ಹುಬ್ಬಳ್ಳಿ: ತಿರಂಗ ಉತ್ಪಾದನೆಯೂ ಕುಸಿತ; ಬೇಡಿಕೆಯೂ ಇಲ್ಲ, ಸಂಕಷ್ಟದಲ್ಲಿ ರಾಷ್ಟ್ರಧ್ವಜ ಉತ್ಪಾದನಾ ಘಟಕ

First Published | Jul 30, 2020, 11:52 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜು.30): ಇಡೀ ದೇಶಕ್ಕೆ ರಾಷ್ಟ್ರಧ್ವಜ ಪೂರೈಸುವ ಇಲ್ಲಿನ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರ (ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರ) ಇದೀಗ ಕೊರೋನಾ ಎಫೆಕ್ಟ್‌ನಿಂದ ಸಂಕಷ್ಟದಲ್ಲಿ ಸಿಲುಕಿದೆ. ಉತ್ಪಾದನೆಯಲ್ಲೂ ಸಾಕಷ್ಟುಕುಸಿತಗೊಂಡಿದೆ. ಬೇಡಿಕೆಯೂ ಅರ್ಧಕ್ಕೆ ಇಳಿದಿದೆ. ಇದು ರಾಷ್ಟ್ರಧ್ವಜ ತಯಾರಿಕೆಯನ್ನು ನಂಬಿರುವ ನೂರಾರು ಕುಟುಂಬಗಳ ಬದುಕು ದುಸ್ತರವೆಂಬಂತಾಗಿದೆ.
 

ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ರಾಷ್ಟ್ರಧ್ವಜ ತಯಾರಿಕೆಗೆ ಭಾರತೀಯ ಮಾನಕ ಸಂಸ್ಥೆಯಿಂದ (ಬಿಐಎಸ್‌) ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆ. ದೆಹಲಿಯ ಕೆಂಪುಕೋಟೆ, ಕಾಶ್ಮೀರದಿಂದ ಹಿಡಿದು ಗ್ರಾಪಂವರೆಗೂ ದೇಶದ ಯಾವುದೇ ಮೂಲೆಯಲ್ಲಾದರೂ ರಾಷ್ಟ್ರಧ್ವಜ ಹಾರಾಡುತ್ತಿದೆ ಎಂದರೆ ಅದು ಹುಬ್ಬಳ್ಳಿಯಲ್ಲೇ ತಯಾರಾಗಿರುತ್ತದೆ. ಆದರೆ ಎಲ್ಲ ರಂಗಗಳಂತೆ ಕೊರೋನಾ ರಾಷ್ಟ್ರಧ್ವಜ ಉತ್ಪಾದನೆಯ ಮೇಲೂ ತನ್ನ ಕರಾಳ ಛಾಯೆಯನ್ನು ಚಾಚಿದೆ.
ಇಲ್ಲಿ 9 ಅಳತೆಯ ರಾಷ್ಟ್ರಧ್ವಜಗಳನ್ನು ಸಿದ್ಧಪಡಿಸಲಾಗುತ್ತದೆ. ಅತಿ ದೊಡ್ಡದು ಎಂದರೆ 14 ಅಡಿ ಅಗಲ, 21 ಅಡಿ ಉದ್ಧದ ಧ್ವಜವಾಗಿದ್ದರೆ, ಅತಿ ಕಡಿಮೆಯದ್ದು ಎಂದರೆ 2 ಅಡಿ ಅಗಲ, 3 ಅಡಿ ಉದ್ದದ ಧ್ವಜ. ಇವು ಕಂಬದ ಮೇಲೆ ಹಾರಾಡುವ ಧ್ವಜಗಳಾಗಿದ್ದರೆ, ಇನ್ನೂ ಇದಕ್ಕಿಂತ ಸಣ್ಣ ಧ್ವಜಗಳೆಂದರೆ ಟೇಬಲ್‌, ಕಾರು ಮುಂದೆ ಅಳವಡಿಸುವ ಧ್ವಜಗಳಾಗಿವೆ. ಇವು ಇಂಚುಗಳ ಲೆಕ್ಕದ ಆಧಾರದಲ್ಲಿರುತ್ತವೆ.
Tap to resize

