ಮೂಲತಃ ಮುಂಬೈನ, ಜರ್ಮನಿಯ ಹಂಬರ್ಗ್ ವಿವಿಯಲ್ಲಿ ಗೌರವ ಡಾಕ್ಟರೇಟ್ ಪಡೆದಿರುವ ಟಾ.ಎಕ್.ಮಲ್ಹೋತ್ರಾ ಈ ಸಾಯಿ ಎಂಬ ವಿಶಿಷ್ಯ ಯೋಜನೆಯ ರೂವಾರಿ. ತತ್ವಜ್ಞಾನದ ಬಗ್ಗೆ ಅಪಾರ ಜ್ಞಾನವಿರುವ ಇವರು ಅಂತಾರಾಷ್ಟ್ರಿಯ ಮಟ್ಟದಲ್ಲಿ ಹೆಸರು ಮಾಡಿರುವ ಎರಡು ಪುಸ್ತಕಗಳ ಸಹ ಲೇಖಕರೂ ಹೌದು.
ಅಮೆರಿಕ ಮೂಲದ ಪಮೇಲಾ ಮಲ್ಹೋತ್ರಾ ಈ ಟ್ರಸ್ಟ್‌ನ ಉಪಾಧ್ಯಕ್ಷೆ. ಅಬ್‌ನಾರ್ಮಲ್ ಸೈಕೋಲಜಿ, ರೇಖಿ, ರಸಾಯನ ಶಾಸ್ತ್ರ, ನ್ಯಾಚುರೋಪತಿ, ಹೋಮಿಯೋಪತಿ ಜ್ಞಾನವಿರುವ ಇವರಿಗೆ ಪ್ರಕೃತಿ ಎಂಬ ಅಮ್ಮನೊಂದಿಗೆ ಬದುಕುವ ನೈಜ ಸುಖದ ಅರಿವಿದೆ.
ಮುಂಬೈ ಮೂಲಕ ಮಲ್ಹೋತ್ರಾಗೆ, ಅಮೆರಿಕದ ಮೂಲದ ಪಮೇಲಾ ಕಾಲೇಜಿನಲ್ಲಿರುವಾಗಲೇ ಪರಿಚಯವಾಗುತ್ತೆ. ಪರಿಸರ ಹಾಗೂ ಪ್ರಕೃತಿ ಮೇಲಿನ ಇವರಿಬ್ಬರಲ್ಲಿ ಇದ್ದ ಸಮಾನ ಮನಸ್ಸಿನಿಂದ ಪ್ರೀತಿ ಹುಟ್ಟಿ, ಸಪ್ತಪದಿ ತುಳಿಯುವಂತೆ ಮಾಡುತ್ತೆ.
ಸರಿ, ಮದುವೆಯಾಯಿತು. ಹನಿಮೂನಿಗೆ ಆಯ್ಕೆ ಮಾಡಿ ಕೊಂಡಿದ್ದು ಹುವಾಯಿ ದ್ವೀಪವನ್ನು. ಅಲ್ಲಿ ಸೌಂದರ್ಯ ನೋಡಿ, ಅಲ್ಲಿಯೇ ನೆರೆಯೂರುತ್ತಾರೆ. ಬದುಕು ಚೆಂದವಾಗಿಯೇ ಇರುತ್ತೆ. ಆದರೆ, ಮಲ್ಹೋತ್ರಾ ತಂದೆ ಕೊನೆಯುಸಿರೆಳೆದು, ಹರಿದ್ವಾರದಲ್ಲಿ ಕರ್ಮ ಮಾಡಲು ಹೋದಾಗ ಇವರ ಮನಸ್ಸು ಅಲ್ಲಿನ ಮಾಲಿನ್ಯಕ್ಕೆ ಮರಗುತ್ತೆ. ತಕ್ಷಣವೇ ಭಾರತದ ನೆಲ, ಜಲ, ನಿಸರ್ಗವನ್ನು ರಕ್ಷಿಸುವ ಪಣ ತೊಡುತ್ತದೆ ಈ ಜೋಡಿ.
ಹುವಾಯಿಲ್ಲಿ ಕಷ್ಟು ಪಟ್ಟು ಸಂಪಾದಿಸಿದ ಆಸ್ತಿ ಮಾರಿ, ನಾಗರಹೊಳೆ ಸಮೀಪ 55 ಎಕರೆ ಕಾಡು ಖರೀದಿಸುತ್ತಾರೆ. SAI ಹುಟ್ಟು ಹಾಕುತ್ತಾರೆ. ಇದೀಗ ಸಮೃದ್ಧವಾಗಿ ಬೆಳೆದು, 300 ಎಕರೆ ಕಾಡಾಗಿದೆ.
