ಆಕಾಶ್ ಕ್ಷಿಪಣಿ: ಆಕಾಶ್ ಕ್ಷಿಪಣಿ ಭಾರತದ ಅತ್ಯಂತ ಅಪಾಯಕಾರಿ ನೆಲದಿಂದ ಆಕಾಶಕ್ಕೆ ಹಾರುವ ಕ್ಷಿಪಣಿಗಳಲ್ಲಿ ಒಂದಾಗಿದೆ. ಆಕಾಶ್ ಪ್ರೈಮ್ ಸ್ಥಳೀಯ ಆಕ್ಟೀವ್ ಆರ್‌ಎಫ್ ಸೀಕರ್‌ಅನ್ನು ಹೊಂದಿದೆ, ಇದು ಶತ್ರು ಗುರಿಗಳನ್ನು ಗುರುತಿಸುವ ನಿಖರತೆಯನ್ನು ಹೆಚ್ಚಿಸುತ್ತದೆ. ಆಕಾಶ್-ಎನ್‌ಜಿ ಅಂದರೆ ಆಕಾಶ್ ನ್ಯೂ ಜನರೇಷನ್ ಕ್ಷಿಪಣಿಯನ್ನು ಸಹ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಆಕಾಶ್-ಎನ್‌ಜಿ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿಯಾಗಿದೆ. ಇದನ್ನು ಭಾರತೀಯ ವಾಯುಪಡೆಗಾಗಿ ತಯಾರಿಸಲಾಗಿದೆ. ಇದರ ವ್ಯಾಪ್ತಿಯು 40 ರಿಂದ 80 ಕಿಲೋಮೀಟರ್.
ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್: ಈ ಹೆಲಿಕಾಪ್ಟರ್ ಎಷ್ಟು ಉಪಯುಕ್ತ ಎನ್ನುವುದು ಇದಕ್ಕೆ ಬಂದಿರುವ ಬೇಡಿಕೆಯಿಂದಲೇ ತಿಳಿಯಬಹುದು. ನೌಕಾಸೇನೆ ಈಗಾಗಲೇ 11 ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಇಟ್ಟಿದ್ದರೆ, ಭೂಸೇನೆ 73 ಎಎಲ್‌ಎಚ್ ಎಂಕೆ-3 ಹೆಲಿಕಾಪ್ಟರ್‌ಗಳನ್ನು ಆರ್ಡರ್ ಮಾಡಿದೆ. ಇಲ್ಲಿಯವರೆಗೂ 335 ಹೆಲಿಕಾಪ್ಟರ್‌ಅನ್ನು ಸಿದ್ಧ ಮಾಡಲಾಗಿದೆ. ಈ ಹೆಲಿಕಾಪ್ಟರ್‌ನ ಪ್ಲಾಟ್‌ಫಾರ್ಮ್‌ನಲ್ಲಿ ಲಘು ಯುದ್ಧ ಹೆಲಿಕಾಪ್ಟರ್ ಪ್ರಚಂಡ (ಎಲ್‌ಸಿಎಚ್ ಪ್ರಚಂದ್), ರುದ್ರ (ಎಚ್‌ಎಎಲ್ ರುದ್ರ) ಮತ್ತು ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಎಲ್‌ಯುಹೆಚ್) ನಿರ್ಮಿಸಲಾಗಿದೆ. ಐಎಎಫ್ 107 ಹೆಲಿಕಾಪ್ಟರ್‌ಗಳನ್ನು ಹೊಂದಿದೆ, ಸೇನೆಯು 191 ಮತ್ತು ನೌಕಾಪಡೆ 14 ಹೆಲಿಕಾಪ್ಟರ್‌ಗಳನ್ನು ಹೊಂದಿದೆ.
ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್: ಸಾಮಾನ್ಯವಾಗಿ ಫೈಟರ್ ಜೆಟ್‌ಗಳು ಎಲ್ಲ ಕಡೆ ದಾಳಿ ಮಾಡೋದಿಲ್ಲ. ಏಕೆಂದರೆ ಅದರ ವೇಗ ಹೆಚ್ಚು. ಅದಕ್ಕಾಗಿಯೇ ಕೆಲವು ಸ್ಥಳಗಳ ಮೇಲೆ ದಾಳಿ ಮಾಡಲು ಅಟ್ಯಾಕ್ ಹೆಲಿಕಾಪ್ಟರ್ ಅಗತ್ಯವಿದೆ. AH-64Es ಅಪಾಚೆ ಹೆಲಿಕಾಪ್ಟರ್ ಅನ್ನು ಮೊದಲು AH-64D ಬ್ಲಾಕ್ 3 ಎಂದು ಕರೆಯಲಾಗುತ್ತಿತ್ತು. AH-64Es ಹೆಲಿಕಾಪ್ಟರ್ ತನ್ನೊಂದಿಗೆ ಡ್ರೋನ್‌ಗಳನ್ನು ಕೂಡ ತೆಗೆದುಕೊಂಡು ಹೋಗಬಲ್ಲುದು. ಇಬ್ಬರು ಪೈಲಟ್‌ಗಳ ಅಗತ್ಯ ಇದಕ್ಕಿದೆ. ಗಂಟೆಗೆ ಗರಿಷ್ಠ 293 ಕಿಲೋಮೀಟರ್ ವೇಗದಲ್ಲಿ ಹಾರಬಲ್ಲದು. ಯುದ್ಧ ಶ್ರೇಣಿ 476 ಕಿ.ಮೀ. ಸಾಮಾನ್ಯವಾಗಿ 1900 ಕಿಮೀ ಹಾರಬಲ್ಲದು. ಗರಿಷ್ಠ 20 ಸಾವಿರ ಅಡಿ ಎತ್ತರಕ್ಕೆ ಹೋಗಬಹುದು. ಇದಕ್ಕೆ 30 ಎಂಎಂ ಎಂ230 ಚೈನ್ ಗನ್ ಅಳವಡಿಸಲಾಗಿದೆ. ಇದು ಒಂದು ನಿಮಿಷದಲ್ಲಿ 1200 ಸುತ್ತು ಗುಂಡು ಹಾರಿಸುತ್ತದೆ.
ಬ್ರಹ್ಮೋಸ್ ಕ್ಷಿಪಣಿ: ಬ್ರಹ್ಮೋಸ್ ಕ್ಷಿಪಣಿಯು ಗಾಳಿಯಲ್ಲಿಯೇ ಪಥ ಬದಲಿಸುವ ಸಾಮರ್ಥ್ಯ ಹೊಂದಿದೆ. ಚಲಿಸುವ ಗುರಿಗಳನ್ನು ಸಹ ನಾಶಪಡಿಸುವ ಶಕ್ತಿ ಇದಕ್ಕಿದೆ. ಇದು 10 ಮೀಟರ್ ಎತ್ತರದಲ್ಲಿ ಹಾರುವ ಸಾಮರ್ಥ್ಯವನ್ನು ಹೊಂದಿದೆ, ಅಂದರೆ ಶತ್ರುಗಳ ರಾಡಾರ್‌ಗೆ ಪತ್ತೆ ಹಚ್ಚಲು ಕೂಡ ಸಾಧ್ಯವಾಗೋದಿಲ್ಲ. ಬ್ರಹ್ಮೋಸ್ ಕ್ಷಿಪಣಿ ಅಮೆರಿಕದ ಟೊಮಾಹಾಕ್ ಕ್ಷಿಪಣಿಗಿಂತ ಎರಡು ಪಟ್ಟು ವೇಗವಾಗಿ ಹಾರುತ್ತದೆ. ಬ್ರಹ್ಮೋಸ್ ಕ್ಷಿಪಣಿಯ ನಾಲ್ಕು ನೌಕಾ ರೂಪಾಂತರಗಳಿವೆ. ಯುದ್ಧನೌಕೆಯಿಂದ ಉಡಾವಣೆಯಾಗುವ ಬ್ರಹ್ಮೋಸ್ ಕ್ಷಿಪಣಿ 200 ಕೆಜಿ ಸಿಡಿತಲೆ ಹೊತ್ತೊಯ್ಯಬಲ್ಲದು. ಈ ಕ್ಷಿಪಣಿಯ ವೇಗ ಗಂಟೆಗೆ 4321 ಕಿ.ಮೀ.
