ಈ ತಂಪಾಗಿರುವ ವಾತಾವರಣದಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ಗಳು ಹೆಚ್ಚಾಗಿ ಇರುವುದರಿಂದ ಕಿವಿಗೆ ಸಂಬಂಧಪಟ್ಟ ಇನ್ಫೆಕ್ಷನ್‌ಗಳು ಕಾಣಿಸಿಕೊಳ್ಳುತ್ತವೆ. ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ರೋಗಿಗಳು ಹೆಚ್ಚಾಗಿದ್ದಾರೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಈ ಸಮಸ್ಯೆ ಮಕ್ಕಳನ್ನು ಹೆಚ್ಚು ಕಾಡುವ ಅಪಾಯವಿದೆ.
ಚಳಿಗಾಲದಲ್ಲಿ (Winter) ಆರೋಗ್ಯ ಸಮಸ್ಯೆ ಹೆಚ್ಚು. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಮ್ಮು, ಶೀತ, ಜ್ವರದ ಸಮಸ್ಯೆ ಎಲ್ಲರಲ್ಲಿಯೂ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಇದನ್ನು ಹೊರತುಪಡಿಸಿ ಇನ್ನೊಂದು ದೊಡ್ಡ ಸಮಸ್ಯೆ ಎದುರಾಗಬಹುದು, ಅದೇ ಕಿವುಡುತನ.
ತಜ್ಞರು ಹೇಳುವ ಪ್ರಕಾರ ಕಿವಿಯಲ್ಲಿನ ಇನ್ಫೆಕ್ಷನ್ (Infection) ಎಲ್ಲ ವಯೋಮಾನದವರಲ್ಲಿಯು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಮಕ್ಕಳು ಹಾಗೂ ಯುವಕರಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಯಾವುದೇ ಆರೋಗ್ಯ ಸಮಸ್ಯೆಗಳು ಹಾಗೂ ಗಾಯಗಳು ಚಳಿಗಾಲದಲ್ಲಿ ಕಾಣಿಸಿಕೊಂಡರೆ ಅದು ವಾಸಿಯಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಈ ಸಮಸ್ಯೆಯೂ ಕೂಡ ಚಳಿಗಾಲದಲ್ಲಿ ಹೆಚ್ಚಾಗಿ ಕಂಡು ಬರುವುದರ ಜೊತೆಗೆ ಹೆಚ್ಚು ಸಮಯ ಮುಂದುವರಿಯುವ ಸಾಧ್ಯತೆ ಇದೆ.
ಈಗ ತಂಪಾದ ವಾತಾವರಣ ಇರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ, ಇದರಿಂದಾಗಿ ಬ್ಯಾಕ್ಟೀರಿಯಾಗಳು ದೇಹಕ್ಕೆ ಸುಲಭವಾಗಿ ಆಕ್ರಮಣ ಮಾಡಿ ಬಿಡುತ್ತದೆ. ಇದರಿಂದಾಗಿ ಕಿವಿಯಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತದೆ.
ಗಂಟಲು ನೋವು ಹಾಗೂ ಉಸಿರಾಟದ ಸೋಂಕಿನಿಂದ ಈ ತೊಂದರೆ ಕಾಣಿಸಿಕೊಳ್ಳುತ್ತದೆ.
ಈ ಕಿವಿಯ ಸೋಂಕು ಗಂಟಲು ಹಾಗು ಮೂಗಿನ ಸೋಂಕಿಗೆ ಸಂಬಂಧ ಪಟ್ಟಿರುತ್ತದೆ.
ಒಣ ವಾತಾವರಣ ಕೂಡ ಸಮಸ್ಯೆ ಹೆಚ್ಚಿಸುತ್ತದೆ.
ಚಳಿಗಾಲದಲ್ಲಿ ತಂಪು ವಾತಾವರಣ ಇರುವ ಕಾರಣ ರಕ್ತ ಪರಿಚಲನೆ ಕಡಿಮೆ ಇರುತ್ತದೆ ಇದರಿಂದಾಗಿ ಕಿವಿಗೆ ಸಂಬಂಧಿಸಿದ ಸೋಂಕುಗಳು ಹೆಚ್ಚಿರುತ್ತವೆ.
ಈ ರೋಗದ ಲಕ್ಷಣಗಳು (Symptoms)
ಕಿವಿ ನೋವು, ತಲೆ ತಿರುಗುವಿಕೆ, ತಲೆನೋವು ಹಾಗು ಕಿವಿಯಲ್ಲಿ ಊತ ಕಾಣಿಸಿಕೊಳ್ಳುವುದು.
ಕಿವಿಯಲ್ಲಿ ಸ್ರಾವ ಕಾಣಿಸಿಕೊಳ್ಳುವುದು ಇನ್ನೂ ಮುಂದುವರೆದು ಕಿವಿ ಕೇಳದೆ ಇರಬಹುದು. ಆದರೆ ಇದು ತಾತ್ಕಾಲಿಕವಾಗಿ ಕಂಡುಬರುವ ಸಮಸ್ಯೆ.
