ಡೆಮೊಕ್ರೆಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡಲಿರುವ ಕಮಲಾ ಭಾರತದ ಮೊಸರನ್ನ, ದಾಲ್ , ಪೊಟ್ಯಾಟೋ ಕರಿ, ಇಡ್ಲಿ ತಿಂದು ದೊಡ್ಡವರಾದವರು. ಕೆಲ ವರ್ಷಗಳ ಹಿಂದೆ ಚೆನ್ನೈ ಗೆ ಭೇಟಿ ನೀಡಿ ತಮ್ಮ ಅಜ್ಜಿ-ಅಜ್ಜನ ಮಾತನಾಡಿಸಿಕೊಂಡು ಹೋಗಿದ್ದರು. ಸಂದರ್ಶನವೊಂದರಲ್ಲಿ ದಕ್ಷಿಣ ಭಾರತದ ಆಹಾರದ ಬಗ್ಗೆ ಹೇಳಿಕೊಂಡಿದ್ದರು.
ತಾಯಿಯಿಂದ ಭಾರತೀಯ ಪರಂಪರೆಯ ಅನೇಕ ಅಂಶಗಳನ್ನು ಆಕೆ ಕಲಿತುಕೊಂಡಿದ್ದಾರೆ. ಕಮಲಾ ಹೆಸರು ಘೋಷಣೆಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿಯೂ ಸಂಭ್ರಮ ಮನೆ ಮಾಡಿತ್ತು.
ಉಪಾಧ್ಯಕ್ಷ ಸ್ಪರ್ಧೆಗೆ ಅಣಿಯಾದ ಮೊದಲ ಕಪ್ಪು ಮಹಿಳೆ(ಕಮಲಾತಂದೆ ಜಮೈಕಾ ಮೂಲದವರು) ಮೊದಲ ಭಾರತೀಯ ಸಂಜಾತೆ ಎನ್ನುವ ಅನೇಕ ಶ್ರೇಯ ಪಡೆದುಕೊಂಡರು. ಕಮಲಾ ತಾಯಿ ಶ್ಯಾಮಲಾ ಚೆನ್ನೈನಲ್ಲಿ ಜನಿಸಿದವರು. ಕ್ಯಾನ್ಸರ್ ಸಂಶೋಧಕಿಯಾಗಿ ಅಮೆರಿಕ್ಕೆ ತೆರಳಿದ್ದರು.
ಪಕ್ಷದಿಂದ ಬಹುಮತದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೂರನೇ ಮಹಿಳೆ ಕ್ಯಾಲಿಫೋರ್ನಿಯಾ ರಾಜ್ಯದ ಸೆನೆಟರ್ ಕಮಲಾ ಹ್ಯಾರಿಸ್. ಈ ಹಿಂದೆ 2008ರಲ್ಲಿ ಅಲಸ್ಕ ಗವರ್ನರ್ ಸಾರಾ ಪಾಲಿನ್ ಮತ್ತು ನ್ಯೂಯಾರ್ಕ್ ರೆಪ್ರೆಸೆಂಟೇಟಿವ್ ಗೆರಲ್ಡಿನ್ ಫೆರ್ರರೊ 1984ರಲ್ಲಿ ಪಕ್ಷಗಳಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಈ ಹಿಂದೆ ಕಳೆದ ವರ್ಷ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟು ಕಮಲಾ ಹ್ಯಾರಿಸ್ ಪ್ರಚಾರವನ್ನು ಆರಂಭಿಸಿದ್ದರು. ನಂತರ ತಮ್ಮ ಪ್ರಚಾರವನ್ನು ಮುಂದುವರಿಸಲು ಹಣಕಾಸಿನ ಕೊರತೆಯಿದೆ ಎಂದು ಸ್ಪರ್ಧೆಯಿಂದ ಹಿಂದೆ ಸರಿದರು. ಅಮೆರಿಕ ಸೆನೆಟ್ ನಲ್ಲಿರುವ ಮೂವರು ಏಷ್ಯಾ ಅಮೆರಿಕನ್ ಮಹಿಳೆಯರಲ್ಲಿ ಕಮಲಾ ಹ್ಯಾರಿಸ್ ಒಬ್ಬರಾಗಿದ್ದಾರೆ .
ಸಾಮಾಜಿಕ ಜೀವನದಲ್ಲಿ, ಆಡಳಿತದಲ್ಲಿ ಪಳಗಿದವರು ಕಮಲಾ ಹ್ಯಾರಿಸ್. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಜಿಲ್ಲಾ ಅಟಾರ್ನಿಯಾಗಿ ಸೇವೆ ಸಲ್ಲಿಸಿದ ಮೊದಲ ಆಫ್ರಿಕನ್ ಅಮೆರಿಕನ್ ಮತ್ತು ಭಾರತೀಯ ಮೂಲದ ಮಹಿಳೆ.
ಈ ವರ್ಷ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಮಾರು 13 ಲಕ್ಷ ಭಾರತೀಯ ಅಮೆರಿಕನ್ನರು ಮತ ಚಲಾಯಿಸಲಿದ್ದಾರೆ.
2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇಕಡಾ 77ರಷ್ಟು ಮಂದಿ ಅಂದಿನ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಪರ ಮತ ಹಾಕಿದ್ದರು.
ಹೀಗಾಗಿ ಈ ಬಾರಿ ಕೂಡ ಡೆಮಾಕ್ರಟಿಕ್ ಪಕ್ಷ ಭಾರತೀಯ ಮೂಲದ ಮಹಿಳಾ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನಿಲ್ಲಿಸಿದೆ