ನಗರದಲ್ಲಿದ್ದೇ ಪರಿಸರಕ್ಕಾಗಿ ಏನು ಮಾಡಬಹುದು? ನಾಗೇಶ್‌ ಹಗಡೆ ಮಾತುಗಳು!

First Published | Jun 7, 2020, 11:38 AM IST

ಗಿಡ, ಮರ, ಹಸಿರನ್ನೇ ನೇಚರ್‌ ಅಂತ ಹೇಳದರೂ ಪರಿಸರ ಅನ್ನುವುದಕ್ಕೆ ನಮ್ಮ ಸುತ್ತಮುತ್ತಲಿನ ಜಾಗ ಅನ್ನುವ ಅರ್ಥವೂ ಇದೆ. ನಗರದಲ್ಲಿ ಮನುಷ್ಯರ, ಪ್ರಾಣಿಗಳ, ಸಸ್ಯಗಳಿಗೆ ಹಾನಿ ಆಗ್ತಿರೋದು ನಾವು ಉತ್ಪಾದಿಸುವ ಕಸದಿಂದಾಗಿ. ಈ ಕಸದ ಪ್ರಾಯೋಗಿಕ ನಿರ್ವಹಣೆ ಬಗ್ಗೆ ಪತ್ರಕರ್ತ ನಾಗೇಶ್‌ ಹೆಗಡೆ ಮಾತಾಡಿದ್ದಾರೆ.

ನಗರ ಪರಿಸರಕ್ಕೆ ಮಾರಕವಾಗೋದೂ ಕಸ. ಮಹಿಳೆಯರು ಸಾಮಾನ್ಯವಾಗಿ ಉಳಿದ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಕಟ್ಟಿತೊಟ್ಟಿಗೆ ಬಿಸಾಕುತ್ತಾರೆ. ಹಸು ಆ ಆಹಾರದ ಆಸೆಗೆ ಕವರ್‌ ಸಮೇತ ತಿನ್ನುತ್ತೆ. ಪ್ಲಾಸ್ಟಿಕ್‌ ಅದರ ಹೊಟ್ಟೆಸೇರುತ್ತೆ. ಅದರ ಹಾಲು ನಾವು ಕುಡೀತೀವಿ. ನಮಗೂ ಹಾನಿಯಾಗುತ್ತೆ. ಪ್ಲಾಸ್ಟಿಕ್‌ನಲ್ಲಿ ಆಹಾರ ಕಟ್ಟಿಎಸೆಯೋ ಬಗ್ಗೆ ಇನ್ನಾದರೂ ಯೋಚಿಸಿ.
ಒಣ, ಹಸಿ, ಪ್ಲಾಸ್ಟಿಕ್‌ ಇತ್ಯಾದಿ ಎಲ್ಲ ಬಗೆಯ ಕಸಗಳೂ ಇರುವ ರಾಶಿಗೆ ಬೆಂಕಿ ಹಚ್ಚುತ್ತಾರೆ. ಹೀಗೆ ಬೆಂಕಿ ಹಚ್ಚುವವರಿಗೆ ಕಠಿಣ ಶಿಕ್ಷೆ ನೀಡಬೇಕು ಅಂತ ಸುಪ್ರೀಂ ಕೋರ್ಟ್‌ ಆದೇಶವಿದೆ. ಮುನ್ಸಿಪಾಲಿಟಿಯವ್ರು ಕಸಕ್ಕೆ ಬೆಂಕಿ ಕೊಡುತ್ತಿರುವಾಗಲೇ ಲಾಯರ್‌, ಪೊಲೀಸರು, ಜಡ್ಜ್‌ಗಳೂ ಕೆಲವೊಮ್ಮೆ ಈ ಹಾದಿಯಾಗಿ ಓಡಾಡ್ತಾರೆ. ಆದರೆ ಇದನ್ನು ಯಾರೂ ಗಂಭೀರವಾಗಿ ತೆಗೆದುಕೊಳಲ್ಲ.
Tap to resize

