ಜಿಮ್ ಮಾಡಿದ್ದಕ್ಕೆ ಪುನೀತ್‌ಗೆ ಹೃದಯಾಘಾತವಾಗಿದ್ದಲ್ಲ: ಡಾ.ಮಂಜುನಾಥ್

By Kannadaprabha News  |  First Published Sep 10, 2022, 10:04 AM IST
  • ಹೃದಯ ಸಮಸ್ಯೆ ಅನುವಂಶೀಯತೆಯಿಂದಲೂ ಬರುತ್ತದೆ ಡಾ.ಸಿ.ಎನ್‌. ಮಂಜುನಾಥ್‌
  • ಅನುವಂಶೀಯ ಕಾರಣಗಳಿಂದ ಪುನೀತ್ ಹೃದಯಾಘಾತ
  • ರಾಘವೇಂದ್ರ, ಶಿವರಾಜಕುಮಾರ್ ಅಪ್ಪುಗೆ ಹೃದಯ ಸಂಬಂಧಿ ಕಾಯಿಲೆ
  • ತಂದೆ ತಾಯಿ ಸುಮಾರು 80 ವರ್ಷ ಯಾವುದೇ ಕಾಯಿಲೆ ಇಲ್ಲದೆ ಬದುಕಿದರೆ ಅದೂ ಮಕ್ಕಳಿಗೆ ಕೊಡುವ ಭಾಗ್ಯ.
  • ಹೃದಯಾಘಾತದ ಕುರಿತು ಮುಂಜಾಗ್ರತೆ ಅಗತ್ಯ:
  • ಹುಬ್ಬಳ್ಳಿಯಲ್ಲಿ 400 ಹಾಸಿಗೆಯ ಆಸ್ಪತ್ರೆ

ಮೈಸೂರು (ಸೆ.10): ಹೃದಯಸ್ಥಂಭನದಿಂದ ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ಕೊನೆಯುಸಿರೆಳೆದರು. ಅದು ಅನುವಂಶೀಯ ಕಾರಣದಿಂದಲೂ ಬಂದಿರುವ ಸಾಧ್ಯತೆ ಇರುತ್ತದೆ. ಆದರೆ, ಜಿಮ್‌ನಲ್ಲಿ ಬೆವರಿಳಿಸಿ, ವರ್ಕ್ ಔಟ್ ಮಾಡಿದ ಕಾರಣಕ್ಕೆ ಹೃದಯಾಘಾತಾವಾಯಿತು ಎನ್ನುವುದು ತಪ್ಪೆಂದು ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ ಹೇಳಿದ್ದಾರೆ. 

ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೃದಯಾಘಾತಕ್ಕೆ ವಿವಿಧ ಕಾರಣಗಳು ಇರುತ್ತವೆ. ಇಂಥದ್ದೇ ಕಾರಣಕ್ಕೆ ಎಂದು ಹೇಳುವುದು ಕಷ್ಟ. ಆದರೆ, ಜೀವನಶೈಲಿ ಸರಿಯಾಗಿದ್ದರೆ ಹಾರ್ಟ್ ಅಟ್ಯಾಕ್ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಎಂದರು. 

