ಶಿಕ್ಷಣತಜ್ಞ ಎಚ್.‌ ನರಸಿಂಹಯ್ಯ ಶತಮಾನ ಸಂಭ್ರಮ: ಇಲ್ಲಿದೆ ಎಚ್‌ಎನ್‌ ಬದುಕಿನ ಪಯಣ!

First Published | Jun 6, 2020, 5:01 PM IST

ಜೂನ್ 06, 2020 ಕ್ಕೆ ಎಚ್.ಎನ್.ಜೀವಿಸಿದ್ದರೆ 100 ವಸಂತಗಳು ತುಂಬುತ್ತಿದ್ದವು. ಆದರೆ ಅವರು ತಮ್ಮ 85ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ತೀರಿಕೊಂಡರು. ಆದರೂ ಇಂದಿನ ರೋಗಗ್ರಸ್ತ, ಸಮಾಜಸೂಕ್ತ ಮಾರ್ಗದರ್ಶನವಿಲ್ಲದೆ ದಾರಿ ತಪ್ಪುತ್ತಿರುವ ಈ ಸಮಯದಲ್ಲಿ ನೈತಿಕ, ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ. ಸಾಮಾಜಿಕ ಉನ್ನತ ಮೌಲ್ಯಗಳಿಗೆ ಬದಲಾಗಿ ಧನದಾಹ, ಅಧಿಕಾರದಾಹ ಸ್ವಾರ್ಥಚಿಂತನೆಗಳು ಎಲ್ಲೇ ಮೀರುತ್ತಿವೆ. ದ್ವೇಷ, ಹಿಂಸೆ ಬೀಜ ಬಿತ್ತಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಚ್.ಎನ್.ರವರಂತಹ ಮಹಾನ್ ವ್ಯಕ್ತಿಗಳ ತ್ಯಾಗ, ಪ್ರಾಮಾಣಿಕ, ನಿಸ್ವಾರ್ಥತೆ ಮುಂತಾದ ಅವರ ಆಶಯಗಳು, ಕನಸುಗಳು ಇಂದಿಗೂ ಜೀವಂತವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. 

ಎಚ್.ನರಸಿಂಹಯ್ಯನವರು ಹುಟ್ಟಿದ್ದು ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲ್ಲೂಕಿನ ಸಣ್ಣ ಕುಗ್ರಾಮವಾದ ಹೊಸೂರಿನಲ್ಲಿ . ತಂದೆ ಹನುಮಂತಪ್ಪ, ಕೂಲಿಮಠದ ಮೇಷ್ಟ್ರು, ತಾಯಿ ವೆಂಕಟಮ್ಮ ಬೇರೆಯವರ ಮನೆಯಲ್ಲಿ ಮುಸುರೆ ಪಾತ್ರೆ ತಿಕ್ಕಿ ಜೀವನ ಮಾಡುತ್ತಿದ್ದವರು, ಇಂತಹ ಬಡ ಕುಟುಂಬದಲ್ಲಿ ಜನಿಸಿ (ಮನೆ 15ಘಿ15) ಹೊಸೂರಿನ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿ, ಮುಂದಿನ ವ್ಯಾಸಂಗಕ್ಕಾಗಿ ಹೊಸೂರಿನಿಂದ ಕಾಲ್ನಡಿಗೆಯಲ್ಲಿ ಚಪ್ಪಲಿಯಿಲ್ಲದೆ ನಡೆದುಕೊಂಡು ಹೋಗಿ, ತಮ್ಮ ಗುರುಗಳ ಸಹಾಯದಿಂದ ನ್ಯಾಷನಲ್ ಹೈಸ್ಕೂಲ್ ಸೇರಿ ವಿದ್ಯಾಭ್ಯಾಸ ಮುಂದುವರೆಸಿದರು.
ವಿದ್ಯಾಭ್ಯಾಸ ಮಾಡುವಾಗ ಊಟಕ್ಕಾಗಿ ವಾರದ ಊಟ, ರಾಮಕೃಷ್ಣ ಆಶ್ರಮದ ನೆರವು. ತಮ್ಮ ಶೈಕ್ಷಣಿಕ ದಾಖಲೆಗಳೆಲ್ಲಾ ಪ್ರಥಮ ಶ್ರೇಣಿ ಪಡೆದಿರುವುದು, ಚಿಕ್ಕ ವಯಸ್ಸಿನಿಂದಲೇ ಅವರ ಛಲ ಮತ್ತು ದೂರದೃಷ್ಟಿ ಶುರುವಾಯಿತು ಎಂಬುದಕ್ಕೆ ನಿದರ್ಶನ.
