ಡ್ರಗ್ಸ್ ದಂಧೆಗಿದೆ ಕೆಲ ಪೋಲಿಸರ ಶ್ರೀರಕ್ಷೆ

By Web Desk  |  First Published Aug 7, 2018, 10:42 AM IST

-ಮಾದಕ ವಸ್ತು ನಿಗ್ರಹಕ್ಕೆ 11 ತನಿಖಾ ಸಂಸ್ಥೆಗಳಿದ್ದರೂ ಎಗ್ಗಿಲ್ಲದೇ ಡೀಲ್

-ಕೆಳಹಂತದ ಪೊಲೀಸರ ಕಾರ‌್ಯವೈಖರಿ ಬಗ್ಗೆ ಅನುಮಾನ 


ಬೆಂಗಳೂರು (ಆ. 08): ಕರುನಾಡಿನಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ರಾಜ್ಯ ಸರ್ಕಾರ ಕಡಿವಾಣ ಹಾಕಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ ಈ ಡ್ರಗ್ಸ್ ಮಾಫಿಯಾ ಕೆಲವು ಕೆಳ ಹಂತದ ಪೊಲೀಸರು ಮತ್ತು ಕೆಲ ರಾಜಕೀಯ ಮುಖಂಡರ ನೆರಳಿನಲ್ಲಿಯೇ ನಡೆಯುತ್ತಿದೆ..!

ಹೌದು. ರಾಜ್ಯ ವ್ಯಾಪಿ ಹರಡಿರುವ ಡ್ರಗ್ಸ್ ದಂಧೆಗೆ ಕೆಲವು ಪೊಲೀಸರೇ ಕೈ ಜೋಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಾದಕ ವಸ್ತು ಜಾಲ ಪತ್ತೆಗೆ ಈಗಾಗಲೇ ಹನ್ನೊಂದು ತನಿಖಾ ಸಂಸ್ಥೆಗಳು ಕಾರ್ಯಾಚರಣೆ ನಡೆಸುತ್ತಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯ ಪೊಲೀಸ್ ಠಾಣೆಗಳು ಕಾರ್ಯ ನಿರ್ವಹಿಸುತ್ತಿವೆ.

Latest Videos

undefined

ಇಲ್ಲಿ ಕ್ರೈಂ ವಿಭಾಗ, ವಿಶೇಷ ಘಟಕ ಹೀಗೆ ಹಲವು ಹಂತದಲ್ಲಿ ಪೊಲೀಸರು ಕಾರ್ಯ ನಿರ್ವಹಿಸುತ್ತಾರೆ. ಡ್ರಗ್ಸ್ ಪೆಡ್ಲರ್ಸ್‌ ನೇರವಾಗಿ ಯಾವುದೇ ಶಾಲಾ-ಕಾಲೇಜಿನೊಳಗೆ ಪ್ರವೇಶಿಸುವುದಿಲ್ಲ. ಹತ್ತಾರು ಶಾಲಾ-ಕಾಲೇಜುಗಳ ಬರುವ ಒಂದು ಸ್ಥಳವನ್ನು ಅಡ್ಡೆಯನ್ನಾಗಿ ಮಾಡಿಕೊಂಡಿರುತ್ತಾರೆ. ಉದಾಹರಣೆಗೆ ಬೆಂಗಳೂರಿನ ಉಲ್ಲಾಳ.

ಇಲ್ಲಿ ಕೆಂಗೇರಿಯ ಪ್ರತಿಷ್ಠಿತ ಶಾಲಾ- ಕಾಲೇಜು ಹಾಗೂ ಮಾಗಡಿ ಮುಖ್ಯರಸ್ತೆಯ ಒಳ ರಸ್ತೆಯಲ್ಲಿ ಹತ್ತಾರು ಕಾಲೇಜುಗಳು ಬರುತ್ತವೆ. ಸಾಕಷ್ಟು ವರ್ಷಗಳಿಂದ ಉಲ್ಲಾಳ ಹೀಗೆ ಪೆಡ್ಲರ್ಸ್‌ಗಳ ಅಡ್ಡೆಯಾಗಿತ್ತು. ಈ ಅಡ್ಡೆಗೆ ಮಾಲು (ಡ್ರಗ್ಸ್) ಬೇಕಿರುವ ಪೆಡ್ಲರ್ಸ್‌ ಹುಡುಕಿಕೊಂಡು ಬರುತ್ತಾನೆ. ಈ ಅಡ್ಡೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲೇಬೇಕಾಗುತ್ತದೆ. ಒಂದು ವೇಳೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇಲ್ಲ ಎಂದಾದರೆ ಅದು ಅವರ ನಿರ್ಲಕ್ಷ್ಯವೇ ಸರಿ ಎನ್ನುತ್ತಾರೆ ನಿವೃತ್ತ ಎಸಿಪಿ ಟೈಗರ್ ಅಶೋಕ್ ಕುಮಾರ್. ಉಲ್ಲಾಳ ಎನ್ನುವುದು ಒಂದು ಉದಾಹರಣೆ ಮಾತ್ರ. 

