ಕೊಪ್ಪಳ: ಸುಡುವ ಬಿಸಿಲು ಲೆಕ್ಕಿಸದೇ ಗಾಲಿಕುಂಟೆ ತಳ್ಳಿ 3 ಎಕರೆ ಹೊಲ ಎಡೆಹೊಡೆದ ರೈತ..!

First Published | Jun 6, 2021, 10:57 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜೂ.06): ಸೈಕಲ್‌ ಗಾಲಿಗೆ ಎಡೆಕುಂಟೆ ಜೋಡಿಸಿ ಎತ್ತುಗಳಂತೆಯೇ ತಳ್ಳಿಕೊಂಡು ಎಡೆ ಹೊಡೆಯುತ್ತಿದ್ದ (ಬೆಳೆಯ ಮಧ್ಯದ ಕಳೆ ತೆಗೆಯುವುದು) ರೈತನ ಮುಖದಲ್ಲಿ ಬೆವರು ಇಳಿಯುತ್ತಿತ್ತು. ತಲೆ ಮೇಲೆ ಸುಡುವ ಬಿಸಿಲು ಲೆಕ್ಕಿಸದೇ ಆತ ಎತ್ತಿನಂತೆ ದುಡಿಯುತ್ತಿದ್ದ ದೃಶ್ಯ ಕರುಳು ಚುರ್‌ ಎನ್ನುವಂತೆ ಮಾಡಿತು.
 

ಇದು, ಜಿಲ್ಲೆಯ ಕನಕಗಿರಿ ತಾಲೂಕಿನ ಕಳ್ಳಿರಾಂಪುರ ಗ್ರಾಮದ ಬಳಿ ಹೊಲವೊಂದರಲ್ಲಿ ಕಂಡು ಬಂದ ದೃಶ್ಯ. ಹೀಗೆ ಎತ್ತಿನಂತೆ ದುಡಿಯುತ್ತಿದ್ದ ರೈತನ ಹೆಸರು ವೆಂಕೋಬಪ್ಪ ರಾಮಣ್ಣ ಈಳಗೇರಿ.
ಇವರದು ಸುಮಾರು ನಾಲ್ಕು ಎಕರೆ ಭೂಮಿ ಇದೆ. ಹಳ್ಳಕ್ಕೆ ಪಂಪ್‌ಸೆಟ್‌ ಅಳವಡಿಸಿದ್ದಾರೆ. ಮೂರು ಎಕರೆ ಮೆಕ್ಕೆಜೋಳ ಹಾಕಿ, ಉಳಿದದ್ದನ್ನು ಹತ್ತಿ ಪ್ಲಾಟ್‌ ಮಾಡಲು ಸಿದ್ಧ ಮಾಡಿಕೊಂಡಿದ್ದಾರೆ. ಮೂರು ಎಕರೆ ಮೆಕ್ಕೆಜೋಳವನ್ನೇ ಅವರು ಸೈಕಲ್‌ ಗಾಲಿಯ ಕುಂಟೆಯಿಂದ ಎಡೆ ಹೊಡೆದಿದ್ದಾರೆ.
Tap to resize

