Health Tips: ಅಡುಗೆಗೆ ಬಳಸೋ ಪಾತ್ರೆಗಳ ಬಗ್ಗೆ ಎಚ್ಚರವಿರಲಿ

By Suvarna NewsFirst Published Dec 11, 2021, 4:27 PM IST
Highlights

ದೋಸೆ ಹೊಯ್ಯಲು ನಾನ್ ಸ್ಟಿಕ್ ಕಾವಲಿ ಬಳಸುವುದರಿಂದ ದೋಸೆ ರುಚಿಕರವಾಗಬಲ್ಲದೆ ಹೊರತು ದೇಹಕ್ಕೆ ಹಾನಿಯೇ ಆಗುತ್ತದೆ ಎನ್ನುವುದನ್ನು ಅರಿತಿರಿ. ಯಾವುದಾದರೂ ಪಾತ್ರೆಗಳಲ್ಲಿ ಆಹಾರ ತಯಾರಿಸುವಂತಿಲ್ಲ. ಏಕೆಂದರೆ, ಆಹಾರ ಶುದ್ಧವಾಗಿರಲು ಅದನ್ನು ಯಾವುದರಲ್ಲಿ ತಯಾರಿಸುತ್ತೇವೆ ಎನ್ನುವುದು ಮುಖ್ಯ.

ಆಹಾರ (food) ನೀಡುವುದು ಪ್ರತಿ ಮಹಿಳೆಯರ ಆದ್ಯತೆ. ಬೆಳೆಯುತ್ತಿರುವ ಮಕ್ಕಳ ಬಗೆಗಂತೂ ಆಕೆ ವಿಶೇಷ ಕಾಳಜಿ ವಹಿಸುತ್ತಾಳೆ. ಪೌಷ್ಟಿಕಾಂಶಭರಿತ (nutrition) ವಾಗಿರುವ, ಶುದ್ಧವಾಗಿರುವ ಆಹಾರ ನೀಡುವುದು ಅವಳಿಗೆ ನೆಮ್ಮದಿ ನೀಡುತ್ತದೆ. ಮನೆಯ ಆಹಾರ (home food) ವೆಂದರೆ ಪರಿಶುದ್ಧವಾಗಿರುವಂಥದ್ದು, ಯಾವುದೇ ವಿಷಕಾರಿ ಅಂಶ ಸೇರ್ಪಡೆಯಾಗದೆ ಇರುವಂಥದ್ದು ಎನ್ನುವುದು ಸಾಮಾನ್ಯ ನಂಬಿಕೆ. ಆದರೆ, ಅಡುಗೆ ತಯಾರಿಸಲು ಎಂತಹ ಪಾತ್ರೆ (cookware) ಗಳನ್ನು ಬಳಸುತ್ತೇವೆ ಎನ್ನುವುದು ಸಹ ಮುಖ್ಯವಾಗುತ್ತದೆ.

ನಾನ್ ಸ್ಟಿಕ್ (non stick) ಹಲವು ಸಮಯದ ಹಿಂದೆ ನಾನ್ ಸ್ಟಿಕ್ ಹಾಗೂ ಟೆಫ್ಲಾನ್ ಪಾತ್ರೆಗಳ ಫ್ಯಾಷನ್ ಹೆಚ್ಚಾಗಿತ್ತು. ಆದರೆ, ಈ ಪಾತ್ರೆಗಳು ಹಾನಿಕರ ಎನ್ನುವುದು ಇತ್ತೀಚಿನ ದಿನಗಳಲ್ಲಿ ಅರಿವಿಗೆ ಬಂದಿದೆ. ಟೆಫ್ಲಾನ್ ಪಾತ್ರೆಗಳಿಗೆ ಪಿಟಿಎಫ್ ಒ (ಪಾಲಿಟೆಟ್ರಾಫ್ಲೂರೋಇಥೆಲೀನ್) ಎನ್ನುವ ಕೋಟಿಂಗ್ ಮಾಡಲಾಗುತ್ತದೆ. ಇದು ಪ್ಲಾಸ್ಟಿಕ್ ಪಾಲಿಮರ್. ಇದನ್ನು ಕಾಯಿಸಿದಾಗ ವಿಷಕಾರಿ (toxic) ಅಂಶ ಬಿಡುಗಡೆಯಾಗುತ್ತದೆ. ಈ ವಿಷಕಾರಿ ಅಂಶದಿಂದ ಪಾಲಿಮರ್ ಫ್ಯೂಮ್ ಫೀವರ್ ಅಥವಾ ಟೆಫ್ಲಾನ್ ಫ್ಲೂ ಎನ್ನುವ ಸಮಸ್ಯೆ ಉಂಟಾಗುತ್ತದೆ. 
ಪರ್ ಫ್ಲೂರೋಆಕ್ಟಾನೊಯಿಕ್ ಆಸಿಡ್ ಎನ್ನುವ ಅಂಶವೂ ಇದರಲ್ಲಿದ್ದು,  ಇದು ಸ್ತನ, ಪ್ರೊಸ್ಟೇಟ್, ಗರ್ಭಕೋಶದ ಕ್ಯಾನ್ಸರ್ ತರಬಲ್ಲದು. ಈ ಕೆಮಿಕಲ್ (chemical) ಅಂಶವಿರದ ನಾನ್ ಸ್ಟಿಕ್ ಕುಕ್ ವೇರ್ ಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇವುಗಳ ಕೋಟಿಂಗ್ ನಲ್ಲಿ ಚಿಕ್ಕದೊಂದು ಬ್ರೇಕ್ (break) ಆದಾಕ್ಷಣ ಬಳಕೆ ನಿಲ್ಲಿಸಬೇಕು.