ವೈದ್ಯರೊಂದಿಗೆ (Doctor) ಸಮಾಲೋಚನೆ ನಡೆಸಿ ಆಂಟೀಬಯೋಟಿಕ್ಸ್ (Antibiotics) ಹಾಗೂ ನೋವಿನ ಮಾತ್ರೆಗಳನ್ನು ತೆಗೆದುಕೊಳ್ಳಬಹುದು.
ಹೀಟಿಂಗ್ ಪ್ಯಾಡ್ ಅಥವಾ ಐಸ್ ಪ್ಯಾಕ್‌ಗಳನ್ನು ನೋವಿನ ಭಾಗದಲ್ಲಿ ಇಟ್ಟುಕೊಳ್ಳುವುದರಿಂದ ನೋವು ಕಡಿಮೆಯಾಗುತ್ತದೆ.
ಕಿವಿಯನ್ನು ಯಾವಾಗಲೂ ಸ್ವಚ್ಛವಾಗಿರುವಂತೆ (Clean) ನೋಡಿಕೊಳ್ಳಿ ಹಾಗೂ ಕಿವಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಇದರಿಂದ ರೋಗಾಣುಗಳು ನೆಲೆಸುವ ಅವಕಾಶವಿರುವುದರಿಂದ ನೋವು ಹೆಚ್ಚಾಗುವ ಸಾಧ್ಯತೆ ಹೆಚ್ಚು.
ಕಿವಿಯನ್ನು ಬೆಚ್ಚಗೆ (Warm) ಇಟ್ಟುಕೊಳ್ಳುವುದು ಒಳ್ಳೆಯದು ಉದಾಹರಣೆಗೆ ಕಿವಿ ಮುಚ್ಚುವ ಹಾಗೆ ಹ್ಯಾಟ್ ಅಥವಾ ಟೊಪ್ಪಿಯನ್ನು ಧರಿಸುವುದು. ಕಿವಿಗೆ ಸ್ಕಾರ್ಫ್ ಕಟ್ಟಿಕೊಳ್ಳುವುದು ಹೀಗೆ ಕಿವಿಯಲ್ಲಿ ಹೆಚ್ಚು ಗಾಳಿ ಹೋಗದಂತೆ ನೋಡಿಕೊಳ್ಳಿ.
ಯಾವುದೇ ಕಾರಣಕ್ಕೂ ಕಿವಿಗೆ ಹತ್ತಿ (Cotton) ಇಟ್ಟುಕೊಳ್ಳಬೇಡಿ ಇದರಿಂದ ಇನ್ಫೆಕ್ಷನ್‌ನ ಸಾಧ್ಯತೆ ಹೆಚ್ಚಿರುತ್ತದೆ.
ಧೂಳಿರುವ ಪ್ರದೇಶಕ್ಕೆ ಹೋಗುದನ್ನು ಆದಷ್ಟು ನಿಲ್ಲಿಸಿಬಿಡುವುದು ಒಳಿತು.
ಸಿಗರೇಟು ಸೇದುವುದರಿಂದ ದೂರ ಉಳಿಯುವುದು ಒಳ್ಳೆಯದು. ಯಾಕಂದ್ರೆ ಧೂಮಪಾನದ (Smoking) ಹೊಗೆಯು ಗಾಳಿಯೊಂದಿಗೆ ಸೇರಿ ಕಿವಿಯೊಳಗೆ ಹೋಗಬಹುದು. ಇದು ಕಿರಿಕಿರಿ ಉಂಟು ಮಾಡುತ್ತದೆ.
ಕಿವಿಗೆ ಸ್ಕಾರ್ಫ್ ಅಥವಾ ಇಯರ್ ಮಫ್ ಧರರಿಸುವುದರಿಂದ ಕಿವಿಗೆ ಸಂಬಂಧಪಟ್ಟ ತೊಂದರೆಗಳಿಂದ ದೂರ ಉಳಿಯುವ ಜೊತೆಗೆ ಶೀತ, ಗಂಟಲುನೊವು, ಕೆಮ್ಮು ಇಂತಹ ಸಮಸ್ಯೆಗಳನ್ನು ಕೂಡಾ ನಿವಾರಿಸಿಕೊಳ್ಳಬಹುದು.
ರೋಗ ಬಂದ ಮೇಲೆ ಅದಕ್ಕೆ ಚಿಕಿತ್ಸೆ ಪಡೆಯುವುದಕ್ಕಿಂದ ಆದಷ್ಟರ ಮಟ್ಟಿಗೆ ರೋಗ ಬರದೇ ಇರುವಂತೆ ನೋಡಿಕೊಳ್ಳುವುದು ಒಳ್ಳೆಯದಲ್ಲವೇ? ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.