ಕೋರಮಂಗಲ ರಾಜಕಾಲುವೆ(ಕೆ-100) ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗಿನ 9.2 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ರಾಜ್ಯಸರ್ಕಾರ ಅನುದಾನ 175 ಕೋಟಿ ರೂ. ವೆಚ್ಚದಲ್ಲಿ ಜಲಮಾರ್ಗ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯು ಹಲವು ವರ್ಷಗಳಿಂದ ಪ್ರಗತಿಯಲ್ಲಿಯೇ ನಡೆಯುತ್ತಿದೆ. ಈ ಹಿಂದೆ ಇಲ್ಲಿ ಹರಿಯುತ್ತಿದ್ದ 120 ಎಂ.ಎಲ್.ಡಿ ನಿಂದ 05-08 ಎಂ.ಎಲ್.ಡಿ.ಗೆ ಒಳಚರಂಡಿಯ ಹರಿವನ್ನು ಕಡಿಮೆ ಮಾಡಲಾಗಿದೆ. ಶೀಘ್ರ ತ್ಯಾಜ್ಯ ನೀರು ಹರಿಯುವಿಕೆ ಸಂಪೂರ್ಣವಾಗಿ ನಿಲ್ಲಿಸುವ ಭರವಸೆ ಬಿಬಿಎಂಪಿ ನೀಡಿದೆ.
ಕುಂಬಾರಗುಂಡಿ ಬಳಿ ರಾಜಕಾಲುವೆಯಲ್ಲಿ ಹರಿಯುವ ನೀರನ್ನು ಶುದ್ಧೀಕರಿಸಲು 05 ಎಂ.ಎಲ್.ಡಿ ಎಸ್.ಟಿ.ಪಿ(ತ್ಯಾಜ್ಯ ನೀರು ಸಂಸ್ಕರಣಾ ಘಟಕ)ಯನ್ನು ನಿರ್ಮಾಣ ಮಾಡಲಾಗಿದ್ದು, ಇದು ಒಳಚರಂಡಿ ಕೊಳಚೆ ನೀರನ್ನು ಸಂಸ್ಕರಿಸಿ, ಕೆ-100 ವ್ಯಾಲಿ ರಾಜಕಾಲುವೆಗೆ ದೀರ್ಘಕಾಲಿಕ ಸಂಸ್ಕರಿಸಿದ ನೀರನ್ನು ಬಿಡುಗಡೆ ಮಾಡುತ್ತಿದೆ. ಉಳಿದ ಒಳಚರಂಡಿಯ ನೀರನ್ನು ಸಂಸ್ಕರಿಸಲು, ಬಿಬಿಎಂಪಿಯು ಜೈವಿಕ ಪರಿಹಾರ ಕ್ರಮ ಮತ್ತು ಪ್ರಕೃತಿ ಆಧಾರಿತ ಕ್ರಮ ಬಳಸಲು ಮುಂದಾಗಿದೆ.
ತ್ಯಾಜ್ಯ ನೀರು ಸಂಸ್ಕರಣೆಗೆ ಮಾರ್ಗದರ್ಶನಕ್ಕೆ ಸಂಸ್ಥೆ ನಿಯೋಜನೆ: ಕೆ-100 ವ್ಯಾಲಿ ರಾಜಕಾಲುವೆಯ ಒಳಚರಂಡಿಯ ನೀರನ್ನು ಸಂಸ್ಕರಿಸುವ ಪರಿಹಾರಗಳ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡಲು ಇಸ್ರೇಲ್ ಮೂಲದ ಅಯಾಲಾ ಟೆಕ್ನಾಲಜಿ ಕಂಪನಿಯನ್ನು ನೇಮಿಸಲಾಗಿದೆ. ಈ ನವೀನ ವಿಧಾನವು ಉಳಿದಿರುವ ಒಳಚರಂಡಿಯನ್ನು ಸಂಸ್ಕರಿಸಿ, ಹೀರಿಕೊಂಡು ಮತ್ತು ಶುದ್ಧ ನೀರನ್ನು ಹಾದುಹೋಗಲು ಅನುವು ಮಾಡಿಕೊಡುತ್ತದೆ. ಪ್ರಕೃತಿ ಆಧಾರಿತ ಪರಿಹಾರಗಳು ಮಾಲಿನ್ಯವನ್ನು ತಗ್ಗಿಸಲು ಆಧುನಿಕ, ಶಕ್ತಿ-ಸಮರ್ಥ ಮತ್ತು ವೆಚ್ಚ-ಪರಿಣಾಮಕಾರಿ ಮಾರ್ಗವಾಗಿದೆ. ಅಯಾಲಾ ಟೆಕ್ನಾಲಜಿಯ ಪರಿಣತಿಯು ಕೆ-100 ವ್ಯಾಲಿ ಯೋಜನೆಯಲ್ಲಿ ಎನ್.ಬಿ.ಎಸ್.ನ ಪರಿಣಾಮಕಾರಿ ಅನುಷ್ಠಾನ ಮಾಡಬಹುದಾಗಿದೆ.
