ಅಡುಗೆ ಮನೆಯ ಹೊಸ ಅತಿಥಿ ‘ಬಾಕಾಹು’..!

By Kannadaprabha NewsFirst Published Jul 19, 2021, 10:34 AM IST
Highlights

* ಕೋವಿಡ್‌ನಿಂದ ಬಾಳೆಗೆ ಬೆಲೆ ಇಲ್ಲದ ವೇಳೆ ರೈತರ ಕೈಹಿಡಿದ ಆವಿಷ್ಕಾರ
* ಎಲ್ಲೆಡೆ ಜನಪ್ರಿಯಗೊಳ್ಳುತ್ತಿದೆ ಬಾಳೆ ಕಾಯಿ ಹುಡಿ 
* ರಾಜ್ಯದಲ್ಲಿ ಮನೆ ಮಾತಾಗುವ ಹಂತ ತಲುಪಿದ ಬಾಕಾಹು

ರಾಘವೇಂದ್ರ ಅಗ್ನಿಹೋತ್ರಿ

ಮಂಗಳೂರು(ಜು.19): ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಮಲೆನಾಡಿನಲ್ಲಿ ಈಗ ಬಾಕಾಹು ಅಂದರೆ ಬಾಳೆಕಾಯಿ ಹುಡಿಯದ್ದೇ ಚರ್ಚೆ, ಅದರದ್ದೇ ಖಾದ್ಯ ಪದಾರ್ಥಗಳು. ಕೋವಿಡ್‌ ಕಾಲದ ಹೊಸ ಅತಿಥಿಯಾಗಿ ಈಗ ಮನೆ ಮನೆಯ ಅಡುಗೆಮನೆಗಳಲ್ಲಿ ಸ್ಥಾನ ಪಡೆದು, ರೈತರ ಆದಾಯಕ್ಕೆ ಆಧಾರವಾಗಿ, ಅಡುಗೆ ಮನೆಯಲ್ಲಿ ವಿನೂತನ ಕ್ರಾಂತಿಗೆ ನಾಂದಿ ಹಾಡಿದೆ ಹುಡಿ.

ಕೋವಿಡ್‌ ದುರಿತ ಕಾಲ ಹೊಸ ಹೊಸ ಅನ್ವೇಷಣೆಗಳಿಗೆ ಅವಕಾಶ ಕಲ್ಪಿಸಿದೆ. ಇದಕ್ಕೆ ಕರಾವಳಿ ಮತ್ತು ಮಲೆನಾಡಿನ ರೈತರೂ ಹೊರತಾಗಿಲ್ಲ. ರೈತರು ತಮ್ಮ ಉತ್ಪನ್ನಗಳಿಗೆ ಬೆಲೆಯಿಲ್ಲದೆ ಎಸೆಯುವ ಬದಲು ಮೌಲ್ಯವರ್ಧನೆ ಮಾಡಿದರೆ ಆರ್ಥಿಕ ಉತ್ತೇಜನ ಪಡೆಯಲು ಸಾಧ್ಯವೆಂಬುದಕ್ಕೆ ಇತ್ತೀಚಿನ ಸೇರ್ಪಡೆ ಬಾಳೆಕಾಯಿ ಹುಡಿ.

ಬಾಳೆಕಾಯಿಯನ್ನು ಇಷ್ಟರವರೆಗೆ ಚಿಫ್ಸ್‌, ಇನ್ನೂ ಸ್ವಲ್ಪ ಪದಾರ್ಥಕ್ಕಷ್ಟೆ ಬಳಸಲಾಗುತ್ತಿತ್ತು. ಉಳಿದದ್ದು ಹಣ್ಣಿನ ರೂಪದಲ್ಲಿ ಮಾರಾಟವಾಗುತ್ತಿತ್ತು. ಆದರೆ ಈಗ ಬಾಕಾಹು ರಾಜ್ಯದಲ್ಲಿ ಮನೆ ಮಾತಾಗುವ ಹಂತ ತಲುಪಿದೆ. ಕಿರು ಉದ್ಯಮ ಸ್ವರೂಪವನ್ನೂ ಪಡೆದಿರುವುದು ಇದರ ಜನಪ್ರಿಯತೆಗೆ ಸಾಕ್ಷಿ. ಪೋಷಕಾಂಶಗಳಿಂದ ಕೂಡಿದ ಈ ಹುಡಿ ಗೋದಿ ಮತ್ತು ಮೈದಾ ಹಿಟ್ಟಿಗೆ ಪರ್ಯಾಯವಾಗಿ ಬಳಕೆಯಾಗುತ್ತಿದೆ.

