ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸಿನಿಮಾ ದೇಶಾದ್ಯಂತ ಸದ್ದು ಮಾಡಲು ಆರಂಭಿಸಿದೆ. ಸೆ.30ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದ್ದು, ಒಂದು ದಿನ ಮೊದಲೇ ದಕ್ಷಿಣದ ಪ್ರಮುಖ ರಾಜ್ಯಗಳಲ್ಲಿ ಚಿತ್ರದ ವಿಶೇಷ ಪ್ರಿಮಿಯರ್ ಶೋಗಳನ್ನು ಆಯೋಜಿಸಲಾಗಿದೆ.
ಸೆ.29ರಂದು ಕರ್ನಾಟಕದ ಕಾಸರಗೋಡು, ಹೈದರಾಬಾದ್, ಚೆನ್ನೈ, ಕೊಚ್ಚಿ ನಗರಗಳು ‘ಕಾಂತಾರ’ ಚಿತ್ರದ ಪ್ರಿಮಿಯರ್ ಶೋಗಳಿಗೆ ಸಜ್ಜಾಗುತ್ತಿವೆ. ಇನ್ನು ಕನ್ನಡ ಸಿನಿಮಾವೊಂದು ಬಿಡುಗಡೆಗೂ ಮೊದಲೇ ಕಾಸರಗೋಡಿನಂತಹ ಕಡೆ ವಿಶೇಷ ಪ್ರಿಮಿಯರ್ ಶೋ ಕಾಣುತ್ತಿರುವುದು ಇದೇ ಮೊದಲು.
ಪ್ರಿಮಿಯರ್ ಶೋಗಳ ಜತೆಗೆ ಒಂದು ದಿನ ಮೊದಲೇ ಪೇಯ್ಡ್ ಪ್ರಿಮಿಯರ್ ಶೋಗಳನ್ನು ಆಯೋಜಿಸಲಾಗಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ಮಂಗಳೂರು, ಕುಂದಾಪುರ ಮುಂತಾದ ಕಡೆ ಪೇಯ್ಡ್ ಪ್ರಿಮಿಯರ್ ಶೋಗಳ ಪ್ರದರ್ಶನಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ.
ಈಗಾಗಲೇ ಈ ಶೋಗಳ ಟಿಕೆಟ್‌ಗಳು ಶೇ.60ರಷ್ಟುಮಾರಾಟ ಆಗಿವೆ. ಇನ್ನೂ ಮೂರು ದಿನಗಳ ಒಳಗೆ ಎಲ್ಲ ಪೇಯ್ಡ್ ಪ್ರಿಮಿಯರ್ ಶೋಗಳು ಹೌಸ್‌ಫುಲ್ ಆಗಲಿವೆಯಂತೆ.
ಮತ್ತೊಂದು ಕಡೆ ಮಲ್ಟಿಪ್ಲೆಕ್ಸ್ ಹಾಗೂ ಏಕಪರದೆಯ ಚಿತ್ರಮಂದಿರಗಳಲ್ಲೂ ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ‘ಇಲ್ಲಿವರೆಗೂ ನಾವು ಟೀಸರ್, ಟ್ರೇಲರ್ ಹಾಗೂ ಫಸ್ಟ್ ಲುಕ್ ಫೋಸ್ಟರ್ ಜತೆಗೆ ಮೇಕಿಂಗ್ ವಿಡಿಯೋಗಳನ್ನು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದ್ವಿ.'
'ನಾವು ಕೊಟ್ಟಈ ಕಂಟೆಂಟ್ ಈಗ ಟಿಕೆಟ್‌ಗಳಾಗಿ ಬದಲಾಗಬೇಕಿದೆ. ಅದು ದೊಡ್ಡ ಮಟ್ಟದಲ್ಲಿ ಆಗಲಿದೆ ಎನ್ನುವ ನಂಬಿಕೆ ಪೇಯ್ಡ್ ಪ್ರಿಮಿಯರ್ ಶೋಗಳಿಗೆ ಬರುತ್ತಿರುವ ಪ್ರತಿಕ್ರಿಯೆಗಳಿಂದ ಗೊತ್ತಾಗುತ್ತಿದೆ’ ಎನ್ನುತ್ತಾರೆ ರಿಷಬ್ ಶೆಟ್ಟಿ.
ಬೆಂಗಳೂರಿನ ಶಾಪಿಂಗ್ ಮಾಲ್‌ಗಳು ಹಾಗೂ ರಾಜ್ಯದ ಹೈವೇ ರಸ್ತೆಗಳ ಪಕ್ಕ 150ಕ್ಕೂ ಬೃಹತ್ ಕಟೌಟ್‌ಗಳನ್ನು ಹಾಕಿದ್ದು, ಹೊಂಬಾಳೆ ಫಿಲಮ್ಸ್ ನಿರ್ಮಾಣದ ಚಿತ್ರಕ್ಕೆ ಈಗಾಗಲೇ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ.
ಅಲ್ಲದೆ ಪ್ರೇಕ್ಷಕರು ಕೂಡ ಬಹು ನೀರಿಕ್ಷೆಯಲ್ಲಿ ಈ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಅದರ ಮೊದಲ ಹಂತವಾಗಿ ಪ್ರಿಮಿಯರ್ ಶೋಗಳಿಗೆ ಭಾರೀ ಬೇಡಿಕೆ ಬರುತ್ತಿದೆಯಂತೆ. ಚಿತ್ರದಲ್ಲಿ ಕಿಶೋರ್, ಅಚ್ಯುತ್ ಕುಮಾರ್, ಸಪ್ತಮಿಗೌಡ ಮುಂತಾದವರು ನಟಿಸಿದ್ದಾರೆ.