ಮದ್ವೆ ಆದ್ರೂ ಸಿಂಗಲ್ ಲೈಫ್, ವೀಕೆಂಡಲ್ಲಿ ಮಾತ್ರ ಗಂಡ -ಹೆಂಡ್ತಿ! ಸಂಬಂಧದಲ್ಲಿ ಹೊಸ ಟ್ರೆಂಡ್!

First Published Jun 27, 2024, 5:27 PM IST

ಮದುವೆ ನಂತರ ತಮ್ಮ ಜೀವನ ಕೊನೆಯಾಗುತ್ತೆ ಎಂದು ಹೆಚ್ಚಿನ ಜನ ಭಾವಿಸುತ್ತಾರೆ, ಯಾಕಂದ್ರೆ ಮದ್ವೆಯಾದ್ರೆ ತಮಗಾಗಿ ಮೀಸಲಿಡೋದಕ್ಕೆ ಸಮಯಾ ಇರಲ್ಲ. ಆದರೆ ಈ ಸಂಬಂಧವನ್ನು ಕೇವಲ ಒಂದು ದಿನ ಅಂದರೆ ವೀಕೆಂಡಲ್ಲಿ ಮಾತ್ರ  ನಿಭಾಯಿಸೋ ಹಾಗಿದ್ರೆ ಹೇಗೆ? ಸದ್ಯ ಯುವ ಜನತೆಯಲ್ಲಿ ಟ್ರೆಂಡ್ ಆಗಿರುವ ವೀಕೆಂಡ್ ಮ್ಯಾರೇಜ್ ಬಗ್ಗೆ ತಿಳಿಯೋಣ. 
 

ಮದುವೆ (marriage) ಅನ್ನೋದು ಏಳು ಜನ್ಮಗಳ ಬಂಧವಾಗಿದೆ.  ತಾಳಿ ಕಟ್ಟಿ ಸಪ್ತಪದಿ ತುಳಿದ್ರೆ, ಆ ಬಂಧ ಏಳೇಳು ಜನ್ಮಕ್ಕೆ ಗಟ್ಟಿಯಾಗೇ ಇರುತ್ತೆ ಅನ್ನೋ ನಂಬಿಕೆ. ಮದುವೆಯಾದ ಬಳಿಕ ಇಬ್ಬರು ವ್ಯಕ್ತಿಗಳು ಜೊತೆಯಾಗಿ ವಾಸಿಸಲು ಆರಂಭಿಸ್ತಾರೆ, ಆ ಮೂಲಕ ಜೀವನದ ಒಳ್ಳೆಯ ಮತ್ತು ಕೆಟ್ಟ ಸಮಯಗಳನ್ನು ಜೊತೆಯಾಗಿಯೇ ಕಳೆಯುತ್ತಾರೆ. ಆದರೆ ಮದುವೆಯಾಗಿ ಸ್ವಲ್ಪ ಸಮಯದ ಬಳಿಕ, ಅದೇ ದಿನಚರಿ, ಅದೇ ಜೀವನ ನೋಡಿ ನೋಡಿ ಬೇಜಾರು ಆಗುತ್ತೆ. ಮತ್ತೆ ಜಗಳ ಆರಂಭವಾಗುತ್ತೆ, ಇದಾದ ನಂತ್ರ ವಿಚ್ಚೇದನದವರೆಗೂ ಹೋಗುತ್ತೆ. 
 