Tap to resize

ಇಂತಹ ನಿದರ್ಶನ ಈ ಮಧ್ಯೆ ಇಷ್ಟೊಂದು ಕಷ್ಟಗಳಲ್ಲಿ ಅಭ್ಯಾಸ ಮಾಡುತ್ತಿದ್ದ ಇವರಿಗೆ ಅಪಾರವಾದ ದೇಶಭಕ್ತಿ, ತಮ್ಮ ಪದವಿ ವ್ಯಾಸಂಗ ಬಿಟ್ಟು ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿ ಚಳುವಳಿಯಲ್ಲಿ ಧುಮುಕಿ ಮೈಸೂರು, ಯರವಾಡ ಜೈಲುವಾಸ ಅನುಭವಿಸಿದರು. ಆದರೆ ಇವರು ಎಂದಿಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಬರುವ ಮಾಶಾಸನಕ್ಕೆ ಅರ್ಜಿ ಹಾಕಿದವರಲ್ಲ, ಪಡೆಯಲೂ ಇಲ್ಲ.
ನ್ಯೂಕ್ಲಿಯಾರ್ ಭೌತಶಾಸ್ತ್ರ ಪದವಿ ಪಡೆದು ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸಂಸ್ಥೆಯ ಅಧ್ಯಕ್ಷರಾಗಿ ಮಾಡಿದ ಸಾಧನೆಗಳು ಅಂದಿನ ಶಿಕ್ಷಣ ಕ್ಷೇತ್ರಕ್ಕೆ ಮಾದರಿ ಕೆಲಸಗಳೆಂದರೆ ತಪ್ಪಾಗಲಾರದು. ರ್ಯಾಂಕ್ ಕಾಲೇಜ್ ಎಂದೇ ಪ್ರಖ್ಯಾತಿ ಗಳಿಸಿದ ಕಾಲೇಜಿನಲ್ಲಿ ಕೋ-ಏಜುಕೇಷನ್ ಪ್ರಾರಂಭಿಸಿ, ಆಗಲೇ ಮಹಿಳೆ ಮತ್ತು ಹೆಣ್ಣು ಮಕ್ಕಳ ಸಬಲೀಕರಣಕ್ಕೆ ವಿದ್ಯಾಭ್ಯಾಸ ನೀಡುವ ಮೂಲಕ ಒತ್ತುಕೊಟ್ಟರು.
ಕಾಲೇಜಿನಲ್ಲಿ ಶಿಕ್ಷಕರ ಸಹಿ ಮಾಡುವ ಪುಸ್ತಕವನ್ನು ಇಡದೆ ಅಧ್ಯಾಪಕರಲ್ಲಿ ಸ್ವಾಭಿಮಾನ ಮೂಡಿಸಿದರು. ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಟ್ಯೂಟೋರಿಯಲ್ ಕ್ಲಾಸ್, ಕಲೆಗಳ ಪ್ರೋತ್ಸಾಹಕ್ಕೆ ಒತ್ತು ನೀಡುವುದರ ಮೂಲಕ ನಾಟಕ ಕಾಲೇಜ್ ಎಂದೇ ಹೆಸರು ಮಾಡಿದ್ದು ಮೇಲ್ವಿಚಾರಕರಿಲ್ಲದೆ ಪರೀಕ್ಷೆಗಳನ್ನು ನಡೆಸಿದ್ದು ಇವರ ಅಂದಿನ ಪ್ರಯತ್ನಗಳು ಇಂದಿಗೂ ಪ್ರಸ್ತುತವಾಗಿವೆ.
