ಜೀವಂತ ಕಾಡಾನೆಯ ದಂತ ಕತ್ತರಿಸಿದ ಕರ್ನಾಟಕ ಅರಣ್ಯ ಇಲಾಖೆ

First Published | May 19, 2024, 5:37 PM IST

ಚಾಮರಾಜನಗರ (ಮೇ 19): ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಿಂದ ಜೀವಂತ ಆನೆಯ ದಂತವನ್ನು ಕತ್ತರಿಸುವ ಮೂಲಕ ಮೊದಲ ಬಾರಿಗೆ ಇತಿಹಾಸವನ್ನು ಬರೆದಿದೆ. ಜೀವಂತ ಆನೆಯ ದಂತವನ್ನು ಅರ್ಧ ಭಾಗ ಕತ್ತರಿಸಿ ತೆಗೆಯುವುದಕ್ಕೆ ದಂತಮೋಚನ ಎಂದು ಹೇಳಲಾಗುತ್ತದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರದಲ್ಲಿರುವ ಕಾಡಾನೆಗೆ ಆಪರೇಷನ್ ದಂತಮೋಚನ ಮಾಡಲಾಗಿದೆ. ರಾಜ್ಯ ಅರಣ್ಯ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೀವಂತ ಕಾಡಾನೆಯೊಂದಕ್ಕೆ ದಂತ ಮೋಚನ ಮಾಡಲಾಗಿದೆ. 

ಬಂಡೀಪುರ ಅರಣ್ಯದ ಗಡಿಯಲ್ಲಿರುವ ರೈತರ ಜಮೀನುಗಳಿಗೆ ನಿತ್ಯ ಲಗ್ಗೆ ಇಟ್ಟು, ಕೃಷಿ ಬೆಳೆಗಳನ್ನು ತಿಂದು ನಾಶ ಮಾಡುತ್ತಿದ್ದ ಗಂಡು ಕಾಡಾನೆಯ ಉಪಟಳಕ್ಕೆ ರೈತರು ಬೇಸತ್ತಿದ್ದರು.

Tap to resize

ಬಂಡೀಪುರ ಅರಣ್ಯದ ಗಡಿ ಭಾಗದ ಹಳ್ಳಿಗಳಾದ ಹಂಗಳ, ಕಲೀಗೌಡನಹಳ್ಳಿ, ದೇವರಹಳ್ಳಿ ಮೊದಲಾದ ಗ್ರಾಮಗಳಲ್ಲಿ ಈ ಕಾಡಾನೆಯ ಉಪಟಳ ಮಿತಿ ಮೀರಿದ್ದು, ಆನೆಯನ್ನು ಹಿಡಿಯುವಂತೆ ರೈತರು ಪಟ್ಟು ಹಿಡಿದಿದ್ದರು.

ರೈತರ ಬೆಳೆಗಳನ್ನು ತಿನ್ನಲು ಆಗಮಿಸುತ್ತಿದ್ದ ಆನೆಯ ಮೇಲೆ ಕಣ್ಣಿಟ್ಟ ಅರಣ್ಯ ಅಧಿಕಾರಿಗಳು, ಅದನ್ನು ಸೆರೆ ಹಿಡಿದಿದ್ದಾರೆ. ಆದರೆ, ಬಲಿಷ್ಠ ಕಾಡಾನೆ ಆಹಾರಕ್ಕಾಗಿ ಅರಣ್ಯದಿಂದ ಹೊರಬರಲು ಕಾರಣವೇನೆಂದು  ವೈಜ್ಞಾನಿಕ ವಿಶ್ಲೇಷಣೆ  ಮಾಡಿದ್ದಾರೆ.

