ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ಈ ಸಂಪೂರ್ಣ ಲಾಕ್‌ಡೌನ್ ಮುಂದುವರಿದಿತ್ತು. ಹಾಲು, ದಿನಪತ್ರಿಕೆ, ತರಕಾರಿ, ಮೀನು ಮಾಂಸದ ಅಂಗಡಿಗಳನ್ನು ತೆರೆಯಲು ಅವಕಾಶವಿದ್ದರೂ ನಗರದ ಬಹುತೇಕ ತರಕಾರಿ- ಹಣ್ಣಿನ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿದ್ದವು.
ಜನರಿಗೆ ಮೊದಲೇ ಲಾಕ್‌ಡೌನ್ ಮಾಹಿತಿ ಇದ್ದುದರಿಂದ ಹಾಗೂ ಖಾಸಗಿ, ಸಾರ್ವಜನಿಕ ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಿದ್ದರಿಂದ ರಸ್ತೆಗಳಲ್ಲಿ ಜನರೇ ಇಲ್ಲದೆ ಅಂಗಡಿ ತೆರೆದವರೂ ವ್ಯಾಪಾರವಿಲ್ಲದೆ ಖೇದ ವ್ಯಕ್ತಪಡಿಸಿದರು. ಮಧ್ಯಾಹ್ನ ಬಳಿಕವಂತೂ ಬಹುತೇಕ ಎಲ್ಲ ಅಂಗಡಿಗಳೂ ಮುಚ್ಚಿದ್ದವು.
ನಗರದ ಕೇಂದ್ರ ಮೀನು ಮಾರುಕಟ್ಟೆಗೆ ಮೀನುಗಾರ ಮಹಿಳೆಯರು ಬಾರದೆ ಬಂದ್ ಆಗಿತ್ತು. ಅನೇಕ ಮಾಂಸದ ಮಳಿಗೆಗಳೂ ಮುಚ್ಚಿದ್ದವು.
ಪವಿತ್ರ ರಂಜಾನ್ ಆಚರಣೆಗೆ ಅನೇಕರು ಮಾರುಕಟ್ಟೆಗೆ ಆಗಮಿಸಿದರೆ ಮೀನು, ಮಾಂಸ ಸಿಗದೆ ಪರದಾಡಿದರು.
ಕೆಲವು ಮಾಂಸದ ಅಂಗಡಿಗಳು ತೆರೆದಿದ್ದರೂ ದುಬಾರಿ ದರ ವಸೂಲಿ ಮಾಡಲಾಗುತ್ತಿತ್ತು. ಮಟನ್ ಕೆಜಿಗೆ 800 ರು.ಗೂ ಹೆಚ್ಚು ವಸೂಲಿ ಮಾಡಲಾಗುತ್ತಿತ್ತು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹಿಂದೆ ರಂಜಾನ್ ಸಂದರ್ಭ ಎಲ್ಲ ಮಸೀದಿಗಳು ಸಾವಿರಾರು ಜನರಿಂದ ತುಂಬಿರುತ್ತಿದ್ದವು. ಹಬ್ಬದ ವಿಶೇಷ ಪ್ರಾರ್ಥನೆಗಾಗಿ ಮುಸ್ಲಿಂ ಬಾಂಧವರು ಹಲವು ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಈ ಬಾರಿ ಕೊರೋನಾ ಕಾರಣದಿಂದ ಪ್ರಾರ್ಥನಾ ಕೇಂದ್ರಗಳಿಗೆ ನಿರ್ಬಂಧ ಇರುವುದರಿಂದ ಜಿಲ್ಲೆಯ ಎಲ್ಲ ಮಸೀದಿಗಳು ಹಬ್ಬದ ದಿನವೂ ಬಿಕೋ ಎನ್ನುತ್ತಿದ್ದವು.
ಪ್ರತಿವರ್ಷ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಪ್ರಾರ್ಥನೆಗಾಗಿ ಸೇರುತ್ತಿದ್ದ ಮಂಗಳೂರಿನ ಈದ್ಗಾ ಜುಮಾ ಮಸೀದಿಯಲ್ಲಂತೂ ನೀರವ ಮೌನ.
ಮಸೀದಿ ಸುತ್ತಮುತ್ತಲಿನ ರಸ್ತೆ, ಆವರಣ ಎಲ್ಲವೂ ಖಾಲಿಯಿತ್ತು. ಮಸೀದಿಗಳಲ್ಲಿ ಧರ್ಮಗುರುಗಳನ್ನು ಹೊರತುಪಡಿಸಿದರೆ ಭದ್ರತೆಗಾಗಿ ಪೊಲೀಸರು ಮಾತ್ರವೇ ಇದ್ದರು.
ಮಾರುಕಟ್ಟೆಗಳೆಲ್ಲ ಬಂದ್, ಮೀನು, ಮಾಂಸ ಮಾರಾಟಕ್ಕೆ ಅವಕಾಶವಿದ್ದರೂ ತೆರೆಯದ ಬಹುತೇಕ ಅಂಗಡಿಗಳು
ಅನಗತ್ಯವಾಗಿ ವಾಹನಗಳಲ್ಲಿ ಸುತ್ತಾಡುವವರನ್ನು ತಡೆದು ಎಚ್ಚರಿಕೆ ನೀಡಿ ಬಂದ ದಾರಿಯಲ್ಲೇ ವಾಪಸ್ ಕಳುಹಿಸುತ್ತಿದ್ದರು. ಮಂಗಳೂರು ನಗರದ ಅನಗತ್ಯ ಪ್ರವೇಶಕ್ಕೆ ವಾಹನಗಳಿಗೆ ಅವಕಾಶ ನಿರ್ಬಂಧಿಸಲಾಯಿತು.
ಸಂಪೂರ್ಣ ಲಾಕ್‌ಡೌನ್ ಮಾತ್ರವಲ್ಲ ರಂಜಾನ್ ಹಬ್ಬದಾಚರಣೆಯೂ ಇದ್ದುದರಿಂದ ಪೊಲೀಸ್ ಸಿಬ್ಬಂದಿ ನಗರಾದ್ಯಂತ ಭದ್ರತೆಯನ್ನು ಬಲಪಡಿಸಿದ್ದರು. ಮಂಗಳೂರು ಹೊರವಲಯದ ತೊಕ್ಕೊಟ್ಟು ಬಳಿ ಪೊಲೀಸರು ಬಂದೂಕು ಹಿಡಿದು ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದುದು ಕಂಡುಬಂತು.