Siddaramaiah Oath Ceremony: ಸಿದ್ದರಾಮಯ್ಯ ಎಂಬ ಹೆಸರಿನ ನಾನು.....

First Published May 19, 2023, 6:59 PM IST

ರಾಜ್ಯದ ಪ್ರಮುಖ ಹಾಗೂ ಪ್ರಬಲ ರಾಜಕಾರಣಿಯಾಗಿ ನೇರ ನಡೆ, ನುಡಿಯ ವ್ಯಕ್ತಿಯೆಂದೇ ಹೆಸರುವಾಸಿ ಆಗಿರುವ ಸಿದ್ದರಾಮಯ್ಯ ಜನತಾ ಪರಿವಾರದ ಮೂಲಕ ಬೆಳಕಿಗೆ ಬಂದ ಪ್ರತಿಭೆ. 1978ರಲ್ಲಿ ಮೈಸೂರಿನ ತಾಲೂಕು ಮಂಡಳಿ ಚುನಾವಣೆ ಮೂಲಕ ರಾಜಕೀಯ ಪ್ರವೇಶಿಸಿದ ಸಿದ್ದರಾಮಯ್ಯ 1980ರಲ್ಲಿ ಮೊದಲ ಬಾರಿ ಮೈಸೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದರಾದರೂ ಗೆಲುವು ಸಾಧ್ಯವಾಗಲಿಲ್ಲ. ಆದರೂ ಛಲಬಿಡದ ತ್ರಿವಿಕ್ರಮನಂತೆ 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಲ್ಲದೇ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಹಳೆ ಮೈಸೂರು ಪ್ರಾಂತ್ಯದಲ್ಲಿ ಹೊಸ ನಾಯಕನಾಗಿ ಬೆಳೆಯಲು ಆರಂಭಿಸಿದರು. 

ಅರಸು ಬಳಿಕ 5 ವರ್ಷ ಅಧಿಕಾರ ಪೂರೈಸಿದ್ದ ಮೊದಲ ಸಿಎಂಗೆ ಮತ್ತೆ ಗದ್ದುಗೆ

ಸಿದ್ದರಾಮಯ್ಯ ಅವರು ವಿಧಾನಸಭೆಗೆ ಪ್ರವೇಶ ಪಡೆದಾಗ ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಹೆಗಡೆಯವರು ಸಿದ್ದರಾಮಯ್ಯ ಅವರನ್ನು ಕನ್ನಡ ಕಾವಲು ಸಮಿತಿಯ ಪ್ರಥಮ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. 1985ರ ಮಧ್ಯಂತರ ಚುನಾವಣೆಯಲ್ಲಿ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದ ಸಿದ್ದರಾಮಯ್ಯ ಅವರು ಪಶುಸಂಗೋಪನೆ ಹಾಗೂ ರೇಷ್ಮೆ ಖಾತೆ ಸಚಿವರಾದರು. ನಂತರ ಅಧಿಕಾರಕ್ಕೆ ಬಂದ ಎಸ್‌.ಆರ್‌. ಬೊಮ್ಮಾಯಿ ಸರ್ಕಾರದಲ್ಲಿ ಸಿದ್ದರಾಮಯ್ಯ ಮತ್ತೆ ಸಚಿವರಾದರು. ಸಾರಿಗೆ ಖಾತೆ ದೊರೆಯಿತು.

ಸಿದ್ದರಾಮಯ್ಯ ಸೋಲು

ಕಾಂಗ್ರೆಸ್‌ ನಾಯಕ ರಾಜಶೇಖರ ಮೂರ್ತಿ ಅವರು 1989ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲಿನ ಕಹಿ ಉಣಿಸಿದರು. 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು. 1994ರಲ್ಲಿ ಜಯಭೇರಿ ಬಾರಿಸಿದ ಅವರು, ದೇವೇಗೌಡ ಅವರ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಾಗ ಹಣಕಾಸು ಸಚಿವರಾದರು. 1996ರಲ್ಲಿ ಜೆ.ಎಚ್‌.ಪಟೇಲ್‌ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಪಡೆದುಕೊಂಡರು. 

