ಬ್ರಾ ಧರಿಸೋದ್ರಿಂದ ಸ್ತನ ಕ್ಯಾನ್ಸರ್ ಬರೋ ಚಾನ್ಸ್ ಇರುತ್ತಾ?

First Published | Oct 7, 2023, 2:31 PM IST

ಚರ್ಮದ ಕ್ಯಾನ್ಸರ್ ನಂತರ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಎರಡನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್. ಸ್ತನ ಕ್ಯಾನ್ಸರ್ ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಸರಿಯಾದ ಮಾಹಿತಿಯನ್ನು ಹೊಂದಿರುವುದು ಮುಖ್ಯ. ಇದಕ್ಕೆ ಸಂಬಂಧಿಸಿದ ಅನೇಕ ಮಿಥ್ಯೆಗಳ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು.
 

ಸ್ತನ ಕ್ಯಾನ್ಸರ್ (breast cancer) ಅಥವಾ ಬ್ರೆಸ್ಟ್ ಕ್ಯಾನ್ಸರ್ ಎಂದರೆ ಸ್ತನದ ಜೀವಕೋಶಗಳಲ್ಲಿ ರೂಪುಗೊಳ್ಳುವ ಕ್ಯಾನ್ಸರ್. ಸ್ತನ ಕೋಶಗಳು ನಿಯಂತ್ರಣ ಮೀರಿ ಬೆಳೆಯಲು ಪ್ರಾರಂಭಿಸಿದಾಗ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಸ್ತನ ಕ್ಯಾನ್ಸರ್ ಬಹುತೇಕ ಸಂಪೂರ್ಣವಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ, ಆದರೆ ಅಪರೂಪದ ಸಂದರ್ಭಗಳಲ್ಲಿ ಪುರುಷರಲ್ಲಿಯೂ ಸಂಭವಿಸಬಹುದು. 

ಸ್ತನ ಕ್ಯಾನ್ಸರ್ ವಿಶ್ವಾದ್ಯಂತ ಕ್ಯಾನ್ಸರ್ ನ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ. ಸ್ತನ ಕ್ಯಾನ್ಸರ್ ಹೊಂದಿರುವ ಹೆಚ್ಚಿನ ಮಹಿಳೆಯರು 50 ವರ್ಷಕ್ಕಿಂತ ಮೇಲ್ಪಟ್ಟವರು, ಆದರೆ ಕಿರಿಯ ಮಹಿಳೆಯರು ಸಹ ಇದರಿಂದ ಪ್ರಭಾವಿತರಾಗಬಹುದು. ಇಂದು ನಾವು ಬ್ರಾ ಧರಿಸೋದ್ರಿಂದ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆಯೇ? ಇಲ್ಲವೋ ಅನ್ನೋದನ್ನು ನೋಡೋಣ. 
 

Tap to resize

breast cancer

ಸ್ತನ ಕ್ಯಾನ್ಸರ್ ನ ಲಕ್ಷಣಗಳು (Symptoms of breast cancer)
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ಡಾ.ಕಾರ್ತಿಕ್ ಕೆ.ಎಸ್ ಅವರ ಪ್ರಕಾರ, ಸ್ತನ ಕ್ಯಾನ್ಸರ್‌ನ ಮೊದಲ ಗಮನಾರ್ಹ ಲಕ್ಷಣವೆಂದರೆ ಸ್ತನದಲ್ಲಿ ನೋವು ರಹಿತ ಗೆಡ್ಡೆ. ಸ್ತನದಲ್ಲಿನ ಹೆಚ್ಚಿನ ಉಂಡೆಗಳು ಕ್ಯಾನ್ಸರ್ ಅಲ್ಲ, ಆದರೆ ವೈದ್ಯರು ಯಾವಾಗಲೂ ಪರೀಕ್ಷೆಗೆ ಒಳಗಾಗುವುದು ಉತ್ತಮ ಪರಿಹಾರ ಎಂದು ಶಿಫಾರಸು ಮಾಡುತ್ತಾರೆ. ದೇಹದಲ್ಲಿ ಯಾವುದೇ ರೋಗಲಕ್ಷಣಗಳನ್ನು ನೀವು ಗಮನಿಸಿದರೆ, ನೀವು ವೈದ್ಯರನ್ನು ನೋಡಬೇಕು.

ಈ ಕೆಳಗಿನ ರೋಗಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ
ಸ್ತನಗಳಲ್ಲಿನ ಗೆಡ್ಡೆ ಗಾತ್ರದಲ್ಲಿ ಹಠಾತ್ ಹೆಚ್ಚಳ
ಒಂದು ಅಥವಾ ಎರಡೂ ಸ್ತನಗಳ ಗಾತ್ರ ಅಥವಾ ಆಕಾರದಲ್ಲಿ ಬದಲಾವಣೆ
ತೋಳಿನಲ್ಲಿ ಗೆಡ್ಡೆ ಅಥವಾ ಊತ
ಮೊಲೆತೊಟ್ಟಿನಿಂದ ವಿಸರ್ಜನೆ ಅಥವಾ ಸುತ್ತಲೂ ಯಾವುದೇ ದದ್ದು
ಈ ಲಕ್ಷಣ ಕಂಡು ಬಂದ್ರೆ ಒಂದು ಕ್ಷಣವೂ ತಡಮಾಡದೇ ವೈದ್ಯರಲ್ಲಿ ಪರೀಕ್ಷೆ ಮಾಡಿಸಿ. 
 