Tap to resize

Latest Videos

ಹುಬ್ಬಳ್ಳಿಯಲ್ಲಿ 400 ಹಾಸಿಗೆಯ ಆಸ್ಪತ್ರೆ ಮತ್ತು ಬೆಂಗಳೂರಿನ ಮಲ್ಲೇಶ್ವರಂನ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ 50 ಹಾಸಿಗೆಯ ಜಯದೇವ ಹೃದ್ರೋಗ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ.ಸಿ.ಎನ್‌. ಮಂಜುನಾಥ್‌ ತಿಳಿಸಿದರು. ವಿಭಾಗವಾರು ಆಸ್ಪತ್ರೆಗಳನ್ನು ತೆರೆಯುತ್ತಿದ್ದೇವೆ. ಬೆಂಗಳೂರು ಮೈಸೂರು ನಂತರ ಹುಬ್ಬಳ್ಳಿಯಲ್ಲಿ ಈಗ ತರೆಯುತ್ತಿದ್ದು, ಮುಂದೆ ಬೆಳಗಾವಿಯಲ್ಲಿ ತೆರೆಯುವ ಉದ್ದೇಶವಿದೆ. ಆದರೆ ಜಿಲ್ಲಾವಾರು ತೆರೆಯುತ್ತ ಹೋದರೆ ನಿರ್ವಹಣೆ ಸಾಧ್ಯವಾಗದೆ ಬಾಗಿಲು ಮುಚ್ಚಬೇಕಾಗುತ್ತದೆ ಈ ಬಗ್ಗೆ ಸರ್ಕಾರ ಕೂಡ ಚಿಂತನೆ ನಡೆಸಬೇಕು ಎಂದರು.

ಇಸ್ಫೋಸಿಸ್‌ ಸಂಸ್ಥೆಯು 350 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಬೆಂಗಳೂರಿನಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ಇದರ ಸೇವೆಯನ್ನು ತಲುಪಿಸಬೇಕು. ನಮ್ಮಲ್ಲಿ ಮೊದಲು ಸೇವೆ, ನಂತರ ಉಳಿದದ್ದು. ಬೇರೆ ಆಸ್ಪತ್ರೆಗಳಂತೆ ಹಣ ಪಾವತಿಸಲೇಬೇಕು, ದಾಖಲಾತಿ ಕಡ್ಡಾಯ ಎಂಬುದೆಲ್ಲ ಇಲ್ಲ. ಮೊದಲು ಸೇವೆ ಎಂದು ಅವರು ಹೇಳಿದರು.

ಮುಂಜಾಗ್ರತೆ ಅಗತ್ಯ

ಹೃದಯಾಘಾತದ ಕುರಿತು ಮುಂಜಾಗ್ರತೆ ಅಗತ್ಯ. ಮೇಲ್ನೋಟಕ್ಕೆ ಎಲ್ಲವೂ ಸರಿ ಇರುತ್ತದೆ. ಆದರೆ ಸಮಸ್ಯೆ ತೀವ್ರವಾಗಿರುತ್ತದೆ. ವ್ಯಾಯಾಮದಲ್ಲಿಯೂ ಮಿತಿ ಇರಬೇಕು. ಏಕಾಏಕಿ ವ್ಯಾಯಾಮ ಹೆಚ್ಚಿಸುವುದು, ಹೆಚ್ಚು ತಿಂದಿದ್ದೇನೆ ಎಂದು ಹೆಚ್ಚು ಬಾರ ಎತ್ತುವುದು ಮಾಡಬಾರದು. ಕಾಲಕಾಲಕ್ಕೆ ಪರೀಕ್ಷೆಗೆ ಒಳಗಾಗಬೇಕು, ಮುಖ್ಯವಾಗಿ ಜಿಮ್‌ ಸೇರುವ ಮುನ್ನ ಪರೀಕ್ಷೆ ಮಾಡಿಸಿಕೊಂಡರೆ ಒಳ್ಳೆಯದು ಎಂದು ಅವರು ತಿಳಿಸಿದರು.