ಪ್ಲಾಸ್ಟಿಕ್‌ ಸುಡುವುದರಿಂದ 16 ಬಗೆಯ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಮಕ್ಕಳಿಗೆ ಅಂಗವೈಕಲ್ಯ, ಟೀನೇಜ್‌ ಹೆಣ್ಮಕ್ಕಳಲ್ಲಿ ಹಾರ್ಮೋನಿನ ಸಮಸ್ಯೆ, ಶ್ವಾಸಕೋಶದ ಸಮಸ್ಯೆ, ಅಸ್ತಮಾ ಹೀಗೆ. ನೀವು ಪ್ಲಾಸ್ಟಿಕ್‌ ಬರ್ನ್‌ ಮಾಡಿದಾಗ ಅದು ಕರಗದೇ ಪ್ಲಾಸ್ಟಿಕ್‌ ಕಣಗಳು ಗಾಳಿಯನ್ನು ಸೇರಿ ಉಸಿರಾಟದ ಮೂಲಕ ಶ್ವಾಸಕೋಶ ಸೇರಿ ರಕ್ತಕ್ಕೆ ಹೋಗಿ ಬಹಳ ಅಪಾಯಕಾರಿ ಆಗಬಹುದು.
ಕಸಕ್ಕೆ ಬೆಂಕಿ ಹಾಕೋ ಮುನ್ಸಿಪಾಲಿಟಿಯವರ ಬಗ್ಗೆ ಒಬ್ಬ ಲಾಯರ್‌ ಕೇಸ್‌ ಫೈಲ್‌ ಮಾಡಿ, ಇತರರು ಆತನಿಗೆ ಸಾಕಷ್ಟುಮಾಹಿತಿ ನೀಡಿ ಈ ಕಸಕ್ಕೆ ಬೆಂಕಿ ಹಾಕುವವರಿಗೆ ಶಿಕ್ಷೆ ಆಗುವ ಹಾಗೆ ಮಾಡಿದರೆ ಈ ಬಗ್ಗೆ ಸ್ವಲ್ಪವಾದರೂ ಜಾಗೃತಿ ಬೆಳೆಯಬಹುದೋ ಏನೋ.
ಮಕ್ಕಳಿಗೆ ಶಾಲೆಯಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಹೇಗೆ ವಿಲೇವಾರಿ ಮಾಡಬೇಕು ಅನ್ನೋದನ್ನು ಪರಿಣಾಮಾತ್ಮಕವಾಗಿ ವಿವರಿಸಬೇಕು. ಅಮ್ಮ ತಪ್ಪು ಮಾಡಿದರೆ ಮಗು ಅದನ್ನು ತಡೆಯುತ್ತೆ. ಮಗುವಿಗೆ ಮನಸ್ಸಿಗೆ ನಾಟುವ ಹಾಗೆ ಈ ವಿಚಾರ ಮನದಟ್ಟು ಮಾಡಬೇಕು. ಕಸದ ತೊಟ್ಟಿಯ ಪಕ್ಕ ನಿಂತಿರುವ ಪುಟ್ಟಕರು, ದೊಡ್ಡ ಹಸುವಿನ ಜೊತೆಗೆ ಅದೂ ಪ್ಲಾಸ್ಟಿಕ್‌ಗೆ ಬಾಯಿ ಹಾಕೋದು, ಅದರಿಂದ ಆ ಕರುವಿಗಾಗುವ ಹಾನಿಯನ್ನು ವಿವರಿಸಬೇಕು. ಆಗ ಮಗು ಅರ್ಥಮಾಡಿಕೊಳ್ಳುತ್ತೆ.
