
ಬೆಳಗ್ಗೆ (Morning) ಆದರೆ ಸಾಕು ಕೆಲಸ ಅದೂ ಇದು ಎಂದು ಟೆನ್ಷನ್ ತೆಗೆದುಕೊಳ್ಳುವವರು ಹಲವಾರು ಮಂದಿ. ಎಲ್ಲಾ ಸಮಸ್ಯೆಯಿಂದ ದೂರ ಇರಬೇಕು ಎಂದರೆ ನಿದ್ರೆ ಚೆನ್ನಾಗಿ ಆಗಿರಬೇಕು. ಕಣ್ತುಂಬಾ ನಿದ್ರೆ (Sleep) ಸರಿಯಾಗಿ ಮಾಡಿದ್ದಲ್ಲಿ ಅಂತಹ ವ್ಯಕ್ತಿ ದಿನ ಪೂರ್ತಿ ಚಟುವಟಿಕೆಯಿಂದ ಇರುತ್ತಾನಲ್ಲದೆ, ಆರೋಗ್ಯವೂ (Health) ಉತ್ತಮ ರೀತಿಯಲ್ಲಿರುತ್ತದೆ. ಆದರೆ ಕೆಲವೊಬ್ಬರಿಗೆ ಎಷ್ಟು ಹೊತ್ತು ನಿದ್ದೆ ಮಾಡಿದರೂ ಸರಿಯಾಗಿ ನಿದ್ದೆ ಆಗಿದೆ ಅನಿಸುವುದಿಲ್ಲ. ಹೀಗಾದಾಗಲೇ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಿದ್ರೆ ಸರಿಯಾದ ರೀತಿ ನಿದ್ದೆ ಆಗಿದೆ ಅನ್ನೋದನ್ನು ತಿಳಿದುಕೊಳ್ಳೋದು ಹೇಗೆ ? ಇಲ್ಲಿದೆ ಹೆಚ್ಚಿನ ವಿವರ..
1. ಮಲಗಿದ ಐದೇ ನಿಮಿಷದಲ್ಲಿ ನಿದ್ದೆ ಬರುತ್ತದೆ: ಸಾಮಾನ್ಯವಾಗಿ, ಜನರು ಮಲಗಿದ 5ರಿಂದ 15 ನಿಮಿಷಗಳಲ್ಲಿ ನಿದ್ರಿಸುತ್ತಾರೆ. ಆದರೆ ಹೀಗೆ ನಿದ್ದೆ ಬರದೆ ನೀವು ನಿರಂತರವಾಗಿ ಅರ್ಧ ಗಂಟೆಗೂ ಹೆಚ್ಚು ಸಮಯ ಸೀಲಿಂಗ್ ನೋಡುತ್ತಿದ್ದರೆ, ಅದು ನಿದ್ರಾಹೀನತೆಯ ಸಂಕೇತವಾಗಿರಬಹುದು. ಇದು ನಿಮಗೆ ಉತ್ತಮ ನಿದ್ದೆಯಾಗಿಲ್ಲ ಅನ್ನೋದನ್ನು ಸೂಚಿಸುತ್ತದೆ. ಹೀಗಾದಾಗ ನೀವು ತಿನ್ನುವ ಆಹಾರ, ಮಲಗುವ ಮೊದಲು ಮಾಡುವ ಚಟುವಟಿಕೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.