ರಾಜಕಾರಣಿಗಳ ಒತ್ತಡ
ದಂಧೆಕೋರರಿಂದ ಪೊಲೀಸರಿಗೆ ಸೌಲಭ್ಯಗಳು ಲಭ್ಯವಾಗುತ್ತಿರುತ್ತವೆ. ಹೀಗಾಗಿ ದಂಧೆ ನಡೆದರೂ ಕಾಣದಂತೆ ಕಣ್ಮುಚ್ಚಿ ಕುಳಿತಿರುತ್ತಾರೆ. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಆಗೊಮ್ಮೆ, ಈಗೊಮ್ಮೆ ಪೊಲೀಸರು ದಾಳಿ ನಡೆಸುತ್ತಾರೆ. ಮಾದಕ ದ್ರವ್ಯ ಸಾಗಾಟದಲ್ಲಿ ಬಂಧನವಾದರೆ ಅದು ಒಂದು ರೀತಿ ಪೊಲೀಸ್ ಭಾಷೆಯಲ್ಲಿ ನವೀಕರಣ ಇದ್ದಂತೆ. ತನಿಖೆಯ ಆಳಕ್ಕೆ ಇಳಿದಾಗ ಶ್ರೀಮಂತರ ಮಕ್ಕಳು ಸಿಕ್ಕಿ ಬೀಳುತ್ತಾರೆ. ರಾಜಕಾರಣಿಗಳ ಒತ್ತಡ ಬರುವ ಕಾರಣ ಪೊಲೀಸರು ಕೂಡ ಪ್ರಕರಣವನ್ನು ಅರ್ಧಕ್ಕೆ ಬಿಟ್ಟು ಬಿಡುತ್ತಾರೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿ.

ಬೀಟ್ ಪೊಲೀಸ್ ಏನ್ಮಾಡ್ತಾರೆ?
ಪ್ರತಿ ಠಾಣಾ ಸರಹದ್ದಿನಲ್ಲಿ ಬೀಟ್ ಪೊಲೀಸರು ಕೆಲಸ ನಿರ್ವಹಿಸುತ್ತಾರೆ. ಆರ್.ಕೆ.ದತ್ತಾ ಅವರು ರಾಜ್ಯ ಪೊಲೀಸ್ ನಿರ್ದೇಶಕರಾಗಿದ್ದ ವೇಳೆ ಬೀಟ್ ವ್ಯವಸ್ಥೆಯನ್ನು ಬಲಗೊಳಿಸುವ ವ್ಯವಸ್ಥೆ ಮಾಡಿದ್ದರು. ಪ್ರತಿಯೊಂದು ರಸ್ತೆಗೂ ಬೀಟ್ ಪೊಲೀಸಪ್ಪನಿಗೆ ಸಂಪೂರ್ಣ ಅಧಿಕಾರ ಕೊಡಲಾಗಿತ್ತು. ಆ ರಸ್ತೆಯಲ್ಲಿನ ನಿವಾಸಿಗಳ ಬಗ್ಗೆ ಆತ ಸಂಪೂರ್ಣವಾಗಿ ತಿಳಿದುಕೊಂಡಿರಬೇಕು.

ಈ ರಸ್ತೆಗಳಲ್ಲಿ ಯಾವುದೇ ಅಕ್ರಮ ನಡೆದರೂ ಆತ ಮಾಹಿತಿ ಸಂಗ್ರಹಿಸುತ್ತಿರಬೇಕು. ಆದರೂ ಪೊಲೀಸರ ಕಣ್ತಪ್ಪಿಸಿ ದಂಧೆ ನಡೆಯುತ್ತಿದೆ ಎಂದರೆ ಇದಕ್ಕೆ ಏನರ್ಥ? ಇದೀಗ ಎಲ್ಲ ಸೌಲಭ್ಯವೂ ಇದೆ. ಆದರೂ ದಂಧೆ ನಡೆಯುತ್ತಿರುವ ತಳಮಟ್ಟದ ಬಗ್ಗೆ ಪೊಲೀಸರೇ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಎಡಿಜಿಪಿ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು. 

-ವಿಶೇಷ ವರದಿ 

click me!