ಬೆಂಗಳೂರು ಸೈನ್ಸ್ ಫೋರಂ ಪ್ರಾರಂಭಿಸಿದ ಕೀರ್ತಿ ಎಚ್.ಎನ್. ರವರಿಗೆ ಸಲ್ಲುತ್ತಿದೆ. ನಿರಂತರವಾಗಿ (1962 ರಲ್ಲಿ ಪ್ರಾರಂಭ) ಹಲವಾರು ವಿಜ್ಞಾನ ಉಪನ್ಯಾಸ ಚಲನಚಿತ್ರ ಪ್ರದರ್ಶನ ಏರ್ಪಡಿಸಿದ್ದರು. ಬೇಸಿಗೆ ತರಬೇತಿ ಶಿಬಿರಗಳು ಪ್ರಾರಂಭಿಸಿ ಪ್ರತಿವರ್ಷ ಜುಲೈನಲ್ಲಿ ಒಂದು ತಿಂಗಳ ಕಾಲ ಎಲ್ಲಾ ಖ್ಯಾತ ವಿಜ್ಞಾನಿಗಳು, ವೈದ್ಯರು, ಪ್ರಾಧ್ಯಾಪಕರ ಉಪನ್ಯಾನಗಳನ್ನು ಏರ್ಪಡಿಸಿ ಜವಹಾರಲಾಲ್ ನೆಹರೂ ರಾಷ್ಟ್ರೀಯ ಪ್ರಶಸ್ತಿಯನ್ನು ಅಂದಿನ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿರವರಿಂದ ಸ್ವೀಕರಿಸಿದರು.
ಈ ಸೈನ್ಸ್ ಫೋರಂ ಸಂಕೇತ “ಪ್ರಶ್ನಿಸದೇ ಒಪ್ಪಬೇಡಿ?” ಇದು ಇಂದು ಮನುಕುಲಕ್ಕೆ ಅಗತ್ಯವಾದುದು, ಪ್ರತಿಯೊಂದನ್ನು ಪ್ರಶ್ನೆ ಮಾಡಿ ಸರಿಯಾದ ಉತ್ತರ ಸಿಗುವವರೆಗೆ ಒಪ್ಪಿಕೊಳ್ಳಬೇಡಿ ಎಂಬುದು. ಈಗ ವಿಜ್ಞಾನದ ಜೊತೆಗೆ ಬೆಂಗಳೂರು ಸೋಸಿಯಲ್ ಸೈನ್ಸ್ ಫೋರಂ, ನೀತಿ ಮತ್ತು ಆರೋಗ್ಯ ಶಿಕ್ಷಣಗಳ ಅಂದೇ ಗಾಢವಾಗಿ ವಿದ್ಯಾರ್ಥಿಗಳಿಗೆ ಸಮಾಜಕ್ಕೆ ತಿಳಿಸಲು ಪ್ರಯತ್ನಿಸಿದರು. ಅಲ್ಲದೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ್ನು ಸ್ಥಾಪಿಸಿ, ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
ತಮ್ಮ ಅವಧಿಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಹೈಸ್ಕೂಲು ಮತ್ತು ಕಾಲೇಜುಗಳನ್ನು ಪ್ರಾರಂಭಿಸಿ, ಅತ್ಯಂತ ಹಿಂದುಳಿದ ಹುಟ್ಟೂರಾದ ಹೊಸೂರುನಲ್ಲಿ ಪ್ರೌಢಶಾಲೆ, ಗೌರಿಬಿದನೂರು ಮತ್ತು ಬಾಗೆಪಲ್ಲಿಗಳಲ್ಲಿ ನ್ಯಾಷನಲ್ ಕಾಲೇಜ್‍ನ್ನು ಪ್ರಾರಂಭಿಸಿ , ಗ್ರಾಮೀಣ ಕೃಷಿಕರ ಮಕ್ಕಳಿಗೆ ವಿದ್ಯಾಭ್ಯಾಸ ಪಡೆಯಲು ಅನುಕೂಲ ಮಾಡಿಕೊಟ್ಟರು. ಅವರು ಅಂದು ಈ ಸಂಸ್ಥೆಗಳನ್ನು ಪ್ರಾರಂಭಿಸದೆ ಇದ್ದರೆ ಗೌರಿಬಿದನೂರು, ಬಾಗೇಪಲ್ಲಿ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ.