ಆದರೆ ಸ್ವಲ್ಪ ಯೋಚಿಸಿ, ಮದುವೆಯ ಬಂಧವನ್ನು ವಿಚ್ಚೇಧನಕ್ಕೆ (divorce) ಕೊಂಡು ಹೋಗಿ ಮುಗಿಸೋದಕ್ಕಿಂತ, ಅದನ್ನ ನಿಭಾಯಿಸೋದನ್ನ ಕಲಿಬೇಕು, ಜೊತೆಯಾಗಿ ವಾಸಿಸೋವಾಗ ಯಾವುದೇ ಸ್ಟ್ರೆಸ್ ಇರಬಾರದು - ಇಂಟರ್ ಫಿಯರ್ ಆಗಬಾರದು ಎಂದು ಎಲ್ಲರೂ ಬಯಸ್ತಾರೆ. ಬಹುಶಃ ಎಲ್ಲರೂ ಈ ರೀತಿಯ ಸಂಬಂಧವನ್ನು ಇಷ್ಟಪಡುತ್ತಾರೆ. ಏಕೆಂದರೆ ಜೀವನದಲ್ಲಿ ಯಾವುದೇ ಅವ್ಯವಸ್ಥೆಯನ್ನು ಹೊಂದಲು ಯಾರೂ ಬಯಸೋದಿಲ್ಲ. ಅದಕ್ಕಾಗಿಯೇ ನಾವು ನಿಮಗೆ ವೀಕೆಂಡ್ ಮ್ಯಾರೇಜ್ (Weekend Marriage) ಬಗ್ಗೆ ಹೇಳ್ತೀವಿ. ಇದು ಇತ್ತೀಚಿನ ದಿನಗಳಲ್ಲಿ ಟ್ರೆಂಡಿಂಗ್ ನಲ್ಲಿರೋವಂತಹ ಮದ್ವೆ.
 

ವೀಕೆಂಡ್ ಮ್ಯಾರೇಜ್ ಅಂದ್ರೇನು?
ವೀಕೆಂಡ್ ಮ್ಯಾರೇಜ್ (weekend marriage) ಇದನ್ನ ಸಪರೇಟ್ ಮ್ಯಾರೇಜ್ ಅಂತಾನೂ ಕರೆಯಲಾಗುತ್ತೆ. ಹೆಸರೇ ಸೂಚಿಸುವಂತೆ, ಈ ಮದುವೆಯಲ್ಲಿ, ದಂಪತಿ ವಾರಾಂತ್ಯದಲ್ಲಿ ಮಾತ್ರ ಪರಸ್ಪರ ಭೇಟಿಯಾಗ್ತಾರೆ. ವಾರದ ಉಳಿದ ದಿನಗಳಲ್ಲಿ, ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರ್ತಾರೆ. ಈ ಸಂಬಂಧದಲ್ಲಿ ಅವರಿಬ್ಬರ ಮೇಲೆ ಯಾವುದೇ ರೀತಿಯ ಒತ್ತಡವಿರೋದಿಲ್ಲ. ಈ ರೀತಿಯ ಮದುವೆಯಲ್ಲಿ, ದಂಪತಿಗಳು ಒಂದೇ ಮನೆಯಲ್ಲಿ ವಾಸಿಸಿದ್ರೂ ಬೇರೆ ಬೇರೆ ರೂಮಲ್ಲಿ ಮಲಗ್ತಾರೆ, ಇನ್ನೂ ಕೆಲವು ಕಪಲ್ಸ್ ಒಂದೇ ನಗರದಲ್ಲಿದ್ರೂ ಬೇರೆ ಬೇರೆ ಮನೆಯಲ್ಲಿರ್ತಾರೆ.

ಈ ಟ್ರೆಂಡ್ ಎಲ್ಲಿಂದ ಆರಂಭವಾಯ್ತು?
ಪ್ರತಿಯೊಂದು ಧರ್ಮ ಮತ್ತು ದೇಶದಲ್ಲಿ, ಮದುವೆ ಆಚರಣೆಗಳು (marriage culture) ಮತ್ತು ಅದನ್ನು ನಿರ್ವಹಿಸುವ ವಿಧಾನವೂ ವಿಭಿನ್ನ. ಈ ವೀಕೆಂಡ್ ಮ್ಯಾರೇಜ್ ಬಗ್ಗೆ ಹೇಳೋದಾದ್ರೆ, ಅದರ ಟ್ರೆಂಡ್ ಆರಂಭವಾಗಿದ್ದು ಜಪಾನ್‌ನಲ್ಲಿ. ಇಲ್ಲಿನ ಜನರು ಮದುವೆ ನಂತರ ತಮ್ಮ ವೈಯಕ್ತಿಕ ಜೀವನ ಹಾಳಾಗುತ್ತೆ ಅಂತ ಅಂದ್ಕೊಂಡಿರ್ತಾರೆ.  ಬ್ಯುಸಿ ಜೀವನದಿಂದಾಗಿ ಅವರಿಗೆ ತಮ್ಮ ಬಗ್ಗೆ ಗಮನ ಹರಿಸೋದಕ್ಕೆ ಸಾಧ್ಯವಾಗೋದಿಲ್ಲ. 