ಹೆಲಿನಾ ಎಟಿಜಿಎಂ: ಈ ಕ್ಷಿಪಣಿಯಲ್ಲಿ ಅಳವಡಿಸಲಾಗಿರುವ ಇನ್‌ಫ್ರಾರೆಡ್ ಇಮೇಜಿಂಗ್ ಸೀಕರ್ (IIR) ತಂತ್ರಜ್ಞಾನವು ಇದಕ್ಕೆ ಮಾರ್ಗದರ್ಶನ ನೀಡುತ್ತದೆ. ಕ್ಷಿಪಣಿಯನ್ನು ಉಡಾವಣೆ ಮಾಡಿದ ತಕ್ಷಣ ಅದು ಸಕ್ರಿಯಗೊಳ್ಳುತ್ತದೆ. ಇದು ವಿಶ್ವದ ಅತ್ಯುತ್ತಮ ಮತ್ತು ಅತ್ಯಾಧುನಿಕ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳಲ್ಲಿ ಒಂದಾಗಿದೆ. ಇದರ ಹೆಸರು ಹೆಲಿನಾ, ಆದರೆ ಇದನ್ನು ಧ್ರುವಾಸ್ತ್ರ ಎಂದೂ ಕರೆಯುತ್ತಾರೆ. ಮೊದಲು ಅದರ ಹೆಸರು ನಾಗ್ ಮಿಸೈಲ್ ಆಗಿತ್ತು. ಭಾರತದಲ್ಲಿ ತಯಾರಿಸಲಾದ ಹೆಲಿನಾ ಪ್ರತಿ ಸೆಕೆಂಡಿಗೆ 230 ಮೀಟರ್ ವೇಗ ಇದರ ಸಾಮರ್ಥ್ಯ. ಅಂದರೆ ಗಂಟೆಗೆ 828 ಕಿಲೋಮೀಟರ್ ಎಂದರ್ಥ.
ಚಿನೋಕ್ ಹೆಲಿಕಾಪ್ಟರ್: ಭಾರತವು 15 Ch-47F(I) ಚಿನೂಕ್ ಟ್ರಾನ್ಸ್‌ಪೋರ್ಟ್ ಹೆಲಿಕಾಪ್ಟರ್‌ಗಳನ್ನು ಹೊಂದಿದೆ. ಇವುಗಳನ್ನು ವಿಪತ್ತು ಪರಿಹಾರ ಕಾರ್ಯಾಚರಣೆ, ಶಸ್ತ್ರಾಸ್ತ್ರಗಳು, ಟ್ಯಾಂಕ್‌ಗಳು, ಲಾಜಿಸ್ಟಿಕ್ಸ್ ಮತ್ತು ಸೈನಿಕರನ್ನು ಯುದ್ಧಭೂಮಿಗೆ ಸಾಗಿಸಲು ಬಳಸಲಾಗುತ್ತದೆ. ಲಡಾಖ್‌ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ವಿವಾದದ ಸಂದರ್ಭದಲ್ಲಿ ಚಿನೂಕ್ ಹೆಲಿಕಾಪ್ಟರ್‌ಗಳು ಪ್ರಮುಖ ಪಾತ್ರವಹಿಸಿದವು. ಈ ಹೆಲಿಕಾಪ್ಟರ್‌ಗಳು ಚಂಡೀಗಢ ವಾಯುನೆಲೆಯಲ್ಲಿ ಇರುತ್ತವೆ. ಈ ಹೆಲಿಕಾಪ್ಟರ್‌ನಲ್ಲಿ 33 ರಿಂದ 55 ಸೈನಿಕರು, 24 ಸ್ಟ್ರೆಚರ್‌ಗಳು ಅಥವಾ ಸುಮಾರು 11 ಸಾವಿರ ಕೆಜಿ ತೂಕವನ್ನು ಎತ್ತಬಲ್ಲುದು.