ಮಗುವಿಗೆ ಇದನ್ನು ವಿವರಿಸುವ ಮೊದಲು ಶಾಲೆಯ ಟೀಚರ್ಸ್‌ಗೆ ಈ ಕಸವನ್ನು ಹೇಗೆ ನಿರ್ವಹಣೆ ಮಾಡಬೇಕು ಅನ್ನೋದರ ಬಗ್ಗೆ ಪಾಠ ಮಾಡಬೇಕು. ಇಂಥಾ ಒಂದು ಪ್ರಯತ್ನವನ್ನು ನಾವು ಹಿಂದೆ ಮಾಡಿದ್ದೆವು. ಶಿಕ್ಷಕರ ಜೊತೆಗೆ ಮಕ್ಕಳಿಗೆ ತಿಳುವಳಿಕೆ ನೀಡಿ ಮಕ್ಕಳೇ ಕಸದ ಬಗ್ಗೆ ಜಾಗೃತಿ ಮೂಡಿಸುವಂತೆ ಮಾಡಿ ಅಸೈನ್‌ಮೆಂಟ್‌ ನೀಡಿದ್ದೆವು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂತು.
ಜಾಹೀರಾತುಗಳನ್ನು ನೋಡಿ ಪ್ರಾಡಕ್ಟ್ಗಳನ್ನು ಖರೀದಿಸುವವರೇ ನಮ್ಮಲ್ಲಿ ಅಧಿಕ ಮಂದಿ. ಕಸದ ಬಗ್ಗೆ ಜಾಗೃತಿ ಮೂಡಿಸುವ, ಅದರಿಂದ ಆಗುವ ಹಾನಿಯನ್ನು ವಿವರಿಸುವ ಜಾಹೀರಾತುಗಳನ್ನು ಪ್ರಸಾರ ಮಾಡಿದರೆ ಜನರಿಗೆ ಗಂಭೀರತೆಯ ಅರಿವಾಗಬಹುದೇನೋ.
ನಮ್ಮಲ್ಲಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ವಿದೇಶ ಪ್ರವಾಸ ಮಾಡುತ್ತಲೇ ಇರುತ್ತಾರೆ. ಅಲ್ಲಿನ ಕಸದ ನಿರ್ವಹಣೆಯ ಬಗ್ಗೆ ಅರಿತು ಇಲ್ಲೂ ಇಂಪ್ಲಿಮೆಂಟ್‌ ಮಾಡಿದರೆ ಉತ್ತಮ.
ದೇವಸ್ಥಾನದಲ್ಲಿ ಅರ್ಚಕರೊಬ್ಬರಿಗೆ ಪ್ಲಾಸ್ಟಿಕ್‌ ಬಗ್ಗೆ ಜಾಗೃತಿ ಮೂಡಿಸಿದ್ದೆವು. ಮರುಬಳಕೆಯ ಪ್ಲಾಸ್ಟಿಕ್‌ ಹೇಗೆ ಉತ್ಪಾದನೆ ಆಗುತ್ತೆ ಅನ್ನೋದನ್ನೆಲ್ಲ ವಿವರಿಸಿದ ಮೇಲೆ ಆ ದೇವಸ್ಥಾನ ಮಾತ್ರವಲ್ಲ, ಊರಿಂದಲೇ ಪ್ಲಾಸ್ಟಿಕ್‌ ಬ್ಯಾನ್‌ ಆಯ್ತು.
ಜನಸಾಮಾನ್ಯರಿಗೆ ಕಸ ನಿರ್ವಹಣೆ ಬಗ್ಗೆ ಹೆಚ್ಚೆಚ್ಚು ಮಾಹಿತಿ ಹೋಗಬೇಕು. ನಗರ ಪ್ಲಾಸ್ಟಿಕ್‌ ಮುಕ್ತವಾಗಿ ಸ್ವಚ್ಛವಾದರೆ ನಮಗೇ ಒಳ್ಳೇದಲ್ವಾ, ಕೊರೋನಾ ವೈರಸ್‌ ಥರ ಪ್ಲಾಸ್ಟಿಕ್‌ ಬಳಕೆಯಿಂದ ನೇರ ಪರಿಣಾಮ ಆಗುವ ತನಕ ಕಾಯೋದು ಬೇಡ. ಈಗಲೇ ಕಸದ ಬಗ್ಗೆ, ನಿರ್ವಹಣೆಯ ಬಗ್ಗೆ ಚಿಂತಿಸೋಣ.

Latest Videos

click me!