ಸ್ತನ ಕ್ಯಾನ್ಸರ್ ಗೆ ಸಂಬಂಧಿಸಿದ ಮಿಥ್ಯೆಗಳು
ಸ್ತನ ಕ್ಯಾನ್ಸರ್ ಬಗ್ಗೆ ಜನರಲ್ಲಿ ಕೆಲವು ಮಿಥ್ಯೆಗಳಿವೆ, ಅವುಗಳ ಸತ್ಯವನ್ನು ನೀವು ತಿಳಿದುಕೊಳ್ಳಬೇಕು. ಉದಾಹರಣೆಗೆ, ಕುಟುಂಬದಲ್ಲಿ ಯಾರಿಗಾದರೂ ಸ್ತನ ಕ್ಯಾನ್ಸರ್ ಇದ್ದರೆ, ಅದು ಇನ್ನೊಬ್ಬರಿಗೂ ಬರುವ ಸಾದ್ಯತೆ ಇದೆ.  ಇನ್ನು ಸ್ತನ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಕೆಲವೊಂದು ತಪ್ಪು ಮಾಹಿತಿಗಳು ಸಹ ಹರಡುತ್ತಿರುತ್ತವೆ.
 

ಕೆಲವರು ಹೇಳ್ತಾರೆ ತಪ್ಪು ಗಾತ್ರದ ಬ್ರಾ ಧರಿಸುವುದರಿಂದ ಸ್ತನಗಳ ಕ್ಯಾನ್ಸರ್ ಅಥವಾ ಧೂಮಪಾನ (smoking) ಅಥವಾ ತಂಬಾಕು ಸೇವನೆಯು ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದೆ ಎನ್ನಲಾಗುತ್ತೆ. ತಪ್ಪು ಗಾತ್ರದ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಉಂಟಾಗಬಹುದೇ ಅಥವಾ ಅದು ಕೇವಲ ಮಿಥ್ಯೆಯೇ ? ಈ ಬಗ್ಗೆ ತಜ್ಞ ವೈದ್ಯರು ಏನು ಹೇಳುತ್ತಾರೆ ನೋಡೋಣ. 
 

ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರಬಹುದೇ?
ವೈದ್ಯರ ಪ್ರಕಾರ, ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಉಂಟಾಗಬಹುದು ಅನ್ನೋದು ಕೇವಲ ಮಿಥ್ಯೆ ಮತ್ತು ಅದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಸ್ತನ ಕ್ಯಾನ್ಸರ್ ಹಲವಾರು ಕಾರಣಗಳಿಂದ ಉಂಟಾಗಬಹುದು. ಅವುಗಳನ್ನು ಅರ್ಥಮಾಡಿಕೊಳ್ಳುವುದರಿಂದ ಬೇಗನೆ ಚಿಕಿತ್ಸೆ ಪಡೆದುಕೊಳ್ಳಲು ಸಹಾಯವಾಗುತ್ತೆ. ವಯಸ್ಸು ಮತ್ತು ಲಿಂಗವು ದೊಡ್ಡ ಅಪಾಯದ ಅಂಶಗಳಾಗಿವೆ, ವಯಸ್ಸಾದ ವ್ಯಕ್ತಿಗಳು ಮತ್ತು ಮಹಿಳೆಯರು ಸ್ತನ ಕ್ಯಾನ್ಸರ್ ಗೆ ಹೆಚ್ಚು ಒಳಗಾಗುತ್ತಾರೆ. ಪುರುಷರಲ್ಲಿ ಕೇವಲ 1% ಸ್ತನ ಕ್ಯಾನ್ಸರ್ ಪ್ರಕರಣಗಳು ಸಂಭವಿಸುತ್ತವೆ.

ಬ್ರಾ ಧರಿಸುವುದಕ್ಕೂ ಕ್ಯಾನ್ಸರ್ ಗೂ ಯಾವುದೇ ಸಂಬಂಧವಿಲ್ಲ.
ಸ್ತನ ಕ್ಯಾನ್ಸರ್ ಗೆ ಬೊಜ್ಜು (obesity) ಮತ್ತೊಂದು ಅಪಾಯಕಾರಿ ಅಂಶವಾಗಿದೆ, ಆದರೆ ಬ್ರಾ ಧರಿಸುವುದಕ್ಕೂ ಸ್ತನ ಕ್ಯಾನ್ಸರ್ ಗೂ ಯಾವುದೇ ಸಂಬಂಧವಿಲ್ಲ.  ಸ್ತನಗಳು ದೊಡ್ಡದಾಗಿದ್ದರೆ, ಬ್ರಾ ಧರಿಸೋದ್ರಿಂದ ಸ್ತನ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಕೆಲವರು ನಂಬುತ್ತಾರೆ. ಆದರೆ, ಇದು ತಪ್ಪು ತಿಳುವಳಿಕೆ. 

ಬೊಜ್ಜು ಒಂದು ಅಪಾಯಕಾರಿ ಅಂಶ. ಜೀವನಶೈಲಿ ಬದಲಾವಣೆಗಳ ಮೂಲಕ ಇದನ್ನು ತಡೆಗಟ್ಟಬಹುದು. ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಉಂಟಾಗುತ್ತದೆ ಎಂಬುದಕ್ಕೆ ವೈಜ್ಞಾನಿಕವಾಗಿ ವಿಶ್ವಾಸಾರ್ಹ ಪುರಾವೆಗಳಿಲ್ಲ. ಮಿಥ್ಯೆಗಳಿಗಿಂತ ನಿಖರವಾದ ಮಾಹಿತಿಯನ್ನು ಅವಲಂಬಿಸುವುದು ಮತ್ತು ಸ್ತನ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆಗಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ.

Latest Videos

click me!