ಆಹಾರದ ವಿಚಾರದಲ್ಲಿ ಎಲ್ಲರೂ ಮಾಡುವ ತಪ್ಪುಗಳನ್ನು ನೀವೂ ಮಾಡ್ಬೇಡಿ

By Suvarna NewsFirst Published Apr 17, 2022, 6:42 PM IST
Highlights

ನಮ್ಮ ದೇಹಕ್ಕೆ (Body) ಕೊಬ್ಬೂ ಬೇಕು, ಸಕ್ಕರೆಯೂ ಬೇಕು. ಹಾಗೆಯೇ ವಿಭಿನ್ನ ಆಹಾರ (Food) ದಲ್ಲಿರುವ ಪೋಷಕಾಂಶಗಳೂ ಬೇಕು. ಎಲ್ಲರೂ ಸಾಮಾನ್ಯವಾಗಿ ಆಹಾರದ ವಿಚಾರದಲ್ಲಿ ಮಾಡುವ ತಪ್ಪುಗಳನ್ನು ಗುರುತಿಸಿಕೊಂಡು ಆಹಾರಶೈಲಿಯನ್ನು ಬದಲಿಸಿಕೊಳ್ಳಿ.

ಆಹಾರದ (Food) ವಿಚಾರದಲ್ಲಿ ನಾವು ಗೊತ್ತಿಲ್ಲದೆ ಹಲವಾರು ತಪ್ಪುಗಳನ್ನು ದಿನವೂ ಮಾಡುತ್ತಿರುತ್ತೇವೆ. ಅದರಲ್ಲೂ ಕಟ್ಟುನಿಟ್ಟಿನ ಡಯೆಟ್‌ (Diet) ಅನುಸರಿಸುವವರು ಕೆಲವು ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ಅದರಿಂದ ನಮ್ಮ ಆರೋಗ್ಯದ ಮೇಲೆ ನಿಧಾನವಾಗಿ ನೆಗೆಟಿವ್‌ (Negative) ಪರಿಣಾಮಗಳು ಆಗುತ್ತಲೇ ಇರುತ್ತವೆ. ಅಂತಹ ತಪ್ಪುಗಳನ್ನು ತಿಳಿದುಕೊಂಡು ಸುಧಾರಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಇನ್ನಷ್ಟು ಅನಾಹುತಗಳಾಗಬಹುದು. ಆಹಾರ ಸೇವನೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪುಗಳು ಯಾವುವು ನೋಡಿಕೊಳ್ಳಿ.

•    ಬಾಯಿ ಮೇಲೆ ನಿಯಂತ್ರಣ ಇಲ್ಲದಿರುವುದು (Control Over Food)
ಬಾಯಿಯ ರುಚಿಗಾಗಿ ಆಹಾರ ಸೇವನೆ ಮಾಡುವುದು ಸರಿ. ಆದರೆ, ಕೆಲವೊಂದು ಬಾರಿ ನಾವು ಆಹಾರದ ವಿಚಾರದಲ್ಲಿ ಮಿದುಳಿನ ಮಾತನ್ನೂ ಕೇಳಿಸಿಕೊಳ್ಳಬೇಕಾಗುತ್ತದೆ. ಪದೇ ಪದೇ ತಿನ್ನುವುದು ಕೇವಲ ಅಭ್ಯಾಸವಷ್ಟೆ. ಪ್ರತಿದಿನ ನಿಗದಿತ ಸಮಯದಲ್ಲಿ ಊಟ-ತಿಂಡಿಯ ಅಭ್ಯಾಸ ಮಾಡಿಕೊಳ್ಳಬೇಕು. ಯಾವಾಗೆಂದರೆ ಆಗ ಬಾಯಿಗೆ ಏನಾದರೂ ಹಾಕಿಕೊಳ್ಳುವ ಅಭ್ಯಾಸವಿದ್ದರೆ ಬಿಡಬೇಕು. ಈ ಮೂಲಕ ಹಸಿವಿನ ಮೇಲೆ ನಿಯಂತ್ರಣ ಮಾಡಿಕೊಳ್ಳಬಹುದು.