ಕೊಳಚೆ ನೀರು ಹೀರಿಕೊಳ್ಳಲು ಹೂವಿನ ಕುಂಡಗಳ ಅಳವಡಿಕೆ
ಕೆ-100 ಯೋಜನೆಯು ಬಹುತೇಕ ಪೂರ್ಣಗೊಂಡಿದ್ದು, ಕೊಳಚೆ ನೀರು ಬರುತ್ತಿರುವುದನ್ನು ಹೀರಿಕೊಳ್ಳುವ ಸಲುವಾಗಿ ಜಲಮಾರ್ಗದ ಮಧ್ಯೆ ಕಾಂಕ್ರೀಟ್ ರಿಂಗ್ಸ್ಗಳನ್ನು ಅಳವಡಿಸಿ ಕೊಳಚೆ ನೀರು ಹೀರಿಕೊಳ್ಳುವಂತಹ ಸಸಿಗಳನ್ನು ನೆಡಲಾಗಿದೆ. ಜಲಮಾರ್ಗದಲ್ಲಿ ಅಳವಡಿಸಿರುವ ಸಸಿಗಳು ತ್ಯಾಜ್ಯ ನೀರನ್ನು ಹೀರಿಕೊಂಡು ಶುದ್ಧ ನೀರನ್ನು ಹಾದುಹೋಗಲು ಪ್ರಕೃತಿ ಆಧಾರಿತ ಪರಿಹಾರವೇ ಈ “ಹೂವಿನ ಕೊಂಡಗಳ” ಅಳವಡಿಕೆಯಾಗಿದೆ. ಈ ತಂತ್ರಜ್ಞಾನವು ಶಕ್ತಿ-ಸಮರ್ಥ, ವೆಚ್ಚ-ಪರಿಣಾಮಕಾರಿ ಮತ್ತು ಆಧುನಿಕ ಕಾಲದಲ್ಲಿ ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗಿದೆ.
ಇಂಟರ್ ಮೀಡಿಯೆಟ್ ಸೀವೆಜ್ ಪಂಪಿಂಗ್ ಸ್ಟೇಷನ್ ನಿರ್ಮಾಣ: ರಾಜಕಾಲುವೆಗೆ ತ್ಯಾಜ್ಯ ನೀರು ಬರುವುದನ್ನು ನಿಲ್ಲಿಸುವ ಸಲುವಾಗಿ ಜಲಮಂಡಳಿಯು 15 ಎಂ.ಎಲ್.ಡಿ ಸಾಮರ್ಥ್ಯದ ಇಂಟರ್ ಮೀಡಿಯೆಟ್ ಸೀವೆಜ್ ಪಂಪಿAಗ್ ಸ್ಟೇಷನ್(ISPS)ನ್ನು ನಿರ್ಮಾಣ ಮಾಡುತ್ತಿದ್ದು, ಕಾಮಗಾರಿಯು ಪ್ರಗತಿಯಲ್ಲಿರುತ್ತದೆ. ವರ್ಷಾಂತ್ಯದೊಳಗೆ ಪೂರ್ಣಗೊಳ್ಳಲಿದೆ. ಕೆ-100 ಯೋಜನೆಯ ಮಾಕ್-ಅಪ್ ಜಾಗದಲ್ಲಿ ಮಕ್ಕಳಿಗೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸಲು ವಿಜ್ಞಾನ ಪಾರ್ಕ್ ಅನ್ನು ಪರಂ ಸಂಸ್ಥೆಯಿಂದ ನಿರ್ಮಾಣ ಮಾಡುತ್ತಿದ್ದು, ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
ಕೆ-100 ಯೋಜನೆಯ ಪ್ರಗತಿಯ ವಿವರ: ರಾಜಕಾಲುವೆ ಮಾರ್ಗದ ಎರಡೂ ಬದಿಯ ತಡೆಗೋಡೆ, ತಳಮಟ್ಟದ ಸೇತುವೆಗಳನ್ನು ವಾಸ್ತುಶಿಲ್ಪದ ಮಾದರಿಯಲ್ಲಿ ವಿನ್ಯಾಸಗೊಳಿಸುವ ಕಾರ್ಯ ಪೂರ್ಣಗೊಂಡಿದೆ. ಹಸಿರೀಕರಣ, ರಾತ್ರಿ ಸಮಯದಲ್ಲಿ ಉದ್ಯಾನವನದ ರೀತಿಯಲ್ಲಿ ಅಲಂಕಾರಿಕ ವಿದ್ಯುಧೀಕರಣ ಅಳವಡಿಕೆ ಕಾರ್ಯ, ಗ್ರಾನೈಟ್ ಅಳವಡಿಕೆ, ತೋಟಗಾರಿಕೆ, ಪಾದಚಾರಿ ಮಾರ್ಗ, ಗ್ರಿಲ್ ಅಳವಡಿಕೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ರಾಜಕಾಲುವೆ ಮೇಲೆ ಎರಡೂ ಬದಿ ಸಂಚರಿಸಲು ಬ್ರಿಡ್ಜ್ಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. ವಿದ್ಯುತ್ ಅಳವಡಿಕೆಗಾಗಿ ಅತ್ಯಾಧುನಿಕ ಟ್ರಾನ್ಸ್ ಫಾರ್ಮರ್‌ಗಳನ್ನು ಅಳವಡಿಸಲಾಗಿದೆ. ಜೊತೆಗೆ ರಾಜಕಾಲುವೆಯ ಎರಡೂ ಬದಿಯ ಸರ್ವೀಸ್ ರಸ್ತೆ ಅಭಿವೃದ್ಧಿ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಸವೀರ್ಸ್ ರಸ್ತೆಯಲ್ಲಿನ ಮಳೆನೀರು ರಾಜಕಾಲುವೆಗೆ ಮಳೆ ನೀರು ಹರಿದು ಹೋಗದಂತೆ ಪೈಪ್ ಲೈನ್, ಕೇಬಲ್ ಅಳವಡಿಕೆಗೆ ಚೇಂಬರ್‌ಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.