ಉತ್ತರ ಕನ್ನಡ: ಭಟ್ಕಳದಲ್ಲಿ ಶಿಲಾಯುಗದ ಅತೀ ದೊಡ್ಡ ಬಂಡೆಚಿತ್ರ ನೆಲಶೋಧ!

First Published Apr 7, 2024, 8:25 PM IST

ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕರೂರು ಗ್ರಾಮದ ಸಮೀಪ ಕ್ರಿಸ್ತಪೂರ್ವದ ಅತೀ ದೊಡ್ಡ ಬಂಡೆ ಚಿತ್ರದ ನೆಲೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕರಾದ ಡಾ.ಜಗದೀಶ್ ಅಸೋದೆ ಹಾಗೂ ಡಾ. ಮಾಧುರಿ ಚೌಗುಲೆ ಅವರು ಪತ್ತೆ ಮಾಡಿ ಸಂಶೋಧನೆ ನಡೆಸಿದ್ದಾರೆ. 

ಈ ಸಂಶೋಧನೆಗೆ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರುಗಳಾದ ಡಾ. ಆರ್. ಎಂ ಷಡಕ್ಷರಯ್ಯ ಹಾಗೂ ಡಾ. ಎಸ್. ಕೆ. ಕಲ್ಲೋಳಿಕರ ಅವರು ಮಾರ್ಗದರ್ಶನ ನೀಡಿದ್ದಾರೆ. ಶಿಲಾ ಯುಗದಲ್ಲಿ ಮಾನವ ತನ್ನ ಸಂವಹನಕ್ಕಾಗಿ ಹಾಗೂ ಸಂದೇಶ ಸಾರುವ ಉದ್ದೇಶಕ್ಕೆ ಬಂಡೆಗಳ ಮೇಲೆ ಚಿತ್ರಗಳನ್ನು ಕೆತ್ತುತ್ತಿದ್ದ. ಭಟ್ಕಳದಲ್ಲಿ ಬಂಡೆಗಳ ಬದಲು ನೆಲಹಾಸಿನ ಚೀರೆಕಲ್ಲಿನಲ್ಲಿ ಕೆತ್ತಲಾಗಿದ್ದು, ಇತಿಹಾಸಕಾರರ ಪ್ರಕಾರ ಇದು ಅಪರೂಪ ಹಾಗೂ ಕೆಲವೇ ಪ್ರದೇಶದಲ್ಲಿ ಕಾಣಬಹುದಾಗಿದೆ. 

ಭಟ್ಕಳ ತಾಲೂಕಿನ ಮುರುಡೇಶ್ವರದಿಂದ ಸುಮಾರು 6ಕಿ.ಮೀ ದೂರ ಇರುವ ಕರೂರು ಗ್ರಾಮದಿಂದ ಪೂರ್ವಕ್ಕೆ 1 ಕಿ.ಲೋ. ಮೀಟರ್ ಅಂತರದಲ್ಲಿ ಈ ಬಂಡೆಗಳಿವೆ. 20 ಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದ್ದು, ಜಂಬಿಟ್ಟಿಗೆ ನೆಲದಲ್ಲಿ 13 ಮೀಟರ್ ಉದ್ದ, 20 ಮೀಟರ್ ಅಗಲದಲ್ಲಿ ಇದನ್ನು ರಚಿಸಲಾಗಿದೆ. 

