ಮೂಡುಬಿದಿರೆ ಸಹಸ್ರಕಂಬ ಬಸದಿಯ ಕಲ್ಲು ಕಲ್ಲಿನಲೂ ಯೋಗ ಚಿತ್ತಾರ!

First Published | Jun 21, 2024, 12:18 PM IST

ನಮ್ಮ ಪ್ರಾಚೀನ ಪರಂಪರೆಯ ಯೋಗ ಇಂದು ಜಗದಗಲ ವಿಸ್ತಾರ ಪಡೆದಿದೆ. ಆದರೆ ಶತಮಾನಗಳ ಹಿಂದೆಯೇ ನಿರ್ಮಿತವಾಗಿದ್ದ ಜೈನಕಾಶಿ ಮೂಡುಬಿದಿರೆಯ ಸಹಸ್ರಕಂಬ ಬಸದಿಯ ಕಲ್ಲಿನ ಚಿತ್ತಾರದಲ್ಲಿ ಪ್ರಾಚೀನ ಯೋಗದ ವಿಶಿಷ್ಟ ಭಂಗಿಗಳ ಕೆತ್ತನೆಗಳಿವೆ. ಇದು ಹಿಂದಿನ ಕಾಲದಲ್ಲೇ ಯೋಗ ಎಷ್ಟು ಜನಪ್ರಿಯವಾಗಿತ್ತು ಎಂಬುದನ್ನು ಸಾಕ್ಷೀಕರಿಸಿದೆ.
 

- ರಾಘವೇಂದ್ರ ಅಗ್ನಿಹೋತ್ರಿ

ಸಹಸ್ರಕಂಬ ಬಸದಿಯಲ್ಲಿ ವಿವಿಧ ಯೋಗ ಭಂಗಿಗಳಲ್ಲದೆ ಪಶು, ಪಕ್ಷಿ, ಪ್ರಾಣಿ, ಆಹಾರ- ಆರೋಗ್ಯ- ಆಧ್ಯಾತ್ಮ ಕುರಿತ ಚಿತ್ರಗಳನ್ನು ಚಿತ್ರಿಸಿ ಸಮೃದ್ಧ ಸ್ವಸ್ಥ ಭಾರತದ ಕಲ್ಪನೆಯನ್ನೂ 15 ನೇ ಶತಮಾನದಲ್ಲಿ ಕಲ್ಲಿನಲ್ಲಿ ಕೆತ್ತಿ ತೋರಿಸಲಾಗಿದೆ. ಆಗಿನ ಕಾಲದ ಶ್ರೀಮಂತ ವೈಭವವನ್ನು ಈ ಬಸದಿಯ ಕಲ್ಲು ಕಲ್ಲಿನಲ್ಲೂ ಕಾಣಬಹುದಾಗಿದೆ.
 

ಯೋಗ ಶಿಲ್ಪ: ಯೋಗಾಸನದ ವಿವಿಧ ಭಂಗಿಗಳನ್ನು ಬಸದಿಯ ಕಲ್ಲಿನಲ್ಲಿ ಹಾಗೂ ಗೋಡೆಯ ಕಂಬಗಳಲ್ಲಿ ಕೆತ್ತಲಾಗಿದೆ.

ಪದ್ಮಾಸನ, ವಜ್ರಾಸನ, ಶಲಭಾಸನ, ಮಯೂರಾಸನ, ಗರ್ಭಾಸನ, ಶೀರ್ಷಾಸನ, ಗೋರಕ್ಷಾಸನ ಹೀಗೆ 20 ವಿವಿಧ ಯೋಗಾಸನಗಳ ಕೆತ್ತನೆಗಳು ಇಲ್ಲಿವೆ. ನವನಾರಿ ಕುಂಜರ, ಪಂಚನಾರಿ ತುರಗವನ್ನು ಭೈರಾದೇವಿ ಮಂಟಪ ಹಾಗೂ ಗೋಡೆಯ ಕಂಬಗಳಲ್ಲಿ ಚಿತ್ರಿಸಿ ಆ ಕಾಲದಲ್ಲೇ ಸ್ತ್ರೀಶಕ್ತಿಯ ಮಹತ್ವವನ್ನು ಕಲ್ಲಿನ ಕೆತ್ತನೆಯಲ್ಲಿ ವಿವರಿಸಲಾಗಿದೆ. ಸ್ವಸ್ಥ ಸಮೃದ್ಧ ಭಾರತದ ಕಲ್ಪನೆಯೂ ಹಿಂದಿನಿಂದಲೇ ಇತ್ತು ಎಂಬುದ ಶಿಲ್ಪಗಳಲ್ಲಿ ತೋರಿಸಲಾಗಿದೆ.
 

