ಮನಮೋಹನ್ ಸಿಂಗ್ ಶಿಕ್ಷಣದಲ್ಲಿ ಪರಿಣಿತ: ಭಾರತಕ್ಕೆ ಬಂದ ಬಳಿಕ ಪಂಜಾಠಬ್‌ನ ಅಮೃತಸರದಲ್ಲಿ ರುವ ಹಿಂದು ಕಾಲೇಜ್‌ನಲ್ಲಿ ಮನಮೋಹನ್ ಸಿಂಗ್ ವ್ಯಾಸಂಗ ಮಾಡಿದರು. ಬಳಿಕ ಪಂಜಾಬ್ ವಿವಿಗೆ ಪ್ರವೇಶ ಪಡೆದ ಅವರು, 1952 ಮತ್ತು 1954ರಲ್ಲಿ ಕ್ರಮವಾಗಿ ಅರ್ಥ ಶಾಸ್ತ್ರದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದುಕೊಂಡರು. ಬಳಿಕ ಉನ್ನತ ವ್ಯಾಸಂಗಕ್ಕಾಗಿ ಬ್ರಿಟನ್‌ಗೆ ತೆರಳಿದ ಮನಮೋಹನ್ ಸಿಂಗ್, ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪದವಿ ಪಡೆದರು. ಕೆಲ ದಿನಗಳ ಕಾಲ ಸೇಂಟ್ ಜಾನ್ ಕಾಲೇಜಿನ ಸದಸ್ಯರಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್, 1960ರಲ್ಲಿ ಭಾರತಕ್ಕೆ ಮರಳಿದರು. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕೆಲ ಕಾಲ ಸೇವೆ ಸಲ್ಲಿಸಿದ ಬಳಿಕ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಡಿಫಿಲ್ ಡಾಕ್ಟರ್ ಆಫ್ ಫಿಲಾಸಫಿಯನ್ನು ಪೂರೈಸಿದರು. ಅಲ್ಲದೇ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.
ಪದ್ಮವಿಭೂಷಣ ಸೇರಿ ಸಿಂಗ್‌ಗೆ ಹಲವು ಗೌರವ: ಡಾ. ಮನಮೋಹನ್ ಸಿಂಗ್ 1987ರಲ್ಲೇ ದೇಶದ 2ನೇ ಅತ್ಯುನ್ನತ ನಾಗರಿಕ ಪುರಸ್ಕಾರ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. 1995ರಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ನೆಹರೂ ಬರ್ತ್ ಸೆಂಟನರಿ ಪ್ರಶಸ್ತಿ, 1993 ಮತ್ತು 1994ರಲ್ಲಿ ವಾರ್ಷಿಕ ವಿತ್ತ ಸಚಿವರಾಗಿದ್ದ ಅವರಿಗೆ ಏಷ್ಯಾ ಮನಿ ಪ್ರಶಸ್ತಿ, 1993ರಲ್ಲಿ ಯೂರೋ ಮನಿ ಪ್ರಶಸ್ತಿ, 1956ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಆಡಂ ಸ್ಮಿತ್ ಪ್ರಶಸ್ತಿಗೆ ಭಾಜನರಾಗಿದ್ದರು.
1991ರಲ್ಲಿ ಎಲ್‌ಪಿಜಿ ನೀತಿ ಜಾರಿ: 1991ರಲ್ಲಿ ಭಾರತ ಭೀಕರ ಆರ್ಥಿಕ ಕುಸಿತಕ್ಕೆ ಒಳಗಾದಾಗ ನರಸಿಂಹ ರಾವ್ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ಸಿಂಗ್ ಎಲ್‌ಪಿಜಿ (ಉದಾರೀಕರಣ, ಖಾಸಗೀಕರಣ, ಜಾಗತೀಕರಣ) ನೀತಿ ಪರಿಚಯಿಸುವ ಮೂಲಕ ಭಾರತದ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆದರು. ಹೀಗಾಗಿ ಅವರನ್ನು ಆಧುನಿಕ ಭಾರತದ ಅರ್ಥಶಾಸ್ತ್ರದ ಪಿತಾಮಹ ಎಂದು ಕರೆಯಲಾಗುತ್ತದೆ.
