏನು ಎಂಬುದು ಭವಿಷ್ಯದಲ್ಲಿ ಗೊತ್ತಾಗುತ್ತದೆ. ಮಕ್ಕಳ ಒಂದು ವರ್ಷದ ಸಾಮಾಜಿಕ ಬದುಕಿಗೆ ಹಿನ್ನಡೆಯಾಗಿದೆ ಎಂದು ಹೇಳುತ್ತಾರೆ.

ಮಕ್ಕಳು ಆನ್‌ಲೈನ್‌ ಶಿಕ್ಷಣವನ್ನು ತಪ್ಪಿಸಲು ಪ್ರಯತ್ನಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದೆ. ಆಡಿಯೋ ಅಥವಾ ವಿಡಿಯೋ ಸ್ತಬ್ಧ ಮಾಡುವುದು, ಮೊಬೈಲ್‌ ಕ್ಯಾಮರಾದಲ್ಲಿ ಕಾಣಿಸಿಕೊಳ್ಳದಿರುವುದು, ಆನ್‌ಲೈನ್‌ ಶಿಕ್ಷಣದಿಂದ ತಪ್ಪಿಸಿಕೊಳ್ಳಲು ನೆಪ ಹೇಳುವ ದೂರುಗಳು ನನಗೆ ಹೆಚ್ಚಾಗಿ ಬರುತ್ತಿದೆ ಎಂದು ಡಾ.ದಿವ್ಯಾ ಹೇಳುತ್ತಾರೆ.

ಮೊಬೈಲ್‌ ಎಂಬುದು ಮುಂದಿನ ದಿನಗಳಲ್ಲಿ ಅನಿವಾರ್ಯ. ಮೊಬೈಲ್‌ನಿಂದ ಮಕ್ಕಳನ್ನು ಸಂಪೂರ್ಣವಾಗಿ ದೂರವೇ ಇಡುವ ಪ್ರಯತ್ನ ಸಲ್ಲದು. ಮೊಬೆಲ್‌ ಬಳಕೆಗೆ ವೇಳಾಪಟ್ಟಿಹಾಕಿ, ಶಿಸ್ತು ತರುವ ಕೆಲಸ ಮಾಡಬೇಕು. ನಾವು ಚಿಕ್ಕವರಿರುವಾಗ ಹೊರಗಡೆ ಆಟ ಆಡಲು ಹೋದರೂ ಕೂಡ ರಾತ್ರಿ 7 ಗಂಟೆಯೊಳಗೆ ಮನೆಯೊಳಗೆ ಇರಬೇಕಿತ್ತು. ಇಂತಹ ಗಡುವು ಮೊಬೈಲ್‌ ಬಳಕೆಯಲ್ಲಿಯೂ ಇರಬೇಕು ಎಂದು ಅವರು ಹೇಳುತ್ತಾರೆ.

ಖಿನ್ನತೆ, ನಿದ್ರೆಯ ಸಮಸ್ಯೆ, ಹಸಿವಿನ ಸಮಸ್ಯೆ:

ಮೊಬೈಲ್‌ನ ಅತಿ ಬಳಕೆಯಿಂದ ಖಿನ್ನತೆ, ಆತಂಕ, ನಿದ್ರೆಯ ಸಮಸ್ಯೆ, ಹಸಿವಿನ ಸಮಸ್ಯೆಗಳು ತಲೆದೋರುತ್ತವೆ ಎಂದು ಮಕ್ಕಳ ತಜ್ಞರು ಹೇಳುತ್ತಾರೆ. ಮಕ್ಕಳಿಗೆ ದಿನಕ್ಕೆ ಎರಡು ಗಂಟೆಗಿಂತ ಹೆಚ್ಚು ಮೊಬೈಲ್‌ ನೀಡಬಾರದು. ಮನೆಯಲ್ಲಿ ಅವರಿಗೆ ವೈವಿಧ್ಯಮಯ ಚಟುವಟಿಕೆಗಳಿಗೆ ಅವಕಾಶ ನೀಡಬೇಕು. ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ಮಾಡುವ ಚಟುವಟಿಕೆ ಮತ್ತು ಕುಟುಂಬ ಸದಸ್ಯರೊಂದಿಗೆ ಸೇರಿ ಮಾಡುವ ಚಟುವಟಿಕೆಗಳಿಗೆ ಅವಕಾಶ ನೀಡಬೇಕು. ಸಂಗೀತ ಕಲಿಯುವುದು, ಕಥೆ ಕೇಳುವುದು, ಚಿತ್ರಕಲೆ, ಅಜ್ಜ, ಅಜ್ಜಿ ಜೊತೆ ಸೇರಿ ಆಡುವ ಬೋರ್ಡ್‌ ಆಟಗಳು, ಆಡುಗೆ ಮಾಡುವುದು ಹೀಗೆ ವೈವಿಧ್ಯಮಯ ಚಟುವಟಿಕೆಗೆ ಅವಕಾಶ ನೀಡಬೇಕು ಎಂದು ಮಕ್ಕಳ ಮನೋವೈದ್ಯರು, ಮಕ್ಕಳ ತಜ್ಞರು ಅಭಿಪ್ರಾಯ ಪಡುತ್ತಾರೆ.