ಸತತ 2 ಸೋಲಿನ ಬಳಿಕ ಪುಟಿದೆದ್ದರು

1999ರಲ್ಲಿ ಜನತಾ ಪರಿವಾರ ಇಬ್ಭಾಗವಾಗಿ ಜೆಡಿಎಸ್‌ ಉದಯವಾಗಿತ್ತು. ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರ ಹಿಂದೆ ಹೋಗದೆ ಎಚ್‌.ಡಿ. ದೇವೇಗೌಡ ಅವರ ಜತೆ ನಿಂತ ಸಿದ್ದರಾಮಯ್ಯ ಅವರಲ್ಲಿ ಮುಖ್ಯಮಂತ್ರಿಯಾಗುವ ಕನಸು ಚಿಗುರೊಡೆದಿತ್ತು. ಆದರೆ, 1999ರ ಚುನಾವಣೆಯಲ್ಲಿ ಮತ್ತೊಮ್ಮೆ ಸೋಲಿನ ರುಚಿ ಕಾಣಬೇಕಾಯಿತು. 

ಜೆಡಿಎಸ್‌ ಮೈತ್ರಿಯಲ್ಲಿ ದೇವೇಗೌಡರ ಜತೆ ಕೋಪ

2004ರಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಯಾದಾಗ ಮತ್ತೊಮ್ಮೆ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಬೇಕಾಯಿತು. ತಮಗೆ ಒದಗಿಬರಬೇಕಿದ್ದ ಮುಖ್ಯಮಂತ್ರಿ ಹುದ್ದೆಯನ್ನು ದೇವೇಗೌಡರು ಉದ್ದೇಶಪೂರ್ವಕವಾಗಿ ತಪ್ಪಿಸಿದರು ಎಂಬುದು ಸಿದ್ದರಾಮಯ್ಯ ಬೆಂಬಲಿಗರ ಆರೋಪವಾಗಿತ್ತು. ಇದು ಬೆಳೆಯುತ್ತಾ ಹೋಗಿ ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವೆ ದೊಡ್ಡ ಕಂದಕ ನಿರ್ಮಾಣ ಮಾಡಿತು. 

ಅಂದಿನ ಸಿಎಂ ರಾಮಕೃಷ್ಣ ಹೆಗಡೆಯವರೊಂದಿಗೆ

2009ರಲ್ಲಿ ರಾಜ್ಯದಲ್ಲಿ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ಧ ಹರಿತ ದಾಳಿಗಳನ್ನು ನಡೆಸಿದ್ದರು. ಆ ವೇಳೆ ಗಣಿ ಧಣಿಗಳಿಗೆ ವಿಧಾನಸಭೆಯಲ್ಲಿ ಸವಾಲು ಹಾಕಿ ಬೆಂಗಳೂರಿನಿಂದ ಬಳ್ಳಾರಿವರೆಗೆ 320 ಕಿ.ಮೀ. ಪಾದಯಾತ್ರೆ ನಡೆಸುವ ಮೂಲಕ ಕಾಂಗ್ರೆಸ್‌ ಪುಟಿದೇಳುವಂತೆ ಮಾಡಿದರು. 2013ರಲ್ಲಿ ಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರಕ್ಕೇರಿತು. ಆಗ ಸಿಎಂ ಆದ ಅವರು ಭಾಗ್ಯಗಳ ಹೆಸರಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದರು. 

ಜೆಡಿಎಸ್‌ನಿಂದ ಉಚ್ಚಾಟನೆ

ದೇವೇಗೌಡರ ಮೇಲಿನ ಮುನಿಸಿನ ನಡುವೆ ಸಿದ್ದರಾಮಯ್ಯ ಅಹಿಂದ ಸಂಘಟನೆಗೆ ಇಳಿದರು. ಪರಿಣಾಮ 2005ರಲ್ಲಿ ದೇವೇಗೌಡರು ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸಿದರು. ಇದಾದ ನಂತರ ಎಬಿಪಿಜೆಡಿ ಎಂಬ ಪ್ರಾದೇಶಿಕ ಪಕ್ಷವನ್ನು ಕಟ್ಟುವ ಪ್ರಯತ್ನವನ್ನು ಮಾಡಿದರು. ಅಂತಿಮವಾಗಿ 2006ರಲ್ಲಿ ಕಾಂಗ್ರೆಸ್‌ ಪಕ್ಷ ಸೇರಿದರು. 2006ರಲ್ಲಿ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದರು. 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯಾದ ವರುಣದಿಂದ ಸ್ಪರ್ಧೆ ಮಾಡಿ ಗೆದ್ದರು. 