ಅಲಾರಂ ಇಡೋದು ಓಕೆ, ಸ್ನೂಜ್ ಮಾಡೋದ್ಯಾಕೆ, ಎಷ್ಟೊಂದು ತೊಂದ್ರೆ ನೋಡಿ
2. ಗಾಢವಾದ ನಿದ್ರೆ: ಎಲ್ಲರೂ ನಿದ್ದೆ ಮಾಡುವ ರೀತಿ ಒಂದೇ ರೀತಿಯಾಗಿರುವುದಿಲ್ಲ. ಕೆಲವೊಬ್ಬರು ಮಲಗಿದ ತಕ್ಷಣ ಗಾಢವಾದ ನಿದ್ರೆಗೆ ಜಾರುತ್ತಾರೆ. ಆದರೆ ಇನ್ನು ಕೆಲವರು ಮಲಗಿದ ತಕ್ಷಣ ನಿದ್ದೆ ಬಂದರೂ ಆಗಾಗ ಎಚ್ಚರಗೊಳ್ಳುತ್ತಿರುತ್ತಾರೆ. ಆಳವಾದ ನಿದ್ರೆ ಅಥವಾ ನಾನ್-ರ್ಯಾಪಿಡ್ ಐ ಮೂಮೆಂಟ್ ಸ್ಲೀಪ್ (NREM) ಹಂತದಲ್ಲಿ, ಮೆದುಳಿನ ಚಟುವಟಿಕೆಯು ಕಡಿಮೆ ಇರುತ್ತದೆ, ನಿಮ್ಮ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ ಮತ್ತು ದೇಹವು ಸ್ವತಃ ಗುಣವಾಗುತ್ತದೆ ಮತ್ತು ಸರಿಪಡಿಸುತ್ತದೆ. ಹೀಗಾಗಿ ನಿಮಗೆ ಗಾಢವಾದ ನಿದ್ದೆ ಬರುತ್ತಿದೆಯೇ ಎಂಬುದನ್ನು ಗಮನಿಸಿಕೊಳ್ಳಿ.
3. ಬೆಳಗ್ಗೆ ಏಳಲು ಅಲಾರಂ ಅಗತ್ಯವಿಲ್ಲ: ನೀವು ನಿಯಮಿತವಾದ ನಿದ್ರೆ-ಎಚ್ಚರದ ವೇಳಾಪಟ್ಟಿಯನ್ನು ನಿರ್ವಹಿಸುತ್ತಿದ್ದರೆ ನಿಮಗೆ ಅಲಾರಂನ ಅಗತ್ಯ ಇರುವುದಿಲ್ಲ. ನಿಮಗೆ ಅಲಾರಂ ಇಲ್ಲದಿದ್ದರೂ ಸಹ ಬೆಳಗ್ಗೆ ಸರಿಯಾದ ಸಮಯದಲ್ಲಿ ಏಳಲು ಸಾಧ್ಯವಾಗುತ್ತದೆ. ಏಕೆಂದರೆ ನಿಮ್ಮ ದೇಹವು ತನ್ನದೇ ಆದ ಜೈವಿಕ ಗಡಿಯಾರವನ್ನು ಹೊಂದಿದೆ. ಆದ್ದರಿಂದ, ನಿಮ್ಮ ದೇಹದ ನಿದ್ರೆಯ ಅವಶ್ಯಕತೆಗಳನ್ನು ನೀವು ಪೂರೈಸುತ್ತಿದ್ದರೆ, ನಿಮ್ಮದೇ ಆದ ನಿಗದಿತ ಸಮಯದಲ್ಲಿ ಎಚ್ಚರಗೊಳ್ಳಲು ನಿಮಗೆ ಸುಲಭವಾಗುತ್ತದೆ.
4. ಶಾಂತವಾದ ವಾತಾವರಣದಲ್ಲಿ ಮಲಗಿ: ನೆರೆಹೊರೆಯ ಮನೆಯಲ್ಲಿ ಪಾರ್ಟಿ, ಸಮಾರಂಭಗಳು ನಡೆಯುತ್ತಿರುವಾಗ ಅಥವಾ ಸದ್ದು ಗದ್ದಲವಿದ್ದಾಗ ನೀವು ನೆಮ್ಮದಿಯಿಂದ ಮಲಗಲು ಸಾಧ್ಯವಾಗುವುದಿಲ್ಲ. ಆಗಾಗ ಬೆಚ್ಚಿ ಎದ್ದು ಬಿಡುತ್ತೀರಿ. ಇದು ಗುಡ್ ಸ್ಲೀಪ್ ಎಂದು ಕರೆಸಿಕೊಳ್ಳುವುದಿಲ್ಲ. ಉತ್ತಮ ನಿದ್ದೆ ಪಡೆಯಲು ನೀವು ಶಾಂತ ವಾತಾವರಣದಲ್ಲಿ ಮಲಗುವುದನ್ನು ಖಚಿತಪಡಿಸಿಕೊಳ್ಳಿ.