ಇಲ್ಲಿರುವ 20 ರೇಖಾ ಚಿತ್ರಗಳನ್ನು ನಾಲ್ಕು ಹಂತದಲ್ಲಿ ವಿಭಾಗಿಸಲಾಗಿದೆ. ಒಂದನೇ ಗುಂಪಿನಲ್ಲಿ ಜಿಂಕೆ, ಎತ್ತು, ಮತ್ತು ಮನುಷ್ಯನ ಚಿತ್ರಗಳಿದ್ದು, ಈ ಚಿತ್ರವು 1.65 ಮೀಟರ್ ನಷ್ಟು ಉದ್ದವಾಗಿದ್ದು ,1.25 ಸೆ.ಮೀ ಅಗಲವಿದೆ. ಇದು ನೂತನ ತಾಮ್ರಶಿಲಾ ಸಂಸ್ಕೃತಿ (ಕ್ರಿ.ಪೂ.1800-ಕ್ರಿ.ಪೂ.800) ಕಾಲಘಟ್ಟದಾಗಿವೆ. 2ನೇ ಗುಂಪಿನ ಚಿತ್ರಗಳಲ್ಲಿ ಸುಮಾರು 5 ಸಣ್ಣ ಸಣ್ಣ ಜಿಂಕೆಗಳಿವೆ. ಆ ಜಿಂಕೆಯು 80 ಸೆ.ಮೀ. ಉದ್ದ, 60 ಸೆ.ಮೀ. ಅಗಲವಿದೆ.
 

ಇಲ್ಲಿ ಆಳವಾಗಿ ಕೆತ್ತಿರುವ ಕೆಲವು ಜಿಂಕೆಗಳ ರೇಖಾಚಿತ್ರಗಳು ಕಬ್ಬಿಣದ ಬೃಹತ್ ಶಿಲಾಯುಗ ಕಾಲಘಟ್ಟಕ್ಕೆ (ಕ್ರಿ.ಪೂ. 1000-ಕ್ರಿ.ಪೂ.2 ನೆಯ ಶತಮಾನ) ಸೇರುತ್ತವೆ. ಇದರ ಕೆಳಭಾಗದಲ್ಲಿ ವೃತ್ತಾಕಾರದ ಮೂರು ಕುಣಿಗಳ ಸಮೂಹವನ್ನು ಒಂದರ ಕೆಳಗೆ ಒಂದರಂತೆ ಅನುಕ್ರಮವಾಗಿ ತೋರಿಸಲಾಗಿದೆ. ಪ್ರತಿ ಸಮೂಹದಲ್ಲಿ ಎರಡು ಸಾಲುಗಳಲ್ಲಿ 12 ಕುಣಿಗಳಿವೆ. 

4 ನೇ ಗುಂಪಿನ ಚಿತ್ರಗಳಲ್ಲಿ ದೊಡ್ಡ ಮನುಷ್ಯನ ಆಕೃತಿಯ ತಲೆಯ ಮೇಲೆ ಬಲಭಾಗದಲ್ಲಿ ಸ್ವಲ್ಪ ದೂರದಲ್ಲಿ ಒಂದು ಎತ್ತಿನ ರೇಖಾಚಿತ್ರವಿದೆ. ಅದರ ಉದ್ದ 80 ಸೆ.ಮೀ. ಅಗಲ 50 ಸೆ.ಮೀ. ಎತ್ತರವಾದ ಡುಬ್ಬವಿದೆ ಮತ್ತು ಬಾಲವಿದೆ. 
 

ಇಲ್ಲಿರುವ ಮನುಷ್ಯನ ಚಿತ್ರವು ಇತಿಹಾಸದ ಆರಂಭಿಕ (ಕ್ರಿ.ಪೂ. 1ನೆಯ ಶತಮಾನದಿಂದ- ಕ್ರಿ.ಶ. 2ನೆಯ ಶತಮಾನ) ಕಾಲಘಟ್ಟದ್ದಾಗಿದೆ. ಸದ್ಯ ಕರಾವಳಿ ಭಾಗದಲ್ಲಿ ಈ ಬೃಹದಾಕಾರದ ಬಂಡೆ ಚಿತ್ರಗಳು ದೊರಕಿರೋದು, ಇತಿಹಾಸ ಪೂರ್ವದಲ್ಲೂ ಈ ಭಾಗದಲ್ಲಿ ನಾಗರೀಕತೆ ಇತ್ತು ಹಾಗೂ ಜನವಸತಿ ಇತ್ತು ಎಂಬ ಬಗ್ಗೆ ಬೆಳಕು ಚೆಲ್ಲುತ್ತದೆ.

click me!