ಕೊಡಗಿನಲ್ಲೂ ಬೆಳೆಯಬಹುದು ಕಪ್ಪು ದ್ರಾಕ್ಷಿ!

First Published | Jun 11, 2020, 9:40 AM IST

ಕೊಡಗು ಜಿಲ್ಲೆಯಲ್ಲೂ ಕಪ್ಪು ದ್ರಾಕ್ಷಿ ಬೆಳೆಯಬಹುದು. ಮಡಿಕೇರಿ ನಗರದ ಹೊಸ ಬಡಾವಣೆ ಬಳಿ ವಾಸವಿರುವ ಮುಕ್ಕಾಟಿರ ನಾಣಯ್ಯ ಅವರ ಮನೆಯಂಗಳದಲ್ಲಿ ಕಪ್ಪು ದ್ರಾಕ್ಷಿ ಹಣ್ಣು ನೋಡುಗರ ಕಣ್ಮನ ಸೆಳೆಯುತ್ತಿದೆ.

ಕೊಡಗು ವಿವಿಧ ಬೆಳೆಗಳನ್ನು ಬೆಳೆಯುವಲ್ಲಿಯೂ ಗಮನ ಸೆಳೆಯುತ್ತಿದೆ. ಪ್ರಮುಖ ಬೆಳೆಗಳಾದ ಕಾಫಿ, ಏಲಕ್ಕಿ, ಕರಿಮೆಣಸು, ಕಿತ್ತಳೆ, ಬತ್ತ, ಜೋಳ ಮತ್ತಿತರ ಬೆಳೆಗಳೊಂದಿಗೆ ಲಿಚ್ಚಿ, ಸೇಬು, ದ್ರಾಕ್ಷಿಯಂತಹ ಅಪರೂಪದ ಬೆಳೆಗಳೂ ಜಿಲ್ಲೆಯಲ್ಲಿ ಬೆಳೆಯುತ್ತಿದೆ.
ಅದರಲ್ಲೂ ಬೆರಳೆಣಿಕೆಯಷ್ಟುಮಂದಿ ಬೆಳೆಯುತ್ತಿದ್ದ ದ್ರಾಕ್ಷಿ ಬೆಳೆಯನ್ನು ಈಗ ನಗರದಲ್ಲಿರುವ ಅಲ್ಪ ಜಾಗದಲ್ಲೇ ಬೆಳೆಸುವಷ್ಟರ ಮಟ್ಟಿಗೆ ದ್ರಾಕ್ಷಿ ಬೆಳೆ ಖ್ಯಾತಿ ಪಡೆದಿದೆ.
Tap to resize

ಆ ಮೂಲಕ ಕೊಡಗು ಜಿಲ್ಲೆಯಲ್ಲಿ ದ್ರಾಕ್ಷಿಯನ್ನು ಮಾರುಕಟ್ಟೆಯಿಂದ ತರಬೇಕಿಲ್ಲ. ಅಲ್ಪಾವಧಿಯಲ್ಲೇ ಮನೆಯಂಗಳದಲ್ಲೂ ಬೆಳೆಯಬಹುದು ಎಂಬುದನ್ನು ಮಡಿಕೇರಿ ನಗರದ ಕುಟುಂಬ ತೋರಿಸಿಕೊಟ್ಟಿದೆ.
ಮುಕ್ಕಾಟಿರ ನಾಣಯ್ಯ ಹಾಗೂ ಪ್ರೇಮಾ ನಾಣಯ್ಯ ದಂಪತಿಗಳ ಪುತ್ರ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಿಂದ ದ್ರಾಕ್ಷಿಯ ಕಟ್ಟಿಂಗ್ಸ್‌ ತಂದು ಕೊಟ್ಟಿದ್ದರು.
ಅದನ್ನು ದಂಪತಿಗಳು ಮನೆಯ ಹಿತ್ತಲಲ್ಲಿ ಬೆಳೆದಿದ್ದರು. 3 ವರ್ಷಗಳ ಬಳಿಕ ಒಂದು ಗೊಂಚಲು ಹಣ್ಣು ಬಿಡುವ ಮೂಲಕ ಮೊದಲ ಫಸಲು ದೊರೆತಿತ್ತು.ಎರಡನೇ ವರ್ಷ 4 ರಿಂದ 5 ಬಂಚ್‌ ಫಸಲು ದೊರೆತರೆ ಈ ಬಾರಿ ಅಧಿಕ ಪ್ರಮಾಣದಲ್ಲಿ ಫಸಲು ಪಡೆದಿದ್ದಾರೆ.
ಆರಂಭದಲ್ಲಿ ಹಸಿರು ಬಣ್ಣದಲ್ಲಿರುವ ದ್ರಾಕ್ಷಿ ಬಳಿಕ ಕಪ್ಪು ಬಣ್ಣಕ್ಕೆ ತಿರುಗಿದೆ. ಸಾಮಾನ್ಯವಾಗಿ ಬೇರೆ ಹಣ್ಣುಗಳನ್ನು ಬೆಳೆಯುವಂತೆ ಕಾಡಿನ ಮಣ್ಣು ತಂದು ಸಗಣಿ ಗೊಬ್ಬರ ಹಾಕಿ ಪೋಷಣೆ ಮಾಡಲಾಗುತ್ತಿದ್ದು, ಫಸಲು ಬಿಡುವ ನಿರೀಕ್ಷೆಯನ್ನೇ ಇಟ್ಟುಕೊಳ್ಳದ ಮನೆ ಮಂದಿ ರುಚಿರುಚಿಯಾದ ಬ್ಲಾಕ್‌ ಗ್ರೇಫ್ಸ್‌ನಿಂದ ಖುಷಿಗೊಂಡಿದ್ದಾರೆ. ಅಕ್ಕಪಕ್ಕದ ಮನೆಯವರಿಗೂ ರುಚಿ ನೋಡಲು ಹಣ್ಣು ಕೊಡುತ್ತಿರುವುದಾಗಿ ಪ್ರೇಮಾ ನಾಣಯ್ಯ ಸಂತಸ ಹಂಚಿಕೊಂಡಿದ್ದಾರೆ.
ಕಡಿಮೆ ಪೋಟ್ಯಾಸಿಯಂ ಹೊಂದಿರುವ ದ್ರಾಕ್ಷಿ ಆರೋಗ್ಯಕ್ಕೂ ಒಳ್ಳೆಯದು. ಮಾರುಕಟ್ಟೆಯಿಂದ ಹಣ ನೀಡಿ ಖರೀದಿಸುವ ಬದಲು ಸಾಧ್ಯವಾದಷ್ಟುತೋಟಗಳಲ್ಲಿ, ಮನೆಯ ಸುತ್ತಮುತ್ತ ಹಣ್ಣಿನ ಗಿಡ, ತರಕಾರಿ ಬೆಳೆಯುವ ಮನಸ್ಸು ಮಾಡಬಹುದು. ಮನೆಯ ಮುಂದಿನ ಸ್ವಲ್ಪವೇ ಜಾಗದಲ್ಲಿ ಹಾಗೂ ತೋಟದಲ್ಲಿ ವಿವಿಧ ಹಣ್ಣುಗಳನ್ನು ಬೆಳೆದಿರುವ ಮುಕ್ಕಾಟಿಕ ನಾಣಯ್ಯ ಕುಟುಂಬ ಹಲವರಿಗೆ ಮಾದರಿಯಾಗಿದೆ.

Latest Videos

click me!