ಎಚ್.ಎನ್. ರವರು ಎಂದಿಗೂ ಹಣ ಮಾಡುವ ಇಂಜಿನಿಯರಿಂಗ್ ಕಾಲೇಜ್, ಅಥವಾ ಮೆಡಿಕಲ್ ಕಾಲೇಜ್ ತೆರೆಯಲು ಚಿಂತೆ ಮಾಡಿದವರೇ ಅಲ್ಲ. ಅವರ ಮೂಲ ಉದ್ದೇಶ ಗ್ರಾಮೀಣ ವಿದ್ಯಾರ್ಥಿಗಳಿಗೆ ಮೂಲಭೂತ, ಮೌಲ್ಯಾಧಾರಿತ ಶಿಕ್ಷಣ ನೀಡುವುದು ಅವರ ಗುರಿಯಾಗಿತ್ತು. ಈ ವಿಚಾರದಲ್ಲಿ ಈ ರೀತಿಯ ಅಲೋಚನೆಗಳಿಂದ ಕೂಡಿದ ಸಂಸ್ಥೆಗಳಲ್ಲಿ ನ್ಯಾಷನಲ್ ಏಜುಕೇಷನ್ ಸೊಸೈಟಿಯನ್ನು ಮುಂಚೂಣಿಯಲ್ಲಿ ನಡೆಸಿದರು.
ಎನ್.ಇ.ಎಸ್. ಸಂಸ್ಥೆಯ ಒಡನಾಟದೊಂದಿಗೆ ಇವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗುವ ಅವಕಾಶ ದೊರೆಯಿತು. ಈ ಸಂದರ್ಭದಲ್ಲಿ ಅವರು ಸೆಂಟ್ರಲ್ ಕಾಲೇಜಿನಿಂದ ಬೆಂಗಳೂರು ವಿಶ್ವವಿದ್ಯಾನಿಲಯವನ್ನು ಈಗಿನ ಜ್ಞಾನಭಾರತಿಗೆ ವರ್ಗಾಯಿಸಿ 1000 ಎಕರೆಗಳ ಪ್ರದೇಶದಲ್ಲಿ ವಿಶ್ವವಿದ್ಯಾನಿಲಯ ಪ್ರಾರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಜ್ಞಾನಭಾರತಿ ಇಡೀ ಏಷ್ಯಾದಲ್ಲಿಯೇ ದೊಡ್ಡ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ಅವರು ಮೂಢನಂಬಿಕೆ, ಕಂದಾಚಾರ, ವೈಜ್ಞಾನಿಕ-ಮನೋಭಾವನೆಗಳ ವಿಸ್ರ್ತುತ ಚರ್ಚೆ ಮತ್ತು ಪ್ರಾಯೋಗಿಕ ಪರೀಕ್ಷೆಗಳ ಕಡೆ ಒತ್ತು ನೀಡುತ್ತಾ ಅಂದಿನ ‘ಸತ್ಯಸಾಯಿಬಾಬಾ’ರವರು ಶೂನ್ಯದಿಂದ ಉಂಗುರ ಕೊಡುವುದನ್ನು ಕಟುವಾಗಿ ಟೀಕಿಸಿ ಸಾಧ್ಯವಾದರೆ ಕುಂಬಳಕಾಯಿ ಕೊಡಿ ಎಂದು ಪ್ರಶ್ನಿಸಿದವರು.
ಇದಕ್ಕಾಗಿ ಕೆಲವು ಸಾಯಿಬಾಬಾ ಭಕ್ತರ ಅಂತರಿಕ ಪ್ರಯತ್ನದಿಂದ ಅವರ ವಿ.ಸಿ.ಹುದ್ದೆಗೆ ಕಂಟಕ ಬಂದಾಗ ರಾಜೀನಾಮೆ ಸಲ್ಲಿಸಿ ರಾಜಿ ಮಾಡಿಕೊಳ್ಳದೇ ತಾವು ನಂಬಿದ ಸಿದ್ಧಾಂತಗಳಿಗೆ ಬದ್ಧರಾಗಿದ್ದರು ಎಂಬುದಕ್ಕೆ ಉತ್ತಮ ನಿದರ್ಶನ. ಇದಲ್ಲದೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿಯೇ ಇರಬೇಕೆಂದು ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದವರು. ಬಸವನಗುಡಿ ಪ್ರೈಮರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುತ್ತಿದ್ದರು. ನಂತರದ ದಿನಗಳಲ್ಲಿ ಎಂ.ಎಲ್.ಸಿ. ಗಳಾಗಿ ಸದನದಲ್ಲಿ ಹಲವಾರು ಗಹನವಾದ ವಿಷಯಗಳ ಬಗ್ಗ ಪ್ರಸ್ಥಾವನೆ ಮಾಡಿ ಪ್ರಶಂಸೆಗೆ ಪಾತ್ರರಾದರು.