ಹಿಂದೆ ಮಕ್ಕಳು ತಮ್ಮ ಪೋಷಕರನ್ನು ಆಸ್ಪತ್ರೆಗೆ ಕರೆತರುತ್ತಿದ್ದರು. ಆದರೆ ಇಂದು ತಂದೆ, ತಾಯಂದಿರು ಮಕ್ಕಳನ್ನು ಆಸ್ಪತ್ರೆಗೆ ಕರೆತರುತ್ತಿದ್ದಾರೆ. ಪಟ್ಟಣ ಹಾಗೂ ಹಳ್ಳಿಯ ಜೀವನ ಶೈಲಿ ಒಂದೇ ಆಗಿದೆ. ಹೃದಯ ಸಮಸ್ಯೆ ಅನುವಂಶೀಯತೆಯಿಂದಲೂ ಬರುತ್ತದೆ. ತಂದೆ- ತಾಯಿ ಸುಮಾರು 80 ವರ್ಷ ಯಾವುದೇ ಕಾಯಿಲೆ ಇಲ್ಲದೆ ಬದುಕಿದರೆ ಅದೂ ಮಕ್ಕಳಿಗೆ ಕೊಡುವ ಭಾಗ್ಯ. ಅನುವಂಶೀಯ ಕಾರಣಗಳಿಂದ ಅಪ್ಪುಗೆ ಹೃದಯಘಾತ.ರಾಜ್ ಕುಟುಂಬದಲ್ಲಿ ರಾಘವೇಂದ್ರ ರಾಜಕುಮಾರ, ಶಿವರಾಜ ಕುಮಾರಗೂ ಹೃದಯ ಸಂಬಂಧಿ ಕಾಯಿಲೆ ಇದೆ. ಒತ್ತಡ ಈಗ ಒಂದು ಹೊಸ ಧೂಮಪಾನವಾಗಿದೆ. ಅಳತೆ ಮೀರಿದ ಅಪೇಕ್ಷೆಗಳನ್ನೇ ಒತ್ತಡ ಎಂದು ಕರೆಯುತ್ತೇವೆ. ಚಿಕ್ಕ ಮಕ್ಕಳಿಗೆ ನಿದ್ರೆ ಇಲ್ಲದೆ ಒತ್ತಡ ನೀಡುತ್ತಿದ್ದೇವೆ. ಇಂದಿನ ಜನರಿಗೆ ತಾಳ್ಮೆ ಇಲ್ಲದಂತಾಗಿದೆ. ತುಂಬ ಕೋಪ ಮಾಡಿಕೊಳ್ಳುವುದು ರಕ್ತದ ಒತ್ತಡಕ್ಕೆ ಕಾರಣವಾಗುತ್ತದೆ ಎಂದರು.

ದೇಶದಲ್ಲಿ ಸುಮಾರು 7 ಕೋಟಿ ಮಂದಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ನಮ್ಮ ಆಹಾರ ಪದ್ಧತಿಯನ್ನು ಸರಿಪಡಿಸಿಕೊಳ್ಳಬೇಕು. ಆಸ್ಪತ್ರೆಯ ಔಷಧವೇ ಔಷಧ ಎಂದು ತಿಳಿಯಬಾರದು. ನಾವು ತಿನ್ನುವ ತರಕಾರಿ, ನಗು, ವಾರದಲ್ಲಿ ಒಂದು ಹೊತ್ತು ಊಟ ಬಿಡುವುದು, ಒಳ್ಳೆಯ ಸ್ನೇಹಿತರು, ನಿಯಮಿತ ವ್ಯಾಯಾಮ, ನಡಿಗೆ ಎಲ್ಲವೂ ಔಷಧವೇ. ಇದರ ಜೊತೆಗೆ ಒಳ್ಳೆಯ ಸೇಹಿತರನ್ನು ಹೊಂದಬೇಕು ಎಂದರು.