Tap to resize

ಸಹಸ್ರಕಂಬ ಬಸದಿ: ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಈ ಸಹಸ್ರಕಂಬ ಬಸದಿಯಿದೆ. 1430 ರಲ್ಲಿ ಇದರ ನಿರ್ಮಾಣ ಆರಂಭಗೊಂಡು 1496ರಲ್ಲಿ ಮುಕ್ತಾಯಗೊಂಡಿತ್ತು. ಅಂದಿನ ಚಾರುಕೀರ್ತಿ ಪಂಡಿತದೇವ ಸ್ವಾಮೀಜಿಯವರ ಆಶಯದಂತೆ ಐರೋಪ್ಯ ರಾಷ್ಟ್ರಗಳಿಗೆ ಸಾಂಬಾರು ಪದಾರ್ಥಗಳನ್ನು ರಫ್ತು ಮಾಡುತ್ತಿದ್ದ ಕಾಳುಮೆಣಸಿನ ರಾಣಿ ಎಂದೇ ಪ್ರಸಿದ್ಧಿ ಪಡೆದಿದ್ದ ಚೆನ್ನಭೈರಾದೇವಿಯವರ ನೇತೃತ್ವದಲ್ಲಿ ಬಸದಿ ನಿರ್ಮಾಣಗೊಂಡಿದೆ. ಇಲ್ಲಿ 1008 ಜಿನ ಬಿಂಬಗಳಿದ್ದು, ಸಾವಿರ ಬಿಂಬ ಬಸದಿ ಎಂದೂ ಕರೆಯುತ್ತಾರೆ.
 

ಇದರ ಗೋಡೆಗಳಲ್ಲಿ ಚೀನಾದ ಡ್ರ್ಯಾಗನ್, ಆಫ್ರಿಕಾದ ಜಿರಾಫೆ, ಕುದುರೆ, ರಾಜಸ್ಥಾನದ ಒಂಟೆ ಹೀಗೆ ವಿವಿಧ ಚಿತ್ರಗಳನ್ನು ಚಿತ್ರಿಸಲಾಗಿದೆ. ಪಶು ಪಕ್ಷಿ, ಪ್ರಾಣಿ, ವಿವಿಧ ವೃತ್ತಿಗಳ ಚಿತ್ರ, ರಾಜರುಗಳ ಲಾಂಛನ, ಶುಕ ಪಿಕಾದಿಗಳ ಚಿತ್ರಗಳೂ ಇಲ್ಲಿದ್ದು, ಅಂದಿನ ಕಾಲದ ನಾಗರೀಕತೆಯ ಶ್ರೀಮಂತ ವೈಭವವನ್ನು ಗೊಡೆಗಳಲ್ಲಿ ಕಲ್ಲಿನಲ್ಲಿ ಅತ್ಯಾಕರ್ಷವಾಗಿ ಚಿತ್ರಿಸಲಾಗಿದೆ. ಈ ಬಸದಿಯಲ್ಲಿ ಪಂಚಲೋಹದ 9 ಅಡಿ ಎತ್ತರದ ಚಂದ್ರನಾಥಸ್ವಾಮಿ ವಿಗ್ರಹ ಕಂಗೊಳಿಸುತ್ತಿದೆ. ಇಲ್ಲಿನ ಶಿಲ್ಪ ವೈಭವವನ್ನು ಕಂಡು ಪರ್ಷಿಯಾದ ರಾಯಭಾರಿ ವಾಲ್‌ಹೌಸ್‌ ಹಾಗೂ ಬುಕಾನಿನ್‌, ರೈಸ್‌ ಮೊದಲಾದವರು ಬೆರಗುಗೊಂಡಿದ್ದರು.
 

