ರೋಣ: ಶಾಲೆಯೊಳಗೆ ನುಗ್ಗಿದ ಮಳೆ ನೀರು, ನೀರು ಪಾಲಾದ ಸಾಮಗ್ರಿ

First Published | Sep 10, 2020, 3:33 PM IST

ರೋಣ(ಸೆ.10): ಮಂಗಳವಾರ ರಾತ್ರಿ ಸುರಿದ ಬಾರೀ ಪ್ರಮಾಣದ ಮಳೆಯಿಂದಾಗಿ ನೀರು ತಾಲೂಕಿನ ಸವಡಿ ಗ್ರಾಮದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಯೊಳಗೆ ನುಗ್ಗಿ, ಶಾಲೆಯಲ್ಲಿನ ಕೆಲ ಪುಸ್ತಕ, ಡೆಸ್ಕ್‌, ಬಾಕ್ ನೀರು ಪಾಲಾದ ಘಟನೆ ನಡೆದಿದೆ.

ಸವಡಿ ಗ್ರಾಮದ ಹಳೇ ಮಠದ ಹಿಂದುಗಡೆ ಇರುವ ಜಮೀನುಗಳ ನೀರು ಭಾರೀ ಪ್ರಮಾಣದಲ್ಲಿ ರಭಸವಾಗಿ ಹರಿದು, ಶಾಲಾ ಮೈದಾನದಲ್ಲಿ ಶೇಖರಣೆಗೊಂಡು, ಬಳಿಕ ಕೊಠಡಿಯೊಳ ನುಗ್ಗಿದೆ. ಈ ವೇಳೆ ಕೆಲ ಕೊಠಡಿಯಲ್ಲಿನ ಸಣ್ಣ ಪುಟ್ಟ ಪುಸ್ತಕಗಳು, ನೋಟ್ ಬುಕ್, ಕಟ್ಟಿಗೆಯ ಡೆಸ್ಕ್‌, ಬಾಕ್ ಸೇರಿದಂತೆ ವಿವಿಧ ಸಾಮಗ್ರಿಗಳು ನೀರು ನೆನದು ಹಾಳಾಗಿವೆ.
ಕಳೆರಡು ಮೂರು ವರ್ಷದಿಂದ ಮಳೆಗಾಲದಲ್ಲಿ ಗ್ರಾಮದ ಸುತ್ತಲಿನ ನೀರು ಹರಿದು ಶಾಲೆ ಆವರಣ, ಕೊಠಡಿಯೊಳಗೆ ನುಗ್ಗುತ್ತದೆ. ಶಾಲೆ ಪ್ರಾರಂಭವಿದ್ದಾಗ, ಕೊಠಡಿಯೊಳಗೆ ನೀರು ನುಗ್ಗದಂತೆ ಶಿಕ್ಷಕರು ಹರಸಾಹಸ ಪಡುತ್ತಾ ಬಂದಿದ್ದಾರೆ. ಜಮೀನುಗಳ ಮಳೆ ನೀರು ಶಾಲಾ ಆವರದೊಳ ನುಗ್ಗದಂತೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಗ್ರಾಪಂ ಗೆ ಶಾಲಾ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಅನೇಕ ಬಾರಿ ಲಿಖಿತ ಮತ್ತು ಮೌಖಿಕವಾಗಿ ಮನವಿ ಮಾಡುತ್ತಾ ಬಂದಿದ್ದು, ಈವರೆಗೂ ಮಳೆ ನೀರು ಬೇರಡೆ ಸಾಗಲು ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ಗ್ರಾಪಂ ಮುಂದಾಗಿಲ್ಲ.
Tap to resize

ಸ್ವಲ್ಪ ಮಳೆಯಾದಲ್ಲಿ ನೀರು ಶಾಲಾ ಆವರಣಕ್ಕೆ ನುಗ್ಗಿ ಆವರಣ ಕೆರೆಯಂತಾಗುತ್ತಿದೆ. ಇದರಿಂದ ಶಾಲೆ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ಸದ್ಯ ಶಾಲೆ ಪ್ರಾರಂಭವಿಲ್ಲದ್ದರಿಂದ ಮಕ್ಕಳಿಗೆ ಯಾವದೇ ರೀತಿಯ ತೊಂದರೆಯಾಗಿಲ್ಲ ಈ ಹಿಂದೆ ಅನೇಕ ಬಾರಿ ಶಾಲಾ ಮಕ್ಕಳು ತೊಂದರೆ ಅನುಭವಿಸಿದ್ದಾರೆ. ಆದ್ದರಿಂದ ಸ್ಥಳೀಯ ಗ್ರಾಪಂ ಮಳೆ ಬಂದಾಗ ಮಾತ್ರ ಮಳೆ ನೀರು ಬೇರಡೆ ಹೋಗಲು ತಾತ್ಕಾಲಿಕ ವ್ಯವಸ್ಥೆ ಮಾಡುವ ಬದಲು, ಶಾಶ್ವತವಾಗಿ ಮಳೆ ನೀರು ಶಾಲಾ ಆವರಣದೊಳ ನುಗ್ಗದಂತೆ ಶಾಲಾ ಮುಖ್ಯ ದ್ವಾರದಲ್ಲಿನ ಗೆಟ್‌ನ್ನು ಎತ್ತರ ಪ್ರದೇಶದಲ್ಲಿ ವೈಜ್ಞಾನಿಕವಾಗಿ ನಿರ್ಮಿಸಬೇಕು. ಜೊತೆಗೆ ನೀರು ನೇರವಾಗಿ ಹರಿದು ಹೋಗುವಂತೆ ಕಾಂಕ್ರೆಟ್ ಕೊಡಿ ನಿರ್ಮಿಸಬೇಕು. ಹೀಗೆ ನಿರ್ಮಿಸಿ ಕೊಡಿಗೆ ಅಡ್ಡಲಾಗಿ ಶಾಲಾ ಪ್ರವೇಶ ದ್ವಾರ ಎದುರು ಸಿಡಿ ನಿರ್ಮಿಸಬೇಕು. ಅಂದಾಗ ಸಾಶ್ವತವಾಗಿ ಪರಿಹಾರ ಸಿಕ್ಕಂತಾಗುತ್ತದೆ. ಈ ಕುರಿತು ಗ್ರಾಪಂ, ತಾಪಂ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧಕ್ಷ ರಾಮನಗೌಡ ಅರಹುಣಸಿ ಆಗ್ರಹಿಸಿದರು.
ಮಳೆ ನೀರು ಶಾಲಾ ಆವರಣದೊಳಗೆ ನುಗ್ಗುತ್ತಿರುವ ಕುರಿತು ತಿಳಿದು ಬಂದಿದ್ದು, ಕೂಡಲೇ ಗ್ರಾಪಂ ಪಿಡಿಒ ಅವರನ್ನು ಸಂಪರ್ಕಿಸಿ, ನೀರು ಶಾಲಾ ಆವರದೊಳಗೆ ನುಗ್ಗದಂತೆ, ಬೇರೆಡೆ ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಕಲ್ಪಿಸುವಲ್ಲಿ ಹಾಗೂ ಶಾಶ್ವತವಾದ ಯೋಜನೆ ರೂಪಿಸಿಕೊಳ್ಳಲು ತಕ್ಷಣೇ ಸೂಚನೆ ನೀಡುತ್ತೆನೆ ಎಂದು ರೋಣ ತಾಪಂ ಇಒ ಸಂತೋಷ ಪಾಟೀಲ ಅವರು ತಿಳಿಸಿದ್ದಾರೆ.

Latest Videos

click me!