ತಮಿಳುನಾಡು ಮಾಜಿ ಸಿಎಂ ದಿ.ಕರುಣಾನಿಧಿ

1980: ಮೊದಲ ಬಾರಿ ಮೈಸೂರು ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ. ಸೋಲು

1983: ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶ

1983: ಜನತಾ ಪಕ್ಷಕ್ಕೆ ಸೇರ್ಪಡೆ. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿ ನೇಮಕ

1985: ಚಾಮುಂಡೇಶ್ವರಿ ಕ್ಷೇತ್ರದಿಂದ 2ನೇ ಬಾರಿ ಗೆಲುವು. ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ

1988: ಎಸ್‌.ಆರ್‌. ಬೊಮ್ಮಾಯಿ ಅವರ ಮಂತ್ರಿ ಮಂಡಲದಲ್ಲಿ ಸಾರಿಗೆ ಸಚಿವ

1989: ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು

1991: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸೋಲು

1992: ಸಮಾಜವಾದಿ ಜನತಾ ಪಕ್ಷದಿಂದ ಜನತಾದಳ ಸೇರ್ಪಡೆ. ಜನತಾದಳದ ಕಾರ್ಯದರ್ಶಿಯಾಗಿ ನೇಮಕ

1994: ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ 3ನೇ ಬಾರಿ ಗೆಲುವು. ಎಚ್‌.ಡಿ. ದೇವೇಗೌಡ ಸಂಪುಟದಲ್ಲಿ ಹಣಕಾಸು ಸಚಿವ

1996: ಜೆ.ಎಚ್‌.ಪಟೇಲ್‌ ಮುಖ್ಯಮಂತ್ರಿಯಾದಾಗ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಣೆ

1999: ಜೆಡಿಎಸ್‌ ಸ್ಥಾಪನೆ. ರಾಜ್ಯಾಧ್ಯಕ್ಷರಾಗಿ ನೇಮಕ

1999: ವಿಧಾನಸಭೆ ಚುನಾವಣೆಯಲ್ಲಿ ಸೋಲು 

ಕರುಣಾನಿಧಿ ಮತ್ತು ಸಿದ್ದರಾಮಯ್ಯ

2004: ಚಾಮುಂಡೇಶ್ವರಿಯಲ್ಲಿ 4ನೇ ಗೆಲುವು. ಕಾಂಗ್ರೆಸ್‌- ಜೆಡಿಎಸ್‌ ಸರ್ಕಾರದಲ್ಲಿ ಉಪಮುಖ್ಯಮಂತ್ರಿ

2005: ಜೆಡಿಎಸ್‌ನಿಂದ ಉಚ್ಚಾಟನೆ

2006: ಕಾಂಗ್ರೆಸ್‌ ಸೇರ್ಪಡೆ. ಉಪಚುನಾವಣೆಗೆ ಸ್ಪರ್ಧೆ. ಚಾಮುಂಡೇಶ್ವರಿ ಕ್ಷೇತ್ರದಿಂದ 5ನೇ ಗೆಲುವು