ಟೈಗರ್ ಕ್ಯಾಟ್ ಮಿಸೈಲ್: ಇದು ಬ್ರಿಟನ್ ಮೂಲದ ಕ್ಷಿಪಣಿ. ಇದು ಕಡಿಮೆ ವ್ಯಾಪ್ತಿಯ ಮೇಲ್ಮೈಯಿಂದ ಗಾಳಿಗೆ ಹಾರಬಲ್ಲ ಕ್ಷಿಪಣಿಯಾಗಿದೆ. ಭೂಸೇನಾ ಕ್ಷಿಪಣಿಯನ್ನು ಟೈಗರ್ ಕ್ಯಾಟ್ ಹಾಗೂ ನೌಕಾಸೇನಾ ಕ್ಷಿಪಣಿಯನ್ನು ಸೀಕ್ಯಾಟ್ ಎಂದು ಕರೆಯುತ್ತಾರೆ. 68 ಕೆಜಿ ತೂಕದ ಈ ಕ್ಷಿಪಣಿ 1.48 ಮೀಟರ್ ಉದ್ದವಿದೆ. ಇದು ತನ್ನೊಂದಿಗೆ 18 ಕೆಜಿ ಶಸ್ತ್ರಾಸ್ತ್ರಗಳನ್ನು ಸಾಗಿಸಬಲ್ಲದು. ಇದರ ವ್ಯಾಪ್ತಿಯು ಅರ್ಧ ಕಿಲೋಮೀಟರ್ ನಿಂದ 5 ಕಿಲೋಮೀಟರ್. ಇದರ ವೇಗ ಗಂಟೆಗೆ 1000 ಕಿಲೋಮೀಟರ್. ಪ್ರಸ್ತುತ, ಪ್ರಪಂಚದಾದ್ಯಂತ ಸುಮಾರು ಒಂದೂವರೆ ಡಜನ್ ದೇಶಗಳು ಇದರ ಏಳಕ್ಕೂ ಹೆಚ್ಚು ರೂಪಾಂತರಗಳನ್ನು ಬಳಸುತ್ತಿವೆ.
ಪ್ರಚಂಡ ಅಟ್ಯಾಕ್ ಹೆಲಿಕಾಪ್ಟರ್: ಭಾರತದಲ್ಲಿ ತಯಾರಿಸಲಾದ ಎಲ್‌ಸಿಎಚ್ ವಿಶ್ವದಲ್ಲೇ ತನ್ನ ವರ್ಗದಲ್ಲಿ ಅತ್ಯುತ್ತಮ ಹೆಲಿಕಾಪ್ಟರ್ ಆಗಿದೆ. ಇದು ಎತ್ತರದ ಪ್ರದೇಶಗಳಿಂದ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಮಾಡಬಹುದು. ಅಲ್ಲಿ ದಾಳಿ ಕೂಡ ಮಾಡಬಲ್ಲುದು. 550 ಕಿ.ಮೀ ಯುದ್ಧ ಶ್ರೇಣಿಯಲ್ಲಿ, ಗಂಟೆಗೆ ಗರಿಷ್ಠ 268 ಕಿ.ಮೀ ವೇಗದಲ್ಲಿ ಹಾರುತ್ತದೆ. ಹಿಮಾಲಯದ ಮೇಲಿನ ಚೀನಾ ಗಡಿಗಳನ್ನು ಮೇಲ್ವಿಚಾರಣೆ ಮಾಡುವುದು ಇದರ ದೊಡ್ಡ ಉಪಯುಕ್ತತೆಯಾಗಿದೆ. ನಾಲ್ಕು ರೀತಿಯ ಅಥವಾ ವಿಭಿನ್ನ ರೀತಿಯ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲುದು.