ಜಕಣಾಚಾರಿ ಮತ್ತು ಡಂಕಣಾಚಾರಿ ವಂಶದವರು ಈ ಕೆತ್ತನೆ ಮಾಡಿದ್ದಾರೆ. ಬೇಲೂರು ಹಳೆಬೀಡು ಹಾಗೂ ತಮಿಳುನಾಡಿನಿಂದ ಶಿಲ್ಪಿಗಳನ್ನು ಕರೆಸಿ ಮೂರ್ನಾಡು ಎಂಬ ಗ್ರಾಮದಲ್ಲಿ ಅವರಿಗೆ ವಾಸ್ತವ್ಯ ಕಲ್ಪಿಸಿ ಶಿಲ್ಪಗಳನ್ನು ಕೆತ್ತನೆ ಮಾಡಿಸಲಾಗಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ.
 

ಯೋಗ ದಿನಾಚರಣೆಗೆ ದಶಮಾನದ ಸಂಭ್ರಮ

ಯೋಗ ಇಂದು ಹಳ್ಳಿಯಿಂದ ದಿಲ್ಲಿವರೆಗೂ ವಿಸ್ತರಿಸಿದ್ದು, ತನ್ನ ಹಿಂದಿನ ಗತ ವೈಭವ ಪಡೆದುಕೊಂಡಿದೆ. 2014 ರಲ್ಲಿ ವಿಶ್ವಸಂಸ್ಥೆ ಜೂನ್‌ 21 ವಿಶ್ವ ಯೋಗ ದಿನವೆಂದು ಘೋಷಿಸಿದ ಬಳಿಕ ಯೋಗಕ್ಕೆ ಜಾಗತಿಕ ಮನ್ನಣೆ ದೊರೆತಿದೆ. ವಿಶ್ವಸಂಸ್ಥೆ ಘೋಷಣೆ ಮಾಡಿ 10 ವರ್ಷ ಕಳೆದಿದ್ದು, ಇಂದು ದಶಮಾನೋತ್ಸವ. ಆದರೆ ಶತ ಶತಮಾನಗಳ ಹಿಂದೆಯೇ ಭಾರತದಲ್ಲಿ ಋಷಿಮುನಿಗಳು ಯೋಗ, ಪ್ರಾಣಾಯಾಮಗಳ ಮೂಲಕ ಸ್ವಸ್ಥರಾಗಿರುತ್ತಿದ್ದರು ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.

ಹಿಂದಿನ ಕಾಲದ ಆಹಾರ, ಆಧ್ಯಾತ್ಮದ ಕುರಿತು ಜೈನಕಾಶಿ ಮೂಡುಬಿದಿರೆಯ ಸಹಸ್ರಕಂಬ ಬಸದಿಯಲ್ಲಿ 15 ನೇ ಶತಮಾನದಲ್ಲೇ ಕಲ್ಲಿನಲ್ಲಿ ಕೆತ್ತಲಾಗಿದೆ. ಇದು ಹೊಯ್ಸಳ ಮತ್ತು ನಾಗರ ಶೈಲಿಯ ನಡುವಣ ವೇಸರ ಶೈಲಿಯ ಬಸದಿಯಾಗಿದೆ. ಯೋಗದ ವಿವಿಧ ಆಸನಗಳನ್ನೂ ಇಲ್ಲಿ ಕಲ್ಲಿನಲ್ಲಿ ಸುಂದರವಾಗಿ ಕೆತ್ತಲಾಗಿದ್ದು, ಸ್ವಸ್ಥ ಮತ್ತು ಸಮೃದ್ಧ ಭಾರತದ ಕಲ್ಪನೆ ಹಿಂದಿನ ಕಾಲದಲ್ಲೇ ಇತ್ತು ಎಂಬ ಬಗ್ಗೆ ಆಧಾರವಾಗಿದೆ

-ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ, ಮೂಡುಬಿದಿರೆ

Latest Videos

click me!