ಇನ್ನೂ ರಾಷ್ಟ್ರಧ್ವಜ ನಿರ್ಮಾಣದ ಬಟ್ಟೆ, ನೂಲು, ನೇಯ್ಗೆ ತಯಾರಾಗುವುದು ಬಾಗಲಕೋಟೆ ಜಿಲ್ಲೆಯಲ್ಲಿ. ಅಲ್ಲಿನ ತುಳಸಿಗಿರಿ, ಗದ್ದನಕೇರಿ, ಬೇಲೂರು, ಜಾಲಿಹಾಳಗಳಲ್ಲಿ ಬಟ್ಟೆ, ಲಡಿ (ದಾರ) ಮತ್ತಿತರರ ವಸ್ತುಗಳು ಸಿದ್ಧವಾಗುತ್ತವೆ. ಈ ರೀತಿ ಖಾದಿ ಬಟ್ಟೆ, ಲಡಿ ತಯಾರಿಸುವ 22 ಕೇಂದ್ರಗಳು ಅಲ್ಲಿವೆ. ಅಲ್ಲಿಂದ ಈ ವಸ್ತುಗಳೆಲ್ಲ ಇಲ್ಲಿಗೆ ಬರುತ್ತವೆ. ಇಲ್ಲಿ ರಾಷ್ಟ್ರಧ್ವಜ ಉತ್ಪಾದಿಸಲಾಗುತ್ತದೆ. ಲಾಕ್‌ಡೌನ್‌ನಿಂದಾಗಿ ಅಲ್ಲಿನ ಕೇಂದ್ರಗಳು ಬಂದ್‌ ಆಗಿದ್ದವು. ಇಲ್ಲಿನ ಕೇಂದ್ರವೂ ಬಂದ್‌ ಆಗಿತ್ತು. ಇದೀಗ ಲಾಕ್‌ಡೌನ್‌ ತೆರವುಗೊಳಿಸಿದ ನಂತರ ಉತ್ಪಾದನೆ ಶುರುವಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಉತ್ಪಾದನೆಯೂ ಆಗಿಲ್ಲ. ಬೇಡಿಕೆಯೂ ಇಲ್ಲ.
ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 50ರಷ್ಟು ಮಾತ್ರ ಬೇಡಿಕೆ ಇದೆ. ಅಷ್ಟೇ ಪ್ರಮಾಣದ ಉತ್ಪಾದನೆ ಮಾಡಲಾಗಿದೆ. ಅಂದರೆ ಕಳೆದ ವರ್ಷ 2019 ಏಪ್ರಿಲ್‌ನಿಂದ ಮಾಚ್‌ರ್‍ 31ರ ವರೆಗೆ 3 ಕೋಟಿಗೂ ಅಧಿಕ ಉತ್ಪಾದನೆ ಮಾಡಿ ವಹಿವಾಟು ಮಾಡಲಾಗಿತ್ತು. ಇನ್ನೂ ಕಳೆದ ವರ್ಷ ಏಪ್ರಿಲ್‌, ಮೇ, ಜೂನ್‌ ಹಾಗೂ ಜುಲೈ ಈ ನಾಲ್ಕು ತಿಂಗಳಲ್ಲೇ ಬರೋಬ್ಬರಿ 70 ಲಕ್ಷಕ್ಕೂ ಅಧಿಕ ಮೌಲ್ಯದ ರಾಷ್ಟ್ರಧ್ವಜ ಉತ್ಪಾದನೆ ಮಾಡಲಾಗಿತ್ತು. ಅಲ್ಲದೇ, ಆ ನಾಲ್ಕು ತಿಂಗಳಲ್ಲಿ . 94 ಲಕ್ಷ ಮೌಲ್ಯದ ರಾಷ್ಟ್ರಧ್ವಜವನ್ನು ಮಾರಾಟ ಮಾಡಲಾಗಿತ್ತು.
ಇನ್ನೂ ಈ ವರ್ಷ ಏಪ್ರಿಲ್‌ನಿಂದ ಈ ವರೆಗೆ (ನಾಲ್ಕು ತಿಂಗಳು) 35.40 ಲಕ್ಷ ಮೌಲ್ಯದ ರಾಷ್ಟ್ರಧ್ವಜವನ್ನು ಉತ್ಪಾದಿಸಲಾಗಿದೆ. ಇನ್ನೂ ಬೇಡಿಕೆ ಬಂದಿದ್ದು ಬರೀ 42 ಲಕ್ಷ ಮೌಲ್ಯದ ಮಾತ್ರ. ಎಷ್ಟುಬೇಡಿಕೆ ಬಂದಿತ್ತು ಅಷ್ಟನ್ನೂ ಪೂರೈಸಲಾಗಿದೆ. ಆದರೆ ಈ ವರ್ಷ ಕೊರೋನಾದಿಂದಾಗಿ ಅದ್ಧೂರಿ ಸ್ವಾತಂತ್ರ್ಯೋತ್ಸವ ಆಗುವ ಸಾಧ್ಯತೆ ಕಡಿಮೆ. ಇನ್ನೂ ಶಾಲೆ- ಕಾಲೇಜ್‌ಗಳು ಬಂದ್‌ ಆಗಿವೆ. ಈ ಕಾರಣದಿಂದಲೂ ಬೇಡಿಕೆ ಕಡಿಮೆಯಾಗಿದೆ ಎಂದು ಖಾದಿ ಗ್ರಾಮೋದ್ಯೋಗದ ಮೂಲಗಳು ತಿಳಿಸುತ್ತವೆ.