2ನೇ ಬಾರಿಗೆ ಪ್ರಧಾನಿ ಹಿರಿಮೆ: ದೇಶದ ಮೊದಲ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ಬಳಿಕ ಸತತ ಎರಡನೇ ಬಾರಿಗೆ ಪ್ರಧಾನಿಯಾಗಿ ಐದು ವರ್ಷ ಪೂರೈಸಿದ ಮೊದಲ ಪ್ರಧಾನಿ ಮನಮೋಹನ್ ಸಿಂಗ್.
ಹಿಂದಿ ಓದಲು ಬರುತ್ತಿರಲಿಲ್ಲ: ಅಚ್ಚರಿ ಎಂದರೆ ಸತತ ಎರಡು ಬಾರಿ ಪ್ರಧಾನಿಯಾಗಿ ಆಯ್ಕೆಯಾದರೂ, ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದರೂ ಸಿಂಗ್ ಅವರಿಗೆ ಹಿಂದಿ ಓದಲು ಬರುತ್ತಿರಲಿಲ್ಲ. ಹಿಂದಿ ಭಾಷಣವನ್ನು ಅವರಿಗೆ ಉರ್ದುವಿನಲ್ಲಿ ಬರೆದು ಕೊಡಬೇಕಿತ್ತು. ಭಾಷಣಕ್ಕೂ ಮುನ್ನ ಅಭ್ಯಾಸ ಮಾಡಿಕೊಳ್ಳುತ್ತಿದ್ದರು.
ಅಮೆರಿಕದ ನ್ಯೂಸ್‌ವೀಕ್ನಿಂದ ವಿಶ್ವನಾಯಕ ಗೌರವ: 2010ರಲ್ಲಿ ಅಮೆರಿಕದ ಪ್ರತಿಷ್ಠಿತ ನ್ಯೂಸ್‌ವೀಕ್ ವಾರ ಪತ್ರಿಕೆ ಮನಮೋಹನ್ ಸಿಂಗ್ ಅವರನ್ನು ವಿಶ್ವನಾಯಕ ಎಂದು ಕರೆದಿತ್ತು. ಅದೇ ವರ್ಷ ಫೋರ್ಬ್ ವಿಶ್ವದ 18ನೇ ಅತಿ ಶಕ್ತಿಶಾಲಿ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದರು. 2012 ರಲ್ಲಿ ಟೈಮ್ ನಿಯತಕಾ ಲಿಕೆಯ ಮುಖಪುಟದಲ್ಲಿ ಅವರನ್ನು 'ಕಡಿಮೆ ಸಾಧಕ' ಎಂದು ಜರೆಯಲಾಗಿತ್ತು. ಬಳಿಕ ಬ್ರಿಟನ್‌ನ 'ದಿ ಇಂಡಿಪೆಂಡೆಂಟ್' ಪತ್ರಿಕೆ ಅವರಿಗೆ ಇನ್ನೂ ರಾಜಕೀಯ ಅಧಿಕಾರ ಕೊಡಬೇಕಿತ್ತು ಎಂದು ಅಭಿಪ್ರಾಯ ಪಟ್ಟಿತ್ತು.
ಬಿಬಿಸಿಯಿಂದ ಸಿಕ್ಕಿತು ಸುನಾಮಿ ಮಾಹಿತಿ: ಸಿಂಗ್ ಅವರಿಗೆ ಪ್ರತಿದಿನ ಬಿಬಿಸಿ ನೋಡುವ ಅಭ್ಯಾಸ ಇತ್ತು. ಇದರಿಂದಲೇ 2004ರ ಸುನಾಮಿ ಬಗ್ಗೆ, ವಿಪತ್ತು ನಿರ್ವಹಣಾ ಅಧಿಕಾರಿಗಳು ಮಾಹಿತಿ ನೀಡುವ ಮುನ್ನವೇ ಕ್ರಮ ಕೈಗೊಳ್ಳಲು ಸಾಧ್ಯವಾಗಿತ್ತು.