ರೈತರ ಕೈಹಿಡಿದ ಬಾಳೆ: 

ಬಾಳೆಕಾಯಿ ಸೀಸನ್‌ನಲ್ಲಿ ಬೇಡಿಕೆ ಪಡೆದು, ಬೇಡಿಕೆಯಿಲ್ಲದಿರುವಾಗ ಕಿಲೋಗೆ ಐದು 6 ರು.ಗೆ ಬಾಳೆಕಾಯಿ ಮಾರಾಟವಾಗುತ್ತಿತ್ತು. ಈಗ ಅದೇ ಬಾಳೆಕಾಯಿ ಹುಡಿ ಕಿಲೋಕ್ಕೆ 200 ರು.ನಂತೆ ಮಾರಾಟವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಗೃಹಿಣಿ ಶಿರಸಿಯ ವಸುಂಧರಾ ಹೆಗಡೆ ಎಂಬವರು ತಮ್ಮಲ್ಲಿ ಬೆಳೆದ ಬಾಳೆಕಾಯಿಯನ್ನು ಡ್ರೈಯರ್‌ನಲ್ಲಿ ಒಣಗಿಸಿ ಹುಡಿ ಮಾಡಿಸಿ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಸೋಶಿಯಲ್‌ ಮೀಡಿಯಾ, ಮಹಿಳಾ ಮಾರುಕಟ್ಟೆವಾಟ್ಸಾಪ್‌ ಗ್ರೂಪ್‌ ಮೂಲಕ ಬೆಂಗಳೂರು, ಮಂಗಳೂರು, ದೆಹಲಿ, ರಾಜಸ್ಥಾನ ಮೊದಲಾದೆಡೆ ಪಾರ್ಸಲ್‌ ಕಳಿಸಿದ್ದಾರೆ. ವಾರಕ್ಕೆ ಸುಮಾರು 50 ಕಿಲೋ ನಷ್ಟು ಬೇಡಿಕೆ ಕುದುರಿದೆ.

ಏನಿದು ಬಾಕಾಹು?

ಗಳ ಆಗರ ಬಾಕಾಹು ಮಾಡುವ ವಿಧಾನ ತುಂಬಾ ಸರಳ. ಸರಿಯಾಗಿ ಬಲಿತ ಬಾಳೆಕಾಯಿಯನ್ನು ಸಿಪ್ಪೆ ತೆಗೆದು ಚಿಫ್ಸ್‌ ರೂಪದಲ್ಲಿ ಹೆಚ್ಚಿ ಬಿಸಿಲಲ್ಲಿ ಅಥವಾ ಡ್ರೈಯರ್‌ನಲ್ಲಿ ಒಣಗಿಸಬೇಕು. ಸರಿಯಾಗಿ ಒಣಗಿದ ಬಳಿಕ ಹುಡಿ ಮಾಡಿ ಖಾದ್ಯಗಳಿಗೆ ಬಳಸಬಹುದು. ಈ ಹುಡಿಯಿಂದ ರೊಟ್ಟಿ, ಚಪಾತಿ, ಗುಳಿಯಪ್ಪ, ತಾಳಿಪಿಟ್ಟು, ಉಪ್ಪಿಟ್ಟು, ದೋಸೆ, ಬರ್ಫಿ, ಕೋಡುಬಳೆ ಹೀಗೆ ಹತ್ತು ಹಲವು ಖಾದ್ಯಗಳನ್ನು ಮಾಡಲಾಗುತ್ತಿದೆ.