ಆಗ ಗಂಡಾನೆಗೆ ಬಹುದೊಡ್ಡದಾಗಿ ಉದ್ದವಾಗಿ ಅಡ್ಡಾದಿಡ್ಡಿ ಬೆಳೆದುಕೊಂಡಿದ್ದ ಆನೆಯ ದಂತಗಳು ಒಂದಕ್ಕೊಂದು ಕತ್ತರಿಯಂತೆ ಹೆಣೆದುಕೊಂಡಿದ್ದವು. ಇದರಿಂದ ದಂತದ ಒಳಗೆ ಆನೆಯ ಸೊಂಡಿಲು ಸಿಕ್ಕಿಕೊಂಡಿದೆ. ಕಾಡಲ್ಲಿರುವ ಗಿಡ-ಮರಗಳಲ್ಲಿನ ಸೊಪ್ಪು ಹಾಗೂ ಎತ್ತರದಲ್ಲಿರುವ ಬಿದಿರಿನ ಹುಲ್ಲು ಕಿತ್ತುಕೊಂಡು ತಿನ್ನಲು ಸಾಧ್ಯವಾಗದೇ ಬಳಲುತ್ತಿತ್ತು. ಇನ್ನು ಬೇಸಿಗೆ ಹಿನ್ನೆಲೆಯಲ್ಲಿ ನೆಲದಲ್ಲಿ ಬೆಳೆಯುವ ಹುಲ್ಲು ಸಿಗದೇ ಕಾಡಾನೆ ರೈತರ ಜಮೀನುಗಳಿಗೆ ಬಂದು ಬೆಳೆಗಳನ್ನು ತಿಂದು ಹೋಗುತ್ತಿತ್ತು.
 

ನೆಲಮಟ್ಟದಲ್ಲಿ ಬೆಳೆದ ಕಬ್ಬು , ಬಾಳೆ ಗಿಡ, ಟೊಮ್ಯಾಟೊ ಮತ್ತಿತರ ತರಕಾರಿ ಬೆಳೆಗಳನ್ನು ಸುಲಭವಾಗಿ ತಿಂದು ಆನೆ ಹಸಿವು ನೀಗಿಸಿಕೊಳ್ಳುತ್ತಿತ್ತು. ಇದನ್ನೇ ನಿತ್ಯ ಅಭ್ಯಾಸ ಮಾಡಿಕೊಂಡಿದ್ದ ಗಂಡಾನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ನಂತರ, ಕಾಡಾನೆಗೆ ಅಡ್ಡಾದಿಡ್ಡಿ ಬೆಳೆದಿದ್ದ ದಂತಗಳನ್ನು ಕತ್ತರಿಸಿ ಸುಲಭವಾಗಿ ಸೊಂಡಿಲು  ಹೊರಚಾಚಾಲು ಅನುವು ಮಾಡಿಕೊಡಲಾಗಿದೆ. ಈ ಮೂಲಕ ಆನೆಯು ಸೊಂಡಿಲಿನ್ನು ಮೇಲೆತ್ತಿ ಸೊಪ್ಪುಗಳನ್ನು ಕಿತ್ತು ತಿನ್ನುವುದಕ್ಕೆ ಅಭ್ಯಾಸವನ್ನು ಮಾಡಿಸಲಾಗಿದೆ.

ಆನೆಯ ದಂತ ಕತ್ತರಿಸಿದ ಬಳಿಕ ಅದನ್ನು ಕಬಿನಿ ಹಿನ್ನೀರಿನ ಗುಂಡ್ರೆ ವಲಯ ಅರಣ್ಯಕ್ಕೆ ಬಿಡುಗಡೆ ಮಾಡಲಾಗಿದೆ. ಇದೀಗ ಕಾಡಿನಲ್ಲಿ  ಆನೆಯು ಸರಾಗವಾಗಿ ಸೊಪ್ಪು ಸೆದೆ ಮೇಯ್ದುಕೊಂಡು ಓಡಾಡಿಕೊಂಡಿದೆ. ಇನ್ನು ಹಲವು ದಿನಗಳ ಕಾಲ ಆನೆಯ ಸಂಚಾರದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ನಿಗಾ ಇಟ್ಟಿದ್ದು, ಆನೆ ನಾಡಿನತ್ತ ಮುಖ ಮಾಡಿಲ್ಲ. ದಂತ ಮೋಚನದಿಂದ ಒಂದೆಡೆ ಕಾಡಾನೆ ದಾಳಿಯಿಂದ ಬೆಳೆಗಳಿಗೆ ರಕ್ಷಣೆ ಸಿಕ್ಕಿದ್ದು, ಕಾಡಾನೆಗಿದ್ದ ದಂತ ಸಮಸ್ಯೆಗೂ ಪರಿಹಾರ ಸಿಕ್ಕಂತಾಗಿದೆ.

Latest Videos

click me!