ಸ್ಯಾಂಡಲ್‌ವುಡ್ ಸಿನಿಮಾದಲ್ಲಿ ಮಿಂಚಿ ಮರೆಯಾದ ಮತ್ತೊಬ್ಬ ನಟಿ ಎಂದರೆ ಮೈಸೂರಿನ ವಿದ್ಯಾ. ನಟಿ ವಿದ್ಯಾ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದರು. ಅವರ ಪ್ರಮುಖ ಮತ್ತು ಮುಖ್ಯಪಾತ್ರದ ಸಿನಿಮಾ ಎಂದರೆ ಜೈ ಮಾರುತಿ 800 ಸಿನಿಮಾ ಆಗಿದೆ. ಇದರಲ್ಲಿ ಶರಣ್ ಮತ್ತು ಶೃತಿ ಹರಿಹರನ್ ಅವರೊಂದಿಗೆ ನಟಿಸಿದ್ದಳು. ಇದಾದ ನಂತರ ಶಿವರಾಜ್ ಕುಮಾರ್ ಸಿನಿಮಾಗಳಾದ ಭಜರಂಗಿ, ವೇದ ಸಿನಿಮಾಗಳು ಮತ್ತು ಅಜಿತ್ ಸಿನಿಮಾದಲ್ಲಿಯೂ ನಟಿಸಿದ್ದಳು.
ನಟಿ ವಿದ್ಯಾ ಅವರು ಮೂಲತಃ ಪಿರಿಯಾಪಟ್ಟಣ ಮೂಲದವರು. ಇನ್ನು ಜೈ ಮಾರುತಿ 800 ಸಿನಿಮಾದ ನಂತರ ಮತ್ತಷ್ಟು ಖ್ಯಾತಿ ಗಳಿಸಿದ್ದ ವಿದ್ಯಾ ಮೈಸೂರು ತಾಲೂಕು ಟಿ.ನರಸೀಪುರ ತಾಲೂಕಿನ ತುರಗನೂರು ಗ್ರಾಮದ ನಂದೀಶ್ ಎನ್ನುವವರನ್ನು ಮದುವೆ ಆಗಿದ್ದರು.
ಪತ್ನಿ ವಿದ್ಯಾಳ ಏಳಿಗೆಯನ್ನು ಕಂಡು ಆರಂಭದ ನಾಲ್ಕೈದು ವರ್ಷ ಸುಖವಾಗಿಯೇ ಸಂಸಾರ ಮಾಡಿಕೊಂಡಿದ್ದ ದಂಪತಿಗೆ ಮುದ್ದಾದ ಎರಡು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಇವರು ಆಗಿಂದಾಗ್ಗೆ ಟ್ರಿಪ್ ಎಂದೆಲ್ಲಾ ಹೋಗಿ ಜೋಡಿ ಎಂದರೆ ಹೀಗಿರಬೇಕು ಎನ್ನುವಂತಿದ್ದರು.
ಮದುವೆಯ ಬಳಿಕ ವಿದ್ಯಾ ಸಿನಿಮಾದ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಳ್ಳಲು ಮುಂದಾದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದಳು. ಕಳೆದ ವರ್ಷದ 2023ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕುಟುಂಬಕ್ಕಿಂತ ರಾಜಕೀಯ ಚಟುವಟಿಕೆಗಳಲ್ಲಿಯೇ ವಿದ್ಯಾ ಹೆಚ್ಚಾಗಿ ತೊಡಗಿಸಿಕೊಂಡಿದ್ದರು.
ಭಾರತ್ ಜೋಡೋ ಯಾತ್ರೆಯಲ್ಲಿಯೂ ಕಾಣಿಸಿಕೊಂಡು ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೂ ಕಾಣಿಸಿಕೊಂಡಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ ವಿದ್ಯಾ ಇತ್ತೀಚೆಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯೂ ಆಗಿದ್ದಳು.
ರಾಜಕೀಯ ನಂಟಿನಿಂದ ಮನೆಯಿಂದ ದೂರವೇ ಉಳಿದುಕೊಳ್ಳುತ್ತಿದ್ದ ವಿದ್ಯಾಳ ಮೇಲೆ ಗಂಡ ಅಸಮಾಧಾನ ಹೊರ ಹಾಕಿದ್ದಾನೆ. ಇದರಿಂದ ಇಬ್ಬರ ನಡುವೆ ಮೊದಲು ವೈಮನಸ್ಸು ಬಂದು ಆರಂಭದಲ್ಲಿ ಸಣ್ಣ ಪುಟ್ಟ ಜಗಳವಾಗಿದೆ.ಪ್ರತಿಬಾರಿ ವಿದ್ಯಾ ಮನೆಯಿಂದ ಹೊರಗೆ ಹೋಗುವಾಗಲೂ ಗಂಡ ಮತ್ತು ಅತ್ತೆಯ ಕಿರಿ-ಕಿರಿ ಎದುರಿಸಬೇಕಾಗಿತ್ತು. ಪುನಃ ಮನೆಗೆ ಹೋದರೂ ಅಲ್ಲಿ ನೆಮ್ಮದಿ ಇಲ್ಲದೇ ಮನೆಯವರೊಂದಿಗೆ ಜಗಳ ಮಾಡಬೇಕಿತ್ತು.