ತಮ್ಮ ಬ್ಯುಸಿ ಜೀವನದಿಂದಲೇ ಜನರು ವೀಕೆಂಡ್ ಮ್ಯಾರೇಜ್ ಟ್ರೆಂಡ್ ಅನುಸರಿಸಲು ಪ್ರಾರಂಭಿಸಿದ್ದಾರೆ. ಅಂದಹಾಗೆ, ಕುಟುಂಬವನ್ನು ನೋಡಿ ಕೊಳ್ಳುವ ಪ್ರಕ್ರಿಯೆಯಲ್ಲಿ, ಜನರು ಹೆಚ್ಚಾಗಿ ತಮ್ಮನ್ನು ತಾವು ನೋಡಿಕೊಳ್ಳಲು ಮರೆಯುತ್ತಾರೆ ಅನ್ನೋದು ಅಕ್ಷರಶಃ ನಿಜ. ಈ ಕಾರಣದಿಂದಾಗಿ ವೀಕೆಂಡ್ ಮ್ಯಾರೇಜ್ ಟ್ರೆಂಡ್ ಹೆಚ್ಚುತ್ತೆ. 
 

Image: Getty Images

ಯಾರ ಜೀವನದಲ್ಲಿ ಯಾರೂ ತಲೆ ಹಾಕೋ ಹಾಗಿಲ್ಲ
ವೀಕೆಂಡ್ ಮ್ಯಾರೇಜ್ ಟ್ರೆಂಡನ್ನು ಯುವಕರು ಹೆಚ್ಚು ಇಷ್ಟಪಡ್ತಾರೆ. ಇಂದಿನ ಯುವಕರು ತಮ್ಮ ಜೀವನದಲ್ಲಿ ಯಾರೂ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ (interfear) ಮಾಡೋದನ್ನು ಬಯಸಲ್ಲ. ಈ ಸಂಬಂಧದಲ್ಲಿ, ದಂಪತಿ ಪರಸ್ಪರ ಯಾರ ಜೀವನದಲ್ಲೂ ಮೂಗು ತೂರಿಸೋದಿಲ್ಲ ಮತ್ತು ತಮಗೆ ಬೇಕಾದ ರೀತಿಯಲ್ಲಿ ಜೀವನ ನಡೆಸ್ತಾರೆ. ವಾರಾಂತ್ಯದಲ್ಲಿ ಮಾತ್ರ, ಇಬ್ಬರು ಜೊತೆಯಾಗಿ ಸಮಯ ಕಳೆಯುವುದು, ಗಂಡ ಹೆಂಡ್ತಿಯಂತೆ ಬಾಳಬಹುದು. 

ಜವಾಬ್ದಾರಿ ಕೂಡ ಸಮಾನ
ವೀಕೆಂಡ್ ಮ್ಯಾರೇಜ್ ಅಂದ್ರೆ ಪರಸ್ಪರರ ಜೀವನದ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದಲ್ಲ. ಬದಲಾಗಿ, ಇಬ್ಬರ ಖರ್ಚು, ವೆಚ್ಚಗಳನ್ನ ಸಹ ಸಮಾನವಾಗಿ ಹಂಚಲಾಗುತ್ತೆ. ಯಾವುದೇ ರೀತಿಯ ತುರ್ತು ಸಂದರ್ಭದಲ್ಲಿ, ದಂಪತಿಗಳು ಪರಿಹಾರವನ್ನು ಕಂಡು ಹಿಡಿಯಲು ಒಟ್ಟಿಗೆ ಬರುತ್ತಾರೆ. ಆದರೆ ಹೆರಿಗೆ ಮತ್ತು ಮಗುವಿನ ಪಾಲನೆ ವಿಷ್ಯಕ್ಕೆ ಬಂದ್ರೆ ಸ್ವಯಂ ನಿರ್ಧಾರ ತೆಗೆದುಕೊಳ್ತಾರೆ.

Latest Videos

click me!