ಏಕಾಏಕಿ ಮೊಬೈಲ್‌ ಕಿತ್ತುಕೊಳ್ಳಬೇಡಿ:

ಕೆಂಪೇಗೌಡ ಇನ್ಸ್‌ಟಿಟ್ಯೂಟ್‌ ಅಫ್‌ ಮೆಡಿಕಲ್‌ ಸೈನ್ಸ್‌ನ ಮಕ್ಕಳ ವಿಭಾಗದ ಮುಖ್ಯಸ್ಥ ಪ್ರೊ.ಶ್ರೀನಿವಾಸ್‌ ಪ್ರಕಾರ, ಆನ್‌ಲೈನ್‌ ಶಿಕ್ಷಣದ ಅಡ್ಡ ಪರಿಣಾಮಗಳಿಗಾಗಿ ಚಿಕಿತ್ಸೆಗೆ ಬರುವ ಮಕ್ಕಳ ಪ್ರಮಾಣ ಏರಿಲ್ಲ. ಬಹುಶಃ ಕೊರೋನಾ ಕಾರಣದಿಂದ ಮಕ್ಕಳನ್ನು ಅಸ್ಪತ್ರೆಗೆ ಕರೆದುಕೊಂಡು ಬರಲು ಹಿಂದೇಟು ಹಾಕುತ್ತಿರಬಹುದು. ಇನ್ನು ಎರಡ್ಮೂರು ತಿಂಗಳಲ್ಲಿ ಪ್ರಕರಣಗಳು ವರದಿ ಆಗಬಹುದು. ಮೊಬೈಲ್‌ನ ಅತಿ ಬಳಕೆಯಿಂದ ಮಕ್ಕಳ ಮೇಲೆ ಅಡ್ಡ ಪರಿಣಾಮ ಇದ್ದೇ ಇದೆ ಎಂದು ಹೇಳುತ್ತಾರೆ.

ಮಕ್ಕಳಿಗೆ ಕಣ್ಣು ರಿಲ್ಯಾಕ್ಸ್‌ ಆಗಲು ಸಮಯ ನೀಡಬೇಕು. ಎರಡು ಗಂಟೆಗಿಂತ ಹೆಚ್ಚು ಮೊಬೈಲ್‌ ಬಳಕೆ ಮಾಡಬಾರದು. ಇನ್ನು ಆಫ್‌ಲೈನ್‌ ಶಿಕ್ಷಣ ಪ್ರಾರಂಭವಾದೊಡನೆ ಮೊಬೈಲ್‌ ಬಳಕೆ ಚಟವಾಗಿರುವ ಮಕ್ಕಳ ಕೈಯಿಂದ ಮೊಬೈಲ್‌ ಕಿತ್ತುಕೊಳ್ಳಬೇಡಿ. ನಿಧಾನವಾಗಿ ಅವರ ಮೊಬೈಲ್‌ ಬಳಕೆಗೆ ಕಡಿವಾಣ ಹಾಕಬೇಕು ಎಂದು ಶ್ರೀನಿವಾಸ್‌ ತಿಳಿಸುತ್ತಾರೆ.
 

click me!