ಹೇಗೆ ಆರಂಭ?

ಕೇರಳದ ಆಲೆಪ್ಪಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿ ಪಡೆದ ಗೃಹಿಣಿಯೊಬ್ಬರು ಕೋವಿಡ್‌ ಕಾಲದಲ್ಲಿ ಒಂದು ಕ್ವಿಂಟಾಲ್‌ನಷ್ಟು ಬಾಕಾಹು ಮಾರಾಟ ಮಾಡುತ್ತಾರೆ. ಪತ್ರಕರ್ತ ಹಾಗೂ ಕೃಷಿತಜ್ಞರಾದ ಶ್ರೀಪಡ್ರೆಯವರು ನಡೆಸುತ್ತಿರುವ ಎನಿ ಟೈಂ ವೆಜ್‌ ಎಂಬ ವಾಟ್ಸಾಪ್‌ ಗ್ರೂಪ್‌ಲ್ಲಿ ಇದು ಚರ್ಚೆಗೆ ನಾಂದಿಯಾಗುತ್ತದೆ. ಯಾಕೆ ಕರ್ನಾಟಕದಲ್ಲೂ ಇಂಥ ಪ್ರಯತ್ನ ಮಾಡಬಾರದೆಂದು ಆರಂಭವಾದ ಸಣ್ಣ ಪ್ರಯತ್ನ ಇದೀಗ ಅಭಿಯಾನ ರೂಪ, ಉದ್ಯಮದ ಸ್ವರೂಪವನ್ನೂ ಪಡೆಯುತ್ತಿದೆ.

ನಾವು ಬಾಕಾಹು ಮಾಡಿ ಮಾರಾಟ ಮಾಡಲು ಆರಂಭಿಸಿ ಮೂರು ವಾರ ಆಯಿತಷ್ಟೇ. ಉತ್ತಮ ಬೇಡಿಕೆ ಬರುತ್ತಿದೆ. ಬೇಡಿಕೆ ಮುಂದುವರಿದಲ್ಲಿ ಸಣ್ಣ ಹಿಟ್ಟಿನ ಗಿರಣಿ ನಾವೇ ಪ್ರಾರಂಭಿಸಬೇಕೆಂದಿದ್ದೇವೆ ಎಂದು ಕಾನಳ್ಳಿ, ಶಿರಸಿ ಗೃಹಿಣಿ ವಸುಂಧರಾ ಹೆಗಡೆ ತಿಳಿಸಿದ್ದಾರೆ.  

ಬಾಕಾಹು ಬಗ್ಗೆ ಅರಿವಿನ ಪ್ರಕ್ರಿಯೆ ನಡೆಯುತ್ತಿದೆ. ನಿರೀಕ್ಷಿಗೂ ಮೀರಿ ಫಲಿತಾಂಶ ದೊರಕುತ್ತಿದೆ. ಸರಳವಾಗಿರುವ ಈ ಪದಾರ್ಥ ಇನ್ನಷ್ಟು ಜನಪ್ರಿಯಗೊಳ್ಳಲು ಕೃಷಿ ವಿಜ್ಞಾನ ಕೇಂದ್ರಗಳು ಮುಂದೆ ಬರುತ್ತಿವೆ. ತರಬೇತಿ, ಪ್ರಾತ್ಯಕ್ಷಿಕೆ, ವೆಬಿನಾರ್‌ಗಳ ಮೂಲಕ ಮನೆ ಮನೆ ತಲುಪಿಸುವ ಬಗ್ಗೆ ಅಭಿಯಾನ ನಡೆಯುತ್ತಿದೆ ಎಂದು ಕೃಷಿ ತಜ್ಞ ಹಾಗೂ ಹಿರಿಯ ಪತ್ರಕರ್ತರು ಶ್ರೀಪಡ್ರೆ ಹೇಳಿದ್ದಾರೆ.  
 

click me!