ಯುಗಾದಿ ಸಂಭ್ರಮ: ಬೆಳಗೆರೆ ಗ್ರಾಮದಲ್ಲಿ ದಾಸ ಪರಂಪರೆಯ ವಿಶಿಷ್ಟ ಮಣೇವು ಆಚರಣೆ, ಏನಿದರ ವಿಶೇಷ?

First Published | Apr 9, 2024, 4:28 PM IST

ಯುಗಾದಿ ಹಬ್ಬ ಅಂದ್ರೆ ಮಾವು-ಬೇವು, ಬೆಲ್ಲ-ಹೂರಣಗಳ ಸಮಾಹಾರ. ಅದು ಎಲ್ಲ ಊರುಗಳಲ್ಲೂ ಸರ್ವೇ ಸಾಮಾನ್ಯ.  ಆದರೆ ಚಿತ್ರದುರ್ಗ ಜಿಲ್ಲೆಯ ಚೆಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ  ಯುಗಾದಿ ಅಂದ್ರೆ ಊರಿಗೆ ಊರೇ ಭಗವಂತನಿಗೆ ಮಣೇವು ಸೇವೆ ಸಲ್ಲಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತದೆ.  

ಯುಗಾದಿ- ಹೊಸ ಯುಗದ ಆದಿ. ವಸಂತ ಕಾಲದಲ್ಲಿ ಬರುವ ವಿಶಿಷ್ಟ ಹಬ್ಬಕ್ಕೆ ಅದುವರೆಗೆ ಬಿಸಲಿಗೆ ಒಣಗಿ ನಿಂತಿದ್ದ ಪ್ರಕೃತಿ ಹಸುರಿನಿಂದ ಕಂಗೊಳಿಸಿ ಸ್ವಾಗತ ಕೋರುತ್ತದೆ. ಜೀವನದ ಸಿಹಿ ಕಹಿಗಳನ್ನ ಉಂಡಂತೆ ಬೇವು ಬೆಲ್ಲ ಸವಿಯೋದು ಹಬ್ಬದ ವಿಶೇಷತೆ. ಹಳೆಯದು ಕಳೆದು ಹೊಸತು ಹುಟ್ಟುತ್ತದೆ, ಜೀವನದ ಕಹಿ ಮತ್ತು ಸಿಹಿ ದಿನಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂಬುದು ಯುಗಾದಿ ಮನುಜರಿಗೆ ಕಲಿಸುವ ಪಾಠವಾಗಿದೆ.

ಊರಿನ ತಿರುಪತಿ ತಿಮ್ಮಪ್ಪನ ಒಕ್ಕಲಿನ ಭಕ್ತರು ತಮ್ಮ ಮನೆಗಳಲ್ಲಿ ಪೂಜಿಸುವ ತಿಮ್ಮಪ್ಪನ ವಿಗ್ರಹ - ಫೋಟೋಗಳನ್ನು ಊರ ಬಾಗಿಲಿಗೆ ತಂದು ಪೂಜಿಸುವ ಕ್ರಮವಿದೆ. ಊರಿನ ದಾಸಯ್ಯನವರು ಗಂಟೆ - ಜಾಗಟೆಗಳ ಮೂಲಕ ದೇವರನ್ನು ಹೊರಡಿಸಿಕೊಂಡು ಬಂದು,  ಊರ ಬಾಗಿಲ ಸಮ್ಮುಖದಲ್ಲಿ ವಿಸ್ತಾರ ಮಂಟಪ ಕಟ್ಟಿ,  ಮಂಟಪದ ಮಧ್ಯದಲ್ಲಿ ತಿಮ್ಮಪ್ಪನನ್ನು ಕೂಡಿಸಿ ಮಣೇವು ಎಂಬ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಾರೆ. 
 

Tap to resize

ಏನು ಈ ಮಣೇವು? 

ಮಣೇವು ಹಾಕು ಎಂದರೆ ದೇವರ ಸೇವೆ ಮಾಡು ಎಂದರ್ಥ. (ಮಣೇವು < ಮಣಿಹ = ನಮಸ್ಕಾರ) ಸಾಮಾನ್ಯವಾಗಿ ವಿಷ್ಣುಭಕ್ತರಾದ ‘ದಾಸಯ್ಯಗಳು’, ಶಿವಭಕ್ತರಾದ ‘ಗೊರವಯ್ಯಗಳು’ ಹಾಸಿದ ಬಟ್ಟೆಯ ಮೇಲೆ ಜನರು ತಂದು ಸುರಿದಿರುವ ಬಾಳೇಹಣ್ಣು ಹಲಸಿನ ತೊಳೆ ಬೆಲ್ಲದಿಂದೊಡಗುಡಿದ ರಸಾಯನವನ್ನು ಕೈಯಲ್ಲಿ ತಿನ್ನದೆ ಬಾಯಿ ಹಾಕಿ ಬಕಬಕನೆ ತಿನ್ನುತವ ಒಂದು ಪದ್ದತಿ.  
 

ಮೈದುಂಬಿದವರಂತೆ ದೇವರಿಗೆ ಪರಾಕು ಹೇಳುತ್ತಾ ಮಂಡಿಯೂರಿ, ದೇವರಪ್ರಸಾದವಾದ ಆ ರಸಾಯನವನ್ನು ತಿನ್ನುವುದಕ್ಕೆ ಮಣೇವು ಹಾಕುವುದು ಎನ್ನುತ್ತಾರೆ. ಈ ಊರಲ್ಲಿ ಸ್ವಲ್ಪ ಭಿನ್ನತೆ ಇದೆ.  ಬಂದ ಭಕ್ತರು ದಾಸಯ್ಯನ ಕೈಯಲ್ಲಿ ಮಂತ್ರ ಜಲವನ್ನು ತಲೆಗೆ  ಪ್ರೋಕ್ಷಿಸಿಕೊಂಡು , ತಾವು ಮನೆಯಿಂದ ತಂದ ದೇವರಿಗೆ ತಂಬಿಟ್ಟು, ಬಾಳೆಹಣ್ಣುಗಳನ್ನು ಸಮರ್ಪಿಸಿ, ಪೂಜಿಸಿ ಭಕ್ತಿಯಿಂದ ನಮಸ್ಕರಿಸಿ, ಭಗವಂತನ ಆಶೀರ್ವಾದವನ್ನು ಕೋರುತ್ತಾರೆ. 
 

ಸಂವತ್ಸರದ ಕ್ಲಿಷ್ಟ ತಿರುವುಗಳಿಂದ ಪಾರುಮಾಡಿ ಜೀವನದ ಮುಂದಿನ ಹಾದಿಯನ್ನು ಹಗುರಮಾಡು ಎಂದು ಪ್ರಾರ್ಥಿಸುತ್ತಾರೆ. ನಂತರ ಯಥಾ ಪ್ರಕಾರ ದಾಸಯ್ಯನವರು ಭಕ್ತರು ತಂದ ದೇವರುಗಳನ್ನು ಅವರವರ ಮನೆಗೆ ಬಿಟ್ಟು ಬರುತ್ತಾರೆ. ಆನಂತರವೇ ಊರಿನವರು ಹಬ್ಬದ ಊಟ ಮಾಡುವುದು.  ಭಗವಂತನ ಸೇವೆಯಿಂದ ಶುರುವಾಗುವ ಹೊಸ ವರ್ಷ ಎಂಥವರಿಗೂ ಮಾದರಿಯಾಗಿದೆ.

Latest Videos

click me!