ಹಂಪಿ ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಮಂಗಳವಾರ ನಡೆದ 28ನೇ ನುಡಿಹಬ್ಬದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಸ್ವಧರ್ಮ ಶ್ರದ್ಧೆ, ಪರಮತ ಸಹಿಷ್ಣುತೆ, ವಿರೋಧ ಗುಣಗಳ ಹೊಂದಾಣಿಕೆ, ಸ್ವದೇಶಾಭಿಮಾನ, ಲೋಕ ಕಲ್ಯಾಣ ಸಾಧನೆ, ಜ್ಞಾನಾಸಕ್ತಿ, ಕಾಯಕ ನಿಷ್ಠೆ ಇವುಗಳು ಮನುಷ್ಯನ ವ್ಯಕ್ತಿತ್ವವನ್ನು ಪೂರ್ಣತೆಗೆ ಒಯ್ಯುವ ಅಂಶಗಳಾಗಿವೆ ಎಂದರು.
ಜಗತ್ತು ಸಂಕೀರ್ಣ ವಸ್ತು -ಭಾವಾಲೋಚನೆಗಳ ಸಂಗ್ರಹಾಲಯ, ಯಾವುದು ಯೋಗ್ಯ ಯಾವುದು ತ್ಯಾಜ್ಯ ಎಂಬುದನ್ನು ಇಲ್ಲಿನ ಮೇರುಸದೃಶ ’ಮಹಾಕಾವ್ಯಗಳು ಸಾಕ್ಷೀಕರಿಸಿ ತೋರಿಸಿವೆ. ಈ ನಾಡಿನಲ್ಲಿ ಉದಯಿಸಿದ ಶರಣ ಸಂಸ್ಕಾರ ಮರೆಯುವಂತಿಲ್ಲ. ‘ಕಾಯಕ- ದಾಸೋಹ’ ಎಂಬ ಅವಳಿ ಸಿದ್ಧಾಂತಗಳು ಇಂದಿನ ಅರ್ಥಶಾಸ್ತ್ರಜ್ಞರಿಗೂ ಸವಾಲಾಗುವಂತಹ, ಜಿಜ್ಞಾಸೆ ತರುವಂತಹ ಆರ್ಥಿಕ ಸಿದ್ಧಾಂತ. ಜಗತ್ತಿನ ಯಾವ ಮೂಲೆಯಲ್ಲಿಯೂ ಆವಿರ್ಭವಿಸದೆ ಇಲ್ಲಿನ ಸೊಗಡಿನಲ್ಲಿ ಈ ಸಿದ್ಧಾಂತಗಳು ಅಡಗಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ ಎಂದರು.
‘ಅನುಭವ ಮಂಟಪದಲ್ಲಿ ಜಿಜ್ಞಾಸೆಗೆ ಒಳಪಡುತ್ತಿದ್ದ ಪ್ರಶ್ನೆಗಳು ಅಷ್ಟು ಸರಳವಾಗಿರಲಿಲ್ಲ. ಈ ನೆಲದಲ್ಲಿ ಅಂದು ಶರಣರು ಬಾರಿಸಿದ ಡಿಂಡಿಮ ಇಂದಿಗೂ ಅನುರಣಗೊಳ್ಳುತ್ತಿದೆ. ನಾವು ಪಡೆದ ಜ್ಞಾನ ಸದ್ವಿನಿಯೋಗವಾಗಬೇಕು. ಆದರೆ, ಅದು ಕರ್ಮಾನುಷ್ಠಾನದಲ್ಲಿ ಮಾತ್ರ ಸಾಧ್ಯ ಎಂದರು.
ಈ ಜಗತ್ತಿನಲ್ಲಿ ನಮ್ಮ ಕಣ್ಣಿಗೆ ಕಾಣುವ ಎಲ್ಲ ಕರ್ಮಗಳು, ಮಾನವ ಸಮಾಜದಲ್ಲಿ ನಡೆಯುವ ಸಮಸ್ತ ವ್ಯವಹಾರಗಳು, ಕಾರ್ಯಗಳು ಇವೆಲ್ಲ ನಮ್ಮ ‘ಇಚ್ಛಾಶಕ್ತಿಯ ಅಭಿವ್ಯಕ್ತಿ’. ಈ ಇಚ್ಛಾಶಕ್ತಿಗೆ ಮೂಲ ಸದ್ಗುಣ ಸಂಪನ್ನತೆ. ಇವು ‘ಇಚ್ಛಾಶಕ್ತಿ ಎಂಬ ಕರ್ಮದ ಮೂಲಕ ನೆರವೇರುತ್ತದೆ’ ಎಂದರು.
ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ, ವಿವಿ ಕುಲಪತಿ ಡಾ. ಸ.ಚಿ. ರಮೇಶ, ಕುಲಸಚಿವ ಡಾ. ಸುಬ್ಬಣ್ಣ ರೈ ಹಾಗೂ ವಿವಿಯ ಕಾರ್ಯಕಾರಿ ಸಮಿತಿ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು.
ಬಾಗಲಕೋಟ ಜಿಲ್ಲೆ ಜಮಖಂಡಿಯ ವೈದ್ಯ ಡಾ. ಹಣಮಂತ ಗೋವಿಂದ ದಡ್ಡಿ ಹಾಗೂ ಬೆಂಗಳೂರಿನ ಶಿಕ್ಷಣ ತಜ್ಞ ಡಾ. ವೂಡೇ ಪಿ. ಕೃಷ್ಣ ಅವರಿಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ನಾಡೋಜ ಗೌರವ ಪದವಿ ಪ್ರದಾನ ಮಾಡಿದರು. ವಿವಿಯ ಸಂಶೋಧನಾ ವಿದ್ಯಾರ್ಥಿಗಳಿಗೆ ಡಿ. ಲಿಟ್ ಹಾಗೂ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಿದರು.
ದೇಶಿ ಮೆರವಣಿಗೆ ವಿವಿಯ ಆವರಣದಲ್ಲಿ ನುಡಿಹಬ್ಬದ ನಿಮಿತ್ತ ದೇಶಿ ಮೆರವಣಿಗೆ ನಡೆಸಲಾಯಿತು. ಬಳಿಕ ಮಂಟಪ ಸಭಾಂಗಣಕ್ಕೆ ಮೆರವಣಿಗೆ ತಲುಪಿ, ಕಲಶ ಸ್ಥಾಪನೆ ಮಾಡಲಾಯಿತು.
ಕನ್ನಡ ವಿವಿ ಕುಲಾಧಿಪತಿ ಹಾಗೂ ರಾಜ್ಯಪಾಲ ವಜುಭಾಯಿ ವಾಲಾ ಅವರು ಘಟಿಕೋತ್ಸವ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಕೋವಿಡ್ ಹಿನ್ನೆಲೆ ಕಾರ್ಯಕ್ರಮ ಸರಳವಾಗಿ ನಡೆಸಲಾಯಿತು.
ಕನ್ನಡ ವಿವಿಯಲ್ಲಿ ನೃತ್ಯ ಮತ್ತು ಸಂಗೀತ ವಿಭಾಗದ ಕಟ್ಟಡ ಉದ್ಘಾಟಿಸಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