2008: ವರುಣ ಕ್ಷೇತ್ರದಲ್ಲಿ ಗೆಲುವು. 6ನೇ ಬಾರಿ ವಿಧಾನಸಭೆಗೆ ಪ್ರವೇಶ

2013: ವರುಣದಲ್ಲಿ ಮತ್ತೆ ಜಯಭೇರಿ. 7ನೇ ಬಾರಿ ವಿಧಾನಸಭೆಗೆ ಪ್ರವೇಶ

2013: ಮೇ 13ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

2018: ಚಾಮುಂಡೇಶ್ವರಿಯಲ್ಲಿ ಸೋಲು. ಬಾದಾಮಿಯಲ್ಲಿ ಗೆಲುವು. 8ನೇ ಬಾರಿ ವಿಧಾನಸಭೆ ಪ್ರವೇಶ

2018: ಕಾಂಗ್ರೆಸ್‌- ಜೆಡಿಎಸ್‌ ಸಮನ್ವಯ ಸಮಿತಿ ಅಧ್ಯಕ್ಷರಾಗಿ ನೇಮಕ

2019: ವಿರೋಧ ಪಕ್ಷದ ನಾಯಕರಾಗಿ ನೇಮಕ

2023: ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ 
 

2 ಬಾರಿ ಉಪ ಮುಖ್ಯಮಂತ್ರಿ

ದಿವಂಗತ ದೇವರಾಜ ಅರಸು ನಂತರ ಕರ್ನಾಟಕ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿದ ಮೊದಲ ವ್ಯಕ್ತಿ ಸಿದ್ದರಾಮಯ್ಯ. 2013ರ ಮೇ 13ರಿಂದ 2018ರ ಮೇ 17ರವರೆಗೆ ಅವರು ಐದು ವರ್ಷ ಸಿಎಂ ಆಗಿದ್ದರು. ಸಿದ್ದರಾಮಯ್ಯ ಅವರು ಎರಡು ಬಾರಿ ಉಪ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಜೆ.ಎಚ್‌.ಪಟೇಲ್‌ ಹಾಗೂ ಧರಂ ಸಿಂಗ್‌ ಅವರು ಸಿಎಂ ಆಗಿದ್ದಾಗ ಅವರು ಈ ಜವಾಬ್ದಾರಿ ನಿರ್ವಹಿಸಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಹಾಗೂ ಬಾದಾಮಿಯಿಂದ ಸ್ಪರ್ಧಿಸಿದರು. ಚಾಮುಂಡೇಶ್ವರಿಯಲ್ಲಿ ಅನಿರೀಕ್ಷಿತವಾಗಿ ಪರಾಭವಗೊಂಡ ಅವರು, ಬಾದಾಮಿಯಲ್ಲಿ ಅಲ್ಪಮತಗಳಿಂದ ಗೆಲುವು ಸಾಧಿಸಿದರು. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿತಾದರೂ ಒಂದೇ ವರ್ಷದಲ್ಲಿ ಅದು ಪತನವಾಯಿತು. ಬಳಿಕ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾದರು.  ಬಿಜೆಪಿ ಸರ್ಕಾರದ ವಿರುದ್ಧ ಹಲವು ಹೋರಾಟಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜತೆಗೂಡಿ ಸಂಘಟಿಸಿದರು. 

13 ಬಾರಿ ಬಜೆಟ್‌: ಹೆಗಡೆ ದಾಖಲೆ ಸರಿಗಟ್ಟಿದ್ದಾರೆ ಸಿದ್ದು

ರಾಜ್ಯದಲ್ಲಿ ಹೆಚ್ಚು ಬಾರಿ ಬಜೆಟ್‌ ಮಂಡನೆ ದಾಖಲೆ ಕರ್ನಾಟಕದಲ್ಲಿ ದಿವಂಗತ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರಿನಲ್ಲಿದೆ. ಈ ದಾಖಲೆಯಲ್ಲಿ ಸಿದ್ದರಾಮಯ್ಯ ಈಗಾಗಲೇ ಸರಿಗಟ್ಟಿದ್ದಾರೆ. ಇನ್ನೊಂದು ಬಜೆಟ್‌ ಮಂಡನೆ ಮಾಡಿದರೆ ಅತಿ ಹೆಚ್ಚು ಬಜೆಟ್‌ ಮಂಡನೆ ಮಾಡಿದ ಹಣಕಾಸು ಸಚಿವ ಎಂಬ ಕೀರ್ತಿಗೆ ಅವರು ಪಾತ್ರರಾಗಲಿದ್ದಾರೆ. 

ಸಿದ್ದು ಜೀವನ, ಫ್ಯಾಮಿಲಿ

ಸಿದ್ದರಾಮಯ್ಯ ಅವರು ಪಾರ್ವತಿ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳು. ಈ ಪೈಕಿ ಹಿರಿಯ ಮಗ ರಾಕೇಶ್‌ ಅನಾರೋಗ್ಯದಿಂದ 2016ರಲ್ಲಿ 38ನೇ ವಯಸ್ಸಿಗೆ ಮೃತಪಟ್ಟರು. ಎರಡನೇ ಮಗ ವೃತ್ತಿಯಲ್ಲಿ ವೈದ್ಯರಾಗಿದ್ದು, ಅಣ್ಣನ ಸಾವಿನ ಬಳಿಕ ರಾಜಕೀಯ ಪ್ರವೇಶಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲವು ಸಾಧಿಸಿದರು. ಈಗ ತಂದೆಗಾಗಿ ಕ್ಷೇತ್ರ ಬಿಟ್ಟುಕೊಟ್ಟು, ಅವರ ಗೆಲುವಿಗೆ ಕಾರಣರಾಗಿದ್ದಾರೆ. ಇನ್ನು ಹಿರಿಯ ಮಗ ದಿವಂಗತ ರಾಕೇಶ್‌ ಸಿದ್ದರಾಮಯ್ಯ ಅವರಿಗೆ ಪತ್ನಿ ಸ್ಮಿತಾ ಹಾಗೂ ಪುತ್ರ ಧವನ್‌, ಪುತ್ರಿ ತನ್ಮಯಿ ಎಂಬ ಮಕ್ಕಳಿದ್ದಾರೆ. ಸಿದ್ದರಾಮಯ್ಯ ಅವರು ಬಿಡುವಿನ ವೇಳೆಯಲ್ಲಿ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತಾರೆ. ಇತ್ತೀಚೆಗೆ ಅವರ ಮೊಮ್ಮಗ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು. 