ಹಾಗಂತ ಎಲ್ಲಿಂದಲೋ ಬಂದ ಈ ಜೋಡಿ ಕರುನಾಡಲ್ಲಿ ನೆಲೆಯೂರುತ್ತೇವೆ ಎಂದಾಗ ಸ್ಥಳೀಯರ ವಿರೋಧ ಸಹಜವಾಗಿಯೇ ಇತ್ತು. ಅವರನ್ನು ಸಮಾಧಾನ ಮಾಡಿ, ವಿಶ್ವಾಸ ಗಳಿಸುವುದೇ ಈ ಪ್ರಕೃತಿ ಪ್ರೇಮಿಗಳಿಗೆ ದೊಡ್ಡ ಸವಾಲಾಗಿತ್ತು. ಪ್ರಕೃತಿ ಮೇಲಿನ ಪ್ರೀತಿ ಮುಂದೆ ಇವೆಲ್ಲ ಈ ಜೋಡಿಗೆ ನಗಣ್ಯ ಎನಿಸಿ ಬಿಡ್ತು. ಎಲ್ಲ ಅಡೆ ತಡೆಗಳನ್ನು ದಾಟಿ, ಮುನ್ನಡಿ ಇಡಲು ಹೆಚ್ಚು ದಿನ ಹಿಡಿಯಲಿಲ್ಲ.
ಇದೀಗ ಇವರೇ ಉಳಿಸಿ, ಬೆಳೆಸಿರುವ ಕಾಡಿನಲ್ಲಿ ಆನೆಗಳು, ನೀರು ನಾಯಿ, ಜಿಂಕೆಯಂಥ ವನ್ಯ ಮೃಗಗಳೂ ಇವೆ. ಪಕ್ಷಿಗಳಿಗಂತೂ ಲೆಕ್ಕವೇ ಇಲ್ಲ. ಶತಮಾನಗಳು ಕಂಡಿರುವ ಮರಗಳ ಮಧ್ಯೆಯೇ ಇವರ ವಾಸ.
ಇದೀಗ ಪ್ರಕೃತಿ ಪ್ರೇಮಿಗಳ, ವಿಜ್ಞಾನಿಗಳ ಪ್ರಯೋಗಾಲಯ. ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಇಲ್ಲಿ ಅಭಯಾರಣ್ಯಕ್ಕೆ ಸಂಬಂಧಿಸಿದ ನೋಟ್ ಮಾಡಿಕೊಂಡು ಹೋಗುತ್ತಾರೆ.
ಕಾಡನ್ನು ಉಳಿಸಲು, ನಾಟ ಕಡಿಯುವುದನ್ನು ತಪ್ಪಿಸಲು, ಪ್ರಕೃತಿ ಸೌಂದರ್ಯವನ್ನು ಉಳಿಸಿಕೊಳ್ಳಲು ಇವರು ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿದ್ದಾರೆ.
ಈ ಸಾಯಿ ವನ್ಯಧಾಮಕ್ಕೆ ಏಷ್ಯಾ ಪರಿಸರ ಸ್ನೇಹಿ ವನ್ಯಧಾಮ ಪ್ರಶಸ್ತಿ ಒಲಿದಿದೆ. ಪಮೇಲಾ ಅವರಿಗೆ ಪ್ರತಿಷ್ಠಿತ ನಾರಿ ಪುರಸ್ಕಾರ ನೀಡಿ, ಭಾರತ ಸರಕಾರ ಗೌರವಿಸಿದೆ.
ನೀವು ಇಂಥ ಸ್ಥಳಕ್ಕೆ ಭೇಟಿ ನೀಡಬೇಕಾ? ಜೂನ್-ಅಕ್ಟೋಬರ್ ಹೊರತು ಪಡಿಸಿ, ಬೇರೆ ಟೈಮಲ್ಲಿ ತೆರಳಬಹುದು. ಉಳಿಯುವ ವ್ಯವಸ್ಥೆಯೂ ಇದೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬ್ರಹ್ಮಗಿರಿ ಮತ್ತು ನಾಗರಹೊಳೆ ಅಭಯಾರಣ ವ್ಯಾಪ್ತಿಯ ತೆರಾಲು ಎಂಬ ಗ್ರಾಮದಲ್ಲಿ ಮಲ್ಹೋತ್ರಾ ದಂಪತಿ ಉಳಿಸಿರುವ, ವಿಶ್ವದ ಏಕೈಕ ಖಾಸಗಿ ಅಭಯಾರಣ್ಯವಿದೆ.
ಈ ಅದ್ಭುತ ಸ್ಥಳಕ್ಕೆ ತೆರಳಿದಾಗ ಪ್ರಕೃತಿ ಮಾತೆಗೆ ಅಪಚಾರವಾಗದಂತೆ ನಡೆದುಕೊಳ್ಳುವುದು ನಿಮ್ಮ ಕರ್ತವ್ಯ.