ರೈಲು ಭಾರತ ಸರ್ಕಾರದ ಒಂದು ಭಾಗ. ಎಷ್ಟೇ ದುಡ್ಡಿದ್ದರೂ ರೈಲು ಖರೀದಿಸಲು ಅವಕಾಶವೇ ಇಲ್ಲ. ಖಾಸಗಿ ವಿಮಾನ, ಹೆಲಿಕಾಪ್ಟರ್, ಹಡಗು ಸೇರಿದಂತೆ ಇತರ ಯಾವುದೇ ವಾಹನ ಖರೀದಿಸಲು ಸಾಧ್ಯವಿದೆ. ಆದರೆ ಸಾಮಾನ್ಯ ರೈತನೊಬ್ಬ ಶತಾಬ್ದಿ ರೈಲಿನ ಮಾಲೀಕನಾದ ರೋಚಕ ಘಟನೆ ನಡೆದಿದೆ.
2017ರಲ್ಲಿ ಈ ಘಟನೆ ನಡೆದಿದೆ. ಸಾಮಾನ್ಯ ರೈತ ಸಂಪುರನ್ ಸಿಂಗ್, ದೆಹಲಿ ಅಮೃತಸರ ನಡುವೆ ಸಂಚರಿಸುತ್ತಿದ್ದ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಮಾಲೀಕನಾಗಿದ್ದ. ಇದು ರೈಲ್ವೇ ಎಡವವಟ್ಟಿನಿಂದ ಆದ ಘಟನೆ.
2007ರಲ್ಲಿ ಲುಧಿಯಾನ ಚಂಡಿಘಡ ರೈಲು ಹಳಿ ಕಾಮಗಾರಿ ಆರಂಭಗೊಂಡಿತು. ಈ ವೇಳೆ ರೈಲ್ವೇ ಇಲಾಖೆ ಜಮೀನು ವಶಪಡಿಸಿಕೊಳ್ಳಲು ಆರಂಭಿಸಿತು.ಲುಧಿಯಾನದ ಕಟಾನ ಗ್ರಾಮದ ಸಂಪುರನ್ ಸಿಂಗ್ ಜಮೀನು ಕೂಡ ವಶಪಡಿಸಿಕೊಳ್ಳಲಾಗಿತ್ತು.
ರೈಲ್ವೇ ಇಲಾಖೆ ಸಂಪುರನ್ ಸಿಂಗ್‌ಗೆ ಪ್ರತಿ ಏಕರೆಗೆ 25 ಲಕ್ಷ ರೂಪಾಯಿ ನೀಡಿ ಜಮೀನು ವಶಕ್ಕೆ ಪಡದು ಕಾಮಗಾರಿ ನಡೆಸಿತು. ಬಳಿಕ ರೈಲು ಓಡಾಟ ಆರಂಭಗೊಂಡಿತು.
ಕೆಲ ವರ್ಷಗಳ ಬಳಿಕ ಸಂಪುರನ್ ಸಿಂಗ್‌ಗೆ ಆಘಾತ ಕಾದಿತ್ತು. ಕಾರಣ ತನ್ನ ಗ್ರಾಮದ ಪಕ್ಕದ ಗ್ರಾಮ, ಪಟ್ಟಣದಿಂದ ದೂರವಿರುವ ಹಾಗೂ ಫಲವತ್ತತ ಕಡಿಮೆ ಇರುವ ಜಮೀನಿಗೆ ರೈಲ್ವೇ ಇಲಾಖೆ ಪ್ರತಿ ಏಕರೆಗೆ 71 ಲಕ್ಷ ರೂಪಾಯಿ ನೀಡಿ ವಶಪಡಿಸಿಕೊಂಡಿತ್ತು.
ಇದರಿಂದ ಆಕ್ರೋಶಗೊಂಡ ಸಂಪುರನ್ ಸಿಂಗ್, ತನಗೆ ನೀಡಿರುವ ಪರಿಹಾರ ಮೊತ್ತದಲ್ಲಿ ವಂಚನೆ ಮಾಡಲಾಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ರೈಲ್ವೇ ಇಲಾಖೆ ಪ್ರತಿ ಏಕರೆಗೆ 50 ಲಕ್ಷ ರೂಪಾಯಿಗೆ ಏರಿಕೆ ಮಾಡಿತ್ತು.
ಮತ್ತೆ ಕೋರ್ಟ್ ಮೆಟ್ಟಿಲೇರಿದ ರೈತ ಸಂಪುರನ್ ಸಿಂಗ್ ಪರವಾಗಿ ತೀರ್ಪು ಬಂದಿತ್ತು. ಈ ವೇಳೆ ರೈಲ್ವೇ ಇಲಾಖೆ ಪರಿಹಾರವನ್ನು 1.47 ಕೋಟಿಗೆ ಏರಿಕೆ ಮಾಡಿತ್ತು. 2015ರ ಒಳಗೆ ಹಣ ಪಾವತಿ ಮಾಡಲು ಕೋರ್ಟ್ ಸೂಚಿಸಿತ್ತು.
2017 ಆದರೂ ರೈಲ್ವೇ ಕೇವಲ 42 ಲಕ್ಷ ರೂಪಾಯಿ ಮಾತ್ರ ಪಾವತಿ ಮಾಡಿತ್ತು. 1.05 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿತ್ತು. ಹೀಗಾಗಿ ಕೋರ್ಟ್ ರೈಲನ್ನು ಲೂಧಿಯಾನ ನಿಲ್ದಾಣಧಲ್ಲಿ ಜಪ್ತಿ ಮಾಡಲು ಸೂಚಿಸಿತ್ತು. ಇಷ್ಟೇ ಅಲ್ಲ ಸ್ಟೇಶನ್ ಮಾಸ್ಟರ್ ಆಫೀಸ್ ಜಪ್ತಿ ಮಾಡಲು ಸೂಚಿಸಿತ್ತು.
ಈ ಕೋರ್ಟ್ ಆರ್ಡರ್ ಪಡೆದು ಬಂದ ರೈತ ಸಂಪುರನ್ ಸಿಂಗ್, ಅಮೃತಸರ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಸೀಜ್ ಮಾಡಿದ್ದ. ಈ ಮೂಲಕ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಮಾಲೀಕನಾದ ಏಕೈಕ ವ್ಯಕ್ತಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಆದರೆ ರೈಲ್ವೇ ಇಲಾಖೆ ಅಧಿಕಾರಿಗಳು ಮತ್ತೆ ಕೋರ್ಟ್ ಮೆಟ್ಟಿಲೇರಿ, ರೈಲು ಬಿಡುಗಡೆ ಮಾಡುವ ಆರ್ಡರ್ ಪಡೆದುಕೊಂಡರು. ರೈತನ ವಶದಲ್ಲಿದ್ದ ರೈಲನ್ನು ಬಿಡಿಸಲಾಗಿತ್ತು. ಆದರೆ ಈ ಪ್ರಕರಣ ಈಗಲೂ ಕೋರ್ಟ್‌ನಲ್ಲಿದೆ.