•    ಕಟ್ಟುನಿಟ್ಟಿನ ಡಯೆಟ್‌ (Strict Diet)
ನೀವು ಕಟ್ಟುನಿಟ್ಟಿನ ಡಯೆಟ್‌ ಅನುಸರಿಸುವವರ ಸಾಲಿಗೆ ಸೇರಿದ್ದೀರಾ? ಹಾಗಿದ್ದರೆ ಈ ಮಾತನ್ನು ನೆನಪಿಟ್ಟುಕೊಳ್ಳಿ. ಕಟ್ಟುನಿಟ್ಟಿನ ಡಯೆಟ್‌ ದೀರ್ಘಾವಧಿ ಪರಿಹಾರವಲ್ಲ. ಹಾರ್ವರ್ಡ್‌ ಹೆಲ್ತ್‌ (Harvard Health) ಸಂಸ್ಥೆಯ ಡಯೆಟಿಷಿಯನ್‌ ಕ್ಯಾಥಿ ಮೈಕನಸ್‌ ಅವರ ಪ್ರಕಾರ, ದೀರ್ಘಾವಧಿ ಆರೋಗ್ಯಕ್ಕೆ ಕಟ್ಟುನಿಟ್ಟಿನ ಡಯೆಟ್‌ ಒಳ್ಳೆಯದಲ್ಲ. ಈ ಕುರಿತು ನೀವೇ ಸೂಕ್ತವಾಗಿ ಚಿಂತನೆ ಮಾಡಬೇಕು. ಸಮತೋಲಿತ ಆಹಾರ ಸೇವನೆ ಮಾಡುವುದು ಉತ್ತಮ.

ಚಾಕೋಲೇಟ್‌ನಿಂದ ಬೆಳ್ಳುಳ್ಳಿವರೆಗೆ.. ಆಹಾರದ ಮೂಲಕ Anxiety ನಿವಾರಿಸಿಕೊಳ್ಳಿ

•    ಸಂಪೂರ್ಣವಾಗಿ ಕೊಬ್ಬಿನ (Fat) ಸೇವನೆ ವರ್ಜಿಸುವುದು
ಅಧಿಕ ಕೊಬ್ಬಿನ ಆಹಾರ ತಿನ್ನುವುದರಿಂದ ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ. ಆದರೆ, ಆರೋಗ್ಯಯುತ ಕೊಬ್ಬು ದೇಹಕ್ಕೆ ಅಗತ್ಯ. ಹೀಗಾಗಿ, ಸಂಪೂರ್ಣವಾಗಿ ಕೊಬ್ಬಿನ ಅಂಶದ ಸೇವನೆಯನ್ನು ವರ್ಜಿಸುವುದು ಸೂಕ್ತವಲ್ಲ. ಅದನ್ನು ನಿಯಮಿತವಾಗಿ ಸೇವನೆ ಮಾಡಬೇಕು. ಬಾದಾಮಿ, ಬೀಜಗಳು, ಆಲಿವ್‌ ಎಣ್ಣೆ, ಸಾಸಿವೆ ಎಣ್ಣೆ, ತುಪ್ಪ ಇಂತಹ ಅನೇಕ ನೈಸರ್ಗಿಕ ಆಹಾರ ಪದಾರ್ಥಗಳಲ್ಲಿರುವ ಉತ್ತಮ ಕೊಬ್ಬು ದೇಹಕ್ಕೆ ಅಗತ್ಯವಿರುತ್ತದೆ. ಇವುಗಳನ್ನು ದಿನವೂ ನಿಯಮಿತವಾಗಿ ಸೇವನೆ ಮಾಡಬೇಕು. ಇವುಗಳಲ್ಲಿ ಅನ್‌ ಸ್ಯಾಚುರೇಟೆಡ್‌ ಕೊಬ್ಬು ಇರುತ್ತದೆ. ಇದು ನಮ್ಮ ಹೃದಯ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಪೂರಕವಾಗುತ್ತದೆ. 

•    ಸಿಹಿಯಿಂದ (Sugar) ದೂರ ಇರುವುದು
ಸಕ್ಕರೆ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ, ದೇಹಕ್ಕೆ ಸ್ವಲ್ಪವಾದರೂ ಸಿಹಿಯ ಅಂಶ ಬೇಕಾಗುತ್ತದೆ. ಹೀಗಾಗಿ, ಎಲ್ಲ ರೀತಿಯ ಸಿಹಿಯಿಂದ ದೂರವಿರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದು ಹೇಗೆ ಅಪಾಯವೋ ಹಾಗೆಯೇ ಸಕ್ಕರೆ ಮಟ್ಟ ಕಡಿಮೆಯಾಗುವುದೂ ಅಷ್ಟೇ ಅಪಾಯ. ಇದಕ್ಕೆ ಪರಿಹಾರವೆಂದರೆ, ದಿನವೂ ಒಂದು ಚಮಚ ಬೆಲ್ಲ ಸೇವಿಸಬೇಕು. ಇದರಿಂದ ದೇಹಕ್ಕೆ ಕಬ್ಬಿಣದ ಅಂಶ ದೊರೆಯುವ ಜತೆಗೆ ಸಕ್ಕರೆ ಅಂಶವೂ ಸಿಗುತ್ತದೆ. 