ಇಬ್ಬರು ಮಕ್ಕಳು, ಇಬ್ಬರು ಮೊಮ್ಮಕ್ಕಳು

1948ರ ಆಗಸ್ಟ್‌ 12ರಂದು ಮೈಸೂರಿನ ವರುಣ ಹೋಬಳಿಯ ಸಿದ್ದರಾಮನ ಹುಂಡಿಯಲ್ಲಿ ಸಿದ್ದರಾಮೇಗೌಡ ಮತ್ತು ಬೋರಮ್ಮ ದಂಪತಿಯ ಎರಡನೇ ಪುತ್ರನಾಗಿ ಸಿದ್ದರಾಮಯ್ಯ ಜನಿಸಿದರು. ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿಯರ್‌ ವಕೀಲರಾಗಿ ಸೇರ್ಪಡೆಯಾಗಿ 1978ರವರೆಗೆ ಸ್ವಂತ ವಕೀಲ ವೃತ್ತಿ ಮಾಡಿದರು. 1978ರಲ್ಲಿ ರಾಜಕಾರಣಕ್ಕೆ ಅಧಿಕೃತ ಪ್ರವೇಶ ಪಡೆದ ಅವರು ಆನಂತರ ತಿರುಗಿ ನೋಡಿದ್ದಿಲ್ಲ. 

ಪುಸ್ತಕ ಓದುವುದು, ಸಿನಿಮಾ ವೀಕ್ಷಣೆ ಹವ್ಯಾಸ

ಎಷ್ಟೇ ಒತ್ತಡದಲ್ಲಿದ್ದರೂ ನಿಯಮಿತವಾಗಿ ಓದುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಖ್ಯಾತ ಲೇಖಕರ ಕೃತಿಗಳು, ಸಾಹಿತ್ಯ ಕೃತಿಗಳು ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳ ಪುಸ್ತಕಗಳನ್ನು ಓದುತ್ತಾರೆ. ರಾಜಕೀಯ ಜಂಜಾಟಗಳ ನಡುವೆಯೂ ಸಿನಿಮಾ ನೋಡುವ ಹವ್ಯಾಸವನ್ನು ಉಳಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ರಾಜಕೀಯ ಒತ್ತಡ ನಡುವೆಯೂ ಸಿದ್ದರಾಮಯ್ಯ ಅವರು ಕುಟುಂಬಕ್ಕೆ ಸಮಯ ನೀಡುತ್ತಾರೆ. ಮೈಸೂರು ಸಮೀಪ ತೋಟದ ಮನೆ ಇದ್ದು, ಬಿಡುವಿನ ವೇಳೆಯಲ್ಲಿ ಅಲ್ಲಿ ವಿಶ್ರಾಂತಿ ಪಡೆಯುತ್ತಾರೆ. 

ನಾಟಿ ಕೋಳಿ ಸಾರು, ರಾಗಿ ಮುದ್ದೆ ಸಿದ್ದುಗೆ ಫೇವರಿಟ್‌

ಭೋಜನ ಪ್ರಿಯರಾಗಿರುವ ಸಿದ್ದರಾಮಯ್ಯ ಅವರಿಗೆ ಸಸ್ಯಾಹಾರ ಹಾಗೂ ಮಾಂಸಾಹಾರಗಳಲ್ಲಿ ಹಲವು ಪ್ರಿಯ ಖಾದ್ಯಗಳಿವೆ. ಬೋಂಡ ಸಾಂಬಾರ್‌, ನಾಟಿ ಕೋಳಿ ಸಾಂಬಾರ್‌, ರಾಗಿ ಮುದ್ದೆ ಎಂದರೆ ಬಲು ಇಷ್ಟ. ಸ್ನೇಹಿತರು, ಬಂಧುಗಳು, ಕಾರ್ಯಕರ್ತರ ಮನೆಗಳಿಗೆ ಹೋದರೆ ನಾಟಿಕೋಳಿ ಸಾರು- ಮುದ್ದೆ ಸವಿಯುತ್ತಾರೆ. ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಜನಾರ್ದನ ಹೋಟೆಲ್‌ನಲ್ಲಿ ಹಲವು ಬಾರಿ ದೋಸೆ ಸೇವಿಸಿದ್ದಾರೆ. 
 

click me!