ಇನ್ನೂ ಈ ಕೇಂದ್ರದಲ್ಲಿ 30ಕ್ಕೂ ಹೆಚ್ಚು ಜನ ಕೆಲಸಗಾರರಿದ್ದರೆ, ಅದರಲ್ಲಿ ಕೊರೋನಾದಿಂದಾಗಿ ಸುಮಾರು 5-6 ಜನ ಕೆಲಸಕ್ಕೆ ಬರುತ್ತಿಲ್ಲ. ಬಾಗಲಕೋಟೆಗಳಲ್ಲಿನ ಕೇಂದ್ರಗಳಲ್ಲೂ ಇದೇ ಪರಿಸ್ಥಿತಿಯಿದೆ. ಬಾಗಲಕೋಟೆಯಲ್ಲಿ 22 ಕೇಂದ್ರ ಹಾಗೂ ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಕೇಂದ್ರ ಸೇರಿದಂತೆ ಒಟ್ಟು ರಾಷ್ಟ್ರಧ್ವಜ ತಯಾರಿಕೆಯಲ್ಲಿ ಬರೋಬ್ಬರಿ 900 ಜನ ತೊಡಗಿದ್ದಾರೆ. ಇಲ್ಲಿ ಕೆಲಸ ಮಾಡುವವರಾರ‍ಯರಿಗೂ ಸಂಬಳ ನಿಗದಿ ಮಾಡಿಲ್ಲ. ಪೀಸ್‌ ವರ್ಕ್ ಮೇಲೆ ಇವರಿಗೆ ಸಂಬಳ ನೀಡಲಾಗುತ್ತಿದೆ. ಅಂದರೆ ಒಬ್ಬರು ಎಷ್ಟು ರಾಷ್ಟ್ರಧ್ವಜ ತಯಾರಿಸುತ್ತಾರೋ ಅದರ ಲೆಕ್ಕದ ಮೇಲೆ ಇವರಿಗೆ ಸಂಬಳ ಸಿಗುತ್ತದೆ. ರಾಷ್ಟ್ರಧ್ವಜದ ಬೇಡಿಕೆ ಹಾಗೂ ಉತ್ಪಾದನೆ ಕಡಿಮೆಯಾಗಿರುವುದರಿಂದ ಅವರ ದುಡಿಮೆಯೂ ಕಡಿಮೆಯಾಗಿ ಅವರ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿದಂತಾಗಿರುವುದಂತೂ ಸತ್ಯ.
ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 50ರಷ್ಟೂ ಈ ವರ್ಷ ಬೇಡಿಕೆಯೂ ಇಲ್ಲ. ಉತ್ಪಾದನೆಯನ್ನೂ ಮಾಡಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಬೇಡಿಕೆ ಬರುತ್ತಿತ್ತು. ಆದರೆ ಈ ವರ್ಷ ಅದೆಲ್ಲ ಸ್ಥಗಿತಗೊಂಡಿದೆ. ಹೀಗಾಗಿ ಉತ್ಪಾದನೆ ಕುಸಿತಗೊಂಡಿದೆ. ಕಳೆದ ವರ್ಷ ಈ ವರೆಗೆ 94 ಲಕ್ಷ ಮೌಲ್ಯದ ರಾಷ್ಟ್ರಧ್ವಜವನ್ನು ಮಾರಾಟ ಮಾಡಿದ್ದೇವು. ಆದರೆ ಈ ವರ್ಷ ಬರೀ 42 ಲಕ್ಷ ಮೌಲ್ಯದ ಮಾತ್ರ ಮಾರಾಟವಾಗಿದೆ ಎಂದು ಬೆಂಗೇರಿ ಗ್ರಾಮದ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ಅವರು ಹೇಳಿದ್ದಾರೆ.

Latest Videos

click me!