ಇಲ್ಲಿ ಮತ್ತೊಂದು ವೈಶಿಷ್ಟ್ಯವೆಂದರೆ ವಿ.ವಿ ಉಪಕುಲಪತಿ., ಎಂ.ಎಲ್.ಸಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ನೀಡುವ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳಲೇ ಇಲ್ಲ. ಇವರಿಗಾಗಿ ನೀಡುವ ಪ್ರತ್ಯೇಕ ಮನೆ ಹೆಸರಿಗೆ ಮಾತ್ರ ಇದ್ದರೆ ಇವರು ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿದ್ದುದು ನ್ಯಾಷನಲ್ ಕಾಲೇಜಿನ ವಿಧ್ಯಾರ್ಥಿನಿಲಯದ ರೂಂ ನಿಂದಲೇ ಎಂಬುದು ವಿಶೇಷ.
ಸತತವಾಗಿ 60 ವರ್ಷಗಳ ಕಾಲ ಹಾಸ್ಟೆಲ್‍ನ ಸಾಮಾನ್ಯ ಕೊಠಡಿಯಲ್ಲಿ ವಿದ್ಯಾರ್ಥಿಗಳ ಜೊತೆಯಲ್ಲಿ ಜೀವನ ಸಾಗಿಸಿರುವ ಎಚ್.ಎನ್. ಬಗ್ಗೆ ಎಷ್ಟು ಹೇಳಿದರೂ ಸಾಲದು.
ಗಾಂಧೀಜಿಯವರ ಬಗ್ಗೆ ಓದಿ ಅಂತಹ ಒಬ್ಬ ಸಾಧಕರು ಭಾರತದಲ್ಲಿ ಮತ್ತೆ ಹುಟ್ಟಲು ಸಾಧ್ಯವೇ ಎಂದು ಯೋಚಿಸುವ ನಮಗೆ ಎಚ್.ಎನ್. ರವರ ನೆನಪುಗಳು, ಆಶಯಗಳು ಅವರ ನಡೆ, ನುಡಿ, ಉಡುಗೆ, ಸ್ನೇಹಬಂದ ಸಾರ್ವಜನಿಕ ವ್ಯಕ್ತಿತ್ವ, ಸರಳತೆ, ಹೋರಾಟದ ಬದುಕು ನಮಗೆ ಇಂದಿಗೂ ಪ್ರಸ್ತುತ.
ಇದಕ್ಕೆ ಪೂರಕ ಎಂಬಂತೆ ಗಾಂಧೀಜಿ ಜನವರಿ 30 ರಂದು ಧೈವಾದೀನರಾದಾಗ ಎಚ್.ಎನ್. ಜನವರಿ 31 ರಂದು ತೀರಿ ಹೋದರು, ಇದು ಕೂಡ ಗಾಂಧೀ-ಎಚ್.ಎನ್. ರವರ ಆಚಾರ-ವಿಚಾರಗಳು ಸ್ವಲ್ಪ ಹೆಚ್ಚು ಕಡಿಮೆ ಒಂದೇ ಎಂದು ಸಾರುತ್ತದೆ.
ಇಂತಹ ಎಚ್.ಎನ್. ರವರಿಗೆ ಅನೇಕ ಪ್ರಶಸ್ತಿಗಳು, ಅದರಲ್ಲಿ ಪದ್ಮಭೂಷಣ, ಭಾರತ ಸರ್ಕಾರದ ತಾಮ್ರ ಪತ್ರ (1942 ರೈಲ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕೆ) ಕರ್ನಾಟಕ ರಾಜ್ಯೋತ್ಸವ, ಹತ್ತು ಹಲವಾರು ಪ್ರಶಸ್ತಿಗಳ ಜೊತೆಗೆ ಅಮೇರಿಕಾದ ಕಮೀಟಿ ಫಾರ್ ದಿ ಸೈಂಟಿಫಿಕ್ ಇನ್‍ವೆಸ್ಟಿಗೇಷನ್ಸ್ ಆಫ್ ದಿ ಕ್ಲೇಮ್ಸ್ ಆಫ್ ದಿ ಪ್ಯಾರಾನಾರ್ಮನ್” ಏಕೈಕ ಭಾರತೀಯ ಫೇಲೋಷಿಪ್ ಪಡೆದವರು.

Latest Videos

click me!