ದಿನಾ ರಾತ್ರಿ ಒಣಕೆಮ್ಮು ಕಾಟನಾ ? ಮಲಗೋ ಮುಂಚೆ ಇವಿಷ್ಟನ್ನು ಸೇವಿಸಿ ಸಾಕು
5. ರಾತ್ರಿ ಬಿದ್ದ ಕನಸುಗಳು ನೆನಪಿರುವುದಿಲ್ಲ: ನೀವು ಒತ್ತಡಕ್ಕೊಳಗಾಗಿದ್ದರೆ ಮತ್ತು ಸರಿಯಾಗಿ ನಿದ್ರೆ ಮಾಡದಿದ್ದರೆ ನಿಮ್ಮ ಕನಸುಗಳನ್ನು ನೀವು ಹೆಚ್ಚು ನೆನಪಿಸಿಕೊಳ್ಳುತ್ತೀರಿ ಎಂದು ಅಧ್ಯಯನಗಳು ತೋರಿಸುತ್ತವೆ. ಆದರೂ, ಕನಸುಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯವು ತಳಿಶಾಸ್ತ್ರ ಮತ್ತು ಇತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ನಾವು ತಿಳಿದುಕೊಂಡಿರಬೇಕು. ರಾತ್ರಿ ಬಿದ್ದ ಕನಸು ನಿಮಗೆ ಮತ್ತೆ ಮತ್ತೆ ನೆನಪಾದರೆ ಸರಿಯಾಗಿ ನಿದ್ದೆಯಾಗಿಲ್ಲ ಎಂದು ತಿಳಿದುಕೊಳ್ಳಬಹುದು.
6. ಬೆಳಗ್ಗೆ ಎನರ್ಜಿಟಿಕ್ ಆಗಿ ಎಚ್ಚರಗೊಳ್ಳುತ್ತೀರಿ: ರಾತ್ರಿಯ ನಿದ್ದೆಯ ಬಳಿಕ ನೀವು ಬೆಳಗ್ಗೆ ತುಂಬಾ ಎನರ್ಜಿಟಿಕ್ ಆಗಿ ಎಚ್ಚರಗೊಂಡರೆ ತುಂಬಾ ಚೆನ್ನಾಗಿ ನಿದ್ದೆ ಆಗಿದೆ ಎಂದರ್ಥ. ಇದರಿಂದ ನೀವು ತುಂಬಾ ಫ್ರೆಶ್‌ನೆಸ್ ಅನುಭವಿಸುತ್ತೀರಿ. ಯಾವುದೇ ರೀತಿಯಲ್ಲಿ ಸೋಮಾರಿತನ ಅನುಭವಿಸುವುದಿಲ್ಲ.
ಉತ್ತಮ ಗುಣಮಟ್ಟದ ನಿದ್ರೆಗಾಗಿ ಮೂರು ಸಲಹೆಗಳು
1. ನಿದ್ದೆ ಮಾಡುವಾಗ ಲೈಟ್ ಆಫ್ ಮಾಡುವುದನ್ನು ಮರೆಯಬೇಡಿ. ಕೋಣೆಯಲ್ಲಿ ಬೆಳಕು ಇದ್ದರೆ, ನಿಮ್ಮ ಮೆದುಳು ಸ್ವಿಚ್ ಆಫ್ ಆಗುವುದಿಲ್ಲ. ಹೀಗಾಗಿ ನಿಮಗೆ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ.
2. ಮಲಗುವ ಮುನ್ನ 15 ನಿಮಿಷಗಳ ಕಾಲ ಬಿಸಿನೀರಿನ ಬಕೆಟ್‌ನಲ್ಲಿ ನಿಮ್ಮ ಪಾದಗಳನ್ನು ಇಡಿ. ಆ ನಂತರ ಸ್ವಚ್ಛವಾದ ಬಟ್ಟೆಯಿಂದ ಕಾಲನ್ನು ಒರೆಸಿ ಬಳಿಕ ಮಲಗಿ
3. ಯೋಗ ನಿದ್ರಾ ಅಭ್ಯಾಸ ಮಾಡಿ. ಇದು ನಿಮ್ಮ ದೇಹದ ಪ್ರತಿಯೊಂದು ಭಾಗವನ್ನು ವಿಶ್ರಾಂತಿ ಮಾಡಲು ಮತ್ತು ಶಾಂತಿಯುತ ನಿದ್ರೆಗೆ ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.