ಗಂಡನ ಮನೆಯಲ್ಲಿ ಜಗಳವನ್ನು ಸಹಿಸಿಕೊಂಡು ಇರಲಾರದೇ ವಿದ್ಯಾ ಗಂಡನ ಮನೆ ತುರುಗನೂರು ಬಿಟ್ಟು ಇಬ್ಬರು ಮಕ್ಕಳು ಮತ್ತು ತಾಯಿಯನ್ನು ಕರೆದುಕೊಂಡು ಮೈಸೂರು ನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೈಸೂರಲ್ಲಿ ವಾಸವಾಗಿದ್ದ ವಿದ್ಯಾ ಸಿನಿಮಾಗಿಂತ ಹೆಚ್ಚಾಗಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಳು. ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡಿದ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾವುದಾದರೂ ಒಂದು ನಿಗಮ ಮಂಡಳಿ ಅಥವಾ ಪ್ರಾಧಿಕಾರದಲ್ಲಿ ಸದಸ್ಯತ್ವ ಸ್ಥಾನ ಪಡೆದು ರಾಜಕೀಯವಾಗಿ ಬೆಳೆಯಬೇಕು ಎಂದು ಕನಸು ಕಟ್ಟಿಕೊಂಡಿದ್ದಳು. ಕೊಳೆಗೇರಿ ಮಂಡಳಿಯ ಸದಸ್ಯರಾಗಲೂ ಭಾರಿ ಪ್ರಯತ್ನ ಮಾಡಿದ್ದರು. ಪತ್ನಿ ವಿದ್ಯಾ ರಾಜಕೀಯವಾಗಿ ಬೆಳೆಯುವುದನ್ನು ನೋಡಿಕೊಂಡಿರಲಾಗದ ಗಂಡ, ತನ್ನ ಹೆಂಡತಿಗೆ ಕರೆ ಮಾಡಿ ಆಗಿಂದಾಗ್ಗೆ ಜಗಳ ಮಾಡುತ್ತಲೇ ಇದ್ದನು. ಆದರೆ, ಗಟ್ಟಿಗಿತ್ತಿ ವಿದ್ಯಾ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ.
ಆದರೆ, ನಿನ್ನೆ ಸಂಜೆ ವಿದ್ಯಾಳಿಗೆ ಕರೆ ಮಾಡಿದ್ದ ಗಂಡ ನೀನು ಅಪ್ಪ-ಅಮ್ಮನಿಗೆ ಹುಟ್ಟಿದ್ದರೆ ಗಂಡನ ಮನೆಗೆ ಬಾ ಎಂದು ಸವಾಲು ಹಾಕಿದ್ದನು. ಇದರಿಂದ ಕೋಪಗೊಂಡ ವಿದ್ಯಾ, ಅಮ್ಮ ಬೇಡವೆಂದರೂ ತುರಗನೂರಿನ ಗಂಡನ ಮೆನೆಗೆ ಹೋಗಿದ್ದಾಳೆ. ಮಗಳು ಗಂಡನ ಮನೆಗೆ ಹೋಗಿದ್ದು ಎಲ್ಲಿ ಜಗಳ ಮಾಡಿಕೊಂಡು ಅನಾಹುತ ಮಾಡಿಕೊಳ್ಳುತ್ತಾಳೋ ಎನ್ನುವ ಭಯದಿಂದ ಅಮ್ಮನೂ ಕೂಡ ತನ್ನ ಪಕ್ಕದ ಮನೆಯ ಸ್ನೇಹಿತೆಯನ್ನು ಕರೆದುಕೊಂಡು ಮಗಳ ಊರಿಗೆ ಬಂದಿದ್ದಾಳೆ.
ವಿದ್ಯಾಳ ಮನೆಯಲ್ಲಿ ಅದಾಗಲೇ ಜಗಳ ಆರಂಭವಾಗಿತ್ತು. ಆಕೆಯ ಗಂಡ ಮತ್ತು ಅತ್ತೆ ಸೇರಿಕೊಂಡು ಹಲ್ಲೆಯನ್ನೂ ಮಾಡಿದ್ದರು. ಇನ್ನು ವಿದ್ಯಾಳ ತಾಯಿ ಬಂದು ಜಗಳ ಬಿಡಿಸಿ ಮಗಳನ್ನು ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದ್ದಾರೆ. ಆಗ ಇಬ್ಬರ ಜಗಳ ಅತಿರೇಕಕ್ಕೆ ಹೋಗಿದೆ. ಮನೆಯ ಹೊರಗೆ ಬೈಯುತ್ತಾ ನಿಂತಿದ್ದ ವಿದ್ಯಾಳನ್ನು ತಲೆ ಕೂದಲು ಹಿಡಿದು ಮನೆಯೊಳಗೆ ಎಳೆದುಕೊಂಡು ಹೋದ ಅವಳ ಗಂಡ ಮನೆಯೊಳಗೆ ಸುತ್ತಿಗೆಯಿಂದ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂದು ವಿದ್ಯಾಳ ತಾಯಿ ಹೇಳಿದ್ದಾರೆ. ಈ ಸಂಬಂಧಪಟ್ಟಂತೆ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.