Tejas fighter jet
ಎಲ್‌ಸಿಎ ತೇಜಸ್ ಫೈಟರ್ ಜೆಟ್: ಭಾರತದಲ್ಲಿ ತಯಾರಾದ ಸ್ವದೇಶಿ ಲಘು ಯುದ್ಧ ವಿಮಾನ ತೇಜಸ್ ಮಾರ್ಕ್-2 3400 ಕೆಜಿ ಇಂಧನ ಸಾಮರ್ಥ್ಯ ಹೊಂದಿದೆ. ವೇಗ ಗಂಟೆಗೆ 3457ಕಿ.ಮೀ. ಇದರ ವ್ಯಾಪ್ತಿ 2500 ಕಿಲೋಮೀಟರ್. ಇದು 50 ಸಾವಿರ ಅಡಿ ಎತ್ತರದವರೆಗೂ ಹಾರಬಲ್ಲದು. ಇದು 23 mm GSH-23 ಗನ್ ಅನ್ನು ಹೊಂದಿರುತ್ತದೆ. ಇದರೊಂದಿಗೆ ಏಳು ವಾಯು ಕ್ಷಿಪಣಿಗಳು, ನಾಲ್ಕು ಗಾಳಿಯಿಂದ ನೆಲಕ್ಕೆ ಗುರಿ ಇಡುವ ಕ್ಷಿಪಣಿಗಳು, ಒಂದು ವಿಕಿರಣ ವಿರೋಧಿ ಕ್ಷಿಪಣಿ, ಐದು ಬಾಂಬ್‌ಗಳನ್ನು ಇದರಲ್ಲಿ ಅಳವಡಿಸಬಹುದಾಗಿದೆ. ಬ್ರಹ್ಮೋಸ್-ಎನ್ ಜಿ ಕ್ಷಿಪಣಿಯನ್ನೂ ಇದರಲ್ಲಿ ಅಳವಡಿಸಬಹುದಾಗಿದೆ.
ರಫೇಲ್ ಫೈಟರ್ ಜೆಟ್: ಭಾರತೀಯ ವಾಯುಪಡೆಯಲ್ಲಿ 36 ರಫೇಲ್ ಯುದ್ಧ ವಿಮಾನಗಳಿವೆ. ಇದನ್ನು ಒಬ್ಬರು ಅಥವಾ ಇಬ್ಬರು ಪೈಲಟ್‌ಗಳು ಹಾರಿಸುತ್ತಾರೆ. ಇದು 50.1 ಅಡಿ ಉದ್ದ, 35.9 ಅಡಿ ರೆಕ್ಕೆಗಳು ಮತ್ತು 17.6 ಅಡಿ ಎತ್ತರವಿದೆ. ಇದರ ಗರಿಷ್ಠ ವೇಗ ಗಂಟೆಗೆ 1912 ಕಿಮೀ. ಆದರೆ ಯುದ್ಧದ ವ್ಯಾಪ್ತಿಯು 1850 ಕಿ.ಮೀ. ಕಾರ್ಯಾಚರಣೆಯ ವ್ಯಾಪ್ತಿಯು 3700 ಕಿಮೀ. ಇದು ಗರಿಷ್ಠ 51,952 ಅಡಿ ಎತ್ತರಕ್ಕೆ ಹಾರಬಲ್ಲುದು. ಒಂದು ಸೆಕೆಂಡಿನಲ್ಲಿ ನೇರವಾಗಿ 305 ಮೀಟರ್ ವರೆಗೆ ಹಾರುವ ಸಾಮರ್ಥ್ಯ ಹೊಂದಿದೆ. ಇದು 30 ಎಂಎಂ ಆಟೋಕ್ಯಾನನ್ ಅನ್ನು ಹೊಂದಿದೆ, ಇದು ನಿಮಿಷಕ್ಕೆ 125 ಸುತ್ತುಗಳನ್ನು ಹಾರಿಸುತ್ತದೆ. ಇದಲ್ಲದೆ, ಇದು 14 ಹಾರ್ಡ್ ಪಾಯಿಂಟ್‌ಗಳನ್ನು ಹೊಂದಿದೆ. ಗಾಳಿಯಿಂದ ಗಾಳಿಗೆ, ಗಾಳಿಯಿಂದ ನೆಲಕ್ಕೆ, ಗಾಳಿಯಿಂದ ಮೇಲ್ಮೈಗೆ, ನ್ಯೂಕ್ಲಿಯರ್ ಡಿಟೆರೆನ್ಸ್ ಕ್ಷಿಪಣಿಗಳನ್ನು ಇದರಲ್ಲಿ ಅಳವಡಿಸಬಹುದು. ಇದಲ್ಲದೇ ಇನ್ನೂ ಹಲವು ಬಗೆಯ ಬಾಂಬ್‌ಗಳನ್ನು ಕೂಡ ನಿಯೋಜಿಸಬಹುದು.