ಗಂಗಾವತಿ: ಭತ್ತ ನಾಟಿಯ ವೇಳೆ ಸಾಮಾಜಿಕ ಅಂತರ ಕಾಪಾಡಿದ ಮಹಿಳೆಯರು..!

First Published | Jul 24, 2020, 10:40 AM IST

ರಾಮಮೂರ್ತಿ ನವಲಿ

ಗಂಗಾವತಿ(ಜು.24): ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕಿಗೆ ಬೆಚ್ಚಿ ಬಿದ್ದಿದ್ದಾರೆ. ಮುಂಜಾಗೃತಾ ಕ್ರಮವಾಗಿ ಗಂಗಾವತಿ ಮತ್ತು ಕಾರಟಗಿ ತಾಲೂಕುಗಳಲ್ಲಿ ಬತ್ತ ನಾಟಿ ಮಾಡುವಾಗ ರೈತ ಮಹಿಳೆಯರು ಸಾಮಾಜಿಕ ಅಂತರ ಕಾಪಾಡುವುದರ ಮೂಲಕ ಗಮನ ಸೆಳೆದಿದ್ದಾರೆ.
 

ತುಂಗಭದ್ರಾ ಜಲಾಶಯದ ಕಾಲುವೆ ನೀರು ಮತ್ತು ನದಿಯ ನೀರು ಅವಲಂಬಿತರಾಗಿರುವ ರೈತರು ಬತ್ತ ನಾಟಿ ಮಾಡುವುದಕ್ಕೆ ಮುಂದಾಗಿದ್ದಾರೆ. ಕಳೆದ ಎರಡು ಮೂರು ವರ್ಷಗಳ ಹಿಂದೆ ಜಲಾಶಯ ಭರ್ತಿಯಾಗದ ಕಾರಣ ಒಂದೇ ಅವಧಿ ಬೆಳೆ ಕಂಡಿದ್ದ ರೈತರು ಆತಂಕದಲ್ಲಿದ್ದರು. ಈಗ ಜಲಾಶಯಕ್ಕೆ ದಿನ ನಿತ್ಯ ನೀರು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಬತ್ತ ನಾಟಿ ಮಾಡುವದಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಆರೋಗ್ಯ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌ ಸೋಂಕಿನ ಬಗ್ಗೆ ಜಾಗೃತಿ ನಡೆಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ರೈತರು ಇರುವ ಹೊಲ ಗದ್ದೆಗಳಿಗೆ ತಾಲೂಕು ಪಂಚಾಯಿತಿ ಅಧಿಕಾರಿಗಳು ತೆರಳಿ ಉದ್ಯೋಗ ಖಾತ್ರಿಯ ಕೆಲಸದ ಜೊತೆಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮಾಸ್ಕ್‌ಗಳ ವಿತರಣೆಯೂ ನಡೆದಿದೆ.
Tap to resize

ಗಂಗಾವತಿ ಮತ್ತು ಕಾರಟಗಿ ತಾಲೂಕಗಳ ವ್ಯಾಪ್ತಿಯಲ್ಲಿ ಬರುವ ಮೂಷ್ಟೂರು, ಮೂಷ್ಟೂರು ಕ್ಯಾಂಪ್‌, ಶ್ರೀರಾಮನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ಸಾಮಾಜಿಕ ಅಂತರ ಕಾಪಾಡುವುದರ ಮೂಲಕ ಕಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ದಿನ ನಿತ್ಯ 8 ಗಂಟೆಗಳ ಕಾಲ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವಾಗ ಸಾಮಾಜಿಕ ಅಂತರ ಕಾಪಾಡುವ ಜೊತೆಗೆ, ಮುಖದ ರಕ್ಷಣೆಗಾಗಿ ಸುತ್ತ ವಸ್ತ್ರ ಕಟ್ಟಿಕೊಳ್ಳುತ್ತಾರೆ. ಗಂಟೆಗೊಮ್ಮೆ ಶಾನಿಟೈಸರ್‌ ಬಳಸಿಕೊಳ್ಳುವ ಮೂಲಕ ಕೊವೀಡ್‌ ಸೋಂಕು ಬಾರದಂತೆ ಮುಂಜಾಗ್ರತೆ ವಹಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಸೊಂಕು ಬಂದಿರುವುದಿಲ್ಲ. ಆದರೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿದಾಗ ಸಾಮಾಜಿಕ ಅಂತರ ಕಾಪಾಡುತ್ತಿದ್ದೇವೆ. ಮುಖಕ್ಕೆ ವಸ್ತ್ರದಿಂದ ರಕ್ಷಣೆ, ಸ್ಯಾನಿಟೈಸರ್‌ ಉಪಯೋಗಿಸುತ್ತಿದ್ದು, ಕೈ ಸ್ವಚ್ಛತೆ ಮತ್ತು ಹೊಲ ಗದ್ದೆಗಳಿಂದ ಮನೆಗೆ ತೆರಳಿದ ನಂತರವೂ ಮನೆಯವರೆಲ್ಲರಿಗೂ ಸ್ಯಾನಿಟೈಸರ್‌ ಬಳಕೆ ಮಾಡುವಂತೆ ತಿಳಿಸುತ್ತೇವೆ ಎಂದು ರೈತ ಮಹಿಳೆ ಲಿಂಗಮ್ಮ ಡಣಾಪುರ ಅವರು ಹೇಳಿದ್ದಾರೆ.
ರೈತ ಮಹಿಳೆಯರನ್ನು ಬತ್ತ ನಾಟಿ ಮಾಡುವುದಕ್ಕೆ ಗದ್ದೆಗೆ ಕರೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಅಲ್ಲದೇ ಸ್ವತಃ ಮಾಸ್ಕ್‌, ಸ್ಯಾನಿಟೈಸರ್‌ ನೀಡಲಾಗುತ್ತದೆ. ಪ್ರತಿ ಗಂಟೆಗೊಮ್ಮೆ ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛತೆ ಮಾಡಿಕೊಳ್ಳುವಂತೆ ತಿಳಿಸಲಾಗುತ್ತದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ ಎಂದು ಪ್ರಗತಿಪರ ರೈತ ಪಾಂಡು ರಾಠೋಡ್‌ ಅವರು ತಿಳಿಸಿದ್ದಾರೆ.

Latest Videos

click me!