ಎಂದೂ ಲೋಕಸಭೆಗೆ ಚುನಾವಣೆ ಗೆಲ್ಲದ ಸಿಂಗ್: 2004 ರಿಂದ 2014ರ ವರೆಗೆ ಸತತ ಎರಡನೇ ಬಾರಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ್ದ ಸಿಂಗ್ ಒಂದು ಬಾರಿಯೂ ಲೋಕಸಭಾ ಚುನಾವಣೆ ಗೆದ್ದಿಲ್ಲ. 1999ರಲ್ಲಿ ದಕ್ಷಿಣ ದೆಹಲಿಯಿಂದ ಸ್ಪರ್ಧೆ ಮಾಡಿದ್ದ ಸಿಂಗ್ 30 ಸಾವಿರ ಮತಗಳಿಂದ ಸೋತಿದ್ದರು. 1991 ರಿಂದ 2019ರ ವರಗೆ ಸತತ ಐದು ಬಾರಿ ಅಸ್ಸಾಂನಿಂದ ರಾಜ್ಯ ಸಭೆಗೆ ಅವಿರೋಧ ಆಯ್ಕೆಯಾಗಿದ್ದರು. 2019 ರಿಂದ ರಾಜಸ್ಥಾನದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ.
ಮಂತ್ರಿ ಹುದ್ದೆ ತಿರಸ್ಕರಿಸಿದ್ದರು: 1962ರಲ್ಲಿ ತಮ್ಮ ಸಂಪುಟದಲ್ಲಿ ಸಚಿವರಾಗಿ ಬರುವಂತೆ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ನೀಡಿದ್ದ ಆಫರ್ ಅನ್ನು ಸಿಂಗ್ ತಿರಸ್ಕರಿಸಿದ್ದರು. ಆ ವೇಳೆಗೆ ಅವರು ಪಂಜಾಬ್‌ನ ಅಮೃತ್‌ರ ಕಾಲೇಜೊಂದರಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದರು. ತಮ್ಮ ಕೆಲಸವನ್ನು ಅಪೂರ್ಣಗೊಳಿಸುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಅವರು ಈ ನಿರ್ಧಾರ ಕೈಗೊಂಡಿದ್ದರು.
ಕಾಲೇಜಲ್ಲಿ ತಣ್ಣೀರು ಸ್ನಾನ: ಕೇಂಬ್ರಿಜ್ ವಿವಿ ಪದವೀಧರರಾಗಿರುವ ಮನಮೋಹನ್ ಸಿಂಗ್, ಕಲಿಯುವ ವೇಳೆ ಅತ್ಯಂತ ನಾಚಿಕೆ ಸ್ವಭಾವದ ವಿದ್ಯಾರ್ಥಿಯಾಗಿದ್ದರು. ವಿಶ್ವವಿದ್ಯಾನಿಲಯದಲ್ಲಿ ಏಕೈಕ ಸಿಖ್ ವಿದ್ಯಾರ್ಥಿಯಾಗಿದ್ದ ಅವರು ಉದ್ದ ಜಡೆಯಿಂದಾಗಿ ಮುಜುಗರ ಅನುಭವಿಸುತ್ತಿದ್ದರು. ಎಲ್ಲಾ ವಿದ್ಯಾರ್ಥಿಗಳು ಬಿಸಿ ನೀರು ಲಭ್ಯ ಇರುವಾಗ ಸ್ನಾನ ಮಾಡುತ್ತಿದ್ದರೆ, ಸಿಂಗ್ ಮಾತ್ರ ಯಾರೂ ಇಲ್ಲದಿದ್ದಾಗ ತಣ್ಣೀರ ಸ್ನಾನ ಮಾಡುತ್ತಿದ್ದರು. ಇದನ್ನು ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.