ಸೋಮವಾರಪೇಟೆ ದೊಡ್ಡಮಳ್ತೆಯ ಕೃಷಿಕ ರಾಶಿತ್, ತಮ್ಮ ತೋಟದಲ್ಲಿ ಸುಮಾರು 13 ವಿವಿಧ ತಳಿಯ ಸೇಬು ಬೆಳೆಸುತ್ತಿದ್ದಾರೆ. 2019ರಲ್ಲಿ ಹಿಮಾಚಲ ಪ್ರದೇಶದಿಂದ ಸೇಬು ಗಿಡಗಳನ್ನು ತಂದು ಕೃಷಿ ಮಾಡಿದ್ದಾರೆ. ಈ ಬಗ್ಗೆ ವಿಜ್ಞಾನಿಗಳಿಂದ ಸಲಹೆ ಪಡೆದುಕೊಂಡಿದ್ದಾರೆ. ಕೊಡಗಿನ ವಾತಾವರಣಕ್ಕೆ ಹೊಂದಿಕೊಂಡು ಪ್ರಸ್ತುತ ಐದು ತಳಿಯ ಫಸಲು ಉತ್ತಮವಾಗಿ ಬಂದಿವೆ.
ಅವರು ತೋಟದಲ್ಲಿ 80ಸೇಬು ಗಿಡಗಳನ್ನು ಬೆಳೆಸಿದ್ದು, ಈ ಬಾರಿ 16 ಗಿಡದಲ್ಲಿ ಉತ್ತಮ ಫಸಲು ಬಂದಿದೆ. ಸೇಬು ಕೃಷಿಯೊಂದಿಗೆ ಗಿಡಗಳನ್ನೂ ಮಾರಾಟ ಮಾಡುತ್ತಿದ್ದಾರೆ. ಸುಮಾರು 4000 ಗಿಡ ತರಿಸಿದ್ದು, ಒಂದು ಗಿಡವನ್ನು 500 ರು.ಗೆ ಮಾರಾಟ ಮಾಡುತ್ತಿದ್ದಾರೆ. ಸೇಬಿನ ಗಿಡಕ್ಕೆೆ ಹೆಚ್ಚಿನ ಬೇಡಿಕೆಯಿದ್ದು, ಜಿಲ್ಲೆ ಹಾಗೂ ಹೊರ ರಾಜ್ಯದ ಕೃಷಿಕರು ಗಿಡಗಳನ್ನು ಖರೀದಿಸಿದ್ದಾರೆ.
ಮಡಿಕೇರಿಯಲ್ಲಿ ಮಾಜಿ ಯೋಧ ಪ್ರಕಾಶ್ ಹೂಕುಂಡದಲ್ಲಿ ಸೇಬು ಗಿಡವನ್ನು ನೆಟ್ಟು ಪ್ರಯೋಗ ಮಾಡಿದ್ದು, ಈಗ ಗಿಡದಿಂದ ಫಸಲು ಪಡೆದಿದ್ದಾಾರೆ. ಈ ಪ್ರಯೋಗ ಯಶಸ್ವಿಯಾದರೆ ಮತ್ತಷ್ಟು ಸೇಬು ಗಿಡ ಬೆಳೆಯುವ ಚಿಂತನೆ ಮಾಡಿದ್ದಾರೆ.
ಜಮ್ಮುವಿನಿಂದ ಸೇಬಿನ ಗಿಡ ತರಿಸಿಕೊಂಡಿದ್ದು, ನೆಟ್ಟು ಎರಡು ವರ್ಷದಲ್ಲಿ ಫಸಲು ಬಂದಿದೆ. ಮುಂದೆ ಗಿಡವನ್ನು ನೆಲದಲ್ಲಿ ನೆಡುವ ಚಿಂತನೆ ನಡೆಸಿದ್ದು, ಅದು ಚೆನ್ನಾಗಿ ಬಂದರೆ, ಮುಂದೆಯೂ ಕಾಶ್ಮೀರದಿಂದ ಗಿಡಗಳನ್ನು ತಂದು ನೆಡುವ ಚಿಂತನೆಯಲ್ಲಿದ್ದಾರೆ . 9 ವರ್ಷ ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡಿದ್ದ ಪ್ರಕಾಶ್, ಮಡಿಕೇರಿಯ ಸಂಪಿಗೆಕಟ್ಟೆಯಲ್ಲಿ ನೆಲೆಸಿದ್ದು, ತೋಟಗಾರಿಕೆ ಇಲಾಖೆಯಲ್ಲಿ ಸಿಬ್ಬಂದಿಯಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕೆಲವು ರೈತರು ಸೇಬು ಬೆಳೆಯುವತ್ತ ಗಮನ ಹರಿಸಿದ್ದಾಾರೆ. ಉತ್ತಮ ಫಸಲು ಬಂದಿದ್ದು, ಗುಣಮಟ್ಟದಿಂದ ಕೂಡಿದೆ. ಹಿಮಪ್ರದೇಶದಲ್ಲಿ ಸಾಮಾನ್ಯವಾಗಿ ಸೇಬು ಬೆಳೆಯಲಾಗುತ್ತದೆ. ಕೊಡಗಿನಲ್ಲಿ ಮಳೆಗಾಲ ಹಾಗೂ ಚಳಿಗಾಲದಲ್ಲಿ ತಂಪಾದ ವಾತಾವರಣ ಇರುವುದರಿಂದ ಸೇಬು ಬೆಳೆಯಲು ಪೂರಕವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಸೇಬು ಪ್ರಮುಖ ಬೆಳೆಯಾಗುವ ಸಾಧ್ಯತೆಯಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.