ಬಹುಮಹಡಿ ಕಟ್ಟಡದಲ್ಲಿ ಕೆಲಸ ಮಾಡುವವರು ಲಿಫ್‌್ಟನ ಬದಲಿಗೆ ಮೆಟ್ಟಿಲುಗಳನ್ನು ಬಳಸಬೇಕು. ಆಗ ನಮಗಿರುವ ಹೃದಯ ಸಮಸ್ಯೆ ಗೊತ್ತಾಗುತ್ತದೆ. ಶ್ರೀಮಂತರ ರೋಗವಾಗಿದ್ದ ಹೃದಯಾಘಾತವು ಈಗ ಎಲ್ಲಾ ಮಧ್ಯ ವಯಸ್ಕರಲ್ಲಿ ಹೆಚ್ಚಾಗಿದೆ. ಯುವಕರು ಭವಿಷ್ಯದ ಬಗ್ಗೆ ಯೋಚಿಸಿ ಯೋಚಿಸಿ ರೋಗಕ್ಕೆ ತುತ್ತಾಗುತ್ತಿದ್ದಾರೆ. ಫಾಸ್ಟ್‌ಫುಡ್‌ನ ವ್ಯಾಖ್ಯಾನವೇನೆಂದರೆ ಬೇಗನೆ ಕರೆದೊಯ್ಯುವುದು ಎಂಬಂತಾಗಿದೆ ಎಂದು ಅವರು ಹೇಳಿದರು.

ಸುಮ್ಮನೆ ಕೂರುವುದು ಒಂದು ರೋಗದಂತೆ. ಹೃದಯಾಘಾತ, ಮಧುಮೇಹ, ರಕ್ತದೊತ್ತಡ, ಪಾಶ್ರ್ವವಾಯು, ಕ್ಯಾನ್ಸರ್‌, ಒಂಟಿತನ ಕೂಡ ಒಂದು ಸಾಂಕ್ರಾಮಿಕ ರೋಗ. ನಮ್ಮ ಆರೋಗ್ಯವು ನಮ್ಮ ಮಾತು ಮತ್ತು ಕೈಯಲ್ಲಿದೆ ಎಂಬುದನ್ನು ಮರೆಯಬಾರದು. ಸಾಮಾಜಿಕ ಜಾಲತಾಣವು ಸಮಾಜದ ಸ್ವಾಸ್ಥ್ಯ ಮತ್ತು ಮನಸ್ಸಿನ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದೆ. ತಪ್ಪು ಸಂದೇಶವನ್ನು ಬಹಳ ಬೇಗ ಬಿತ್ತರಿಸುತ್ತಿದೆ ಎಂದು ಅವರು ಹೇಳಿದರು.ಸಂಘದ ಅಧ್ಯಕ್ಷ ಎಸ್‌.ಟಿ. ರವಿಕುಮಾರ್‌, ಉಪಾಧ್ಯಕ್ಷರಾದ ಅನುರಾಗ ಬಸವರಾಜ್‌, ಧರ್ಮಾಪುರ ನಾರಾ¿ಣ್‌, ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ ಇದ್ದರು.

ಕಟ್ಟಡ ನಿರ್ಮಿಸಿದರೆ ಸಾಲದು, ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು, ಮಾನವ ಸಂಪನ್ಮೂಲ ಸೃಜಿಸಬೇಕು. ಇದಾಗದಿದ್ದರೆ ಸರ್ಕಾರ ಎಷ್ಟೇ ಆಸ್ಪತ್ರೆ ಕಟ್ಟಿಸಿದರೂ ಉದ್ಘಾಟನೆಯಾಗಿ ಜನರಿಗೆ ಸೇವೆ ಲಭಿಸುವುದಿಲ್ಲ. ನಾನು ನಿವೃತ್ತಿ ಬಳಿಕ ರಾಜಕೀಯಕ್ಕೆ ಹೋಗುವುದಿಲ್ಲ, ಆದರೆ ಆರೋಗ್ಯ ಕ್ಷೇತ್ರವನ್ನು ಮುನ್ನಡೆಸುವ ಯಾವುದಾದರೂ ಜವಾಬ್ದಾರಿ ನೀಡಿದರೆ ಹೊರಲು ಸಿದ್ಧವಿದ್ದೇನೆ.

- ಡಾ.ಸಿ.ಎನ್‌. ಮಂಜುನಾಥ್‌, ನಿರ್ದೇಶಕರು, ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ.

click me!