Ayurveda Tips: ನೀವು ದಿನಕ್ಕೆ ಎಷ್ಟು ಬಾರಿ ತಿನ್ನುತ್ತೀರಿ? ಆಯುರ್ವೇದ ಏನು ಹೇಳುತ್ತೆ ನೋಡಿ...

•    ಮಧ್ಯರಾತ್ರಿಯ ಸ್ನ್ಯಾಕ್ಸ್‌ (Midnight Snacks)
ಇದು ಧಾರಾವಾಹಿ ಜಮಾನಾ. ಲೇಟೆಸ್ಟ್‌ ವೆಬ್‌ ಸೀರೀಸ್‌ ಅನ್ನು ಮಧ್ಯರಾತ್ರಿಯವರೆಗೂ ನೋಡುವವರು ಹೆಚ್ಚಾಗಿದ್ದಾರೆ. ಬಳಿಕ ಮಲಗುವ ಸಮಯದಲ್ಲಿ ಹಸಿವಾದಾಗ ಏನಾದರೂ ತಿನ್ನುತ್ತಾರೆ. ಸಾಮಾನ್ಯವಾಗಿ ಆ ಸಮಯದಲ್ಲಿ ಬಿಸ್ಕತ್‌, ಬ್ರೆಡ್‌, ಬನ್‌, ಇಂಥವುಗಳನ್ನು ಸೇವಿಸುವುದು ಹೆಚ್ಚು. ಮಧ್ಯರಾತ್ರಿಯಲ್ಲಿ ಮೈದಾದಿಂದ ಮಾಡಿದ ಆಹಾರ ಸೇವನೆ ಮಾಡುವುದು ಅತ್ಯಂತ ಅಪಾಯಕಾರಿ. ಇದು ಜೀರ್ಣ ವ್ಯವಸ್ಥೆಯನ್ನು ಹಾಳು ಮಾಡುವ ಜತೆಗೆ ರಕ್ತದ ಸಕ್ಕರೆ ಮಟ್ಟದ ಮೇಲೆ ಭಾರೀ ಪರಿಣಾಮ ಬೀರುತ್ತದೆ.

•    ತಾಜಾ ತರಕಾರಿ (Fresh Vegetables) ಸೇವಿಸದಿರುವುದು
ತರಕಾರಿಗಳನ್ನು ತಂದು ವಾರಗಟ್ಟಲೆ ಫ್ರಿಜ್‌ ನಲ್ಲಿರಿಸಿ ಸೇವಿಸುವುದು ಮಾಮೂಲು. ಆದರೆ, ಹೀಗೆ ಮಾಡುವುದರಿಂದ ತರಕಾರಿಯಲ್ಲಿರುವ ಪೌಷ್ಟಿಕಾಂಶ ಕಡಿಮೆಯಾಗುತ್ತದೆ. 

•    ಒಂದೇ ರೀತಿಯ ಆಹಾರ (Same Food)
ಆಹಾರದಲ್ಲಿ ವಿಭಿನ್ನತೆ ಇರಬೇಕು. ಒಂದೇ ರೀತಿಯ ಆಹಾರ ಸೇವನೆ ಮಾಡುವುದರಿಂದ ಒಂದೇ ರೀತಿಯ ಪೌಷ್ಟಿಕಾಂಶ ದೊರೆಯುತ್ತದೆ, ಉಳಿದ ಅಂಶಗಳ ಕೊರತೆಯಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳಿ.

•    ವರ್ಕ್‌ ಔಟ್‌ (Workout) ಮಾಡಿದ ಬಳಿಕ ಸಿಕ್ಕಾಪಟ್ಟೆ ತಿನ್ನುವುದು
ವ್ಯಾಯಾಮ ಮಾಡಿದ ಬಳಿಕ ಹಸಿವಾಗುತ್ತದೆ. ಆದರೆ, ವ್ಯಾಯಾಮ ಮಾಡಿದ ಬಳಿಕ ಹೆಚ್ಚು ತಿನ್ನುವುದರಿಂದ ಕಳೆದುಕೊಂಡ ಕ್ಯಾಲರಿ (Calory) ಮತ್ತೆ ಸೇರ್ಪಡೆಯಾಗಿ ಏನೂ ಪ್ರಯೋಜನವಾಗುವುದಿಲ್ಲ. 

click me!