Hot water effect : ಬಿಸಿ ನೀರನ್ನು ಮತ್ತೆ ಮತ್ತೆ ಕುಡಿಯುತ್ತೀರಾ? ಜಾಗರೂಕರಾಗಿರಿ

ಅಲ್ಯೂಮಿನಿಯಂ: ಗ್ರಾಮೀಣ ಪ್ರದೇಶಗಳಲ್ಲಿ ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಅತ್ಯಂತ ಸಹಜ. ಅಲ್ಯೂಮಿನಿಯಂ ಪಾತ್ರೆಗಳು ಜನಪ್ರಿಯವೂ ಹೌದು. ಇವು ಹಗುರವಾಗಿದ್ದು, ಬಾಳಿಕೆ ಬರುತ್ತವೆ ಎನ್ನುವುದೇನೋ ನಿಜ. ಆದರೆ, ಇದೊಂದು ನ್ಯೂರೋಟಾಕ್ಸಿಕ್ ಲೋಹ. ಅಂದರೆ, ಅಲ್ಯೂಮಿನಿಯಂ ಪಾತ್ರೆಗಳ ಅಧಿಕ ಬಳಕೆಯಿಂದ ನರವ್ಯೂಹ (nervous system) ಕ್ಕೆ ಹಾನಿಯಾಗಬಹುದು. ನರಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅಧ್ಯಯನಗಳ ಪ್ರಕಾರ, ಅಲ್ಜೀಮರ್ಸ್ ಗೂ ಇದು ಕಾರಣವಾಗಬಲ್ಲದು.

ತಾಮ್ರ (copper) ಹಾಗೂ ಹಿತ್ತಾಳೆ (brass): ಹಿಂದಿನಿಂದಲೂ ಬಂದ ಸಂಪ್ರದಾಯವೆಂದು ತಾಮ್ರ ಹಾಗೂ ಹಿತ್ತಾಳೆ ಪಾತ್ರೆಗಳಲ್ಲಿ ಅಡುಗೆ ಮಾಡುವ ಮುನ್ನ ಎಚ್ಚರ. ಈ ಪಾತ್ರೆಗಳಲ್ಲಿ ಉಪ್ಪು-ಹುಳಿ ಬೆರೆಸದ ಆಹಾರವನ್ನು ಮಾತ್ರ ಸಿದ್ಧಪಡಿಸಬಹುದು. ತಾಮ್ರದ ಪಾತ್ರೆಗಳ ಕೋಟಿಂಗ್ ನಲ್ಲಿ ನಿಕ್ಕೆಲ್ ಅಂಶ ಇರುತ್ತದೆ. ಇದು ಸಹ ಅಪಾಯಕಾರಿ ಲೋಹ. ಬಿಸಿ ಮಾಡಿದಾಗ ಹಿತ್ತಾಳೆ ಸಹ ಉಪ್ಪು ಮತ್ತು ಹುಳಿಯ ಅಂಶಗಳಿಗೆ ಪ್ರತಿಕ್ರಿಯಿಸಿ ವಿಷಕಾರಿ ಅಂಶವನ್ನು ಬಿಡುಗಡೆ ಮಾಡುತ್ತದೆ.

ಕಳಪೆ ಸ್ಟೀಲ್ (steel): ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳ ಜನಪ್ರಿಯತೆಯನ್ನಂತೂ ಹೇಳುವುದೇ ಬೇಡ. ಉಪ್ಪು ಮತ್ತು ಹುಳಿಯಂಶದೊಂದಿಗೆ ಸ್ಟೀಲ್ ಪಾತ್ರೆಗಳು ವರ್ತಿಸುವುದಿಲ್ಲವಾದರೂ ಕಳಪೆ ದರ್ಜೆಯ ಸ್ಟೀಲ್ ಪಾತ್ರೆಗಳ ಬಳಕೆ ಸಲ್ಲದು. ಕ್ರೋಮಿಯಂ, ನಿಕ್ಕೆಲ್, ಸಿಲಿಕಾನ್ ಹಾಗೂ ಕಾರ್ಬನ್ ಅಂಶಗಳ ಹದವಾದ ಸಂಯೋಜನೆಯಿಂದ ಸ್ಟೀಲ್ ಪಾತ್ರೆಗಳನ್ನು ತಯಾರಿಸಲಾಗುತ್ತದೆ. ಆದರೆ, ಸೂಕ್ತ ವಿಧಾನದಲ್ಲಿ ತಯಾರಿಸದೆ ಇದ್ದಾಗ ಈ ಪಾತ್ರೆಗಳು ಹಾನಿಕರವಾಗುತ್ತವೆ. ಉತ್ತಮ ಗುಣಮಟ್ಟದ ಪಾತ್ರೆಗಳಷ್ಟೇ ಬಳಕೆಗೆ ಯೋಗ್ಯ. 