ಎತ್ತುಗಳ ಬೆಲೆ 80-90 ಸಾವಿರ. ಅಷ್ಟೊಂದು ಕೊಟ್ಟು ಎತ್ತು ಕೊಳ್ಳುವುದಕ್ಕೆ ಶಕ್ತಿ ಇಲ್ಲ. ಸಾಲ ಮಾಡಿ ಖರೀದಿ ಮಾಡಿದರೆ ಸಲವುಹುದಕ್ಕೆ ಒಬ್ಬ ಆಳು ಬೇಕು. ಇದು ಸಾಧ್ಯವೇ ಇಲ್ಲ. ಇನ್ನು ಬಾಡಿಗೆ ಗಳೆಯ ಮೂಲಕವಾದರೂ ಮಾಡಿಸೋಣ ಎಂದರೆ ವಿಪರೀತ ದುಬಾರಿಯಾಗಿದೆ. ಇದ್ದಬಿದ್ದವರೆಲ್ಲ ಎತ್ತು ಮಾರಿಕೊಂಡು ಟ್ರ್ಯಾಕ್ಟರ್‌ ತಂದಿದ್ದಾರೆ. ಇರುವುದು ಕೆಲವೇ ಕೆಲವು ಎತ್ತುಗಳು. ಅರ್ಧದಿನಕ್ಕೆ 1,200-1,500 ಬಾಡಿಗೆ. ಇಷ್ಟೊಂದು ಬಾಡಿಗೆ ಕೊಟ್ಟು ಕೆಲಸ ಮಾಡಿಸುವುದಕ್ಕೆ ಸಾಧ್ಯವೇ ಇಲ್ಲ.
ಹೀಗಾಗಿ, ಅವರಿವರ ಸಹಾಯದಿಂದ ಪಡೆದಿರುವ ಸೈಕಲ್‌ ಗಾಲಿಯ ಕುಂಟೆಯನ್ನು ನಾನೇ ಎತ್ತಿನಂತೆ ಎಡೆಹೊಡೆಯುತ್ತಿದ್ದೇನೆ. ಸುಮಾರು ಮೂರು ಎಕರೆ ಮೆಕ್ಕೆಜೋಳ ಇದ್ದು, ಪ್ರತಿನಿತ್ಯವೂ ಒಂದು ಎಕರೆಯಷ್ಟುಎಡೆಕುಂಟಿ ಹೊಡೆದಿದ್ದೇನೆ. ಇದರಿಂದ ನನಗೆ ಒಂದು ಪೈಸೆ ಹೊರೆಯಾಗಲಿಲ್ಲ. ಆದರೆ, ಒಂದಿಷ್ಟು ದಣಿವು ಆಯಿತು ಅಷ್ಟೇ ಎಂದರು.
ಟ್ರ್ಯಾಕ್ಟರ್‌ ಖರೀದಿಗೆ ಲಕ್ಷಾಂತರ ರುಪಾಯಿ ಸಹಾಯಧನ ನೀಡುವ ಸರ್ಕಾರ, ಎತ್ತುಗಳ ಖರೀದಿಗೆ ಯಾಕೆ ಸಹಾಯಧನ ನೀಡಬಾರದು? ಟ್ರ್ಯಾಕ್ಟರ್‌ ಖರೀದಿಗೆ ಲಕ್ಷಾಂತರ ರುಪಾಯಿ ಸಹಾಯಧನ ನೀಡುತ್ತಾರೆ. ಇದರಿಂದ ಟ್ರ್ಯಾಕ್ಟರ್‌ ಕಂಪನಿಗಳು ಬೆಳೆಯುತ್ತವೆ. ಆದರೆ, ಎತ್ತುಗಳ ಖರೀದಿಗೆ ಸಹಾಯಧನ ನೀಡಿದರೆ ನೇರವಾಗಿ ರೈತರಿಗೆ ತಲುಪುತ್ತದೆ ಎನ್ನುವ ಮಾತು ಕೃಷಿಕ ವಲಯದಿಂದ ಕೇಳಿಬರುತ್ತಿದೆ.
ಏನ್‌ ಮಾಡೋದು ಸರ್‌, ಎತ್ತು ಖರೀದಿ ಮಾಡುವ ಶಕ್ತಿಯೂ ಇಲ್ಲ. ಬಾಡಿಗೆ ಹೊಡೆಸುವ ತಾಕತ್ತು ಇಲ್ಲ. ನಾನೇ ಎತ್ತಿನಂತೆ ಎಡೆಕುಂಟೆ ಹೊಡೆಯುತ್ತಿದ್ದೇನೆ. ಪ್ರತಿ ದಿನ ಒಂದು ಎಕರೆ ಎಡೆಕುಂಟೆ ಹೊಡೆದು ಸ್ವಚ್ಛ ಮಾಡುತ್ತಿದ್ದೇನೆ ಎಂದು ಕಳ್ಳಿರಾಂಪುರ ರೈತ ವೆಂಕೋಬಪ್ಪ ತಿಳಿಸಿದ್ದಾರೆ.

Latest Videos

click me!