ಭಾರತೀಯ ಹಾಲಿನ ಡೈರಿ ಸೆಕ್ಟರ್‌ಗಳಲ್ಲಿ ಆ್ಯಂಟಿಬಯಾಟಿಕ್ ದುರ್ಬಳಕೆ ಮಾಡಲಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಕೇಂದ್ರ ವಿಜ್ಞಾನ ಮತ್ತು ಪರಿಸರ ಇಲಾಖೆ ನಡೆಸಿದ ಅಧ್ಯಯನ ಈ ರೀತಿಯ ನಿಗಮನಕ್ಕೆ ಬಂದಿದೆ.
ಆಹಾರ ಭದ್ರತೆ ಮತ್ತು ಗುಣಮಟ್ಟವನ್ನು ನೋಡಿಕೊಳ್ಳುವ ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ ಇನ್ನೂ ಭಾರತದ ಡೈರಿಯ ಹಾಲು ಆರೋಗ್ಯಕರ ಎಂದು ಹೇಳುತ್ತಲೇ ಇದೆ.
ಈ ಅಧ್ಯಯನ ಮುಖ್ಯವಾಗಿ ಡೈರಿಯಲ್ಲಿ ಆಂಟಿಬಯಾಟಿಕ್ಸ್ ಬಳಸುವುರ ಬಗ್ಗೆ ನಡೆಸಲಾಗಿತ್ತು.
ಅಧ್ಯಯನದ ನಿಗಮನ: ಅಧ್ಯಯನದ ಪ್ರಕಾರ, ಭಾರತೀಯ ರೈತರು ತಮ್ಮ ಜಾನುವಾರುಗಳಲ್ಲಿ ಬೇಕಾಬಿಟ್ಟಿಯಾಗಿ ಆ್ಯಂಟಿಬಯಾಟಿಕ್ ಬಳಸುತ್ತಿದ್ದಾರೆ. ಹಲವು ಸಲ ಯಾವುದೇ ವೈದ್ಯರ ಮಾರ್ಗದರ್ಶನ ಅಥವಾ ಡೋಸೇಜ್ ಸಲಹೆಯಿಲ್ಲದೆ ಬಳಸುತ್ತಿರುವುದು ಕಂಡು ಬಂದಿದೆ.
ಆ್ಯಂಟಿಬಯಾಟಿಕ್ ಬಳಸುವಾಗ ಭಾರತದ ರೈತರು ವೈದ್ಯರ ಸಲಹೆ ತೆಗೆದುಕೊಳ್ಳುತ್ತಿಲ್ಲ, ತಾವೇ ನಿರ್ಧರಿಸುತ್ತಾರೆ ಎಂಬುದು ತಿಳಿದು ಬಂದಿದೆ.
ಹಾಲು ವಾಸನೆ ಬಂದರಷ್ಟೆ ರೈತರು ಯಾವುದೋ ರೋಗವಿದೆ ಎಂದು ಪರಿಗಣಿಸುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಹೈ ಡೋಸೇಜ್ ಆ್ಯಂಟಿಬಯಾಟಿಕ್ ಚುಚ್ಚುತ್ತಾರೆ.
ಇದರಲ್ಲಿ ಭಯಪಡುವ ಅಂಶ ಏನು..?: ಆ್ಯಂಟಿಬಯಾಟಿಕ್ ಚಿಕಿತ್ಸೆಯಲ್ಲಿರುವ ದನದ ಹಾಲನ್ನೂ ರೈತರು ಮಾರಾಟ ಮಾಡುತ್ತಾರೆ ಎಂಬುದು ಅಪಾಯಕಾರಿ ಅಂಶ.
ಇದರಿಂದ ಆ್ಯಂಟಿಬಯಾಟಿಕ್ ಅಂಶ ಹಾಲಿನಲ್ಲಿ ಬರುತ್ತದೆ. ಈ ಮೂಲಕ ಇದು ಜನರಿಗೆ ತಲುಪುತ್ತದೆ.ಯಾವುದೇ ಪ್ರಕ್ರಿಯೆಗೊಳಪಡದ ಹಾಲು ಹಾಗೂ ಪ್ರಕ್ರಿಯೆಗೊಳಗಾದ ಹಾಲಿನಲ್ಲಿ ಸಮಸ್ಯೆ ಇದೆ.
ಸಮಸ್ಯೆ ಇರುವುದೆಲ್ಲಿ..?: ಡೈರಿ ಫೆಡರೇಷನ್‌ಗಳು ಅಥವಾ ಹಾಲು ಒಕ್ಕೂಟಗಳು ಆಂಟಿ ಬಯಾಟಿಕ್ ಪರೀಕ್ಷೆಯನ್ನು ಸರಿಯಾಗಿ ನಡೆಸುತ್ತಿಲ್ಲ. ಇದರಲ್ಲಿ ಅಕ್ರಮ ನಡೆಯುತ್ತಿರುವುದನ್ನು ಅಧ್ಯಯನವು ಸಾಬೀತುಪಡಿಸಿದೆ.
ಆ್ಯಂಟಿಬಯಾಟಿಕ್ ಮನುಷ್ಯ ದೇಹ ಸೇರಿದರೆ ಏನಾಗುತ್ತೆ..?: ಆ್ಯಂಟಿಬಯಾಟಿಕ್ ಮನುಷ್ಯರ ದೇಹ ಸೇರಿದರೆ ಇದು ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ಇನ್ಫೆಕ್ಷನ್ ಕೂಡಾ ಉಂಟಾಗುತ್ತದೆ.
ಇದು ಮನುಷ್ಯರ ತ್ಯಾಜ್ಯದ ಮೂಲಕ ಪರಿಸರಕ್ಕೂ ಹಾನಿಯಾಗಬಹುದು. ಇದು ಪರಿಸರದಲ್ಲಿ ಇತರ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಬಹುದು.
ಪರಿಹಾರವೇನು..? : ಆಹಾರ ಭದ್ರತಾ ಮತ್ತು ಗುಣಮಟ್ಟ ಪ್ರಾಧಿಕಾರ ಆಹಾರ ಗುಣಮಟ್ಟ ಕಾಪಾಡುವಲ್ಲಿ ಇನ್ನಷ್ಟು ಹೆಚ್ಚಿನ ನಿಯಮಗಳನ್ನು ತರಬೇಕು. ಆ್ಯಂಟಿಬಯಾಟಿಕ್ ಬಳಸುವುದನ್ನು ಕಡಿಮೆ ಮಾಡಬೇಕು.
ಆ್ಯಂಟಿಬಯಾಟಿಕ್ ನೀಡುವುದನ್ನು ಮಾನಿಟರ್ ಮಾಡಬೇಕು. ಇದು ವ್ಯವಸ್ಥಿತವಾಗಿ ನಡೆಯಬೇಕು. ಹಾಲಿನ ಗುಣಮಟ್ಟ ಪರೀಕ್ಷೆಯನ್ನು ಆಗಾಗ ನಡೆಸುತ್ತಿರಬೇಕು. ಈ ಮೂಲಕ ಗುಣಮಟ್ಟದ ಹಾಲು ಜನರನ್ನು ತಲುಪಲು ಸಾಧ್ಯ.