Egg Benefits : ಚಳಿಗಾಲದಲ್ಲಿ ಮೊಟ್ಟೆ ತಿನ್ನೊದ್ರಿಂದ ಆರೋಗ್ಯಕ್ಕೆ ಲಾಭ

ಮಿಕ್ಸ್ ಡ್ ಸೆರಾಮಿಕ್ ಕೋಟೆಡ್ (ceramic) ಪಾತ್ರೆಗಳು: ಶೇ.100ರಷ್ಟು ಶುದ್ಧವಾಗಿರುವ ಸೆರಾಮಿಕ್ ಪಾತ್ರೆಗಳನ್ನು ಬಳಸುತ್ತೀರಿ ಎಂದಾದರೆ ಅತಿ ಉತ್ತಮ. ಏಕೆಂದರೆ, ಇವು ನೈಸರ್ಗಿಕ ಹಾಗೂ  ಸುರಕ್ಷಿತ.  ಆದರೆ, ಇವು ದುಬಾರಿ (costly) ಯಾಗಿದ್ದು ಜನಸಾಮಾನ್ಯರ ಕೈಗೆಟುವುದು ಸ್ವಲ್ಪ ಕಷ್ಟ. ಜತೆಗೆ, ಎಲ್ಲ ಸೆರಾಮಿಕ್ ಕೋಟೆಡ್ ಪಾತ್ರೆಗಳು ಶೇ.100ರಷ್ಟು ಶುದ್ಧವಾಗಿರುವುದಿಲ್ಲ. ಇವುಗಳ ಕೋಟಿಂಗ್ ಸೀಸ ಹಾಗೂ ಕ್ಯಾಡ್ಮಿಯಂ ಅಂಶವನ್ನು ಒಳಗೊಂಡಿರುತ್ತದೆ. ಈ ಲೋಹಗಳು ಅದೆಷ್ಟು ಹಾನಿಕಾರಕ ಎನ್ನುವುದು ತಿಳಿದೇ ಇದೆ. ಇಂತಹ ಸೆರಾಮಿಕ್ ಪಾತ್ರೆಗಳನ್ನು ಕೆಲವು ತಿಂಗಳು ಮಾತ್ರ ಬಳಕೆ ಮಾಡಬೇಕು. ನಂತರ ಇವುಗಳಿಂದ ಸೀಸ ಹಾಗೂ ಕ್ಯಾಡ್ಮಿಯಂ ಅಂಶ ಬಿಡುಗಡೆಯಾಗುತ್ತವೆ. ಒಂದೊಮ್ಮೆ, ಸೆರಾಮಿಕ್ ಪಾತ್ರೆಗಳ ಕೋಟಿಂಗ್ ಸೀಸರಹಿತವಾಗಿದ್ದರೂ ಇನ್ನೊಂದು ಹಂತದಲ್ಲಿ ಅಲ್ಯೂಮಿನಿಯಂ ಬಳಕೆಯಾಗಿರುತ್ತದೆ. ಬೇರೆ ಬೇರೆ ಕೋಟಿಂಗ್ ಹೊಂದಿರುವ ಇಂತಹ ಸೆರಾಮಿಕ್ ಪಾತ್ರೆಗಳನ್ನು ಅಡುಗೆಗೆ ಬಳಸಬಾರದು.  

ಹಾಗಿದ್ದರೆ ಯಾವುದು ಸೂಕ್ತ?: ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಸುರಕ್ಷಿತ ವಿಧಾನ. ಉತ್ತಮ ಗುಣಮಟ್ಟದ ಕಬ್ಬಿಣದ ಪಾತ್ರೆಗಳನ್ನೇ ಬಳಸಬೇಕು. ಸೆರಾಮಿಕ್ ಪಾತ್ರೆಗಳು ಶೇ.100ರಷ್ಟು ಶುದ್ಧವಾಗಿದ್ದರೆ ಬಳಕೆಗೆ ಯೋಗ್ಯ. ಇನ್ನು, ಗ್ಲಾಸ್ ಪಾತ್ರೆಗಳೂ ಹಾನಿಕಾರಕವಲ್ಲ. ಇವು ಯಾವತ್ತೂ ಹಾನಿಕಾರಕ ಅಂಶಗಳನ್ನು ಬಿಡುಗಡೆ ಮಾಡುವುದಿಲ್ಲ. ಉಪ್ಪು-ಹುಳಿ ಅಂಶಗಳಿಗೆ ಪ್ರತಿಕ್ರಿಯಿಸುವುದಿಲ್ಲ.

click me!